ಭಗವದ್ಗೀತೆ : ರಣಾಂಗಣದಲ್ಲೊಂದು ಕೌನ್ಸೆಲಿಂಗ್! : | ಸನಾತನ ಸಾಹಿತ್ಯ ~ ಮೂಲಪಾಠಗಳು #27

ಗೀತಾಚಾರ್ಯ ಕೃಷ್ಣನನ್ನು ಮನೋವಿಜ್ಞಾನಿ ಎಂದೂ ಧಾರಾಳವಾಗಿ ಕರೆಯಬಹುದು. ಈತ ಸಮರ ಸಮ್ಮುಖದಲ್ಲಿ ನಿಂತು, ಸಮಾಧಾನಚಿತ್ತನಾಗಿ ತನ್ನ ದೀರ್ಘ ಕಾಲದ ಗೆಳೆಯನ ಮನೋವ್ಯಥೆಯನ್ನು ಹೋಗಲಾಡಿಸುತ್ತಾನೆ. ಆ ಅವಧಿಯಲ್ಲಿ ಯಾವುದನ್ನು ಮಾಡಲೇಬೇಕಿತ್ತೋ ಆ ಕೆಲಸವನ್ನು ಮಾಡುವಂತೆ ಆತನ ಮನಸ್ಸನ್ನು ಅಣಿಗೊಳಿಸುತ್ತಾನೆ.

ಕಾಯಕ ಸಂಸ್ಕೃತಿಯ ಬಗ್ಗೆ ಹಾಗೂ ದೈವೀ ಸಂಪದ ವರ್ಗದ ಕಾಯಕ ಸಂಸ್ಕೃತಿಯ ಬಗ್ಗೆ ನೆನ್ನೆ ಈ ಅಂಕಣದಲ್ಲಿ ಓದಿದ್ದೀರಿ (ಕೊಂಡಿ: https://aralimara.com/2018/07/17/sanatana26/ ) ಇದನ್ನು ನಮ್ಮದಾಗಿಸಿಕೊಳ್ಳುವುದು ಹೇಗೆ? ನಮ್ಮದಾಗಿಸಿಕೊಳ್ಳಲು ಬೇಕಾದ ನೈತಿಕ ಸ್ಥೈರ್ಯವನ್ನು ರೂಢಿಸಿಕೊಳ್ಳುವುದು ಹೇಗೆ?
ಅದಕ್ಕಾಗಿಯೇ ಭಗವದ್ಗೀತೆಯು ಈ ಕೆಳಗಿನ ನಿರ್ಲಿಪ್ತಿಯ ಸೂತ್ರಗಳನ್ನು ನೀಡುತ್ತದೆ:
• ಪ್ರಾಮಾಣಿಕ ಪ್ರಯತ್ನದ ಫಲವಾಗಿ ಯಶಸ್ಸು ಲಭಿಸಿದರೆ, ಅದರ ಕೀರ್ತಿ ಪ್ರಯತ್ನಕ್ಕೆ ಲಭಿಸುತ್ತದೆಯೇ ಹೊರತು ವ್ಯಕ್ತಿಗಲ್ಲ.
• ಹಾಗೆಯೇ ಪ್ರಾಮಾಣಿಕ ಪ್ರಯತ್ನದ ನಂತರವೂ ವೈಫಲ್ಯ ಉಂಟಾದರೆ, ಅದರ ದೋಷವು ವ್ಯಕ್ತಿಗೆ ಆರೋಪಿತವಾಗುವುದಿಲ್ಲ.

ಇವುಗಳಲ್ಲಿ ಮೊದಲನೆ ಸೂತ್ರವು ಕೆಲಸ ಮಾಡುವ ವ್ಯಕ್ತಿ (ಕರ್ತ)ಯನ್ನು ಗರ್ವಿಷ್ಠನಾಗದಂತೆ, ಬೀಗದಂತೆ ತಡೆದರೆ, ಎರಡನೆ ಸೂತ್ರವು ವ್ಯಕ್ತಿಯು ಸೋಲಿನಿಂದ ಕುಗ್ಗದಂತೆ, ಸ್ವಾನುಕಂಪಕ್ಕೀಡಾಗದಂತೆ ತಡೆಯುತ್ತದೆ.
ಗೀತೆಯು ನಮಗೆ ‘ಲೋಕ ಸಂಗ್ರಹ’ದ ವಿಶಾಲ ದೃಷ್ಟಿಕೋನವನ್ನು ಒದಗಿಸುವುದಲ್ಲದೆ, ಸೇವಾಯೋಗದ ಪರಿಕಲ್ಪನೆಯನ್ನೂ ಕಟ್ಟಿಕೊಡುತ್ತದೆ. ಕರ್ಮಯೋಗವು ಭಕ್ತಿಯೋಗದೊಡನೆ ಬೆರೆತಾಗ ನಿಸ್ವಾರ್ಥವಾದ ಸೇವಾಯೋಗದ ಮನೋಭಾವವು ಉದ್ಭವಿಸುತ್ತದೆ.

ಮಾಡುತ್ತಿರುವ ಕೆಲಸದ ಬಗ್ಗೆ ಪೂಜ್ಯ ಭಾವನೆಯನ್ನು ಇರಿಸಿಕೊಳ್ಳುವುದೇ ಭಕ್ತಿ. ಇಲ್ಲಿ ಕೃಷ್ಣನು ಫಲದ ನಿರೀಕ್ಷೆ ಇಟ್ಟುಕೊಳ್ಳದೆ, ಕರ್ತವ್ಯಪ್ರಜ್ಞೆಯೊಂದಿಗೆ ಕೆಲಸವನ್ನು ಮಾಡಬೇಕು ಮತ್ತು ಆ ಕೆಲಸವನ್ನು ಗೌರವಿಸಬೇಕು ಎಂದು ಹೇಳುತ್ತಿದ್ದಾನೆ. ನಾವು ಮಾಡುವ ಕೆಲಸದ ಬಗ್ಗೆ ನಮಗೇ ಶ್ರದ್ಧೆ ಇಲ್ಲದೆ ಹೋದರೆ ಅದರಿಂದ ಉತ್ತಮ ಪರಿಣಾಮವೂ ಉಂಟಾಗುವುದಿಲ್ಲ. ನಮ್ಮ ಪ್ರತಿಯೊಂದು ಕೆಲಸವೂ ನಮ್ಮ ವೈಯಕ್ತಿಕ ಲಾಭದ ಜೊತೆಜೊತೆಗೇ ವೈಶ್ವಿಕವಾದ ದೀರ್ಘಕಾಲೀನ ಪರಿಣಾಮಕ್ಕೂ ಪಕ್ಕಾಗುತ್ತ ಇರುತ್ತದೆ. ನಮ್ಮ ತಪ್ಪು ಕೆಲಸಗಳ ಮೂಲಕ, ಆಸುರೀಯ ಸಂಪದದ ಮೂಲಕ ವಿಶ್ವದಲ್ಲಿ ಋಣಾತ್ಮಕ ಶಕ್ತಿಯನ್ನು ಹಂಚುತ್ತಿರುತ್ತೇವೆ ಮತ್ತು ಈ ಶಕ್ತಿಯು ಮರಳಿ ನಮ್ಮ ವಿಧಿಯನ್ನೇ ಬಂದು ಸೇರುತ್ತದೆ. ಇದನ್ನೇ ಕರ್ಮ ಫಲ ಎನ್ನುತ್ತದೆ ಗೀತೆ.
ನಾವು ಫಲಾಫಲಗಳ ನಿರೀಕ್ಷೆ ಇಟ್ಟುಕೊಳ್ಳದೆ ಕೆಲಸ ಮಾಡಬೇಕು. ಏಕೆಂದರೆ ಫಲವು ಖಚಿತವಾಗಿಯೂ ದೊರೆಯಲಿದೆ! ಸತ್ಕರ್ಮಗಳಿಗೆ ಸತ್ಫಲವೂ ದುಷ್ಕರ್ಮಗಳಿಗೆ ದುಷ್ಫಲವೂ ದೊರೆಯುವುದು ಇದ್ದೇ ಇದೆ. ಆದ್ದರಿಂದ ಅದರ ಬಗ್ಗೆ ವಿಚಾರ ಮಾಡದೆ ನಿರ್ಲಿಪ್ತರಾಗಿ ಒಳಿತಿನ ಹಾದಿಯಲ್ಲಿ ನಮ್ಮ ಕರ್ತವ್ಯವನ್ನಷ್ಟೆ ಮಾಡುತ್ತ ಸಾಗಬೇಕು ಅನ್ನುತ್ತಾನೆ ಶ್ರೀ ಕೃಷ್ಣ.

ಮನೋವಿಜ್ಞಾನಿ ಗೀತಾಚಾರ್ಯ
ಗೀತಾಚಾರ್ಯ ಕೃಷ್ಣನನ್ನು ಮನೋವಿಜ್ಞಾನಿ ಎಂದೂ ಧಾರಾಳವಾಗಿ ಕರೆಯಬಹುದು. ಈತ ಸಮರ ಸಮ್ಮುಖದಲ್ಲಿ ನಿಂತು, ಸಮಾಧಾನಚಿತ್ತನಾಗಿ ತನ್ನ ದೀರ್ಘ ಕಾಲದ ಗೆಳೆಯನ ಮನೋವ್ಯಥೆಯನ್ನು ಹೋಗಲಾಡಿಸುತ್ತಾನೆ. ಆ ಅವಧಿಯಲ್ಲಿ ಯಾವುದನ್ನು ಮಾಡಲೇಬೇಕಿತ್ತೋ ಆ ಕೆಲಸವನ್ನು ಮಾಡುವಂತೆ ಆತನ ಮನಸ್ಸನ್ನು ಅಣಿಗೊಳಿಸುತ್ತಾನೆ. ನನ್ನಿಂದ ಇದು ಸಾಧ್ಯವಿಲ್ಲ ಅನ್ನುವ ಕೀಳರಿಮೆಯಿಂದಲೂ; ಎತ್ತಿ ಆಡಿಸಿದ ಅಜ್ಜ, ದೊಡ್ಡಪ್ಪ ಮೊದಲಾದವರೊಡನೆ ಹೋರಾಡಲು ಹೊರಟಿದ್ದೇನೆ ಅನ್ನುವ ತಪ್ಪಿತಸ್ಥ ಭಾವನೆಯಿಂದಲೂ ದುರ್ಬಲನಾಗುವ ಅರ್ಜುನನಿಗೆ ಆತನ ನಿಜ ಸಾಮರ್ಥ್ಯವನ್ನು ತೋರಿಸಿಕೊಡುತ್ತಾನೆ ಕೃಷ್ಣ.
ಇಲ್ಲಿ ಆತ ಮಾಡುವುದು ಅಪ್ಪಟ ಕೌನ್ಸೆಲಿಂಗ್. ಈ ನಿಟ್ಟಿನಲ್ಲಿ ಗೀತೆ ಒಂದು ಆಪ್ತಸಲಹೆ ಸೆಷನ್ನಿನ ಸಂಭಾಷಣೆ. ಕೃಷ್ಣ ಹಂತಹಂತವಾಗಿ ಅರ್ಜುನನ ಸಮಸ್ಯೆಯನ್ನು ತಿಳಿಯಾಗಿಸುತ್ತಾ ಅವನಲ್ಲಿ ಆತ್ಮವಿಶ್ವಾಸ ತುಂಬುತ್ತಾನೆ. ಮುಖ್ಯವಾಗಿ ತಪ್ಪಿತಸ್ಥ ಭಾವನೆಯನ್ನು ಹೋಗಲಾಡಿಸುತ್ತಾನೆ. ಎಲ್ಲ ಹೇಳಿಯಾದ ಮೇಲೆ ತನ್ನ ಕೌನ್ಸೆಲಿಂಗ್ ಆತನ ಮೇಲೆ ಪ್ರಭಾವ ಬೀರಿದೆಯೋ ಇಲ್ಲವೋ ಪರೀಕ್ಷಿಸಲು, “ಇಷ್ಟೆಲ್ಲ ಹೇಳಿದ್ದೇನೆ. ನೀನು ನಿನಗೆ ಯಾವುದು ಸರಿಯೆಂದು ತೋಚುತ್ತದೆಯೋ ಅದನ್ನು ಮಾಡು” ಎನ್ನುತ್ತಾನೆ!
ಕೊನೆಯಲ್ಲಿ ಅರ್ಜುನ ಗಾಂಡೀವ ಮೇಲೆತ್ತಿ ಯುದ್ಧ ಸನ್ನದ್ಧನಾಗುವ ಮೂಲಕ ಕೃಷ್ಣನ ಆಪ್ತಸಲಹೆಗಳು ಪ್ರಭಾವ ಬೀರಿದ್ದನ್ನು ಖಾತ್ರಿ ಪಡಿಸುತ್ತಾನೆ.

ಅರ್ಜುನ ವಿಷಾದ ಯೋಗದಲ್ಲಿ ಅಸ್ವಸ್ಥನ ತೊಳಲಾಟಗಳ ವಿವರವಿದೆ. ಇಲ್ಲಿ ಅರ್ಜುನ ತನ್ನ ದೃಷ್ಟಿಯಿಂದ ಸಂದರ್ಭವನ್ನು ಅವಲೋಕಿಸಿ ಅದನ್ನೊಂದು ಸಮಸ್ಯೆ ಎಂಬಂತೆ ನೋಡುತ್ತಾನೆ. ಆದರೆ ಸಮಸ್ಯೆ ಇರುವುದು ಸಂದರ್ಭದಲ್ಲಿ ಅಲ್ಲ, ನಿನ್ನ ಗ್ರಹಿಕೆಯಲ್ಲಿ ಎಂದು ಮನದಟ್ಟು ಮಾಡುವ ಮೂಲಕ ಅರ್ಜುನನನ್ನು ಸಮಸ್ಯೆಯ ಊಹೆಯಿಂದ ಬಿಡಿಸುತ್ತಾನೆ ಕೃಷ್ಣ. ಗೊಂದಲಕ್ಕೆ ಸಿಲುಕಿ ವಿಷಾದ ಪಡುವ ಅರ್ಜುನನಿಗೆ ಸರಿಯಾದ ಆಯ್ಕೆಯನ್ನು ತೋರಿಸಿಕೊಡುತ್ತಾನೆ. ಇದು ಸೈಕಾಲಜಿಸ್ಟರ ಕೆಲಸ ಅಲ್ಲವೆ?

ಒಬ್ಬ ಸೈಕೋಥೆರಪಿ ವಿದ್ಯಾರ್ಥಿಗೆ ಈ ಕೃಷ್ಣಾರ್ಜುನ ಸಂವಾದ ಒಂದು ಅತ್ಯುಪಯುಕ್ತ ಕೇಸ್ ಸ್ಟಡಿಯಾಗಬಲ್ಲದು. ಮಾನಸಿಕ ಸ್ವಾಸ್ಥ್ಯ ಕದಡಿದ ವ್ಯಕ್ತಿಯ ಹಿನ್ನೆಲೆ, ಸಂದರ್ಭದ ಹಿನ್ನೆಲೆ ಮೊದಲಾದವುಗಳನ್ನು ಗುರುತಿಸಿ, ಅವನು ವಿಶ್ಲೇಷಿಸಿ, ಗುರುವಿನಂತೆ, ಗೆಳೆಯನಂತೆ, ಸರ್ವಶಕ್ತನಂತೆ – ಹೀಗೆ ನಾನಾ ವಿಧಾನಗಳಿಂದ ಆತನಲ್ಲಿ ಸ್ಥೈರ್ಯ ತುಂಬುವ ಪ್ರಕ್ರಿಯೆ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಲ್ಲಿ ಹರಡಿಕೊಂಡಿದೆ.

ಅರಳಿಬಳಗದ ಆಶಯ : ಭಗವದ್ಗೀತೆಯು ಲೌಕಿಕ – ಪರಮಾರ್ಥಗಳೆರಕ್ಕೂ ಸಲ್ಲುವ ಧಾರ್ಮಿಕ ಸಾಹಿತ್ಯವಾಗಿದೆ. ಯಾವುದೇ ರಚನೆ – ಬೋಧನೆ – ನಿರ್ಣಯಗಳು ಎಷ್ಟೇ ಸಾರ್ವಕಾಲಿಕವಾಗಿದ್ದರೂ ಆಯಾ ಕಾಲದ ಅಗತ್ಯವನ್ನೂ ಚಿಂತನೆಯನ್ನೂ ಹೊತ್ತುಕೊಂಡಿರುತ್ತದೆ. ಭಗವದ್ಗೀತೆಯ ಜ್ಞಾನಸಾಗರದಲ್ಲಿ ಮುತ್ತುಗಳನ್ನು ಆಯ್ದುಕೊಳ್ಳುವ ಸಹನೆ ಮತ್ತು ಶ್ರದ್ಧೆ ನಮ್ಮದಾಗಿರಬೇಕಷ್ಟೆ.

1 Comment

Leave a Reply