ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ ಬರುವುದಕ್ಕೆ ಮುನ್ನ `ಇರುವುದು’ ಅಗತ್ಯವಿರುತ್ತದೆ. ಯಾವುದು `ಇರು’ವುದೋ ಅದು ಮಾತ್ರ ಮರಳಿ ಬರಬಲ್ಲದು. ಯಾವುದು ಇಲ್ಲವಾಗುವುದೋ ಅದು ಮರಳಿ ಬರಲಾದರೂ ಹೇಗೆ ಸಾಧ್ಯ? ~ Whosoever JI
ಪ್ರತಿ ಬೆಳಗ್ಗೆ ಗಾಢ ನಿದ್ರೆಯಿಂದ ಎಚ್ಚೆತ್ತ ಮೇಲೆ, ಎಲ್ಲಕ್ಕಿಂತ ಮೊದಲು ಅರಿವಿಗೆ ಬರುವುದೇ ಇದು – ನಾನು ಇದ್ದೀನಿ ಅನ್ನುವುದು. ಈ ಸುದ್ದಿ ನಮಗೆ ಮುಟ್ಟಿಸುವುದು ಯಾರು? ಇದು ನಮಗೆ ತಿಳಿಯೋದು ಹೇಗೆ? ನಮಗೆ ಇದನ್ನು ತಿಳಿಸುವುದು ಕಾನ್ಷಿಯಸ್‍ನೆಸ್, ಅಂದರೆ ಚೇತನ.
ಬೆಳಗಿನಲ್ಲಿ ಚೇತನವು ಪುನಃ ಸಕ್ರಿಯಗೊಂಡಾಗ ನಮಗೆ ನಮ್ಮ ಇರುವಿನ ಅರಿವಾಗುತ್ತದೆ. ನಾನು ಇದ್ದೇನೆ ಅನ್ನುವುದು ತಿಳಿಯುತ್ತದೆ. ಆದರೆ, ಈ `ನಾನು’ ಯಾರು? ಯೋಚಿಸಿ ನೋಡಿ. ನೀವು ಅದನ್ನು ‘ಚೇತನ’ ಎಂದೇನೋ ಹೇಳಿಬಿಡುತ್ತೀರಿ. ಆದರೆ ಅದುವೇ ಚೇತನ ಎಂದು ನಿಮಗೆ ಹೇಗೆ ಗೊತ್ತಾಯಿತು? ಬರೀ ಶಬ್ದಗಳಿಂದ ನೀನು ವಿವರಿಸಿದಂತಾಗುವುದಿಲ್ಲ. ನೀವು ಇದನ್ನು ಹೇಳುತ್ತಿರುವುದು ಸಾಕಷ್ಟು ಬಾರಿ ಈ ಕುರಿತು ಇತರರ ಮಾತುಗಳನ್ನು ಕೇಳಿರುವುದರಿಂದ. ಆದರೆ ನಿಮಗೆ ತಿಳಿದಿದೆಯೆ? ಅಥವಾ ವಿಶ್ವಾಸವಿದೆಯೇ, ನೀನು ದೇಹವಲ್ಲ, ಚೇತನವಾಗಿದ್ದೀರೆಂದು? ಇದು ನೀವು ಕೇಳಿಕೊಂಡು ಒಪ್ಪಿರುವ ಮಾತೋ ಅಥವಾ ನಿನಗೆ ಗೊತ್ತಾಗಿರುವಂಥದ್ದೋ? ದೇಹ ಹೊರಟುಹೋದರೂ ಚೇತನರಾದ ನೀವು ಹೋಗುವುದಿಲ್ಲ ಎನ್ನುವ ಅರಿವು ನಿಮಗಾಗಿದೆಯೆ? ಚೇತನಕ್ಕೆ ಸಾವಿಲ್ಲವಾದ್ದರಿಂದ ನೀವು ಎಂದಿಗೂ ಮರಣಿಸುವುದಿಲ್ಲ ಅನ್ನುವುದು ನಿಮಗೆ ತಿಳಿದಿದೆಯೆ?
ಮೊದಲ ವಿಚಾರ – ಇನ್ನೂ ಜನ್ಮ ತಳೆದಿಲ್ಲವಾದಾಗಲೂ ನಾನು ಇದ್ದೆನೇ? ಇರಲಿಲ್ಲವೆ? ಇರಲಿಲ್ಲವಾದರೆ ನಾನು ಹುಟ್ಟಿಕೊಂಡಿದ್ದು ಹೇಗೆ? ಹುಟ್ಟಿಕೊಳ್ಳುವ ಮೊದಲು ಅಸ್ತಿತ್ವದಲ್ಲಿರುವುದು ಅನಿವಾರ್ಯ ಅಲ್ಲವೆ?
ನಾನು ದೇಹದ ರೂಪದಲ್ಲಿ ಇಲ್ಲದಿದ್ದರೂ ಅವಶ್ಯವಾಗಿ ಯಾವುದಾದರೊಂದು ಬಗೆಯಲ್ಲಿ ಇದ್ದಿರಲೇಬೇಕು. ಶರೀರ ಇರಲಿಲ್ಲ, ಆದರೆ ನಾನು ನಿಶ್ಚಿತ ರೂಪದಲ್ಲಿದ್ದೆ. ಹಾಗೊಮ್ಮೆ ನಾನು ಇಲ್ಲದೆ ಹೋಗಿದ್ದರೆ ಇದ್ದಕ್ಕಿದ್ದಂತೆ ಹುಟ್ಟಿಕೊಂಡಿದ್ದು ಹೇಗೆ? ಹಾಗಾದರೆ ಹುಟ್ಟಿ ಬಂದಿದ್ದು ಏನಾಗಿತ್ತು? ಯಾವುದು ಜನಿಸಿದೆಯೋ ಅದು ಏನಾದರೊಂದು ಆಗಿದ್ದಿರಲೇಬೇಕು!
ರಾತ್ರಿ ಗಾಢನಿದ್ದೆಯಲ್ಲಿರುವಾಗ ನೀವು ಇರುತ್ತೀರೋ ಇಲ್ಲವೋ? ಇರುತ್ತೀರಿ ಎಂದಾದರೆ, ನೀವು ಅದನ್ನು ಯಾವ ಆಧಾರದ ಮೇಲೆ ಹೇಳುತ್ತೀರಿ?
ಗಾಢ ನಿದ್ದೆಯಲ್ಲಿರುವಾಗ ಅಸ್ತಿತ್ವದ ಅರಿವು ಇರುವುದಿಲ್ಲ. ನಿದ್ದೆಯಲ್ಲಿ ನಮಗೆ ನಾವು ಇದ್ದೀವೋ ಇಲ್ಲವೋ ಅನ್ನುವುದು ತಿಳಿಯುವುದಿಲ್ಲ. ಪ್ರತಿ ದಿನದ ಅನುಭವವು ನಮಗೆ ನಮ್ಮ ‘ಇರುವಿಕೆ’ಯ ಸಾತತ್ಯವನ್ನು ತಿಳಿಸಿಕೊಡುತ್ತದೆ. ನಮ್ಮ ಇರುವಿಕೆಯ ನಿರಂತರತೆಯನ್ನು ಸಾಬೀತುಪಡಿಸುತ್ತದೆ. ನಮಗೆ ತಿಳಿಯದಾದ ಮಾತ್ರಕ್ಕೆ ನಾವು ಇಲ್ಲದೆ ಹೋಗುವುದಿಲ್ಲ; ನಮ್ಮ ಅರಿವಿಗೆ ನಿಲುಕುವುದಿಲ್ಲ ಅಷ್ಟೆ. ಇದು ನಮ್ಮೆಲ್ಲರ ದೈನಂದಿನ ಅನುಭವ.
ಹಾಗೊಮ್ಮೆ ರಾತ್ರಿಯ ಗಾಢ ನಿದ್ದೆಯಲ್ಲಿ ನಾನು ಇಲ್ಲವಾದರೆ, ಮುಗಿದುಹೋದರೆ, ಮರುದಿನ ನಾನು ಮತ್ತೆ ಅಸ್ತಿತ್ವ ಪಡೆಯಲು ಸಾಧ್ಯವಾಗದು. ಯಾರು ಇಲ್ಲವಾಗುತ್ತಾರೋ ಅವರು ಮರಳಿ ಬರುವುದಾದರೂ ಹೇಗೆ? ಮರಳಿ ಬರುವುದಕ್ಕೆ ಮುನ್ನ `ಇರುವುದು’ ಅಗತ್ಯವಿರುತ್ತದೆ. ಯಾವುದು `ಇರು’ವುದೋ ಅದು ಮಾತ್ರ ಮರಳಿ ಬರಬಲ್ಲದು. ಯಾವುದು ಇಲ್ಲವಾಗುವುದೋ ಅದು ಮರಳಿ ಬರಲಾದರೂ ಹೇಗೆ ಸಾಧ್ಯ?
ನಿದ್ದೆಯಲ್ಲಿ ಇರುವಿಕೆಯ ಅರಿವು ಅಪ್ರಕಟವಾಗಿರುತ್ತದೆ. ಆದರೆ ಅದು ಬೆಳಗಿನಲ್ಲಿ ನಿದ್ದೆಯಿಂದ ಎಚ್ಚೆತ್ತ ನಂತರ ಪ್ರಕಟಗೊಳ್ಳುತ್ತದೆ. ಇದರರ್ಥ – ನಾನು ನಿದ್ರೆಯಲ್ಲೂ ಇರುತ್ತೇನೆ ಎಂದು. ಆದರೆ ಇರುವಿಕೆಯ ಅರಿವು ಉಂಟಾಗುವುದಿಲ್ಲ ಎಂದು. ಹಾಗಾದರೆ ಜನ್ಮ ತಳೆಯುವ ಮುನ್ನ ನನ್ನ ಸ್ವರೂಪ ಹೇಗಿದ್ದಿರಬಹುದು? ಯಾವ ಆಕಾರವಿದ್ದಿರಬಹುದು?
ಆಗ ನಾನು ನನ್ನ ಇರುವಿನ ಅರಿವೇ ಆಗದಂಥ ಅವಸ್ಥೆಯಲ್ಲಿ ಇದ್ದೆ. ಮತ್ತು ಪ್ರತಿ ರಾತ್ರಿ ಹೀಗಾಗುತ್ತದೆ – ನಿದ್ದೆಯಲ್ಲಿ ನಮ್ಮ ಅಸ್ತಿತ್ವದ ಅರಿವು ಇರುವುದಿಲ್ಲ, ಆದರೂ ನಾನು ಇರುತ್ತೇನೆ!
ಸುಷುಪ್ತಿಯಲ್ಲಿ, ಗಾಢ ನಿದ್ದೆಯಲ್ಲಿ ನಾನು ಇರುವಿಕೆಯ ಅರಿವೇ ಇಲ್ಲದಂಥ ಅವಸ್ಥೆಯಲ್ಲಿರುತ್ತೇನೆ. ಅದರಂತೆಯೇ, ಜನ್ಮ ತಳೆಯುವುದಕ್ಕೆ ಮೊದಲೂ ನಾನು ಇರುವಿಕೆಯ ಅರಿವು ಇಲ್ಲದಂಥ ಸ್ಥಿತಿಯಲ್ಲಿ ಇರುತ್ತೇನೆ. ಅನಂತರ, ಜನ್ಮ ತಳೆದು ಶರೀರ ಪಡೆದ ನಂತರದಲ್ಲಿ ನನಗೆ ನನ್ನ ಅಸ್ತಿತ್ವದ ಅರಿವಾಗುತ್ತದೆ.
ಇದರರ್ಥ, ನಮ್ಮ ಇರುವಿನ ಅರಿವು ಶರೀರ ಪಡೆದಾಗಲಷ್ಟೆ ಉಂಟಾಗುವುದು ಎಂದಾಯ್ತು. ಅಸ್ತಿತ್ವದ ಅರಿವು ಶರೀರದಲ್ಲಷ್ಟೆ ಉಂಟಾಗಲು ಸಾಧ್ಯ.