ಸುಲಿದು ನೋಡದೆ ತಿರುಳ ತಿಳಿಯುವುದು ಹೇಗೆ?

ಬದುಕಿನ ಎಲ್ಲ ಸಾಧ್ಯತೆಗಳನ್ನೂ ಸ್ವತಃ ನಾವೇ ಬಗೆದು ನೋಡಬೇಕು. ಆ ಎಲ್ಲ ಪ್ರಕ್ರಿಯೆಯನ್ನೂ ಹಾದು ಹೋಗಬೇಕು. ಇಲ್ಲವಾದರೆ, ತಿರುಗದೆ ಬಿಟ್ಟ ತಿರುವು ಸದಾ ಕಾಡುವಂತೆ ನಮ್ಮ ಮನಸ್ಸು ನಾವು ಬಳಸದೆ ಬಿಟ್ಟ ಅವಕಾಶಗಳ ಸುತ್ತಲೇ ತಿರುಗುತ್ತ ಉಳಿಯುತ್ತದೆ ~ ಆನಂದಪೂರ್ಣ

ಲ್ಲಿ ಸುಖವಿದೆಯೋ ದುಃಖವಿದೆಯೋ ಗೊತ್ತಿಲ್ಲ. ಅಥವಾ ಅವೆರಡೂ ಇಲ್ಲದ ನಿರ್ಲಿಪ್ತ ಶಾಂತಿ ಇದೆಯೋ ಅನ್ನುವುದೂ ತಿಳಿದಿಲ್ಲ. ಯಾರೋ ನಡು ಹಾದಿಯಲ್ಲಿ ಮರಳಿ ಬಂದರು ಅನ್ನುವ ಕಾರಣಕ್ಕೆ ನಾವೂ ಹೆಜ್ಜೆ ಹಿಂತಿರುಗಿಸುತ್ತೇವೆ. ಯಾರೋ ಅವರ ಗ್ರಹಿಕೆಗೆ ತಕ್ಕಂತೆ ಅದನ್ನು ಕಷ್ಟವೆಂದೋ ಸುಖವೆಂದೋ ಘೋಷಿಸುವರು. ನಾವು ಯಾರದೋ ಪ್ರಭಾವಕ್ಕೆ ಒಳಗಾಗಿ, ನಮಗೆ ಸುಲಭವೆನ್ನಿಸುವ ಘೋಷಣೆಯನ್ನು ತೆಗೆದುಕೊಂಡು ನಮ್ಮ ನಡೆಯನ್ನು ನಿರ್ಧರಿಸಿಬಿಡುತ್ತೇವೆ. ಬಾಕಿ ಜೀವನವಿಡೀ, ಅಲ್ಲಿ ಹಾಗಿರಲಿಲ್ಲವೇನೋ…. ಎಂದು ಕೊರಗುತ್ತ ಉಳಿಯುವವರೂ ನಾವೇ! ಹೀಗಿರುವಾಗ, ಪರಿಪೂರ್ಣತೆಯನ್ನು ಸಾಧಿಸುವುದಾದರೂ ಹೇಗೆ? ಪದರಗಳನ್ನು ಸ್ವತಃ ಸುಲಿದು ನೋಡದೆ, ಒಳಗೆ ಏನಿದೆ ಎಂದು ತಿಳಿದುಕೊಳ್ಳುವುದು ಹೇಗೆ?

ಆದ್ದರಿಂದಲೇ, `ಬದುಕಿನ ಸಿಪ್ಪೆ ಸುಲಿದು ನೋಡಿ’ ಅನ್ನುತ್ತಾರೆ ಓಶೋ. `ಅಲ್ಲಿ ಏನೂ ಇಲ್ಲ. ಸುಲಿಯುವಾಗಿನ ಪ್ರಕ್ರಿಯೆಯ ಸುಖದುಃಖಗಳೇ ಬದುಕಿನ ಸುಖ ದುಃಖಗಳು. ವಾಸ್ತವದಲ್ಲಿ, ಅಲ್ಲಿ ಏನೂ ಇಲ್ಲ. ಅದು ಶೂನ್ಯ. ಆದರೆ ಅದನ್ನು ನೀವೇ ಕಂಡುಕೊಳ್ಳಬೇಕು. ಎಲ್ಲರಿಗೂ ಒಂದೊಂದು ಈರುಳ್ಳಿಯನ್ನು – ಅಂದರೆ ಬದುಕನ್ನು ಕೊಡಲಾಗಿದೆ. ಅದನ್ನು ನೀವು ನೀವೆ ಸುಲಿದು ನೋಡಿಕೊಳ್ಳಬೇಕು’ ಎಂದು ಸೂಚಿಸುತ್ತಾರೆ ಓಶೋ.  “ಬದುಕು ಈರುಳ್ಳಿಯಂತೆ. ಅದರ ಪದರ ಪದರವನ್ನೂ  ಸುಲಿಯುತ್ತಾ ಹೋಗಬೇಕು. ಹೀಗೆ ಸುಲಿಯುತ್ತಾ ಹೋದರೆ ಅಲ್ಲಿ ಕೊನೆಗೆ ಏನೂ ಉಳಿಯುವುದಿಲ್ಲ. ನಾವು ಸಂಪೂರ್ಣ ಸುಲಿಯದೆ ಹೋದರೆ ಒಳಗೆ ಏನೋ ಇರಬಹುದು ಅನ್ನುವ ಅನುಮಾನ ಅಥವಾ ಕುತೂಹಲ ಉಳಿದುಕೊಂಡಿರುತ್ತದೆ. ಛೆ! ಪೂರ್ತಿ ಸುಲಿದು ನೋಡಿಬಿಡಬೇಕಿತ್ತು… ಅನ್ನುವ ಚಡಪಡಿಕೆಯೂ ಉಂಟಾಗುತ್ತದೆ. ಚಡಪಡಿಕೆ ನಮ್ಮನ್ನು ಸದಾ ಅತೃಪ್ತಿಯಲ್ಲಿ ಇರಿಸುತ್ತದೆ” ಅನ್ನುವುದು ಅವರ ವಿವರಣೆ.

ಬದುಕಿನ ಎಲ್ಲ ಸಾಧ್ಯತೆಗಳನ್ನೂ ಸ್ವತಃ ನಾವೇ ಬಗೆದು ನೋಡಬೇಕು. ಆ ಎಲ್ಲ ಪ್ರಕ್ರಿಯೆಯನ್ನೂ ಹಾದು ಹೋಗಬೇಕು. ಇಲ್ಲವಾದರೆ, ತಿರುಗದೆ ಬಿಟ್ಟ ತಿರುವು ಸದಾ ಕಾಡುವಂತೆ ನಮ್ಮ ಮನಸ್ಸು ನಾವು ಬಳಸದೆ ಬಿಟ್ಟ ಅವಕಾಶಗಳ ಸುತ್ತಲೇ ತಿರುಗುತ್ತ ಉಳಿಯುತ್ತದೆ. ಹಾಗೆಯೇ ಬದುಕನ್ನು ಹಂತ ಹಂತವಾಗಿಯೇ ದಾಟಬೇಕು. ಮತ್ತು ಪ್ರತಿ ಹಂತದ ಸಂಪೂರ್ಣ ಸ್ವಾರಸ್ಯ ಅನುಭವಿಸಬೇಕು. ಇಲ್ಲವಾದರೆ ನಾವು ಬದುಕನ್ನು ಪರಿಪೂರ್ಣವಾಗಿ ಅರಿತಂತೆ ಆಗುವುದಿಲ್ಲ. ಆಹಾರವನ್ನು ನೇರ ಗಂಟಲಿಗೆ ಹಾಕಿಕೊಂಡು ನುಂಗಿದರೆ ಅದರ ಸ್ವಾದ ನಮಗೆ ತಿಳಿಯುವುದಿಲ್ಲ. ಹೊಟ್ಟೆಯೇನೋ ತುಂಬುತ್ತದೆ, ಆದರೆ ತೃಪ್ತಿ ಸಿಗುವುದಿಲ್ಲ. ಹಾಗೆಯೇ ಬದುಕೂ. ನಾವೇ ಕಂಡುಕೊಂಡ ಹಾದಿಯಲ್ಲಿ ನಡೆಯದೆ ನಾವು ಆಯಸ್ಸು ತೀರುವವರೆಗೂ ಬದುಕಿಬಿಡಬಹುದು. ಆದರೆ `ಬದುಕಿದ’ ಸಮಾಧಾನವಾಗಲೀ ಸಂತೋಷವಾಗಲೀ ನಮಗೆ ದಕ್ಕುವುದಿಲ್ಲ. ನಾವೇ ಸುಲಿದು ನೋಡದ ಹೊರತು ಕಂಡುಕೊಂಡ ತೃಪ್ತಿ ಸಿಗುವುದಿಲ್ಲ.

ಅದು ಎಲ್ಲೂ ಇಲ್ಲ!
ಓಶೋ ಹೇಳುತ್ತಾರೆ, `ನಿಮ್ಮನ್ನು ನೀವು ಹುಡುಕಿಕೊಳ್ಳಿ, ನಿಮ್ಮ ನಾನು ಎಲ್ಲಿರುವುದೆಂದು. ಅದು ಎಲ್ಲೂ ಇಲ್ಲ ಎನ್ನುವುದನ್ನು ಕಂಡುಕೊಳ್ಳಿ. ಅದೊಂದು ಅನಂತ ಶಕ್ತಿಗಳ ಜೋಡಣೆಯಷ್ಟೆ. ಅಂಗ ಅಂಗವಾಗಿ ನೀವು ನೋಡುತ್ತ ಹೋದಂತೆಲ್ಲ ಅದು ಮಾಯವಾಗುತ್ತದೆ. ಕೊನೆಗೆ ಶೂನ್ಯ ಮಾತ್ರ ಉಳಿಯುತ್ತದೆ’ ಎಂದು.

ಇದನ್ನು ನಿರೂಪಿಸುವ ಆಚಾರ್ಯ ನಾಗಾರ್ಜುನ ಮತ್ತು ಸಾಮ್ರಾಟ ಮಿಲಿಂದರ ನಡುವಿನ ಒಂದು ಸಂಭಾಷಣೆ ಬಹಳ ಪ್ರಸಿದ್ಧ.
ಮಿಲಿಂದ `ನಾಗಾರ್ಜುನನಿಗೆ ಸ್ವಾಗತ’ ಅಂದಾಗ ಆತ ನಗುತ್ತಾ `ಇಲ್ಲಿ ನಾಗಾರ್ಜುನ ಎಂಬುವವನಿಲ್ಲ!’ ಎಂದು ನಗುತ್ತಾನೆ. ಅದನ್ನು ವಿವರಿಸುವಂತೆ ಸಾಮ್ರಾಟ ಕೇಳುತ್ತಾನೆ.
ನಾಗಾರ್ಜುನ ತಾನು ಬಂದ ರಥವನ್ನು ತೋರಿಸುತ್ತಾ ಕೇಳುತ್ತಾನೆ, `ಅದು ಏನು?’
`ರಥ’ ಎನ್ನುತ್ತಾನೆ ಸಾಮ್ರಾಟ.
ರಥದಿಂದ ಕುದುರೆಗಳನ್ನು ಬೇರ್ಪಡಿಸುವಂತೆ ಹೇಳಿದ ನಾಗಾರ್ಜುನ ಕೇಳುತ್ತಾನೆ, `ಈ ಕುದುರೆಗಳು ರಥವೇನು?’
`ಅಲ್ಲ….!’ ಸಾಮ್ರಾಟನ ಉತ್ತರ.
ನೊಗವನ್ನು ಕಳಚಲು ಹೇಳುವ ನಾಗಾರ್ಜುನ ಕೇಳುತ್ತಾನೆ, `ಈ ನೊಗವು ರಥವೇನು?’
ಮತ್ತೆ ಅಲ್ಲ ಎನ್ನುವ ಉತ್ತರವೇ ಬರುತ್ತದೆ.
ಹೀಗೆ ಒಂದೊಂದೇ ಭಾಗ ಕಳಚುತ್ತ ಕೇಳಿದಾಗ ಯಾವುದೂ ರಥವಲ್ಲವೆಂಬ ಉತ್ತರ ಬರುತ್ತದೆ ಸಾಮ್ರಾಟನಿಂದ. ಹೀಗೆ ಕಳಚುತ್ತ ಕಳಚುತ್ತ ಅಲ್ಲಿ ಏನೂ ಉಳಿಯುವುದಿಲ್ಲ. ವಾಸ್ತವದಲ್ಲಿ ಅಲ್ಲಿ ರಥವಿರಲಿಲ್ಲ. ಮೊದಲೂ ಇರಲಿಲ್ಲ, ಅನಂತರವೂ. `ರಥಕ್ಕೆ ತನ್ನದೆಂಬುದು ಏನೂ ಇಲ್ಲ. ಅದು ಹಲವು ವಸ್ತುಗಳ ಜೋಡಣೆಯಷ್ಟೆ . ಹಾಗೇ ಮನುಷ್ಯನೂ’ ಎಂದು ಬೋಧಿಸುತ್ತಾನೆ ನಾಗಾರ್ಜುನ.

ಒಳಗೆ ಏನಿದೆ ಎಂದು ತಿಳಿಯಲು ಸುಲಿದು ನೋಡುವ ಪ್ರಕ್ರಿಯೆಯನ್ನು ಅನುಸರಿಸುವಂತೆಯೇ ಒಳಗೆ ಏನೂ ಇಲ್ಲ ಅನ್ನುವುದನ್ನು ಖಾತ್ರಿ ಮಾಡಿಕೊಳ್ಳಲೂ ಈ ಪ್ರಕ್ರಿಯೆ ಅನುಸರಿಸಬೇಕು. ಒಮ್ಮೆ ಅದು ಖಾತ್ರಿಯಾದ ಮೇಲೆ ಬದುಕನ್ನು ಸಮಗ್ರವಾಗಿ ರೂಪಿಸಿಕೊಳ್ಳಲು ಸಾಧ್ಯವಾಗುವುದು.

Leave a Reply