ದುಷ್ಕರ್ಮಗಳನ್ನು ಮಾಡುವ ವ್ಯಕ್ತಿಯ ಬದುಕು ಯಾವತ್ತೂ ಸುಲಭದ್ದಾಗಿರುವುದಿಲ್ಲ : ಅಥರ್ವ ವೇದ
ಕೆಟ್ಟ ಕೆಲಸಗಳನ್ನು ಮಾಡುವುದು ಬಹಳ ಸುಲಭ. ಕೆಟ್ಟ ಕೆಲಸ ಮಾಡಲಿಕ್ಕೆ ಬೇರೆ ಶ್ರಮ ಬೇಕಾಗಿಲ್ಲ. ನಮ್ಮಲ್ಲಿ ಸ್ವಲ್ಪ ಅಹಂಕಾರ, ಸ್ವಲ್ಪ ಸ್ವಾರ್ಥ, ಮದ ಮೋಹಾದಿ ಅರಿಷಡ್ವರ್ಗಗಳು ಇದ್ದರೆ ಸಾಕು. ನಮ್ಮ ಲಾಭಕ್ಕೆ, ನಮ್ಮ ಅಹಮಿಕೆಯ ತೃಪ್ತಿಗೆ ನಾವು ಯಾವ ಹಂತಕ್ಕೆ ಬೇಕಾದರೂ ಇಳಿಯಬಲ್ಲೆವು. ಆದರೆ ಒಳ್ಳೆಯ ಕೆಲಸ ಮಾಡುವುದು ಬಹಳ ಕಷ್ಟ. ಒಳ್ಳೆಯದನ್ನು ಮಾಡಲು ನಮ್ಮಲ್ಲಿ ಏನೂ ಇಲ್ಲದೆ ಇರುವುದು ಮುಖ್ಯವಾಗುತ್ತದೆ. ಹೇಗೆ ಕೆಡುಕನ್ನು ಮಾಡಲು ಅರಿಷಡ್ವರ್ಗಗಳು ಇರುವುದು ಮುಖ್ಯವೋ, ಒಳಿತನ್ನು ಮಾಡಲು ಅವುಗಳು ಇಲ್ಲದಿರುವುದು ಮುಖ್ಯವಾಗುತ್ತದೆ.
ಪರಿಣಾಮದಲ್ಲಿ ಮಾತ್ರ ಕೆಟ್ಟ ಕೆಲಸ ಮತ್ತು ಒಳ್ಳೆಯ ಕೆಲಸಗಳು ತಮ್ಮ ಶ್ರಮಕ್ಕೆ ವ್ಯತಿರಿಕ್ತವಾಗಿ ತೋರುತ್ತವೆ. ಮೇಲ್ನೋಟಕ್ಕೆ ಕೆಲವೊಮ್ಮೆ ಕೆಟ್ಟ ಕೆಲಸ ಮಾಡುವವರು ಅರಾಮದಲ್ಲಿರುವಂತೆ ಅನ್ನಿಸುತ್ತದೆ. ಅವರ ಹಣ, ಹೆಸರುಗಳಿಂದ ಹಾಗನ್ನಿಸಬಹುದು. ಹಾಗೂ ಒಳ್ಳೆಯ ಕೆಲಸ ಮಾಡುವವರು ಹಣದ ಕೊರತೆಯನ್ನು ಅನುಭವಿಸುವುದೂ ಇದೆ. ಆ ಕಾರಣಕ್ಕೇ ಅವರ ಬದುಕು ಕಷ್ಟದಲ್ಲಿದೆ ಎಂದು ನಾವು ತೀರ್ಮಾನಿಸಿಬಿಡಬಹುದು.
ವಾಸ್ತವ ಹಾಗಿಲ್ಲ. ಬದುಕಿನ ಕಷ್ಟ ಸುಖಗಳು ಹಣವನ್ನಾಗಲೀ ಹೆಸರನ್ನಾಗಲೀ ಅನುಸರಿಸುವುದಿಲ್ಲ. ಕೂಲಂಕಷವಾಗಿ ಗಮನಿಸಿದರೆ ಕೆಡುಕರು ಹೆಜ್ಜೆ ಹೆಜ್ಜೆಗೂ ಕಷ್ಟವನ್ನೆ ಎದುರಿಸುತ್ತ ಇರುತ್ತಾರೆ. ತಮ್ಮ ಸುಳ್ಳುಗಳು, ಕಳ್ಳತನ, ವಂಚನೆಗಳ ಬಗೆಗೆಲ್ಲ ಅವರು ಸದಾ ಕಾಲ ಎಚ್ಚರದಿಂದ ಇರಬೇಕಾಗುತ್ತದೆ. ಹಾಗೂ ತಮ್ಮ ಪ್ರತಿಷ್ಠೆಯನ್ನು ಕಾಯ್ದುಕೊಳ್ಳುವ ತುರ್ತು ಅವರಿಗಿರುತ್ತದೆ. ಈ ಧಾವಂತದಲ್ಲಿ, ಆತಂಕದಲ್ಲಿ ಅವರು ಬದುಕಿನ ನೆಮ್ಮದಿಯನ್ನು ಕಳೆದುಕೊಳ್ಳುತ್ತಾರೆ.
ಅಥರ್ವ ವೇದ ಹೇಳಿರುವುದು ಇದನ್ನೇ. ದುಷ್ಕರ್ಮಗಳನ್ನು ಮಾಡುವ ವ್ಯಕ್ತಿಗೆ ಬದುಕು ಯಾವತ್ತೂ ಸುಲಭದ್ದಾಗಿರುವುದಿಲ್ಲ ಎನ್ನುವ ಮೂಲಕ ಅದು ಸೂಚಿಸುತ್ತಿರುವುದೂ ಇದನ್ನೇ.
ಆಯ್ಕೆ ನಮ್ಮ ಕೈಲಿದೆ. ಸುಖಕ್ಕಾಗಿ ದುಷ್ಕರ್ಮಗಳನ್ನು ಮಾಡುವ ಮುನ್ನ, ದುಷ್ಕರ್ಮಗಳಿಂದ ಸುಖ ಲಭಿಸದು ಎಂದು ನಮಗೆ ಮನದಟ್ಟಾದರೆ ಸಾಕು.