ಚಿಕ್ಕ ಚಿಕ್ಕ ವಿಷಯಕ್ಕೆ ನೀವು ಪಡುವ ಫ್ರಸ್ಟ್ರೇಶನ್ ನಿಮ್ಮ ಮುಂದಿನ ಕೆಲಸಗಳ ಮೇಲೆ ನಿಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಾ, ಒಂದಕ್ಕೊಂದು ಢಿಕ್ಕಿ ಹೊಡೆಯುವ ಲೋಲಕಗಳಂತೆ ಹೊಯ್ದಾಡತೊಡಗುತ್ತದೆ. ಹಾಗೇ, ಇಷ್ಟು ಚಿಕ್ಕ ವಿಷಯದಲ್ಲಿ, ಕೈಲಿರುವುದಕ್ಕೆ ತೃಪ್ತಿಪಡಲು ಕಲಿತಿರದ ನೀವು, ದೊಡ್ಡ ನಿರೀಕ್ಷೆಗಳ ವಿಷಯದಲ್ಲಿ ಹೇಗೆ ವರ್ತಿಸುವಿರಿ!? ಯೋಚಿಸಿ.
ಯಾವುದೋ ಒಂದು ಫನ್ ಗೇಮ್ ಕಾಂಪಿಟೇಶನ್. ಅದರಲ್ಲಿ ನಿಮಗೆ ಬಹುಮಾನ ಬಂದಿರುತ್ತದೆ. ನಿಮ್ಮ ಗೆಳೆಯರಿಗೂ ಬಂದಿರುತ್ತದೆ. ಬಹುಮಾನ ರೂಪದಲ್ಲಿ ನಿಮಗೆ ಕೊಡಲಾಗಿರುವ ವಸ್ತು ಏನಿರಬಹುದು ಅನ್ನುವಷ್ಟೇ, ಅಥವಾ ಅದಕ್ಕಿಂತ ಹೆಚ್ಚಿನ ಕುತೂಹಲ ನಿಮಗೆ ನಿಮ್ಮ ಗೆಳೆಯ/ಗೆಳತಿಗೆ ಕೊಡಲಾಗಿರುವ ಬಗ್ಗೆ ಇರುತ್ತದೆ.
ಅದೊಂದು ಪುಸ್ತಕವಾಗಿದ್ದರೆ, “ಛೆ! ಅವನಿಗೆ/ಳಿಗೆ ಕೊಟ್ಟಿರುವ ಪುಸ್ತಕ ನನಗೆ ಕೊಡಬೇಕಿತ್ತು” ಅಂತಲೋ; ಅದೊಂದು ಕಾಫಿ ಮಗ್ ಆಗಿದ್ದರೆ, ಅವರಿಗೆ ಕೊಟ್ಟಿರುವ ಕಲರ್/ಡಿಸೈನ್’ದು ನನಗೆ ಬೇಕಿತ್ತು ಅಂತಲೋ ನೀವು ತಳಮಳಿಸುವುದು ಸಹಜ.
ಇದು ತೀರಾ ಬೇಸಿಕ್ ಲೆವೆಲ್ಲಿನ ಉದಾಹರಣೆ. ಗ್ರೇಡ್, ರಿಸಲ್ಟ್, ಸ್ಯಾಲರಿ, ದೊಡ್ಡ ದೊಡ್ಡ ಕಾಂಪಿಟೇಶನ್ನುಗಳು – ಏನೆಲ್ಲವೂ ಈ ವ್ಯಾಪ್ತಿಗೆ ಬರುತ್ತವೆ. ಅದೇನೇ ಇದ್ದರೂ ನಮಗೆ ಮತ್ತೊಬ್ಬರ ಕೈಲೇನಿದೆ ಅನ್ನುವುದರ ಬಗ್ಗೆ ಹೆಚ್ಚು ಆಸಕ್ತಿ. ಬೇಕಿದ್ದರೆ ಗಮನಿಸಿ. ನೀವು ಲೈಬ್ರರಿಯಲ್ಲೋ ಅಥವಾ ಮತ್ತೆಲ್ಲೋ ಪೇಪರ್ ಓದಲು ತೆಗೆದುಕೊಳ್ತೀರಿ. ಓದಲು ಶುರು ಮಾಡುವಾಗ, ಎದುರಿನವರು ಯಾವ ಪೇಪರ್ ಓದ್ತಿದ್ದಾರೆ ನೋಡುವಾ ಅಂತನ್ನಿಸಿ ಕಣ್ಣು ಹಾಯಿಸುತ್ತೀರಿ. ನಿಮ್ಮ ಬಳಿ ಅಷ್ಟೇ ಮಾಹಿತಿಪೂರ್ಣವಾದ, ಅಥವಾ ಅದಕ್ಕಿಂತ ಹೆಚ್ಚು ಸಾರಭರಿತವಾದ ಪತ್ರಿಕೆ ಇದ್ದರೂ “ಅದನ್ನು ಓದಬೇಕಿತ್ತಲ್ಲ” ಎಂದು ಚಡಪಡಿಸತೊಡಗುತ್ತೀರಿ. ಈ ಹೊಯ್ದಾಟದಲ್ಲಿ ನಿಮ್ಮ ಕೈಲಿರುವ ಪೇಪರ್ ಅನ್ನೂ ಸರಿಯಾಗಿ ನಿಮ್ಮಿಂದ ಓದಲಾಗುವುದಿಲ್ಲ. ಏಕೆಂದರೆ ನಿಮಗೆ ಪೇಪರ್ ಓದುವುದು ಈಗ ಮುಖ್ಯವಾಗಿಯೇ ಇಲ್ಲ! ಅವರು ಓದ್ತಿರುವ ಪೇಪರ್ ಅನ್ನು ನೀವು ಓದಬೇಕಿತ್ತು ಅನ್ನುವುದು ಮುಖ್ಯವಾಗಿರುತ್ತದೆ!!
ಇದರಿಂದೇನಾಗುತ್ತದೆ? ನೀವು ಪೇಪರ್ ಓದಲೆಂದೇ ಅದನ್ನು ಕೈಗೆತ್ತಿಕೊಂಡಿದ್ದರೂ ಅದನ್ನು ಪರಿಪೂರ್ಣವಾಗಿ ಮಾಡದೆಹೋಗುತ್ತೀರಿ. ಕೈಯಲ್ಲಿರುವ ವಸ್ತುವಿನ ಸದ್ಬಳಕೆಯ ಬದಲು ಕೈಯಲ್ಲಿರದ ವಸ್ತುವಿನ ಹಂಬಲದಲ್ಲಿ ವಿಚಲಿತರಾಗುತ್ತೀರಿ.
ಇದೊಂದು ತೀರಾ ಚಿಕ್ಕ ವಿಷಯ ಇರಬಹುದು. ನೀವು ಪೇಪರ್ ಓದಬೇಕಿದೆ. ಆದರೆ ಎದುರಿಗೆ ಇರುವವರ ಕೈಯಲ್ಲಿರುವ ಪೇಪರ್ ನನ್ನ ಬಳಿ ಇಲ್ಲ. ನನಗೆ ಅದು ಬೇಕು ಅನ್ನಿಸುತ್ತಿದೆ, ಆದ್ದರಿಂದ ಕೈಲಿರುವುದರ ಮೇಲೆ ಮನಸ್ಸು ನಿಲ್ಲುತ್ತಿಲ್ಲ. – ಇಷ್ಟೇ. ಆದರೆ ಇಷ್ಟು ಚಿಕ್ಕ ವಿಷಯಕ್ಕೆ ನೀವು ಪಡುವ ಫ್ರಸ್ಟ್ರೇಶನ್ ನಿಮ್ಮ ಮುಂದಿನ ಕೆಲಸಗಳ ಮೇಲೆ ನಿಮಗೇ ಅರಿವಿಲ್ಲದಂತೆ ಪರಿಣಾಮ ಬೀರುತ್ತಾ, ಒಂದಕ್ಕೊಂದು ಢಿಕ್ಕಿ ಹೊಡೆಯುವ ಲೋಲಕಗಳಂತೆ ಹೊಯ್ದಾಡತೊಡಗುತ್ತದೆ. ಹಾಗೇ, ಇಷ್ಟು ಚಿಕ್ಕ ವಿಷಯದಲ್ಲಿ, ಕೈಲಿರುವುದಕ್ಕೆ ತೃಪ್ತಿಪಡಲು ಕಲಿತಿರದ ನೀವು, ದೊಡ್ಡ ನಿರೀಕ್ಷೆಗಳ ವಿಷಯದಲ್ಲಿ ಹೇಗೆ ವರ್ತಿಸುವಿರಿ!? ಯೋಚಿಸಿ.
“ಕೊಟ್ಟ ಕುದುರೆಯನೇರಲರಿಯದೆ ಮತ್ತೊಂದು ಕುದುರೆಯ ಬಯಸುವವರು ವೀರರೂ ಅಲ್ಲ ಧೀರರೂ ಅಲ್ಲ… ಇದು ಕಾರಣ ನೆರೆ ಮೂರು ಲೋಕವೂ ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ” ಎಂದು ಅಲ್ಲಮ ಪ್ರಭು ಹೇಳಿದ್ದು ಇಂಥ ಮನಸ್ಥಿತಿಯವರ ಬಗ್ಗೆಯೇ. ಈ ಮನಸ್ಥಿತಿ ತನಗೆ ಸಾಧ್ಯವಿರುವ ಎಲ್ಲ ಚಿಕ್ಕ – ದೊಡ್ಡ ಸಂಗತಿಗಳಲ್ಲೂ ಕಾಣಿಸಿಕೊಳ್ಳುತ್ತಾ, ನಿಮ್ಮನ್ನು ಬಳಲಿಸುತ್ತಲೇ ಇರುತ್ತದೆ.
ಮತ್ತೊಬ್ಬರು ಓದುತ್ತಿರುವ ಪೇಪರ್/ ಪುಸ್ತಕದ ಕಡೆ ಹಣಕುವುದನ್ನು ಬಿಟ್ಟು, ಕೈಲಿರುವುದರತ್ತ ಗಮನ ನೆಡುವುದು ರೂಢಿಯಾಗಲಿ. ಪಕ್ಕದವರ ತಟ್ಟೆ ನೋಡಿಕೊಂಡು ಊಟ ಮಾಡಿದರೆ ತಿಂದ ಅನ್ನವೂ ಅರಗೋದಿಲ್ಲ. ಆದ್ದರಿಂದ ನಿಮ್ಮ ತಟ್ಟೆಯಷ್ಟೆ ನಿಮಗೆ ಮುಖ್ಯವಾಗಲಿ. ಕೊಟ್ಟ ಕುದುರೆಯನ್ನು ಯಶಸ್ವಿಯಾಗಿ ಏರುವ ಧೀರರೂ ಶೂರರೂ ನೀವಾಗಿ!