ಧ್ಯಾನವೆಂದರೆ ಸ್ವಯಂನ ಹುಡುಕಾಟದ ಪ್ರಕ್ರಿಯೆ….

photoಏನು ಹುಡುಕಿದರೆ ತೃಪ್ತಿಯಾಗುವುದು, ಅಭಾವ ಕಳೆಯುವುದು, ಯಾವುದು ಸಿಕ್ಕರೆ ಶಾಂತಿ ಸಿಗುವುದು ಎಂದು ಹುಡುಕಾಡುತ್ತಿದ್ದೀರಿ. ಕೊನೆಯಲ್ಲಿ ನಿಮಗೆ ಗೊತ್ತಾಗುತ್ತದೆ, ಯಾವ ಮರೀಚಿಕೆಯ ಬೆನ್ನು ಹತ್ತಿ ನೀವು ಓಡುತ್ತಿದ್ದಿರೋ ಅದು ಯಾವಾಗಿಂದಲೂ ನಿಮ್ಮೊಳಗೆಯೇ ಇದೆಯೆಂದು… ನೀವು ತಪ್ಪು ಜಾಗದಲ್ಲಿ ಹುಡುಕುತ್ತಿದ್ದಿರೆಂದು.

ನಿಮಗೆ ಏನಾದರೂ ಅಭಾವ ಉಂಟಾದಾಗ- ಅದು ಏನೇ ಆಗಿರಲಿ, ಆ ಅಭಾವವನ್ನು ತುಂಬಿಕೊಳ್ಳಲು ಹುಡುಕಾಟ ಆರಂಭವಾಗುತ್ತದೆ. ಧ್ಯಾನವು ಪರಿಪಕ್ವಗೊಂಡಾಗ ನಿಮಗೆ ನೀವು ಹುಡುಕುತ್ತಿದ್ದುದು ನಿಮ್ಮನ್ನೇ ಎನ್ನುವ ತಿಳಿವು ಉಂಟಾಗುತ್ತದೆ. ಅಷ್ಟೇ ಅಲ್ಲ, ನೀವು ಪರಿಪೂರ್ಣರೆಂದೂ ನಿಮ್ಮಲ್ಲಿ ಲವಲೇಷದಷ್ಟೂ ಕುಂದಿಲ್ಲವೆಂದೂ ಅರಿವಾಗುತ್ತದೆ. ಧ್ಯಾನವು ಈ ಸ್ವಯಂನ ಹುಡುಕಾಟದ ಪ್ರಕ್ರಿಯೆಯಷ್ಟೆ.

ಏನೋ ಸ್ವಲ್ಪ ಕೊರತೆ ಇದೆ, ಎಂಥದೋ ಅತೃಪ್ತಿ, ಚೂರು ಕಸಿವಿಸಿ…. ಅದರಿಂದಾಗಿಯೇ ಹುಡುಕಾಟಕ್ಕೆ ಇಳಿದಿದ್ದೀರಿ. ಏನು ಹುಡುಕಿದರೆ ತೃಪ್ತಿಯಾಗುವುದು, ಅಭಾವ ಕಳೆಯುವುದು, ಯಾವುದು ಸಿಕ್ಕರೆ ಶಾಂತಿ ಸಿಗುವುದು ಎಂದು ಹುಡುಕಾಡುತ್ತಿದ್ದೀರಿ. ಕೊನೆಯಲ್ಲಿ ನಿಮಗೆ ಗೊತ್ತಾಗುತ್ತದೆ, ಯಾವ ಮರೀಚಿಕೆಯ ಬೆನ್ನು ಹತ್ತಿ ನೀವು ಓಡುತ್ತಿದ್ದಿರೋ ಅದು ಯಾವಾಗಿಂದಲೂ ನಿಮ್ಮೊಳಗೆಯೇ ಇದೆಯೆಂದು… ನೀವು ತಪ್ಪು ಜಾಗದಲ್ಲಿ ಹುಡುಕುತ್ತಿದ್ದಿರೆಂದು. ಇಲ್ಲಿ ಹುಡುಕ್ತಿದ್ದಿರಿ, ಅಲ್ಲಿ ಹುಡುಕ್ತಿದ್ದಿರಿ; ಇಲ್ಲಿ ಓಡುತ್ತಿದ್ದಿರಿ, ಮತ್ತೆ ಅಲ್ಲೆಲ್ಲೋ ಓಡತೊಡಗಿದಿರಿ…. ಹಣ, ಪದವಿ, ಯಶಸ್ಸು, ಹೆಣ್ಣು, ಗಂಡು – ಎಲ್ಲರಲ್ಲೂ ಹುಡುಕಿದಿರಿ. ಎಲ್ಲೂ ಸಿಗದಾದ ಮೇಲೆ ಧ್ಯಾನದತ್ತ ಮನಸ್ಸು ಮಾಡಿದಿರಿ.

ಧ್ಯಾನವೆಂದರೆ ಸ್ವಯಂನ ಅನ್ವೇಷಣೆ. ತನ್ನನ್ನು ತಾನು ಹುಡುಕಿಕೊಳ್ಳುವ ಪ್ರಕ್ರಿಯೆ. ಧ್ಯಾನವು ಎಲ್ಲ ಬೆಗೆಯ ಅಲೆತಗಳ, ಅಲ್ಲ ಬಗೆಯ ಹುಡುಕಾಟಗಳ ಅಂತ್ಯವಾಗಿದೆ. ಧ್ಯಾನವೆಂದರೆ ಏನನ್ನೋ ಮಾಡುವುದಲ್ಲ, ಬದಲಿಗೆ ನನ್ನೊಂದಿಗೆನಾನು ಇರುವುದು – ಅಷ್ಟೇ.
ನಾನು ಯಾರು ಅನ್ನೋದನ್ನ ಶಬ್ದಾರ್ಥದಲ್ಲಿ ಅಲ್ಲ, ಅನುಭವಾರ್ಥದಲ್ಲಿ ಕಂಡುಕೊಳ್ಳೋದೇ ಧ್ಯಾನದ ಮೂಲ ಆಶಯ. ನಾನು ಏನಾಗಿದ್ದೇನೆ ಎಂದು ಅರಿತುಕೊಂಡ ಕ್ಷಣವೇ ಎಲ್ಲ ಧಾವಂತಗಳೂ ಕೊನೆಗೊಳ್ಳುತ್ತವೆ. ನಿಮಗೆ ನೀವು ಪರಿಪೂರ್ಣರೆಂದು, ಕಂಪ್ಲೀಟ್ – ಟೋಟಲ್ ಆಗಿರುವಿರೆಂದು ತಿಳಿಯುತ್ತದೆ. ನಿಮ್ಮಲ್ಲಿ ಆಗ ಯಾವ ಬೇಡಿಕೆ, ಅಪೇಕ್ಷೆ, ತಕರಾರುಗಳೂ ಉಳಿದಿರುವುದಿಲ್ಲ. ಯಾವ ಕೊರತೆಯೂ ಬಾಧಿಸುವುದಿಲ್ಲ. ಆಗ ಜೀವನವು ಆನಂದ ಸಾಗರವಾಗುತ್ತದೆ. ಶಾಂತಿ ಆವರಿಸುತ್ತದೆ.  

ಈ ಅಲೆತ ಮುಗಿದ ನಂತರವೂ ನೀವು ಜೀವಿಸುತ್ತೀರಿ. ಆದರೆ ಜೀವನದ ಗುಣಮಟ್ಟ ಬದಲಾಗುತ್ತದೆ. ವಿಧಾಯಕರೂ, ಗ್ರಹಣಶೀಲರೂ ಸಂವೇದನಾಶಿಲರೂ ಆಗುತ್ತೀರಿ. ಬದುಕಲ್ಲಿ ಎನೇ ಬಂದರೂ ದ್ವಂದ್ವವಿಲ್ಲದೆ ಒಪ್ಪಿಕೊಳ್ಳುತ್ತೀರಿ, ಸ್ವೀಕರಿಸುತ್ತೀರಿ. ಭಯ ಹಾಗೂ ವಿಹ್ವಲಗೊಳಿಸುವ ಬಯಕೆಗಳಿಂದ ಮುಕ್ತರಾಗುತ್ತೀರಿ.

 

1 Comment

  1. ಇರಬಹುದು. ಆದರೆ ಅಧ್ಯಾತ್ಮದ ಸಮಸ್ಯೆ ಏನೆಂದರೆ ಯಾವುದನ್ನೂ ಸರಳೀಕರಿಸಿ ಹೇಳುವುದಿಲ್ಲ. ಧ್ಯಾನ ಹೇಗೆ ಮಾಡಬೇಕು? ಸ್ವಂತ ಹುಡುಕಾಟ ಎಂದರೆ ಏನು? ಧ್ಯಾನದ ಪರಿಪೂರ್ಣತೆ ಎಂದರೆ ಯಾವುದು? ಇದನ್ನು ಕೂಡ ಕ್ಲಿಷ್ಟವಾಗಿಯೇ ಹೇಳಲಾಗಿದೆ. ಉಸಿರಿನ ಮೇಲೆ ನಿಗಾ ಇರಿಸಿ, ನಮ್ಮ ಪ್ರಜ್ಞೆಯನ್ನು ವಾಸ್ತವದಲ್ಲಿಟ್ಟು, ನಮ್ಮೊಳಗಿನ ಅಭಾವಗಳಿಗೆ ನಾವೇ ಬೆಂಬಲವಾಗಿ ನಿಂತು, ನಮ್ಮ ಯೋಚನೆಗಳನ್ನು ಉದಾತ್ತವಾಗಿ ಹರಿಬಿಟ್ಟು, ಅದೊಂದು ಸುಂದರ ಕ್ಷಣಕ್ಕೆ ತಲುಪುವ ಕ್ರಿಯೆಯೇ ಧ್ಯಾನ. ನಮ್ಮ ಕೊರತೆಗಳನ್ನು ಒಪ್ಪಿಕೊಂಡು, ನಮ್ಮನ್ನು ನಾವು ಸಮಾಧಾನಿಸಿಕೊಳ್ಳುವ ಕ್ಷಣದಲ್ಲೇ ನಮಗೆ ನಮಗೆ ನಾವು ಸಿಗುವುದು.

Leave a Reply