ಶಿಕ್ಷಕನೊಬ್ಬ ಕಲಿಸುವಿಕೆಯ ಬಗ್ಗೆ ಮಾಡಿದ ಪ್ರಶ್ನೆಗೆ
ಅವನು ಉತ್ತರಿಸತೊಡಗಿದ.
ನಿಮ್ಮ ತಿಳುವಳಿಕೆಯ ಸೂರ್ಯ ಅಂಬೆಗಾಲಿಡುತ್ತಿರುವಾಗ
ಇನ್ನೂ ಅರೆನಿದ್ದೆಯಲ್ಲಿರುವುದನ್ನು ಬಿಟ್ಟು,
ಬೇರೆ ಯಾವುದನ್ನೂ, ಯಾರೂ ನಿಮಗೆ
ಹೇಳಿಕೊಡಲಿಕ್ಕಾಗುವುದಿಲ್ಲ.
ದೇವಸ್ಥಾನದ ನೆರಳಲ್ಲಿ,
ಸುತ್ತ ಮುತ್ತ ಶಿಷ್ಯರನ್ನೊಡಗೂಡಿ
ನಡೆಯುತ್ತಿರುವ ಶಿಕ್ಷಕ
ತನ್ನ ನಂಬಿಕೆ ಮತ್ತು ಪ್ರೇಮಭಾವವನ್ನು ಹೊರತುಪಡಿಸಿ
ನಿಮಗೆ ಬೇರೆ ಯಾವ ತಿಳುವಳಿಕೆಯನ್ನೂ
ಹೇಳಿಕೊಡುವುದಿಲ್ಲ.
ಅವನು ತಿಳುವಳಿಕೆಯುಳ್ಳವನಾಗಿದ್ದರೆ
ಬಾಗಿಲು ತೆರೆದು ನಿಮ್ಮನ್ನು
ತನ್ನ ಮನೆಯೊಳಗೆ ಬಿಟ್ಟುಕೊಳ್ಳುವುದಿಲ್ಲ,
ಬದಲಾಗಿ, ನಿಮ್ಮನ್ನು ನಿಮ್ಮ ಮನದ ಹೊಸ್ತಿಲವರೆಗೆ
ಎಳೆದುಕೊಂಡು ಹೋಗಿ ನಿಲ್ಲಿಸುತ್ತಾನೆ.
ಖಗೋಳ ಶಾಸ್ತ್ರಜ್ಞ,
ಆಕಾಶದ ಬಗೆಗಿನ ತನ್ನ ತಿಳುವಳಿಕೆಯನ್ನು
ನಿಮಗೆ ಹೇಳಬಲ್ಲನೇ ಹೊರತು
ತನ್ನ ತಿಳುವಳಿಕೆಯನ್ನು ನಿಮಗೆ ಕೊಡಲಾರ.
ಸಂಗೀತಗಾರ,
ಬ್ರಹ್ಮಾಂಡದ ಎಲ್ಲೆಡೆ ಹಾಸುಹೊಕ್ಕಾಗಿರುವ
ತಾಳ ಲಯಗಳನ್ನು ನಿಮ್ಮ ಮಂದೆ
ಹಾಡಿ ತೋರಿಸಬಲ್ಲನೇ ಹೊರತು,
ತಾಳ ಲಯಗಳನ್ನು ಹಿಡಿದಿಡಬಲ್ಲ ಕಿವಿಗಳನ್ನೂ ಮತ್ತು
ಈ ಛಂದವನ್ನು ಅನುರಣಿಸಬಲ್ಲ ದನಿಯನ್ನೂ
ನಿಮಗೆ ಕೊಡಲಾರ.
ಸಂಖ್ಯೆಗಳ ಶಾಸ್ತ್ರದಲ್ಲಿ ಪಾರಂಗತನಾದ ಮನುಷ್ಯ
ಭಾರ ಮತ್ತು ಅಳತೆಗಳ ಲೋಕದ ಬಗ್ಗೆ
ನಿಮ್ಮೆದುರು ಮಾತಾಡಬಲ್ಲನೇ ಹೊರತು
ಅಲ್ಲಿಗೆ ನಿಮ್ಮನ್ನು ಕರೆದುಕೊಂಡು ಹೋಗಲಾರ.
ಏಕೆಂದರೆ
ಒಬ್ಬನ ತಿಳುವಳಿಕೆ,
ಇನ್ನೊಬ್ಬನಿಗೆ ರೆಕ್ಕೆಯಾಗಲಾರದು.
ಭಗವಂತನ ತಿಳುವಳಿಕೆಯಲ್ಲಿ
ಹೇಗೆ ನೀವು ಪ್ರತ್ಯೇಕವಾಗಿ ಪ್ರಸಿದ್ಧರೋ,
ಹಾಗೆಯೇ ಭಗವಂತನ ಬಗೆಗಿನ ಹಾಗು
ಈ ನೆಲದ ಬಗೆಗಿನ ನಿಮ್ಮ ತಿಳುವಳಿಕೆಯಲ್ಲೂ
ನೀವು ವಿಶಿಷ್ಟರು.
ಮುಂದುವರೆಯುತ್ತದೆ……….
ಹಿಂದಿನ ಭಾಗವನ್ನು ಇಲ್ಲಿ ಓದಿ : https://aralimara.com/2018/09/16/pravadi-4/
ಲೇಖಕರ ಕುರಿತು: ಖಲೀಲ್ ಗಿಬ್ರಾನ್ ತನ್ನ ಅಲೌಕಿಕ ಕೃತಿ “ಪ್ರವಾದಿ” ಯನ್ನು (THE PROPHET) ಮೊದಲು ರಚಿಸಿದ್ದು ಅರೇಬಿಕ್ ಭಾಷೆಯಲ್ಲಿ; ತನ್ನ ಇಪ್ಪತ್ತರ ಹರೆಯದಲ್ಲಿ! ಆಮೇಲೆ ಇಂಗ್ಲೀಷ್ ಭಾಷೆಗೆ ಅದನ್ನು ತರ್ಜುಮೆ ಮಾಡಿದ್ದೂ ಅವನೇ. ಅಮೇರಿಕೆಯ ಉದ್ದಗಲಕ್ಕೂ “ಪುಟ್ಟ ಕಪ್ಪು ಪುಸ್ತಕ” “ಪುಟ್ಟ ಬೈಬಲ್” ಎಂದು ಈ ಪುಸ್ತಕ ಖ್ಯಾತಿ ಪಡೆಯಿತು. ಈ ಖ್ಯಾತಿಗೆ ತಲೆ ಕೊಡದ ಗಿಬ್ರಾನ್, “ನಾನು ಪ್ರವಾದಿ ಕೃತಿಯನ್ನು ಬರೆಯುತ್ತಿದ್ದಂತೆ, ಪ್ರವಾದಿ ಕೃತಿ ನನ್ನನ್ನು ಬರೆಯಿತು” ಎಂದುಬಿಟ್ಟಿದ್ದ.
ಅನುವಾದಕರ ಕುರಿತು: ಚಿದಂಬರ ನರೇಂದ್ರ ಮೂಲತಃ ಧಾರವಾಡದವರು, ವೃತ್ತಿಯಿಂದ ಮೆಕಾನಿಕಲ್ ಇಂಜಿನಿಯರ್, ಕಂಪನಿಯೊಂದರಲ್ಲಿ ಡಿಸೈನ್ ವಿಭಾಗದ ಮುಖ್ಯಸ್ಥ. ಸಿನೇಮಾ, ಸಾಹಿತ್ಯ ಹವ್ಯಾಸಗಳು. ಕವಿ ಮತ್ತು ಅನುವಾದಕ. ಝೆನ್ ಕಥೆ, ಸೂಫಿ ಕಾವ್ಯ, ಗುಲ್ಜಾರ್ ಕವಿತೆಗಳ ಅನುವಾದಗಳಿಂದ ಜನಪ್ರಿಯರು.
1 Comment