‘ದ ಪ್ರಾಫೆಟ್’ ಕೃತಿಯು ಜಗತ್ತಿನ ಬಹುತೇಕ ಭಾಷೆಗಳಿಗೆ ಅನುವಾದಗೊಂಡಿದ್ದು, ಕನ್ನಡದಕ್ಕೂ ಬಂದಿವೆ. ‘ಅರಳಿಬಳಗ’ದ ಕವಿ ಚಿದಂಬರ ನರೇಂದ್ರ ಮತ್ತೊಮ್ಮೆ ಇದರ ಅನುಭಾವವನ್ನು ಅನುವಾದದ ಮೂಲಕ ಹರಿಸುವ ಪ್ರಯತ್ನ ಮಾಡಿದ್ದಾರೆ.
ಎದೆಗೆ ಮಗುವನ್ನು ಒತ್ತಿಕೊಂಡು ಹಿಂದೆ ನಿಂತಿದ್ದ ಹೆಣ್ಣು ಮಗಳೊಬ್ಬಳು
ಮುಂದೆ ಬಂದಳು.
ಮುಂದೆ ಬಂದು ಮಕ್ಕಳ ಬಗ್ಗೆ ಪ್ರಶ್ನೆ ಮಾಡಿದಳು.
ಅವನು
ಮಕ್ಕಳ ಬಗ್ಗೆ ಮಾತನಾಡತೊಡಗಿದ ;
ನಿಮ್ಮ ಮಕ್ಕಳು ನಿಮ್ಮವರಲ್ಲ.
ತನ್ನ ಬಗ್ಗೆ ಸದಾ ಚಡಪಡಿಸುವ
ಬದುಕಿನ ತುಡಿತಕ್ಕೆ ಹುಟ್ಟಿದವರು ಇವರು.
ನಿಮ್ಮ ಮೂಲಕ ಬಂದಿದ್ದಾರೆಯೇ ಹೊರತು
ನಿಮ್ಮಿಂದಾಗಿ ಅಲ್ಲ.
ನಿಮ್ಮ ಜೊತೆ ಇರಬಹುದು,
ಆದರೆ ನಿಮ್ಮ ಆಸ್ತಿಯಾಗುವುದು ಸಾಧ್ಯವಿಲ್ಲ.
ನೀವು ಪ್ರೀತಿ ವಿಶ್ವಾಸಗಳನ್ನು ತೋರಬಹುದು,
ಆದರೆ ದಾರಿಯನ್ನಲ್ಲ.
ಅವರು ಕಂಡುಕೊಂಡ ದಾರಿಗಳಲ್ಲಿ
ನಿಶ್ಚಯವಾಗಿದೆ ಅವರ ಪ್ರಯಾಣ.
ನೀವು ಕಟ್ಟಬಹುದಾದ ಮನೆ
ಅವರ ದೇಹಗಳಿಗೆ ಮಾತ್ರವೇ ಹೊರತು ಆತ್ಮಗಳಿಗಲ್ಲ.
ಆತ್ಮಗಳ ಮನೆ ಭವಿಷ್ಯದಲ್ಲಿ ನೆಲೆ ನಿಂತಿದೆ.
ಆ ಮನೆಯ ವಿಳಾಸ ನಿಮಗಷ್ಟೇ ಅಲ್ಲ
ನಿಮ್ಮ ಕನಸುಗಳಿಗೂ ನಿಲುಕುವುದಿಲ್ಲ.
ಅವರ ದಾರಿಯಲ್ಲಿ ನೀವು ನಡೆದು ನೋಡಬಹುದು,
ಆದರೆ ಅವರನ್ನು ನಿಮ್ಮ ದಾರಿಗೆ ನೂಕದಿರಿ.
ಬದುಕಿಗೆ ಹಿಂದೆ ನಡೆದು ಗೊತ್ತಿಲ್ಲ,
ನಿನ್ನೆಯ ಜೊತೆ ವ್ಯವಹಾರ ಮಾಡಿ ಗೊತ್ತಿಲ್ಲ.
ನೀವು ಬಿಲ್ಲಾದರೆ, ಮಕ್ಕಳು
ನಿಮ್ಮಿಂದ ಚಿಮ್ಮಿದ ಜೀವಂತ ಬಾಣಗಳು.
ಬಿಲ್ಲುಗಾರನ ಕಣ್ಣು
ಮುಗಿಯದ ದಾರಿಯ ಮೇಲಿನ ಗುರಿಯ ಮೇಲೆ.
ತನ್ನ ಬಾಣಗಳು ಆ ಅಪಾರ ದೂರವನ್ನು
ಶರವೇಗದಲ್ಲಿ ಮುಟ್ಟಲೆಂದು
ನಿಮ್ಮನ್ನು ಶಕ್ತಿ ಮೀರಿ ಮಣಿಸುತ್ತಾನೆ.
ಅವ ಹೆದೆಯೇರಿಸಿದಾಗ, ಖುಷಿಯಿಂದ ಬಾಗಿ.
ಅವನಿಗೆ ಬಾಣಗಳ ಮೇಲೆ ಎಷ್ಟು ಪ್ರೀತಿಯೋ
ಅಷ್ಟೇ ಪ್ರೇಮ,
ಬಾಗಿದ ಮೇಲೂ ಮುರಿಯದ ಬಿಲ್ಲಿನ ಮೇಲೆ ಕೂಡ.
ಮುಂದುವರೆಯುತ್ತದೆ……….
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.