ಇಂದು ಅಹಿಂಸೆಯೇ ಮಹೋನ್ನತ ಧರ್ಮವೆಂದು ಸಾರಿದ ವರ್ಧಮಾನ ಮಹಾವೀರನ ಜನ್ಮದಿನ.
ಜೈನ ಧರ್ಮದ ಇಪ್ಪತ್ನಾಲ್ಕು ತೀರ್ಥಂಕರರಲ್ಲಿ ಕೊನೆಯವನು ವರ್ಧಮಾನ ಮಹಾವೀರ. ಮಹಾವೀರನು ಕ್ರಿ.ಪೂ.599ರ ಚೈತ್ರ ಶುದ್ಧ ತ್ರಯೋದಶಿಯ ದಿನ (ಈ ವರ್ಷ ಮಾರ್ಚ್ 29) ಬಿಹಾರದ ಕುಂಡಗ್ರಾಮ (ಭಾಸ್ ಕುಂಡ್) ಎಂಬಲ್ಲಿ ಸಿದ್ದಾರ್ಥ ಮತ್ತು ತ್ರಿಶಲಾ ದೇವಿಯರ ಮಗನಾಗಿ ಜನಿಸಿದನು. ಈತನಿಗೆ ಜ್ಞಾತಪುತ್ರ, ಸನ್ಮತಿ ನಾಯಕ, ಅತಿವೀರ, ನಿರ್ಗಂಥ ಎಂಬ ಹೆಸರುಗಳೂ ಇದ್ದವು.
ಇಕ್ವಾಕು ವಂಶದವನಾದ ಸಿದ್ಧಾರ್ಥ ಲಿಚ್ಛವಿಗಳ ನಾಯಕ, ಕುಂಡಗ್ರಾಮದ ಅರಸ. ವರ್ಧಮಾನನು ಬಾಲ್ಯದಲ್ಲಿ ಸೂಕ್ತ ಶಿಕ್ಷಣ ಪಡೆದು, ತಾರುಣ್ಯದಲ್ಲಿ ತನ್ನ ತಂದೆಯ ಆಡಳಿತ ಕಾರ್ಯಗಳಲ್ಲಿ ಸಹಕಾರಿಯಾಗತೊಡಗಿದನು. ಆದರೆ ಅವನ ಸಂಪೂರ್ಣ ಆಸಕ್ತಿ ಇದ್ದುದು ಮಾತ್ರ ಅಧ್ಯಾತ್ಮದ ಕಡೆಗೆ. ಜೈನರಲ್ಲಿ ಶ್ವೇತಾಂಬರ ಮತ್ತು ದಿಂಗಬರರೆಂಬ ಎರಡು ಪಂಗಡಗಳಿದ್ದು, ಶ್ವೇತಾಂಬರರ ಪ್ರಕಾರ ವರ್ಧಮಾನನಿಗೆ ಮದುವೆಯಾಗಿತ್ತು ಮತ್ತು ಒಂದು ಹೆಣ್ಣು ಮಗುವಿತ್ತು. ಆತ ಸಂಸಾರ ತ್ಯಜಿಸಿ ಸನ್ಯಾಸ ಪಡೆದ. ದಿಗಂಬರರ ಪ್ರಕಾರ ವರ್ಧಮಾನ ಬಾಲಬ್ರಹ್ಮಚಾರಿ.
ಅದೇನೇ ಇರಲಿ, ವರ್ಧಮಾನ ಮಹಾವೀರ ಸಂಸಾರ ತ್ಯಜಿಸಿ ಸಂನ್ಯಾಸಿಯಾಗಿದ್ದು ತನ್ನ ಮೂವತ್ತನೆ ವಯಸ್ಸಿನಲ್ಲಿ. ಕೇಶಲೋಚನ ಮಾಡಿಕೊಂಡು ‘ಜ್ಞಾತೃಷಂಡ’ ಎಂಬ ವನದಲ್ಲಿದ್ದ ಅಶೋಕವೃಕ್ಷದ ಕೆಳಗೆ ಕುಳಿತು ಕೆಲ ಕಾಲ ತಪಶ್ಚರಣೆ ನಡೆಸಿದ. ನಂತರ ಕುಂಭಾರ ಎಂಬ ಗ್ರಾಮದ ಬಳಿ ಕೆಲ ಕಾಲ ಧ್ಯಾನಸ್ಥನಾದ. ಹೀಗೆ ಪರಿವ್ರಾಜಕನಾಗಿ ಅಲೆಯುತ್ತಾ ಅತಿಮುಕ್ತ (ಉಜ್ಜಯಿನಿ ಸಮೀಪ) ಕುಮ್ಮಾರ, ಮೊರಾಗೆ, ಆಟ್ಠಿಯಾ, ಜೋರಾಗ್, ಕಲಂಬುಕ, ಲೋಹಗ್ಗಲಾ (ರಾಂಚಿ ಸಮೀಪ) ದಢಭೂಮಿ (ದಾಲ್ಬೂಮ್ ಮುಂತಾದ ಸ್ಥಳಗಳಲ್ಲಿ ತಪಶ್ಚರಣೆ ನಡೆಸಿದ ಮಹಾವೀರ ದುಷ್ಟ ಜನರಿಂದ ಸಾಕಷ್ಟು ಹಿಂಸೆಯನ್ನು ಅನುಭವಿಸಬೇಕಾಯಿತು. ಅವೆಲ್ಲವನ್ನೂ ಸಹಿಸಿಕೊಂಡು ಹನ್ನೆರಡು ವರ್ಷಗಳ ಕಾಲ ಕಠೋರವಾದ ತಪಸ್ಸು ಮಾಡಿದ ಮಹಾವೀರನಿಗೆ ತನ್ನ 42ನೇ ವಯಸ್ಸಿನಲ್ಲಿ, ಕ್ರಿ.ಪೂ 557 ರ ವೈಶಾಖ ಮಾಸದ ದಶಮಿಯಂದು ‘ಕೇವಲಜ್ಞಾನ’ ಪ್ರಾಪ್ತವಾಯಿತು. ಈ ಜ್ಞಾನವನ್ನು ‘ತೀರ್ಥ’ ಎಂದೂ ಕರೆಯುತ್ತಾರೆ. ಅದನ್ನು ಎಲ್ಲರಿಗೂ ಹಂಚುತ್ತ ಸಾಗಿದ ಮಹಾವೀರ, ‘ತೀರ್ಥಂಕರ’ ಎನ್ನಿಸಿಕೊಂಡ,
ಜಗತ್ತು ಅನಾದಿ. ಇದಕ್ಕೆ ಸೃಷ್ಟಿಕರ್ತನಾಗಲೀ ಲಯಕರ್ತನಾಗಲೀ ಇಲ್ಲ. ವಿಶ್ವದಲ್ಲಿರುವ ಎಲ್ಲ ಜಡ – ಚೇತನಗಳೂ ಆರು ಬಗೆಯ ದ್ರವ್ಯಗಳಿಂದ ಕೂಡಿವೆ. ಜೀವ ಎಂದರೆ ಆತ್ಮ. ಇದು ತನ್ನ ಇರುವಿಕೆಯನ್ನು ಬದಲಿಸುತ್ತಲೇ ಇರುತ್ತದೆ. ಈ ಬದಲಾವಣೆಗೆ ಕರ್ಮವೇ ಮೂಲಕಾರಣ. ಪುದ್ಗಲ, ಧರ್ಮ, ಅಧರ್ಮ, ಆಕಾಶ ಮತ್ತು ಕಾಲ – ಇವು ಐದು ಅಜೀವಗಳು. ಇವುಗಳ ಸ್ವರೂಪವನ್ನು ತಿಳಿಯಬೇಕೆಂಬುದು ಮಹಾವೀರನ ಬೋಧನೆ. ಇವುಗಳ ಜೊತೆಗೆ ಸಮ್ಯಕ್ಜ್ಞಾನ, ಸಮ್ಯಕ್ಚಾರಿತ್ರ, ಸಮ್ಯಕ್ದರ್ಶನಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟ ಮಹಾವೀರ, ಅವನ್ನು ‘ರತ್ನತ್ರಯ’ಗಳೆಂದು ಕರೆದು ಅವನ್ನು ಬೋಧಿಸಿದ. ಅಹಿಂಸೆಯ ಆಚರಣೆಗೆ ಹೆಚ್ಚಿನ ಮಹತ್ವ ನೀಡಿದ್ದ ಮಹಾವೀರ, “ಅಹಿಂಸಾ ಪರಮೋಧರ್ಮಃ” ಎಂದು ಘೊಷಿಸಿದ.
ಹೀಗೆ ಮೂವತ್ತು ವರ್ಷಗಳ ಕಾಲ ಪರಿವ್ರಾಜಕನಾಗಿದ್ದು ಬೋಧನೆ ನೀಡುತ್ತಾ, ಕೇವಲ ಜ್ಞಾನವನ್ನು ಹಂಚುತ್ತಾ ಸಾಗಿದ ಮಹಾವೀರ, ತನ್ನ ಎಪ್ಪತ್ತೆರಡನೆಯ ವಯಸ್ಸಿನಲ್ಲಿ ಪಾವಾಪುರಕ್ಕೆ ಬಂದು ಆತ್ಮಧ್ಯಾನದಲ್ಲಿ ಲೀನವಾದ.
ಮಹಾವೀರನ ಮೊದಲ ಬೋಧನೆ
ವರ್ಧಮಾನ ಮಹಾವೀರನು ಬೋಧಿಸಿದ್ದು ಅನಕ್ಷರೀ ಭಾಷೆಯಲ್ಲಿ. ಇದೊಂದು ಸಾಂಕೇತಿಕ ಭಾಷೆ. ಮಹಾವೀರನ ಶಿಷ್ಯ ಗೌತಮ ಇಂದ್ರಭೂತಿಯು ಅವರ ಬೋಧನೆಗಳನ್ನು ಪೂರ್ಣಮಾಗಧಿಗೆ ಭಾಷಾಂತರಿಸಿ ಜನರಿಗೆ ತಿಳಿಸುತ್ತಿದ್ದ. ಕೇವಲ ಜ್ಞಾನ ಪಡೆದ ವರ್ಧಮಾನ ಮಹಾವೀರ ತನ್ನ ಮೊದಲ ಶಿಷ್ಯ ಗೌತಮನಿಗೆ ನೀಡಿದ ಉಪದೇಶದ ಸಾರ ಇಲ್ಲಿದೆ…
‘ನಾನು ಧರ್ಮಸೂಕ್ಷ್ಮ, ಕರ್ಮಸೂಕ್ಷ್ಮದ ಸರ್ವಪರ್ಯಾಯಗಳನ್ನು ಕಂಡಿದ್ದೇನೆ. ಪಾಪವೆಂದರೇನು? ಪಾಪ ಹುಟ್ಟುವುದು ಹೇಗೆ? ಇಂಥ ಪಾಪಗಳನ್ನು ನಾವು ತಡೆಗಟ್ಟುವ, ಪಾಪದ ಸುಳಿವನ್ನು ಬೇರುಸಹಿತ ಕಿತ್ತುಹಾಕುವ ಬಗೆಹೇಗೆ? ನಾವು ಯಾವುದನ್ನೂ ಕನಿಷ್ಠವೆಂದು ತಿಳಿಯದೆ, ಕೇವಲ ಸಾಧನ ಸಾಮಗ್ರಿಯೆಂದು ಭಾವಿಸದೆ, ಆ ಭಾವ ನನ್ನನ್ನು ಬಂಧಿಸದಂತೆ, ನನ್ನ ತಿಳಿವನ್ನೂ ನುಡಿಯನ್ನೂ ನಡತೆಯನ್ನೂ ಪಳಗಿಸುವ ಸರ್ವವಿಧಾನಗಳನ್ನು ತಿಳಿದುಕೊಂಡಿದ್ದೇನೆ. ಇದು ವಿಷಯಜ್ಞಾನವಲ್ಲ. ಇದೇ ಆತ್ಮಜ್ಞಾನ.
ನನ್ನಲ್ಲಿರುವ ವಿಷಯಜ್ಞಾನ ಅತ್ಯಲ್ಪ. ಆದರೆ ನನಗೆ ಆತ್ಮಜ್ಞಾನದಲ್ಲಿ ಸಂಪೂರ್ಣ ನಂಬಿಕೆ ಇದೆ. ಆ ನಂಬಿಕೆಯ ಪ್ರತ್ಯಕ್ಷದರ್ಶನ ನನಗಾಗಿದೆ. ಆ ಸಂಪೂರ್ಣ ನಂಬಿಕೆಯೆ ನನ್ನ ಸರ್ವಜ್ಞತ್ವ. ಆ ಸರ್ವಜ್ಞತ್ವದ ದೋಣಿ ನನ್ನನ್ನು ಆಚೆಯ ದಡಕ್ಕೆ ಕರೆದುಕೊಂಡು ಹೋಗಿದೆ. ನಾನೀಗ ತೃಪ್ತನಾಗಿದ್ದೇನೆ. ನನಗೆ ಬೇರೆಯವರ ಹಂಗಿಲ್ಲ! ನನ್ನ ಹಂಗು ಇತರರಿಗೂ ಬೇಡ. ಬೇರೆಯವರು ನನ್ನ ಹಂಗಿನಲ್ಲಿದ್ದಾರೆಂದರೆ ಅದು ಘೋರ ಪಾಪವಲ್ಲದೆ ಮತ್ತೇನಲ್ಲ.
ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಕಂಡ ಬೆಳಕಿನಲ್ಲಿ ಬಾಳಿದರೆ ಮಾತ್ರ ಅವರಿಗೆ ಮುಕ್ತಿ. ಮನುಷ್ಯನ ಒಳಿತು, ಕೆಡುಕುಗಳಿಗೆ ಅವನೇ ಕಾರಣ. ಅವನ ಉದ್ಧಾರ ಅವನಿಂದಲೇ ಆಗಬೇಕು. ಯಾವುದೇ ಮನುಷ್ಯನ ಉದ್ಧಾರ ಇತರರಿಂದ ಆಗುತ್ತದೆ ಎಂದರೆ ಅದು ಬಂಧನವೇ ಸರಿ. ಗುರುವು ಕೂಡ ಶಿಷ್ಯನನ್ನು ಉದ್ಧರಿಸಲಾರನು. ಗುರುವಿನ ಕುರಿತು ಬೆಳೆಸಿಕೊಳ್ಳುವ ಅತೀವ ಮೋಹವೂ ಪರಾಧೀನ ಭಾವವೇ ಆಗಿದೆ. ಆದ್ದರಿಂದ ಅದನ್ನು ತೊಡೆದುಹಾಕಬೇಕು.