ಭಗವದ್ಗೀತೆ : ರಣಾಂಗಣದಲ್ಲೊಂದು ಕೌನ್ಸೆಲಿಂಗ್! ಭಾಗ 2 : | ಸನಾತನ ಸಾಹಿತ್ಯ ~ ಮೂಲಪಾಠಗಳು #28

‘ಕ್ಷುದ್ರಮ್ ಹೃದಯ ದೌರ್ಬಲ್ಯಮ್’ – ಆರಂಭದಲ್ಲೇ ಈ ಮಾತನ್ನು ಹೇಳುತ್ತಾನೆ ಶ್ರೀಕೃಷ್ಣ. ಯಾಕೆಂದರೆ ಆಪ್ತಸಲಹೆಗಾರನಿಗೆ ಗೊತ್ತಿದೆ, ಸಮಸ್ಯೆ ಅಂದೊಡನೆ ಅನುಕಂಪ ತೋರಿದರೆ ಆತ ಮತ್ತಷ್ಟು ಕುಗ್ಗುತ್ತಾನೆ, ಆಸರೆ ಬಯಸತೊಡಗುತ್ತಾನೆಂದು. ಆದ್ದರಿಂದಲೇ ಅವನು ಅರ್ಜುನನಿಗೆ ‘ಹೇಡಿಯಂತೆ ಆಡಬೇಡ’ ಎಂದು ಗದರುವುದು. ಈ ಮೂಲಕ ನಿನ್ನಲ್ಲಿ ನನಗೆ ಅನುಕಂಪವಿಲ್ಲ, ಆದರೆ ಸಹಾನುಭೂತಿಯಿಂದ ಒಂದಷ್ಟು ಸಲಹೆ ನೀಡಬಲ್ಲೆ ಎಂದು ಮೊದಲೇ ಖಾತ್ರಿಪಡಿಸುತ್ತಾನೆ….

ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/07/18/sanatana27/

ರ್ಜುನ ಅಂದು ಎದುರಿಸಿದ ಸಮಸ್ಯೆಯನ್ನೇ ನಾವು ಇಂದು ಅನುಭವಿಸುತ್ತಿದ್ದೇವೆ. ನಾವು ಬಹಳ ಬೇಗ ಗೊಂದಲಗೊಳ್ಳುತ್ತೇವೆ. ದುಡುಕಿನಲ್ಲಿ ನಿರ್ಧಾರವನ್ನು ತೆಗೆದುಕೊಳ್ಳುತ್ತೇವೆ. ಸಮಸ್ಯೆಗಳು ಎದುರಾದೊಡನೆ ಅದರೊಡನೆ ಹೋರಾಡುವ ಬದಲು, ಅವನ್ನು ಹೋಗಲಾಡಿಸುವ ನಿಟ್ಟಿನಲ್ಲಿ ಏನೆಲ್ಲ ಕಳೆದುಕೊಳ್ಳಬೇಕಾಗುತ್ತದೆ ಎಂಬ ಚಿಂತೆಗೆ ಬೀಳುತ್ತೇವೆ. ಅತ್ತ ಸಮಸ್ಯೆಯೂ ಬೆಳೆಯುತ್ತ ಹೋಗುತ್ತದೆ, ಇತ್ತ ಚಿಂತೆಯೂ. ನಾವೂ ಅರ್ಜುನನಂತೆಯೇ ನಮ್ಮ ದೃಷ್ಟಿಯಲ್ಲಿ ಸಂದರ್ಭಗಳನ್ನು ಅವಲೋಕಿಸುವುದರಿಂದ, ಅವೆಲ್ಲವನ್ನೂ ನಮ್ಮ ಶತ್ರುಗಳಂತೆ, ಆ ಶತ್ರುಗಳಾದರೂ ನಮ್ಮ ಆಪ್ತ ಸಂಗತಿಗಳೇ ಆಗಿರುವಂತೆ, ಹೋರಾಡುವಂತೆ – ಹೋರಾಡಲಾಗದಂತೆ, ಹೀಗೆ ಹಲವು ಸಂಕಟಗಳಲ್ಲಿ ತೊಳಲಾಡುತ್ತ ಬದುಕಿನ ಕ್ಷಣಕ್ಷಣದ ನೆಮ್ಮದಿ ಕಳೆದುಕೊಳ್ಳುತ್ತೇವೆ.

‘ಕ್ಷುದ್ರಮ್ ಹೃದಯ ದೌರ್ಬಲ್ಯಮ್’ – ಆರಂಭದಲ್ಲೇ ಈ ಮಾತನ್ನು ಹೇಳುತ್ತಾನೆ ಶ್ರೀಕೃಷ್ಣ. ಯಾಕೆಂದರೆ ಆಪ್ತಸಲಹೆಗಾರನಿಗೆ ಗೊತ್ತಿದೆ, ಸಮಸ್ಯೆ ಅಂದೊಡನೆ ಅನುಕಂಪ ತೋರಿದರೆ ಆತ ಮತ್ತಷ್ಟು ಕುಗ್ಗುತ್ತಾನೆ, ಆಸರೆ ಬಯಸತೊಡಗುತ್ತಾನೆಂದು. ಆದ್ದರಿಂದಲೇ ಅವನು ಅರ್ಜುನನಿಗೆ ‘ಹೇಡಿಯಂತೆ ಆಡಬೇಡ’ ಎಂದು ಗದರುವುದು. ಈ ಮೂಲಕ ನಿನ್ನಲ್ಲಿ ನನಗೆ ಅನುಕಂಪವಿಲ್ಲ, ಆದರೆ ಸಹಾನುಭೂತಿಯಿಂದ ಒಂದಷ್ಟು ಸಲಹೆ ನೀಡಬಲ್ಲೆ ಎಂದು ಮೊದಲೇ ಖಾತ್ರಿಪಡಿಸುತ್ತಾನೆ.
ಏಕೆಂದರೆ, ಗೊಂದಲದಲ್ಲಿ ಇರುವ ವ್ಯಕ್ತಿ ತನ್ನ ಸುಪ್ತ ಪ್ರಜ್ಞೆಯಲ್ಲಿ ಯಾವುದನ್ನು ಬಯಸುತ್ತ ಇರುತ್ತಾನೋ ಅದನ್ನೆ ಸಲಹೆ ನೀಡುವವರೂ ತನಗಗಾಗಿ ಆಯ್ದುಕೊಡಲೆಂದು ಬಯಸುತ್ತಿರುತ್ತಾನೆ. ಆದ್ದರಿಂದಲೇ ಆತನಿಗೆ ಅದೊಂದರ ಹೊರತಾಗಿ ಮತ್ತೆಷ್ಟು ಸಲಹೆಗಳನ್ನು ನೀಡಿದರೂ ತೃಪ್ತಿಯಾಗದೆ ಹೋಗುತ್ತದೆ. ತನ್ನ ಮನಸ್ಸಿನಲ್ಲಿರುವುದು ಸಲಹೆಗಾರರ ಬಾಯಿಂದ ಬರುವವರೆಗೂ ಆತ ಪ್ರತಿಯೊಂದನ್ನೂ ನಿರಾಕರಿಸುತ್ತಲೇ ಸಾಗುತ್ತಾನೆ.

ಕೃಷ್ಣನೂ ಅರ್ಜುನ ನಾನು ಬಂಧುಗಳೊಡನೆ ಯುದ್ಧ ಮಾಡಲಾರೆ ಅಂದಾಗ ಅಯ್ಯೋ ಪಾಪ ಅಂದುಬಿಟ್ಟಿದ್ದರೆ ಧರ್ಮಯುದ್ಧ ನಡೆಯುತ್ತಲೇ ಇರಲಿಲ್ಲ. ಅಂದಮಾತ್ರಕ್ಕೆ ಅರ್ಜುನನ ಸಮಸ್ಯೆಗಳೆಲ್ಲವೂ ನಿವಾರಣೆಯಾಗಿಬಿಡುತ್ತಲೂ ಇರಲಿಲ್ಲ. ಅರ್ಜುನನ ಪರಿಸ್ಥಿತಿಯ ಅಧ್ಯಯನ ನಡೆಸಿದ್ದ ಕೃಷ್ಣ£ಗೆ ಗೊತ್ತಿತ್ತು, ಈ ಕ್ಷಣ ಆತ ಅನುಭವಿಸುತ್ತಿರುವ ದುಃಖಕ್ಕಿಂತ ನೂರು ಪಾಲು ಹೆಚ್ಚು ದುಃಖವನ್ನು ಯುದ್ಧ ವಿಮುಖನಾಗುವುದರಿಂದ ಆತ ಅನುಭವಿಸುತ್ತಾನೆ ಎಂದು. ಆದ್ದರಿಂದಲೇ ಆತ ಅರ್ಜುನನ ಅನ್ನಿಸಿಕೆಯ ಟೊಳ್ಳನ್ನು ತೋರಿಸಿಕೊಡುವ ಪ್ರಯತ್ನಕ್ಕೆ ಮುಂದಾಗುವುದು.

ಈ ಪ್ರಯತ್ನದಲ್ಲಿ ಕೃಷ್ಣನ ಯಶಸ್ಸನ್ನು ತೋರಿಸಿಕೊಡುವ ಎರಡು ಶ್ಲೋಕಗಳನ್ನು ಗಮನಿಸಿ:
‘ಶಿಷ್ಯಾಸ್ತೇ ಅಹಮ್ ಸಾಧಿ ಮಾಮ್ ತ್ವಮ್ ಪ್ರಪನ್ನಮ್’
– ನಾನು ನಿನ್ನ ಶಿಷ್ಯನಾಗಿದ್ದೇನೆ. ಸಹಾಯ ಮಾಡು, ಮಾರ್ಗದರ್ಶನ ನೀಡು – ಎಂದು ಅರ್ಜುನ ಕೇಳಿಕೊಳ್ಳುವುದು ಎರಡನೇ ಅಧ್ಯಾಯದ ಮೂರನೇ ಶ್ಲೋಕದಲ್ಲಿ ಕಂಡುಬರುತ್ತದೆ.
ನಾಸ್ತೋ ಮೋಹಃ ಸ್ಮೃತಿರ್ಲಬ್ಧಾ ತ್ವತ್ ಪ್ರಸಾದಾನ್ ಮಯಾಚ್ಯುತ
ಸ್ಥಿತೋಸ್ಮಿ ಗತ ಸಂದೇಹಃ ಕರಿಷ್ಯೇ ವಚನಮ್ ತವ
– (ದುಗುಡದ) ಮೋಡಗಳು ತಿಳಿಯಾದವು. ನನ್ನ ಪ್ರಜ್ಞೆಯು ಮರಳಿತು. ನಿನ್ನ ಕಾರಣದಿಂದಾಗಿ ನನ್ನೆಲ್ಲ ಸಂಶಯಗಳೂ ನಿವಾರಣೆಯಾದವು. ನೀನು ಹೇಳಿದಂತೆ ಮಾಡಲು ನಾನೀಗ ಸಿದ್ಧನಿದ್ದೇನೆ – ಎಂದು ಅದೇ ಅರ್ಜುನ ಹೇಳುವುದು 18ನೇ ಅಧ್ಯಾಯದ 73ನೇ ಶ್ಲೋಕದಲ್ಲಿ ದಾಖಲಾಗಿದೆ.

ಈ ಮಹಾಪಲ್ಲಟಕ್ಕೆ ಕಾರಣವೇನು? ಶರಣಾಗತನಾಗಿ, ನನ್ನನ್ನು ಕಾಪಾಡು ಎಂದು ಕೇಳಿಕೊಂಡ ಅರ್ಜುನ ಧೈರ್ಯ ವಹಿಸಿ, ನೀನು ಹೇಳಿದಂತೆ ಮಾಡಲು ತಯಾರಾಗಿದ್ದೇನೆ ಎಂದು ಹೇಳುತ್ತಾನೆಂದರೆ ಅಲ್ಲಿ ಯಾವ ಜಾದೂ ಘಟಿಸಿತು?
ಅಲ್ಲಿ ಫಲಿಸಿದ್ದು ಕೃಷ್ಣನ ಚಿಕಿತ್ಸಕ ಮಾತುಗಳು. ಎರಡರಿಂದ ಹದಿನೆಂಟನೇ ಅಧ್ಯಾಯಗಳ ನಡುವೆ ಕೃಷ್ಣ ಹಲವು ಬಗೆಯ ತತ್ತ್ವಗಳನ್ನು ಬಳಸಿ ವಸ್ತು ಸ್ಥಿತಿಯನ್ನು ಅರ್ಥಮಾಡಿಸುತ್ತಾನೆ. ಪರಿಣಾಮರೂಪವಾಗಿ ಅರ್ಜುನ ವಾಸ್ತವವನ್ನು ಅರಿಯುವ ಸಾಮರ್ಥ್ಯ ಹೊಂದುತ್ತಾನೆ.

ಅರಳಿಬಳಗದ ಆಶಯ : ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ.

Leave a Reply