ತಾವೋ ತಿಳಿವು #51 ~ ಸಂತ ಸುಮ್ಮನಿದ್ದರೆ ಏಳಿಗೆ

ಮೂಲ : ಲಾವೋ ತ್ಸು | ಕನ್ನಡಕ್ಕೆ : ಚಿದಂಬರ ನರೇಂದ್ರ

ರಾಜ್ಯವನ್ನು ಆಳಲು
ತಾವೋಗಿಂತ ಉತ್ತಮ ಮಾರ್ಗ
ಇನ್ನೊಂದಿಲ್ಲ.
ನಿಯಂತ್ರಣಕ್ಕೆ ಮೂಗುದಾರ ಹಾಕಿದಾಗ,
ಸಿದ್ಧಾಂತಗಳ ಕೆಳಗಿನ ಮಣೆ ಸರಿಸಿದಾಗ
ಜಗತ್ತಿಗೆ ತನ್ನನ್ನು ತಾನು ಆಳುವುದು
ಸಾಧ್ಯವಾಗುತ್ತದೆ.

ನಿಷೇಧಗಳು ಹೆಚ್ಚಾಗುತ್ತ ಹೋದಂತೆ
ಜನ ಚಾಲಾಕಿಗಳಾಗುತ್ತ ಹೋಗುತ್ತಾರೆ.
ಆಯುಧಗಳು ಅಪಾರವಾದಾಗ
ಜನರಲ್ಲಿ ಕಳವಳ ವಿಪರೀತವಾಗುತ್ತದೆ.
ಕರುಣೆ ಉಲ್ಬಣಗೊಂಡಾಗ
ಜನ ಭರವಸೆ ಕಳೆದುಕೊಳ್ಳುತ್ತಾರೆ

ಅಂತೆಯೇ ಸಂತ,
ಕಾನೂನಿನ ಮಾತಾಡುವುದಿಲ್ಲ
ಆಗ ಜನ ನ್ಯಾಯವಂತರಾಗುತ್ತಾರೆ.

ಅರ್ಥಶಾಸ್ತ್ರದ ಬೊಗಳೆ ಬಿಡುವುದಿಲ್ಲ
ಜನರ ಕೈಯಲ್ಲಿ ಹಣ ಓಡಾಡುತ್ತದೆ.

ಜಾತಿ ಧರ್ಮದ ಹೆದರಿಕೆ ಹುಟ್ಟಿಸುವುದಿಲ್ಲ
ಜನ ಸಮಾಧಾನಿಗಳಾಗುತ್ತಾರೆ.

ಸಂತ
ಎಲ್ಲರ ಏಳಿಗೆಯ ಬಗ್ಗೆ ಹಾತೊರೆಯುವುದಿಲ್ಲವಾದ್ದರಿಂದ
ಏಳಿಗೆ ಎಲ್ಲೆಲ್ಲೂ ಬೆಳೆವ ಹುಲ್ಲಿನಂತೆ
ಎಲ್ಲರಲ್ಲೂ ಮನೆ ಮಾಡುತ್ತದೆ.

Leave a Reply