ಮಾನಸಿಕ ನೆಮ್ಮದಿಗೆ, ದೃಢತೆಗೆ, ಧೈರ್ಯಸಾಧನೆ ಮತ್ತು ಏಕಾಗ್ರತೆ ಸಿದ್ಧಿಗೂ ಧ್ಯಾನದ ಅಭ್ಯಾಸ ಅತ್ಯಂತ ಲಾಭದಾಯಕ. ಧ್ಯಾನ ಮಾಡಲು ಕಲಿಯುವುದು ಕುಡ ಬಹಳ ಸುಲಭ. ಕೇವಲ 4 ಹಂತಗಳಲ್ಲಿ ಇದನ್ನು ಕರಗತ ಮಾಡಿಕೊಳ್ಳಬಹುದು. ಮುಖ್ಯವೆಂದರೆ, ನಮ್ಮಲ್ಲಿ ಧ್ಯಾನದ ಲಾಭಗಳ ಬಗ್ಗೆ ತಿಳಿದಿರಬೇಕು, ಮನಸಿನಲ್ಲಿ ಅದರ ಬಗ್ಗೆ ದೃಢನಿಶ್ಚಯವಿರಬೇಕು. ~ ಚಿತ್ಕಲಾ
ದೇಹವನ್ನು ಅಣಿಗೊಳಿಸುವುದು
ಸರಿಯಾಗಿ, ಆರಾಮದಾಯಕ ಭಂಗಿಯಲ್ಲಿ ಕುಳಿತುಕೊಳ್ಳಲು ಸಾಧ್ಯವಾಗದೆ ಹೋದರೆ ಧ್ಯಾನದಲ್ಲಿ ಮನಸ್ಸನ್ನು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ದೇಹದ ಭಂಗಿಯ ಅಡಚಣೆಗಳೇ ಏಕಾಗ್ರತೆಗೆ ಭಂಗ ತರುವ ಸಾಧ್ಯತೆಗಳೂ ಇರುತ್ತವೆ. ಆದ್ದರಿಂದ ಧ್ಯಾನಕ್ಕೆ ಕುಳಿತುಕೊಂಡಾಗ, ಕಣ್ಣುಮುಚ್ಚುವ ಮೊದಲು ನಿಮ್ಮ ದೇಹವನ್ನು ಸರಿಯಾದ ಭಂಗಿಯಲ್ಲಿ ಸ್ಥಾಪಿಸಿಕೊಳ್ಳಿ.
ಧ್ಯಾನಕ್ಕೆ ಕೂರುವಾಗ ನೇರವಾಗಿ ನೆಲದ ಮೇಲೆ ಕೂರುವ ಬದಲು ಚಿಕ್ಕದೊಂದು ಚಾಪೆಯ ಮೇಲೆ ಕುಳಿತುಕೊಳ್ಳುವುದು ಒಳ್ಳೆಯದು. ಧ್ಯಾನದ ಸಮಯದಲ್ಲಿ ದೇಹದ ಕಂಪನಗಳು ನೇರವಾಗಿ ನೆಲದ ಸಂಪರ್ಕಕ್ಕೆ ಬರದಿರಲಿ ಅನ್ನುವುದೊಂದು ಕಾರಣವಾದರೆ, ದೀರ್ಘಕಾಲ ಕುಳಿತುಕೊಳ್ಳುವುದರಿಂದ ನಿಮ್ಮ ದೇಹದಿಂದ ಹರಿಯುವ ಬೆವರನ್ನು ಹೀರಿಕೊಳ್ಳಲು ಚಾಪೆ ಅನುಕೂಲಕರ ಅನ್ನುವುದು ಮತ್ತೊಂದು ಕಾರಣ. ಹಾಗೆಯೇ ನೇರವಾಗಿ ನೆಲದ ಮೇಲೆ ಕುಳಿತರೆ ಕಾಲು ಜೋಮು ಹಿಡಿಯುವ ಸಾಧ್ಯತೆಗಳೂ ಇರುತ್ತವೆ.
ಚಾಪೆಯ ಮೇಲೆ ಕುಳಿತುಕೊಳ್ಳುವಾಗಲೂ ಮೂರು ಬಗೆಗಳಿವೆ.
ಮೊದಲನೆಯದಾಗಿ ವಜ್ರಾಸನ. ಮಂಡಿಗಳನ್ನು ಮಡಚಿ ಬೆನ್ನನ್ನು ನೇರವಾಗಿ ಇರಿಸಿಕೊಂಡು ನಿಮ್ಮ ದೇಹದ ವಜ್ಜೆಯನ್ನು ನಿಮ್ಮ ಸೊಂಟದ ಭಾಗದ ಮೇಲೆ ಸಮವಾಗಿ ಬೀಳುವಂತೆ ಅಣಿಗೊಳಿಸಿಕೊಳ್ಳುವುದು. ಈ ಭಂಗಿ ಧ್ಯಾನಕ್ಕೆ ಅತ್ಯುತ್ತಮ ಭಂಗಿ.
ಎರಡನೆಯದಾಗಿ ಪದ್ಮಾಸನ. ಎಡ ಮತ್ತು ಬಲ ಕಾಲುಗಳನ್ನು ಪರಸ್ಪರ ಒಳಹೆಣಿಗೆ ಮಾಡಿಕೊಂಡು ಕೂರುವುದು. ಈ ಭಂಗಿ ಅಭ್ಯಾಸವಿಲ್ಲದವರಿಗೆ ಸ್ವಲ್ಪ ತ್ರಾಸು ನೀಡುವುದು. ಹೆಚ್ಚು ಕಾಲದವರೆಗೆ ಈ ಭಂಗಿಯಲ್ಲಿ ಕೂರುವುದು ಆರಂಭಿಕ ಹಂತದಲ್ಲಿ ಸ್ವಲ್ಪ ಕಷ್ಟವೇ. ಆದ್ದರಿಂದ, ದಿನಕ್ಕೆ ಹತ್ತು – ಹದಿನೈದು ನಿಮಿಷಗಳ ಕಾಲ ಹೀಗೆ ಕುಳಿತುಕೊಂಡು ರೂಢಿ ಮಾಡಿಕೊಳ್ಳುವುದು ಒಳ್ಳೆಯದು.
ಮೂರನೆಯದಾಗಿ, ಸರಳವಾಗಿ ಚಕ್ಕಲಮಕ್ಕಲ ಹಾಕಿ ಕುಳಿತುಕೊಳ್ಳುವುದು. ಇದು ಬಹಳ ಸುಲಭ. ಆರಂಭಿಕ ಹಂತದಲ್ಲಿ ಧ್ಯಾನ ಅಭ್ಯಾಸಿಗಳಿಗೆ ಈ ಭಂಗಿ ಒಳ್ಳೆಯದು.
ಹೀಗೆ ನಿಮಗೆ ಅನುಕೂಲ ಎನ್ನಿಸುವ ಭಂಗಿಯಲ್ಲಿ ಕುಳಿತುಕೊಂಡ ನಂತರ ನೀವು ಗಮನ ಕೊಡಬೇಕಾಗಿರುವುದು ನಿಮ್ಮ ಹೆಗಲು ಮತ್ತು ಕೈಗಳ ಬಗ್ಗೆ. ನಿಮ್ಮ ಹೆಗಲು ವಿಶ್ರಾಮದಲ್ಲಿರಲಿ. ಅದನ್ನು ಬಿಗುವಾಗಿಟ್ಟುಕೊಳ್ಳಬೇಡಿ. ಕೈಗಳನ್ನು ಸಡಿಲವಾಗಿ ನಿಮ್ಮ ತೊಡೆಗಳ ಮೇಲೆ ಇರಿಸಿಕೊಳ್ಳಿ. ಪದ್ಮಾಸನ ಅಥವಾ ಚಕ್ಕಲಮಕ್ಕಲ ಹಾಕಿಕೊಂಡು ಕುಳಿತಿದ್ದರೆ ಕಾಲುಗಳು ಸೇರುವ ಕೇಂದ್ರದಲ್ಲಿ ಹಸ್ತದಲ್ಲಿ ಹಸ್ತವನ್ನು ಮೃದುವಾಗಿ ಇರಿಸಿಕೊಳ್ಳಿ. ತೊಡೆಗಳ ಮೇಲೆ, ಮಂಡಿಗೆ ತಾಕುವಂತೆ ಕೈಗಳನ್ನು ಇರಿಸಿಕೊಳ್ಳುವುದಾದರೆ ಸ್ನಾಯುಗಳನ್ನು ಸಡಿಲವಾಗಿಸಿಕೊಂಡು, ಆದರೆ ನೇರವಾಗಿ ಇರಿಸಿಕೊಳ್ಳಿ.
ಈಗ ನಿಮ್ಮ ಕುತ್ತಿಗಯ ಪೊಸಿಶನಿಂಗ್. ಕುತ್ತಿಗೆಯನ್ನು ನೇರವಾಗಿ ಆದರೆ ಒತ್ತಡ ಹಾಕದೆ ಇರಿಸಿಕೊಳ್ಳಿ. ದೃಷ್ಟಿ ನೇರವಾಗಿರುವಂತೆ ತಲೆಯನ್ನು ಎತ್ತಿ ನೇರವಾಗಿ ಕುಳಿತುಕೊಳ್ಳಿ.
ಇಷ್ಟಾದ ಮೇಲೆ ನಿಮ್ಮ ಪಾದದ ತುದಿ ಬೆರಳಿನಿಂದ ತಲೆಯವರೆಗೆ ಕುಳಿತ ಭಂಗಿಯನ್ನೊಮ್ಮೆ ಪರಿಶೀಲಿಸಿಕೊಳ್ಳಿ. ನಿಮಗೆ ನೀವು ಕುಳಿತಿರುವುದು ಅನುಕೂಲಕರವಾಗಿದೆಯೇ ಎಂದು ಖಾತ್ರಿಪಡಿಸಿಕೊಳ್ಳಿ.
ಇನ್ನೀಗ ನೀವು ಧ್ಯಾನಕ್ಕೆ ದೈಹಿಕವಾಗಿ ಸಿದ್ಧವಾದಿರಿ.
ದೃಢ ಸಂಕಲ್ಪ
ಧ್ಯಾನ ಮಾಡುವುದು ಎಂದರೆ ಎಲ್ಲ ಆಲೋಚನೆಗಳಿಂದ ಮುಕ್ತರಾಗಿ ಮನಸ್ಸನ್ನು ಏಕಾಗ್ರಗೊಳಿಸಿಕೊಳ್ಳುವ ಪ್ರಕ್ರಿಯೆಯಾಗಿದೆ. ಆದರೆ ನಮ್ಮ ಮನಸ್ಸು ನಾಗಾಲೋಟದಲ್ಲಿ ಓಡುತ್ತಾ ಕ್ಷಣಕ್ಕೊಂದು ಚಿತ್ರವನ್ನು ನಮ್ಮ ಚಿತ್ತಭಿತ್ತಿಯಲ್ಲಿ ಮೂಡಿಸುತ್ತಾ ವಿಚಲಿತಗೊಳಿಸುತ್ತ ಇರುತ್ತದೆ. ನಾವು ಅಭ್ಯಾಸ ಬಲದಿಂದ ಅದಕ್ಕೆ ಅವಕಾಶ ಮಾಡಿಕೊಡುತ್ತೇವೆ. ಆದ್ದರಿಂದ ಧ್ಯಾನಕ್ಕೆ ಕೂರುವ ಮೊದಲು ನಾವು ಚಿತ್ತಚಾಂಚಲ್ಯಕ್ಕೆ ಅವಕಾಶ ನೀಡುವುದಿಲ್ಲವೆಂದು ದೃಢ ಸಂಕಲ್ಪ ಮಾಡಬೇಕಾಗುತ್ತದೆ.
ಈಗ, ಸಂಕಲ್ಪ ತೊಡುವುದು ಹೇಗೆಂದು ನೋಡೋಣ.
ಯಾವುದೇ ಒಂದು ಸಂಗತಿ ನಮಗೆ ಮನದಟ್ಟಾಗಬೇಕು ಎಂದರೆ ಅದನ್ನು ನಮಗೆ ನಾವೇ ಹಲವಾರು ಬಾರಿ ಹೇಳಿಕೊಳ್ಳಬೇಕಾಗುತ್ತದೆ. ನಮ್ಮನ್ನು ನಾವು ಕನ್ವಿನ್ಸ್ ಮಾಡಿಕೊಳ್ಳಬೇಕಾಗುತ್ತದೆ.
ಆದ್ದರಿಂದ ಹೀಗೆ ಮಾಡಿ. ನೀವು ಸರಿಯಾಗಿ ಕುಳಿತುಕೊಂಡ ನಂತರ ಮೊದಲ ಎರಡು – ಮೂರು ನಿಮಿಷ ನಿಮ್ಮನ್ನು ನೀವು ಗಮನಿಸಿಕೊಳ್ಳುತ್ತಾ “ನಾನು ಈಗ ಧ್ಯಾನಕ್ಕೆ ಕೂರುತ್ತಿದ್ದೇನೆ. ಯಾವುದೂ ನನ್ನನ್ನು ವಿಚಲಿತಗೊಳಿಸಲು ಸಾಧ್ಯವಿಲ್ಲ” ಎಂದು ನಿಮಗೆ ನೀವೇ ಹೇಳಿಕೊಳ್ಳಿ. ಮನಸ್ಸಿನೊಳಗೆ ಇದನ್ನು ಬಿಟ್ಟೂಬಿಡದಂತೆ ಮನನ ಮಾಡಿಕೊಳ್ಳುತ್ತ ನಿಮ್ಮ ಒಳಗೆ ಆಗುತ್ತಿರುವ ಬದಲಾವಣೆಯನ್ನು ಗಮನಿಸಿಕೊಳ್ಳಿ. ಮೊದಲು ನಿಮ್ಮ ಸಂಕಲ್ಪ ವಾಕ್ಯ ಮನನ ಮಾಡಿಕೊಳ್ಳಲಿಕ್ಕೆ ಅಡ್ಡಿಯುಂಟಾಗುತ್ತದೆ. “ನಾನು ಈಗ ಧ್ಯಾನಕ್ಕೆ ಕೂರುತ್ತಿದ್ದೇನೆ” ಅಂದುಕೊಳ್ಳುವಾಗಲೇ ಸಂಕಲ್ಪ ತುಂಡರಿಸಿದಂತಾಗುತ್ತದೆ. ಆದರೆ ಅದಕ್ಕೆ ಅವಕಾಶ ನೀಡದಂತೆ ನೀವು ನಿರಂತರವಾಗಿ, ಸಂಕಲ್ಪ ನಿಮ್ಮೊಳಗೆ ದೃಢವಾಗಿ ನೆಲೆಯೂರುವವರೆಗೂ ಮನನ ಮಾಡಿಕೊಳ್ಳಬೇಕಾಗುತ್ತದೆ. ಇನ್ನು ಧ್ಯಾನಕ್ಕೆ ಕೂರದೆ ಬೇರೆ ದಾರಿಯೇ ಇಲ್ಲ, ಮನಸ್ಸಿನ ಒಳಗೆ ಇನ್ಯಾವ ಚಟುವಟಿಕೆಗಳಿಗೂ ಆಸ್ಪದವೇ ಇಲ್ಲ ಎನ್ನುವುದು ನಿಮ್ಮ ಅಂತರಂಗಕ್ಕೆ ಮನವರಿಕೆಯಾದ ನಂತವಷ್ಟೆ ಮುಂದಿನ ಹೆಜ್ಜೆ.
ಸಂಕಲ್ಪ ಮಾಡುವ ಮುನ್ನ ಒಂದು ವಿಷಯ ಗಮನದಲ್ಲಿರಲಿ. ಯಾವ ಕಾರಣಕ್ಕೂ ನೀವು ನಿಮ್ಮ ಮೇಲೆ ಮೇಲೆ ಧ್ಯಾನವನ್ನು ಹೇರಿಕೊಳ್ಳುತ್ತಿಲ್ಲ, ನೀವು ಧ್ಯಾನ ಮಾಡಲು ಬಯಸುತ್ತಿದ್ದೀರಿ, ಆದಕ್ಕಾಗಿ ಸಿದ್ಧತೆ ನಡೆಸಿದ್ದೀರಿ ಅನ್ನುವುದು ನಿಮಗೆ ಖಾತ್ರಿ ಇರಬೇಕು. ಧ್ಯಾನ ಹೇರಿಕೆಯಾದರೆ ನೀವು ಖಿನ್ನತೆಗೆ ಜಾರುವ ಅಪಾಯವಿರುತ್ತದೆ. ಏಕೆಂದರೆ ಧ್ಯಾನವೆಂದರೆ ಆಲೋಚನೆಗಳಿಲ್ಲದ ಸ್ಥಿತಿ. ನೀವು ಸಹಜವಾಗಿ ಧ್ಯಾನವನ್ನು ಬಯಸಿ ಕುಳಿತಾಗ ಆಲೋಚನೆಗಳಿಂದ ಮುಕ್ತರಾಗುತ್ತೀರಿ. ಅದೇ ವೇಳೆಗೆ, ಧ್ಯಾನವನ್ನು ನಿಮ್ಮ ಮೇಲೆ ಹೇರಿಕೊಂಡರೆ ನಿಮ್ಮೆಲ್ಲ ಆಲೋಚನೆಗಳು ನಿಮ್ಮ ಅಂತರಂಗದಲ್ಲಿ ಚರಟದಂತೆ ಹುದುಗಿ ಕೂರುತ್ತವೆ. ಮುಂದೆ ಇದು ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ.
ಆದ್ದರಿಂದ, ದೇಹವನ್ನು ಅಣಿಗೊಳಿಸಿಕೊಳ್ಳುವಾಗಲೇ ಧ್ಯಾನ ಮಾಡಲು ನೀವು ಹೃತ್ಪೂರ್ವಕವಾಗಿ ಬಯಸುತ್ತಿದ್ದೀರೇ ಎಂದು ನಿಮ್ಮನ್ನು ಕೇಳಿಕೊಳ್ಳಿ. ಅದು ನಿಮಗೆ ಖಾತ್ರಿಯಾದ ನಂತರವಷ್ಟೆ ಸಂಕಲ್ಪದ ಹಂತಕ್ಕೆ ಮುಂದುವರಿಯಿರಿ.
ಪೂರಕ ರೇಚಕ ಕುಂಭಕ ಮತ್ತು ಉಸಿರಾಟ
ದೇಹವನ್ನು ಆರಾಮದಾಯಕ ಸ್ಥಿತಿಯಲ್ಲಿ ಇರಿಸಿಕೊಂಡು, ಸಂಕಲ್ಪವನ್ನು ದೃಢಪಡಿಸಿಕೊಂಡ ನಂತರದ ಹಂತ ಪೂರಕ ರೇಚಕ ಮತ್ತು ಕುಂಭಕ.
“ನಾನು ಇನ್ನು ಧ್ಯಾನದಲ್ಲಿ ನೆಲೆ ನಿಲ್ಲುತ್ತೇನೆ” ಎಂದುಕೊಳ್ಳುತ್ತಾ ಉಸಿರನ್ನು ಎಷ್ಟು ಸಾಧ್ಯವೋ ಅಷ್ಟು ಒಳಗೆ ಎಳೆದುಕೊಳ್ಳಬೇಕು. ಬಳಿಕ ಒಳಗೆ ಎಳೆದುಕೊಂಡ ಉಸಿರನ್ನು ಒಂದೆರಡು ಸೆಕೆಂಡ್’ಗಳ ಕಾಲವಾದರೂ ಹಿಡಿದಿಟ್ಟುಕೊಳ್ಳಬೇಕು. ಅನಂತರ ನಿಧಾನವಾಗಿ ಹೊರಬಿಡಬೇಕು. ಹಾಗೆ ಹೊರಬಿಟ್ಟ ಮೇಲೆ, ಕೂಡಲೇ ಉಸಿರನ್ನು ಎಳೆದುಕೊಳ್ಳಬಾರದು. ಒಂದೆರಡು ಸೆಕೆಂಡ್’ಗಳ ಕಾಲ ಉಸಿರಾಟವನ್ನು ನಿಲ್ಲಿಸಿ, ಮತ್ತೆ ನಿಧಾನವಾಗಿ ಉಸಿರನ್ನು ಎಳೆದುಕೊಳ್ಳಬೇಕು. ಹೀಗೆ ಎರಡು ನಿಮಿಷಗಳ ಕಾಲ ಮಾಡಬೇಕು.
ಈಗ ನೀವು ಮುಂದಿನ ಹಂತಕ್ಕೆ ಅಣಿಯಾದಿರಿ.
ಇನ್ನೀಗ ಬೆನ್ನನ್ನು ನೇರವಾಗಿಟ್ಟುಕೊಂಡು, ಕಣ್ಣು ಮುಚ್ಚಿಕೊಂಡು, ಕದಲದಂತೆ ಕುಳಿತುಕೊಳ್ಳಬೇಕು. ನಂತರ, ಪ್ರಜ್ಞಾಪೂರ್ವಕವಾಗಿ ನೀಧಾನವಾಗಿ ಉಸಿರಾಟವನ್ನು ನಡೆಸಬೇಕು. ಉಸಿರಾಡುವಾಗ ಗಾಳಿಯು ಒಳಗೆ ಹೋಗುವುದನ್ನೂ ಹೊರಕ್ಕೆ ಬರುವುದನ್ನೂ ಗಮನಿಸುತ್ತಿರಬೇಕು.
ಹೀಗೆ ಗಮನಿಸುವುದರಲ್ಲೂ ಎರಡು ವಿಧಗಳಿವೆ. ಒಂದು – ನೀವು ಎಳೆದುಕೊಂಡ ಉಸಿರು ಹೊಕ್ಕುಳನ್ನು ತಲುಪುವವರೆಗೂ ಗಮನಿಸುವುದು. ಈ ವಿಧಾನದಲ್ಲಿ ಉಸಿರಾಡುವಾಗ ಹೊಟ್ಟೆಯು ಹಿಂದೆ ಮುಂದೆ ಚಲಿಸುವುದನ್ನು ಗಮನಿಸಿ. ಇನ್ನು ಎರಡನೇ ವಿಧಾನ – ಉಸಿರು ಪ್ರವೇಶಿಸುವ ಮೂಗಿನ ತುದಿಯಲ್ಲಿ ಗಮನವನ್ನು ಕೇಂದ್ರೀಕರಿಸುವುದು. ಉಸಿರಾಡುವಾಗ ಮೂಗಿನ ಹೊಳ್ಳೆಗೆ ಸ್ಪರ್ಷಿಸುವ ಗಾಳಿಯನ್ನು ಗಮನಿಸಿ.
ಹೀಗೆ ಹತ್ತು ನಿಮಿಷಗಳ ಕಾಲ ನಿಮ್ಮ ಉಸಿರಾಟವನ್ನು ಗಮನಿಸುತ್ತಿರಿ. ನಿಮಗೆ ಯಾವುದು ಅನುಕೂಲ ಅನ್ನಿಸುತ್ತದೆಯೋ ಆ ವಿಧಾನವನ್ನೆ ಆಯ್ಕೆ ಮಾಡಿಕೊಳ್ಳಿ.
ಆರಂಭಿಕ ಹಂತದಲ್ಲಿರುವ ಕೆಲವರಿಗೆ ಮೂಗಿನ ತುದಿಯಲ್ಲಿ ಗಮನ ಕೇಂದ್ರೀಕರಿಸಲು ಕಷ್ಟವಾಗಬಹುದು. ಏಕಾಗ್ರತೆ ತಪ್ಪಬಹುದು. ಅಂಥವರು ಮೊದಲನೇ ವಿಧಾನ ಅನುಸರಿಸಿ. ಬೇಕಿದ್ದರೆ ಹಗುರವಾಗಿ ಹೊಕ್ಕುಳ ಮೇಲೆ ನಿಮ್ಮ ಕೈಯನ್ನು ಇರಿಸಿಕೊಂಡು ಚಲನೆಯನ್ನು ಅನುಭವಿಸಿ, ಅಲ್ಲಿ ಗಮನವನ್ನು ಇರಿಸಿ.
ಹೀಗೆ ನಿಧಾನವಾಗಿ, ಪ್ರಜ್ಞಾಪೂರ್ವಕವಾಗಿ ಉಸಿರಾಟ ನಡೆಸುವುದರಿಂದ ನಿಮ್ಮ ಮನಸ್ಸಿನ ಭಾವ ತರಂಗಗಳು ಶಾಂತವಾಗುತ್ತವೆ. ಕಲಕಿದ ಕೊಳದ ಬಳೆಯಂಥ ಅಲೆಗಳು ತಿಳಿಯಾದಾಗ ಕನ್ನಡಿಯಂತೆ ತೋರುತ್ತದೆಯಲ್ಲವೆ? ಆಗ ಅಲ್ಲಿ ತೋರುವ ಬಿಂಬ ಸ್ಪಷ್ಟವಾಗಿರುತ್ತದೆ ಅಲ್ಲವೆ? ಹಾಗೆಯೇ ಈಗ ನಿಮ್ಮ ಅಂತರಂಗದ ತರಂಗಗಳು ಕ್ರಮಬದ್ಧ ಉಸಿರಾಟದಿಂದ ಶಾಂತವಾಗಿವೆ. ಇನ್ನೀಗ ಧ್ಯಾನದಲ್ಲಿ ನಿಮ್ಮನ್ನು ನೀವು ಕಂಡುಕೊಳ್ಳಲು ತಯಾರಾಗಿದ್ದೀರಿ.
ಶರೀರವನ್ನು ಸಡಿಲಗೊಳಿಸಿ
ಈಗ ನೀವು ಉಸಿರಾಟವನ್ನು ಕ್ರಮಬದ್ಧಗೊಳಿಸಿಕೊಂಡಿದ್ದೀರಿ. ಮುಂದಿನ ಹಂತ ದೇಹವನ್ನು ಸಡಿಲಗೊಳಿಸಿಕೊಳ್ಳುವುದು. ಹಾಗೆಂದರೆ ನೀವು ಕುಳಿತಿರುವ ಭಂಗಿಯನ್ನು ಸಡಿಲ ಮಾಡಿಕೊಳ್ಳುವುದು ಎಂದಲ್ಲ. ನಿಮ್ಮ ದೇಹದ ಒಳಗೆ ನೀವಿನ್ನೂ ಕಾಯ್ದುಕೊಂಡಿರುವ ಬಿಗುವನ್ನು ಸಡಿಲ ಮಾಡಿಕೊಳ್ಳುವುದು ಎಂದು. ಅದಕ್ಕಾಗಿ ನೀವು ಚಕ್ರಗಳ ಜೊತೆ ಪ್ರಯೋಗ ನಡೆಸಬೇಕಾಗುತ್ತದೆ.
ನಮ್ಮ ಸೂಕ್ಷ್ಮ ಶರೀರದಲ್ಲಿ ಮೂಲಾಧಾರ, ಸ್ವಾಧಿಷ್ಟಾನ, ಮಣಿಪೂರ, ಅನಾಹತ, ವಿಶುದ್ಧ, ಆಜ್ಞಾ ಮತ್ತು ಸಹಸ್ರಾರಗಳೆಂಬ ಏಳು ಚಕ್ರಗಳನ್ನು ಗುರುತಿಸಲಾಗಿದೆ. ಅವುಗಳಲ್ಲಿ ಐದು ಚಕ್ರಗಳನ್ನು ಬಳಸಿಕೊಂಡು ಮುಂದುವರಿಯೋಣ. ಮೂಲಾಧಾರ ಚಕ್ರವು ಜನನೇಂದ್ರಿಯದ ಬಳಿ ಇರುತ್ತದೆ. ನಮ್ಮ ಸಾಧನೆ ಆರಂಭವಾಗಬೇಕಿರುವುದು ಇಲ್ಲಿಂದಲೇ. ಸ್ವಾದಿಷ್ಠಾನವು ಹೊಕ್ಕುಳ ಬಳಿಯೂ ಅನಾಹತವು ಹೃದಯದ ಬಳಿಯೂ ಹಣೆಯ ಮೇಲೆ – ಹುಬ್ಬುಗಳ ನಡುವೆ ಆಜ್ಞಾ ಚಕ್ರವೂ ನೆತ್ತಿಯ ಮೇಲೆ ಸಹಸ್ರಾರವೂ ಇರುತ್ತವೆ.
ಧ್ಯಾನಕ್ಕೆ ಅಣಿಯಾದ ನಂತರ ಮೊದಲು ನಿಮ್ಮ ಗಮನವನ್ನು ಮೂಲಾಧಾರದತ್ತ ಹರಿಸಿ. ನೀವು ಎಷ್ಟೇ ಆರಾಮವಾಗಿ ಕುಳಿತುಕೊಂಡಿದ್ದರೂ ನಿಮ್ಮ ತೊಡೆಗಳು ಬಿಗಿದುಕೊಂಡಿರುತ್ತವೆ. ತೊಡೆಗಳ ನಡುವಿನ ಬಿಗುವನ್ನು ಸಡಿಲಗೊಳಿಸಿಕೊಳ್ಳಿ. ಇದರೊಂದಿಗೇ ನಿಮ್ಮ ಮೂಲಾಧಾರ ಚಕ್ರವೂ ಸಡಿಲಗೊಳ್ಳುತ್ತಿದೆ ಎಂದು ಭಾವಿಸಿ. ಈ ಭಾವನೆ ನಿಮ್ಮ ನಂಬಿಕೆಯೂ ಆಗಿರಬೇಕು. ಒಂದು ಮಾತು ನೆನಪಿನಲ್ಲಿಡಿ. ಯಾವುದೇ ಸಂಗತಿಯೂ ನೀವು ಭಾವಿಸಿದೆ, ನೀವು ನಂಬದೆ ನಿಮ್ಮೊಳಗೆ ಘಟಿಸಲಾರದು. ಆದ್ದರಿಂದ ನಿಮ್ಮ ನಿಮ್ಮ ತೊಡೆಗಳ ಬಿಗುವನ್ನು ಸಡಿಲ ಮಾಡಿಕೊಳ್ಳುತ್ತ ಮೂಲಾಧಾರವೂ ಸಡಿಲಗೊಳಿಸಿಕೊಳ್ಳುತ್ತಿರುವಂತೆ ಭಾವಿಸಿ. ಅದು ಸಡಿಲಗೊಳ್ಳುತ್ತಲೇ ನಿಮ್ಮ ಕಾಲುಗಳು ನಿಶ್ಚೇಷ್ಟಗೊಂಡಂತೆ ಆಗುವವು.
ಈಗ ನಿಮ್ಮ ಗಮನವನ್ನು ಸ್ವಾಧಿಷ್ಠಾನದತ್ತ ಹರಿಸಿ. ನಿಮ್ಮ ಸಂಪೂರ್ಣ ಧ್ಯಾನ ಅದರ ಮೇಲಿರಲಿ. ಹೊಕ್ಕುಳಲ್ಲಿರುವ ಸ್ವಾಧಿಷ್ಟಾನ ಚಕ್ರವನ್ನು ಭಾವಿಸುತ್ತಾ ಸಡಿಲ ಮಾಡಿಕೊಳ್ಳಿ. ಇದರೊಂದಿಗೆ ನಿಮ್ಮ ಹೊಟ್ಟೆಯ ಸ್ನಾಯುಗಳು ನಿಶ್ಚೇಷ್ಟವಾಗುತ್ತವೆ.
ಮುಂದಿನ ಸರದಿ ಹೃದಯದ ಬಳಿಯ ಅನಾಹತದ್ದು. ಅನಾಹತದ ಬಳಿ ನಿಮ್ಮ ಧ್ಯಾನವನ್ನು ನಿಲ್ಲಿಸಿ, ಗಮನ ಹರಿಸಿ. ಅನಾಹತದಲ್ಲಿ ನಿಮ್ಮ ಗಮನವು ನೆಲೆ ನಿಂತಾಗ ಕ್ಷಣ ಕಾಲ ನೀವು ವಿಚಲಿತರಾಗುತ್ತೀರಿ. ನಿಮ್ಮ ಎಲ್ಲ ಭಾವನೆಗಳು, ಅನುಭವಗಳು ಅಲ್ಲಿ ಹೆಪ್ಪುಗಟ್ಟಿರುತ್ತವೆ. ಅದನ್ನು ಹಾಗೆಯೇ ಉಪೇಕ್ಷಿಸಿ, ಅನಾಹತವನ್ನು ಸಡಿಲಗೊಳಿಸಿಕೊಳ್ಳಿ. ಹಾಗೆಂದ ಮಾತ್ರಕ್ಕೆ ಹೃದಯವು ನಿಶ್ಚೇಷ್ಟಗೊಳ್ಳುವುದು ಎಂದು ತಿಳಿಯಬೇಡಿ. ಅನಾಹತ ಸಡಿಲಗೊಂಡರೆ ಉಳಿದ ರುಂಡದ ಕೆಳಗಿನ ಸಂಪೂರ್ಣ ಶರೀರ ಸಡಿಲಗೊಳ್ಳುವುದು.
ಹುಬ್ಬುಗಳ ನಡುವೆ, ಆಜ್ಞಾ ಚಕ್ರದಲ್ಲಿ ನಿಮ್ಮ ಗಮನವನ್ನು ನೆಲೆ ನಿಲ್ಲಿಸಿ ಧ್ಯಾನಿಸಿ. ಆಜ್ಞಾ ಚಕ್ರವನ್ನು ಸಡಿಲಗೊಳಿಸುವುದು ಎಂದರೆ ಕುತ್ತಿಗೆಯ ನರಗಳು ಸಡಿಲಗೊಂಡು ಕುತ್ತಿಗೆ ಬಿಗು ಕಳೆದುಕೊಳ್ಳುವುದು.
ಇಷ್ಟಾಗುವಾಗ ನೆತ್ತಿಯ ಕಂಪನವನ್ನುಳಿದು ಇಡಿಯ ಶರೀರ ಪ್ರಶಾಂತ ಸ್ಥಿತಿಗೆ ಬಂದಿರುತ್ತದೆ. ಈಗ ಸಹಸ್ರಾರದತ್ತ ನಿಮ್ಮ ಗಮನವನ್ನು ಕೆಂದ್ರೀಕರಿಸಿ ಅದನ್ನೇ ಧ್ಯಾನಿಸಿ. ಇಲ್ಲಿ ಧ್ಯಾನಿಸುವುದು ಅಂದರೆ ಗಮನವನ್ನು ನೆಲೆ ನಿಲ್ಲಿಸುವುದಷ್ಟೆ. ಹೀಗೆ ಮಾಡುವಾಗ ನಿಮ್ಮ ಮೆದುಳು ಸಂಪೂರ್ಣ ವಿಶ್ರಾಂತ ಸ್ಥಿತಿಯಲ್ಲಿರುವ ಅನುಭವ ಆಗುತ್ತದೆ. ಒಂದು ದಿವ್ಯ ಸ್ಥಿತಿಯಲ್ಲಿ ನೀವಿರುತ್ತೀರಿ. ನೀವು ರಿಲ್ಯಾಕ್ಸ್ ಆಗಿರುವುದು ನಿಮ್ಮ ಅನುಭವಕ್ಕೆ ಬರುತ್ತದೆ. ಈ ಸ್ಥಿತಿಯಲ್ಲಿ ಕನಿಷ್ಠ ಹತ್ತು ನಿಮಿಷಗಳ ಕಾಲ ಮನಸ್ಸನ್ನು ನೆಲೆ ನಿಲ್ಲಿಸುವುದು ನಿಮಗೆ ಸಾಧ್ಯವಾಗಬೇಕು.
ಹೀಗೆ ಸಂಪೂರ್ಣ ವಿಶ್ರಾಮ ಸ್ಥಿತಿಯಲ್ಲಿ ನೆಲೆಸುವುದೇ ‘ಧ್ಯಾನ’. ನೀವು ಮಾಡಲು ಬಯಸಿದ್ದು ಇದನ್ನೇ. ಧ್ಯಾನ ಯಾವುದೋ ಕೈಗೆಟುಕದ ಕಠಿಣ ಸಂಗತಿಯಲ್ಲ. ಈ ನಾಲ್ಕು ಹಂತಗಳಲ್ಲಿ ನೀವು ಅದರ ಪ್ರಕ್ರಿಯೆ ಎಷ್ಟು ಸುಲಭ ಎಂದು ನೋಡಿದ್ದೀರಿ. ಮತ್ತು ಈ ಹಂತಗಳನ್ನು ಸಮರ್ಪಕವಾಗಿ ಅನುಸರಿಸಿದರೆ, ಅದು ನೀಡುವ ದಿವ್ಯಾನುಭೂತಿಯನ್ನು ಕಂಡುಕೊಳ್ಳುತ್ತೀರಿ.
ಪ್ರಯತ್ನಿಸಿ, ನಿಮ್ಮ ಅನುಭವಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.