ಓಶೋ : ಅಜ್ಞಾತ ಕವಿಯ ಎರಡು ಪದ್ಯಗಳು

~ 1 ~

ಆತ್ಮದ ಸಂಗೀತವೇ ಮೋಕ್ಷ- ಜ್ಞಾನೋದಯ, ಕಟ್ಟಕಡೆಯ ಬಿಡುಗಡೆ, ಕಟ್ಟಕಡೆಯ ಸತ್ಯ ~ ಓಶೋ

ನಿನ್ನ ಮಾತುಗಳನ್ನು ಕೇಳಿದರೆ ಮರುಳಾಗಬೇಕು
ಹೆಣ್ಣುಗಳೂ, ಗಂಡುಗಳೂ; ಸತ್ಯದ ಸೌಂದರ್ಯದ
ಹುಡುಕಾಟದ ಹಾದಿಯಲ್ಲಿ ಹಂಬಲಿಸುತ್ತ ನಡೆದವರೆಲ್ಲ

ಮರುಳಾಗಬೇಕು ನಿನ್ನ ಹುಡುಗಾಟಕ್ಕೆ, ನಿನ್ನ ವಿದ್ವತ್ತಿಗೆ, ವ್ಯಾಖ್ಯಾನಕ್ಕೆ
ಸಖ್ಯದ ಆಖ್ಯಾನಕ್ಕೆ, ಸತ್ಯದ ಬಟ್ಟೆಯ ಬಿಚ್ಚಿ ಬೆತ್ತಲಾಗುವ ಪರಿಗೆ;
ಬೆತ್ತಲಾಗುವುದು ಸುಲಭ ಮಾತಿನಲ್ಲಿ, ಮಾತುಗಳು ಸದಾ ಸುಂದರ

ಮಾತುಬಲ್ಲವನ ಅಹಂಕಾರದಲ್ಲಿ ಗೆಲ್ಲುವ ಅಖಂಡ ಆತ್ಮವಿಶ್ವಾಸದಲ್ಲಿ
ನೀನು ನುಡಿಗಳನ್ನು ನುಡಿಸುತ್ತೀಯ, ತಾಳತಪ್ಪದ ಸಂಗೀತಗಾರ,
ಪಂಡಿತ, ವಿದ್ವತ್‌ಕಾಂತಿಯ ಪ್ರಭೆಯಲ್ಲಿ ಫಳಫಳ ಹೊಳೆಯುತ್ತೀಯ

ಕಟ್ಟುಪಾಡುಗಳಿಲ್ಲದೆ ಗಡಿರೇಖೆಗಳಿಲ್ಲದೆ ತೆರೆದ ಬಾಹುಗಳ ಚಾಚಿ
ಇಡೀ ಲೋಕ ಸುತ್ತಾಡಿದವನು ನೀನು, ನಿನ್ನ ಹಿಂದೆ ಬಂದವರೆಷ್ಟು
ಬಣ್ಣ ಭಾಷೆ ಬಟ್ಟೆ ರುಚಿ ಎಲ್ಲವನ್ನೂ ದಾಟಿ ಹೃದಯವನ್ನರಸಿದವರು

ಸತ್ಯದ ದಾರಿ ಸುಲಭದ್ದಾಗಿ ಕಂಡಿತ್ತೆ ನಿನಗೆ, ಗಾಂಧಿಯನ್ನು ಟೀಕಿಸಿದವ
ಬಡತನ-ಸಿರಿತನಗಳ ನಡುವೆ ಭೇದವಿಲ್ಲವೆಂದವನು ಭೋಗದಲಿ ಮೆರೆದವನು
ಸಂಪತ್ತಿನಲ್ಲಿ ಸುಖಿಸಿದವನು, ಬಿಡುಗಡೆಯ ಮಾತನಾಡಿ ತಾನೇ ಬಂಧಿಯಾದವನು

ಸ್ವಮೋಹಿತನೆ, ಸಾಮರಸ್ಯ ತಪ್ಪಿ ಸ್ವರಗಳೆಲ್ಲ ಅಪಸ್ವರ ನುಡಿದು ಬದುಕಿನ ಸಂಗೀತಕ್ಕೆ
ಕಿವುಡಾದವನೆ, ಸತ್ಯದ ಹಾದಿಯ ಮುಚ್ಚಿಕೊಂಡವನೆ, ನೀನು ನಡೆದದ್ದೇ ಮೋಕ್ಷದ
ಮಾರ್ಗವೆಂದು ಅರ್ಥೈಸಿ ಅಹಂಕಾರದಲ್ಲಿ, ಆತ್ಮರತಿಯಲ್ಲಿ ನಿನ್ನವರನೆಲ್ಲ ದಿಕ್ಕುತಪ್ಪಿಸಿದವನೆ

ಇಲ್ಲಿ ಈ ಲೋಕದಲ್ಲಿ ದುಡಿದುಣ್ಣುವ ಮಂದಿಯ ಹೆಜ್ಜೆ ತಪ್ಪುವುದಿಲ್ಲ
ಹುಟ್ಟುವ, ಮುಳುಗುವ ಸೂರ್ಯನ ದಿಕ್ಕು ತಪ್ಪುವುದಿಲ್ಲ, ಈ ನೀರು
ಈ ನದಿ ನಿರಂತರ ಹರಿಯುತ್ತಲೇ ಇರುತ್ತದೆ, ಹುಟ್ಟು ಸಾವುಗಳ ಗೆಲ್ಲುತ್ತ

~ 2 ~

ನಿನ್ನ ಮಾತಿನ ಮೊಗ್ಗು ಬಿರಿದು ರೆಂಬೆ
ಕೊಂಬೆಗಳಲ್ಲಿ ಬೊಗಸೆ ಬೊಗಸೆ ಹೂವು
ಸೂಸುವ ಸುಗಂಧ ಸೆಳೆಯುತ್ತ ದುಂಬಿಗಳ

ದಿಕ್ಕಿಲ್ಲ ದೆಸೆಯಿಲ್ಲ ದೇಶ ಭಾಷೆಗಳ ಗಡಿಯಿಲ್ಲ
ಹಿಂಡುಹಿಂಡಾಗಿ ಬಂದವರು ಮಧುವ ಹೀರುತ್ತ
ಹನಿಹನಿಯ ಕುಡಿಯುತ್ತ ಕಡಲನೇ ಬರಿದು-

ಮಾಡುತ್ತ ಹಾಡುತ್ತ ಹೊಸ ನಾಡು ಕಟ್ಟುತ್ತ
ತಮ್ಮನ್ನೆ ಕಳೆದುಕೊಳ್ಳುತ್ತ ನಿನ್ನೊಳೊಂದಾಗುತ್ತ
ಸತ್ಯದ ಸೆಣಸಾಟದಲ್ಲಿ ತಮ್ಮನ್ನೆ ಮೆರೆಯುತ್ತ

~
ನಿನ್ನ ಕನ್ನಡಿಯ ಮೇಲಿನ ಧೂಳು ಹೆಪ್ಪುಗಟ್ಟಿ
ನಿನ್ನ ಚಿತ್ತವೇ ಅಳಿಸಿಹೋಗಿ ದಿಕ್ಕುತಪ್ಪಿ ನೀನೇ
ಅಲೆಯುತ್ತಿದ್ದೆ ದೇಶದೇಶ, ಕೋಶಕೋಶ ಓದಿದ-

ಅಹಂಕಾರದಲ್ಲಿ ಕಾಲ್ಕೆರೆಯುತ್ತಿತ್ತು ಗೂಳಿ
ಕೆನೆಯುತ್ತಿತ್ತು ಮುಕ್ತ ಬದುಕಿನ ಕಾಮಕೇಳಿ
ಕೈಚಾಚಿದರೆ ಮೈ, ಮುಖವಿರದ ಆಕಾರ

ಎಲ್ಲ ವಿಕಾರಕ್ಕೆ ಮೋಕ್ಷದ ಹಾದಿ, ತುದಿ
ಮೊದಲಿಲ್ಲ, ಎಲ್ಲೆ ಕಟ್ಟುಗಳಿಲ್ಲ ಚಾಚಿದ್ದ
ಬಾಹುಗಳ ತುಂಬ ತುಂಬಿ ತುಂಬಿ

ನಿನ್ನ ಪ್ರಖರ ಮಾತುಗಳ ಬಿಸಿಯಲ್ಲಿ
ಬೂದಿಯಾದರು ಗಾಂಧಿ, ತೆರೆದಿತ್ತು
ನಿನ್ನದೇ ಬದುಕಿನ ಹಾದಿ; ’ನಾನು’

ಕಳೆದರೆ ದೇವರಾಗಬಹುದಿತ್ತು ನೀನು
ಹನಿಹನಿಯಲ್ಲೂ ಸಾಗರವ ಸೃಷ್ಟಿಸಿ
ಬೀಜಗಳ ಭೂಮಿಯಲ್ಲಿ ಕರಗಿಸಿ

ತೆಗೆಯಬಹುದಿತ್ತು ಹೊಸ ಬೆಳೆಯ, ಮೌನದಲಿ
ಬದುಕು ನರ್ತಿಸಲಿಲ್ಲ, ಉಸಿರಿನ ಸರಾಗ
ಓಡಾಟದ ದನಿಯ ಸದ್ದು ಕೇಳಲೇ ಇಲ್ಲ

ದೇಶಗಳ ಸುತ್ತಿದರೂ ಒಳ ಪ್ರಯಾಣ ನಿಂತು
ಕೊಳೆಯುತ್ತ ಹೋಗಿ ಗಬ್ಬು ವಾಸನೆ ಸುತ್ತ
ಅರಬ್ ಅತ್ತರುಗಳೆಲ್ಲ ತರಲಿಲ್ಲ ಹೊಸಗಾಳಿ

ಮಾತುಗಳು ಮೈಲಿಗೆಯಾಗಿ, ಕಟ್ಟಿದ ಕತೆಗಳೆಲ್ಲ
ಕುಸಿದು, ಪಾತಾಳ ಬಾಯ್ತೆರೆದು ಕುಣಿದವು
ಬೇತಾಳ, ಹೆಜ್ಜೆಗೆಜ್ಜೆಗಳಿಲ್ಲ, ಗೀತಸಂಗೀತಗಳಿಲ್ಲ

ಐಷಾರಾಮದ ವಾಂತಿ, ನೊಣಗಳೂ ಕೂರುವುದಿಲ್ಲ
ರೋಲ್ಸ್‌ರಾಯ್ ಭೋಗವೂ ಬರಿದಾಗಿ ತೂಗುವುದು
ಬದುಕಿನ ಗೂಡು, ಖಾಲಿಖಾಲಿ ತತ್ವಜ್ಞಾನದ ಹಾಡು

Leave a Reply