ಡಯೋನಿಸಸ್ ಎಂಬ ದ್ವಿಜ : ಗ್ರೀಕ್ ಪುರಾಣ ಕಥೆಗಳು ~ 10

ದುಃಖಿತನಾದ ಸ್ಯೂಸ್, ಸೆಮಿಲಿಯ ಮಗುವನ್ನಾದರೂ ಜೋಪಾನ ಮಾಡಬೇಕೆಂದು ನಿಶ್ಚಯಿಸಿದ. ಇನ್ನೂ ಸಂಪೂರ್ಣ ಬೆಳೆದಿರದ ಆರು ತಿಂಗಳ ಆ ಭ್ರೂಣವನ್ನು ತನ್ನ ತೊಡೆ ಸಿಗಿದು, ಅದರಲ್ಲಿಟ್ಟುಕೊಂಡ. ಮೂರು ತಿಂಗಳ ಕಾಲ ಅದರ ಆರೈಕೆ ಮಾಡಿದ. ಒಂಭತ್ತನೇ ತಿಂಗಳಿಗೆ ಗಂಡು ಮಗುವೊಂದು ಸ್ಯೂಸನ ತೊಡೆಯಿಂದ ಹುಟ್ಟಿಬಂತು.

dio
ಸ್ಯೂಸ್ ದೇವನ ತೊಡೆಯಿಂದ ಮಗುವನ್ನು ಹೊರಗೆ ತೆಗೆಯುತ್ತಿರುವ ಸೂಲಗಿತ್ತಿ | ಚಿತ್ರಕೃಪೆ: ಇಂಟರ್ನೆಟ್

~ ಸಂಗ್ರಹ ಮತ್ತು ಅನುವಾದ : ಚೇತನಾ ತೀರ್ಥಹಳ್ಳಿ

ಸ್ಯೂಸ್ ದೇವನ ಪ್ರಣಯ ಲೀಲೆಗಳು ಅಪಾರ. ಆತನ ಪಟ್ಟದರಸಿ ಹೀರಾ ದೇವಿಯಲ್ಲದೆ ದೇವ, ದಾವನ, ಮಾನವರಲ್ಲೂ ಅವನಿಗೆ ಪ್ರೇಯಸಿಯರಿದ್ದರು. ಅವರಿಂದ ಮಕ್ಕಳೂ ಇದ್ದವು.

ಒಮ್ಮೆ ಸ್ಯೂಸ್ ದೇವನಿಗೆ ಕಾಡ್ಮಿಯ ನಗರವನ್ನು ಆಳುತ್ತಿದ್ದ ಕಾಡ್ಮಸ್ ಮತ್ತು ಹಾರ್ಮೋನಿಯಾರ ಮಗಳು ಸೆಮಿಲಿಯ ಮೇಲೆ ಮೋಹವುಂಟಾಯಿತು. ಅತ್ಯಂತ ಸುಂದರಿಯೂ ಮುಗ್ಧೆಯೂ ಆಗಿದ್ದ ಸೆಮಿಲಿಯನ್ನು ಒಲಿಸಿಕೊಳ್ಳಲು ಅವನಿಗೆ ಕಷ್ಟವೇನೂ ಆಗಲಿಲ್ಲ. ತಾನು ಸ್ಯೂಸ್ ಎಂದು ಪರಿಚಯಿಸಿಕೊಂಡಾಗಲೇ ಅವಳು ಅವನಿಗೆ ವಶವಾಗಿಬಿಟ್ಟಿದ್ದಳು. ಅವರ ಪ್ರಣಯದ ಫಲವಾಗಿ ಸೆಮಿಲಿ ಗರ್ಭಿಣಿಯೂ ಆದಳು.

ಸ್ಯೂಸ್ ಮತ್ತು ಸೆಮಿಲಿಯ ಪ್ರೇಮ ಪ್ರಕರಣ ಹೀರಾಳಿಗೆ ತಿಳಿದುಹೋಯ್ತು. ಅವಳೀಗ ಗರ್ಭಿಣಿಯೂ ಆಗಿದ್ದಾಳೆ ಅನ್ನುವುದು ಮತ್ತಷ್ಟು ಸಿಟ್ಟು ತರಿಸಿತು. ಏನಾದರೂ ಮಾಡಿ ಸೆಮಿಲಿಯನ್ನು ಇಲ್ಲವಾಗಿಸಬೇಕು ಎಂದು ಯೋಚಿಸಿದಳು. ಅದರಂತೆ ವೃದ್ಧೆಯ ವೇಷ ಧರಿಸಿಕೊಂಡು ಕಾಡ್ಮಿಯದ ಅರಮನೆಗೆ ಬಂದಳು ಹೀರಾ ದೇವಿ. ಸೆಮಿಲಿ ಅವಳು ಯಾರೆಂದು ತಿಳಿಯದೆ ತನ್ನ ಅಂತಃಪುರಕ್ಕೆ ಕರೆದೊಯ್ದಳು.

ಇಬ್ಬರೂ ಬಹಳಷ್ಟು ಹೊತ್ತು ಅದೂಇದೂ ಹರಟಿದರು. ಸೆಮಿಲಿಯ ಉಬ್ಬಿದ ಹೊಟ್ಟೆಯ ಮೇಲೆ ಕೈಯಾಡಿಸುತ್ತಾ ವೃದ್ಧೆಯ ವೇಷದಲ್ಲಿದ್ದ ಹೀರಾ ದೇವಿ, “ಈ ಮಗುವಿನ ತಂದೆ ಯಾರು?” ಎಂದು ಕೇಳಿದಳು.

“ಸಾಕ್ಷಾತ್ ಸ್ಯೂಸ್ ಮಹಾದೇವ!” ಅಂದಳು ಸೆಮಿಲೀ.

“ಅದು ಹೇಗೆ ಹೇಳುತ್ತೀ? ಆತ ತನ್ನ ನಿಜ ರೂಪದಲ್ಲಿ ಬಂದು ನಿನ್ನನ್ನು ಪ್ರೇಮಿಸುತ್ತಾನೆಯೇ?” ಎಂದು ಕೇಳಿದಳು ಹೀರಾದೇವಿ. ಮನುಷ್ಯಳಾಗಿದ್ದ ಸೆಮಿಲಿಯ ಎದುರು ಪ್ರಖರ ತೇಜಸ್ಸಿನ ಸ್ಯೂಸ್ ದೇವ ಬರಲಾರನೆಂದು ಅವಳಿಗೆ ಗೊತ್ತಿತ್ತು.

“ಇಲ್ಲ. ಆದರೆ ಅವನು ತನ್ನನ್ನು ಸ್ಯೂಸ್ ಎಂದು ಹೇಳಿಕೊಂಡ” ಅಂದಳು ಸೆಮಿಲೀ ಮುಗ್ಧವಾಗಿ.

“ಅಯ್ಯೋ ಹುಚ್ಚಿ! ಕೆಲವೊಮ್ಮೆ ಮನುಷ್ಯರು ದೇವತೆಗಳ ಹೆಸರು ಹೇಳಿಕೊಂಡು ಹೀಗೆ ಮೋಸ ಮಾಡುತ್ತಾರೆ. ನೀನು ಅವನನ್ನು ಸರಿಯಾಗಿ ವಿಚಾರಿಸಬೇಕಿತ್ತು” ಅಂದಳು.

ಸೆಮಿಲಿಗೆ ಆತಂಕವಾಗತೊಡಗಿತು. ಗಾಬರಿಯಿಂದ, “ನೀನೇ ಏನಾದರೂ ಉಪಾಯ ಹೇಳು. ಆತ ಸ್ಯೂಸ್ ದೇವನೇ ಹೌದೆಂದು ಖಾತ್ರಿಪಡಿಸಿಕೊಳ್ಳೋದು ಹೇಗೆ?” ಎಂದು ಕೇಳಿದಳು.

ಅದಕ್ಕೆ ಹೀರಾ, “ಆತನಿಗೆ ತನ್ನ ನಿಜ ರೂಪವನ್ನು ತೋರಿಸಲು ಹೇಳು. ಯಾವ ಕಾರಣಕ್ಕೂ ಪಟ್ಟುಬಿಡಬೇಡ” ಅಂದಳು.

ಸೆಮಿಲಿಯ ಮನಸ್ಸಿನಲ್ಲಿ ಈ ವಿಷಯ ನಾಟಿ ನಿಂತುಬಿಟ್ಟಿತು. ಒಂದೆರಡು ದಿನ ಕಳೆದು ಸ್ಯೂಸ್ ಆಕೆಯನ್ನು ಕಾಣಲು ಬಂದ. ಅವನನ್ನು ಪ್ರೀತಿಯಿಂದಲೇ ಎದುರುಗೊಂಡ ಸೆಮಿಲೀ, “ನನಗೆ ಬಸುರಿ ಬಯಕೆ ಶುರುವಾಗಿದೆ. ನಾನೊಂದು ಕೇಳುತ್ತೇನೆ, ನಡೆಸಿಕೊಡುವಿರಾ?” ಎಂದು ಕೇಳಿದಳು.

ಸ್ಯೂಸ್ ಸಂತೋಷದಿಂದ ಹಾಗೆಯೇ ಆಗಲಿ ಎಂದ.

ಸೆಮಿಲೀ “ಸ್ಟಿಕ್ಸ್ ನದಿಯ ಮೇಲಾಣೆ?” ಎಂದು ಕೇಳಿದಳು. ಸ್ಯೂಸ್ ನಗುತ್ತಾ “ಸ್ಟಿಕ್ಸ್ ನದಿಯ ಮೇಲಾಣೆ. ಅದೇನು ಬೇಕು ಕೇಳು” ಅಂದ.

“ನಾನು ನಿಮ್ಮ ನಿಜರೂಪವನ್ನು ನೋಡಬೇಕು” ಅಂದಳು ಸೆಮಿಲೀ.

ಸ್ಯೂಸ್ ದೇವನಿಗೆ ಇದು ಹೀರಾದೇವಿಯದೇ ಹುನ್ನಾರವೆಂದು ಗೊತ್ತಾಗಿಹೋಯ್ತು. ಇಲ್ಲವಾದರೆ ಈ ಮುಗ್ಧ ತರುಣಿ ತನ್ನನ್ನು ಹೀಗೆ ಕೇಳುತ್ತಿದ್ದಳೇ? ಯೋಚಿಸಿದ ಸ್ಯೂಸ್, ಸೆಮಿಲಿಯ ಮನವೊಲಿಸಲು ಯತ್ನಿಸಿದ. ಆದರೆ ಸ್ಟಿಕ್ಸ್ ನದಿಯ ಮೇಲೆ ಆಣೆ ಹಾಕಿದ್ದರಿಂದ ಆತ ಕೊಟ್ಟ ಮಾತಿಗೆ ತಪ್ಪುವಂತಿರಲಿಲ್ಲ. ಸ್ಟಿಕ್ಸ್, ಅಧೋಲೋಕದಲ್ಲಿ ಹರಿಯುವ ನದಿ. ಅದರ ಆಣೆಯಿಟ್ಟರೆ ಎಂಥವರೂ ಹಿಂಜರಿಯುವಂತೆ ಇರಲಿಲ್ಲ. ಹಾಗೇನಾದರೂ ಮಾಡಿದರೆ ಅದರ ಪ್ರಕೋಪಕ್ಕೆ ತುತ್ತಾಗಬೇಕಿತ್ತು.

ಸ್ಯೂಸ್ ಒಲ್ಲದ ಮನಸ್ಸಿನಿಂದ, ದುಃಖದಿಂದಲೇ ತನ್ನ ನಿಜರೂಪದಲ್ಲಿ ಗೋಚರಿಸಿದ. ಸಾವಿರ ಸೂರ್ಯರಷ್ಟಿರುವ ತನ್ನ ತೇಜಸ್ಸನ್ನು ಕಡಿಮೆ ಮಾಡಿಕೊಂಡು, ಸಾಧ್ಯವಾದಷ್ಟೂ ಸೌಮ್ಯವಾಗಿ ಪ್ರಕಟಗೊಂಡ. ಆದರೆ ಸೆಮಿಲೀ ಅಷ್ಟು ಮಾತ್ರದ ಪ್ರಖರತೆಯನ್ನೂ ತಾಳಲಾರದೆ ಹೋದಳು. ಕಣ್ಣುಕೋರೈಸುವ ಸ್ಯೂಸನ ರೂಪ ನೋಡುತ್ತಲೇ ಅವಳ ದೇಹ ಹೊತ್ತುರಿಯತೊಡಗಿತು. ಸ್ಯೂಸ್ ಆಕೆಯ ಗರ್ಭವನ್ನಾದರೂ ಉಳಿಸೋಣವೆಂದುಕೊಂಡು ತನ್ನ ಮಗ ಹರ್ಮೀಸನನ್ನು ಕರೆದ. ಹರ್ಮೀಸ್ ದೇವತೆ ಬಂದು ಉರಿಯುವ ಬೆಂಕಿಯಲ್ಲಿ ಕೈಹಾಕಿ ಭ್ರೂಣವನ್ನು ಹೊರತೆಗೆದ. ಸ್ಯೂಸನ ಕಣ್ಣೆದುರೇ ಸೆಮಿಲೀ ಉರಿದು ಬೂದಿಯಾದಳು.

ದುಃಖಿತನಾದ ಸ್ಯೂಸ್, ಸೆಮಿಲಿಯ ಮಗುವನ್ನಾದರೂ ಜೋಪಾನ ಮಾಡಬೇಕೆಂದು ನಿಶ್ಚಯಿಸಿದ. ಇನ್ನೂ ಸಂಪೂರ್ಣ ಬೆಳೆದಿರದ ಆರು ತಿಂಗಳ ಆ ಭ್ರೂಣವನ್ನು ತನ್ನ ತೊಡೆ ಸಿಗಿದು, ಅದರಲ್ಲಿಟ್ಟುಕೊಂಡ. ಮೂರು ತಿಂಗಳ ಕಾಲ ಅದರ ಆರೈಕೆ ಮಾಡಿದ. ಒಂಭತ್ತನೇ ತಿಂಗಳಿಗೆ ಗಂಡು ಮಗುವೊಂದು ಸ್ಯೂಸನ ತೊಡೆಯಿಂದ ಹುಟ್ಟಿಬಂತು.

ಈ ಮಗುವಿಗೆ ಸ್ಯೂಸ್ ದೇವನು ಡಯೊನಿಸಸ್ ಎಂದು ಹೆಸರಿಟ್ಟ. ಡಯೊನಿಸಸ್ ಎಂದರೆ ದ್ವಿಜ ಎಂದರ್ಥ. ‘ದ್ವಿಜ’ ಅಂದರೆ ‘ಎರಡು ಬಾರಿ ಹುಟ್ಟಿದವನು’. ಒಮ್ಮೆ ಸೆಮಿಲಿಯ ಗರ್ಭದಿಂದ (ಹರ್ಮೀಸ್ ಹೊರಗೆ ತೆಗೆದಿದ್ದು), ಮತ್ತೊಮ್ಮೆ ಸ್ಯೂಸನ ತೊಡೆಯಿಂದ – ಹೀಗೆ ಎರಡು ಬಾರಿ ಹುಟ್ಟಿದಡಯೊನಿಸಸ್, ಮುಂದೆ ಗ್ರೀಕರ ಸಸ್ಯ, ಮದ್ಯ, ಹಾಗೂ ನಾಟ್ಯಾಧಿದೇವತೆಯಾಗಿ ಖ್ಯಾತನೂ ಪ್ರಬಲನೂ ಆದ.  

1 Comment

Leave a Reply