ಸೊಬಗಿನ ಹೊನಲು : ಕನ್ನಡದಲ್ಲಿ ಶ್ರೀ ಶಂಕರ ಕೃತ ಸೌಂದರ್ಯ ಲಹರಿ

shivprakashಮೂಲ ಸಂಸ್ಕೃತದಲ್ಲಿರುವ ಸೌಂದರ್ಯ ಲಹರಿ ಶ್ಲೋಕಗಳನ್ನು ನಾಡಿನ ಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ.ಎಚ್.ಎಸ್.ಶಿವಪ್ರಕಾಶ್ ಕನ್ನಡಕ್ಕೆ ಅನುವಾದಿಸಿದ್ದು, ಅವನ್ನು 2 ಕಂತುಗಳಲ್ಲಿ ಪ್ರಕಟಿಸುತ್ತಿದ್ದೇವೆ…. 

ಸೌಂದರ್ಯ ಲಹರಿ,  ನೂರು ಶ್ಲೋಕಗಳ ಸ್ತೋತ್ರ ಗುಚ್ಛ. ಶಂಕರಾಚಾರ್ಯರು ದೇವಿ ಶಕ್ತಿಯನ್ನು, ದೇವಿಯ ಸೌಂದರ್ಯವನ್ನು ಈ ಸ್ತೋತ್ರಗಳ ಮೂಲಕ ಬಣ್ಣಿಸಿದ್ದಾರೆ.  ಈ ಗುಚ್ಛದಲ್ಲಿ 1ರಿಂದ 41ರವೆಗಿನ ಶ್ಲೋಕಗಳನ್ನು ‘ಆನಂದ ಲಹರಿ’ ಎಂದು ಕರೆಯುತ್ತಾರೆ. ಅನಂತರದ 42ರಿಂದ 100ರವರೆಗಿ ಶ್ಲೋಕಗಳನ್ನು ‘ಸೌಂದರ್ಯ ಲಹರಿ’ ಎನ್ನುತ್ತಾರೆ.

ಲಹರಿ ಎಂದರೆ ತರಂಗ ಅಥವಾ ಅಲೆಗಳು ಎಂದರ್ಥ. ಆನಂದ ನೀಡುವ ದೇವಿ ಜಗನ್ಮಾತೆಯ ಸೌಂದರ್ಯದ ಅಲೆಗಳ ವರ್ಣನೆಯೇ ‘ಸೌಂದರ್ಯ ಲಹರಿ’ಯ ಸಾರ. ಮೂಲ ಸಂಸ್ಕೃತದಲ್ಲಿರುವ ಸೌಂದರ್ಯ ಲಹರಿ ಶ್ಲೋಕಗಳನ್ನು ನಾಡಿನ ಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ.ಎಚ್.ಎಸ್.ಶಿವಪ್ರಕಾಶ್ ಕನ್ನಡಕ್ಕೆ ಅನುವಾದಿಸಿದ್ದು, ಅವನ್ನು 2 ಕಂತುಗಳಲ್ಲಿ ಪ್ರಕಟಿಸುತ್ತಿದ್ದೇವೆ. 

Lalitha-Devi-HariOme

ಆನಂದ ಲಹರೀ

(1ರಿಂದ 41ರವರೆಗೆ)

ಶಿವನು ಸೃಷ್ಟಿ ಮಾಡಬಲ್ಲ ಜೊತೆಗೂಡಿದಾಗ ನೀನು
ಅವನು ಚೂರೂ ಅಲುಗಲಾರ ನೀನು ಅಗಲಿದಾಗ
ಶಿವ-ಹರಿ-ವಿರಿಂಚಿ ಮೂವರೂ ಕೊಂಡಾಡುತಿರಲು ನಿನ್ನ,
ಶಿವೆ, ನುತಿನಮನಗಳ ಹೇಗೆ ಮಾಡಲಿ ಪುಣ್ಯವಿರದೆ ನಾನು? | 01 |

ನಿನ್ನಡಿದಾವರೆಯ ಹುಡಿಯ ಕಣವೊಂದನೆತ್ತಿಕೊಂಡು
ತನ್ನ ಕರದಿಂದ ಬ್ರಹ್ಮ ಮಾಡುವನು ಎಲ್ಲ ಲೋಕಗಳನು
ವಿಷ್ಣು ಶೇಷನ ಫಣಿಸಾವಿರದ ಮೇಲದನು ಪೊರೆಯುತಿರುವ
ಇನ್ನು ಹರನು ಅದ ಬೂದಿ ಮಾಡಿ ಮೈಗೆಲ್ಲ ಪೂಸಿಕೊಂಬ | 02 |

ಮರಹು ಎನುವ ಕಡು ಇರುಳಿನೊಳಗೆ ಸೂರ್ಯದ್ವೀಪ ನೀನು
ಮೈಗಳ್ಳತನಿಗೆ ಚೈತನ್ಯ ಗೊಂಚಲಿನ ಜೇನುಹೊಳೆಯು ನೀನು
ದರಿದ್ರ ಜನಕೆ ಚಿಂತಾಮಣಿ ಸರ, ಹುಟ್ಚುಗಡಲಿನಲ್ಲಿ
ಧರೆಗೆ ಬಿದ್ದವರನೆತ್ತಿ ಹಿಡಿವ ವರ ವರಾಹ ದವಡೆ ನೀನು | 03 |

ಬೇರೆ ದೇವರು ತೋರುತಿರುವರು ಅಭಯ ವರದ ಮುದ್ರೆ
ತೋರೆಯಲ್ಲ ನೀನು ಮಾತ್ರ ಆ ಎರಡು ಮುದ್ರೆ
ಎಲ್ಲ ದಿಗಿಲುಗಳ ಒರೆಸಿಹಾಕಿ ಬೇಡಿದ್ದಕಿಂತ ಹೆಚ್ಚು
ಕಾರುಣ್ಯದಲಿ ನೀಡುವಾಸರೆ ನಿನ್ನಡಿಯೆ ಲೋಕಕೇನೆ | 04 |

ಬೇಡುವವರ ಕಡವರವೆ ಹರಿ ವಿನ್ನ ಪೂಜೆ ಮಾಡಿ
ಕೋಡಿಯೊಡೆಸಿದ ಶಿವನ ಕಾಮವನು ನಾರಿಯಾಸದಿಂದ
ಬೇಡಿಕೊಂಡು ನಿನ್ನಲ್ಲಿ ಮದನ ರತಿಯ ಕಂಗಳಂತೆ
ಕಾಡುವನು ಮುನಿಮನಸುಗಳಲಿ ಕಾಮವನ್ನು ಕಲಕಿ | 05|

ಹೂವು ಬಿಲ್ಲು ದುಂಬಿಗಳೆ ನಾರಿ ಐದುಮಲರ ತೀರ
ಚಿಗುರುಕಾಲ,ಸಂಗಡಿಗ ರಥಿಯೆ ಸಾರಥಿ ಮಲಯಗಾಳಿ
ನಿನ್ನ ಕಡೆಗಣ್ನೋಟ ಕರುಣೆ ಕಣವೊಂದ ಪಡೆದುಕೊಂಡು
ಮಂಜುಮಲೆದೊರೆಯ ಮಗಳೆ ಆ ಅನಂಗ ಆದ ವಿಜಯಿ | 06 |

ಕಂಕಣಕಣ ಸೊಂಟ ಡಾಬು ಹೆಮ್ಮೊಲೆಯ ವಜನಿನಿಂದ
ಸಣ್ಣದಾದ ನಡು, ಶರಚ್ಚಂದ್ರನಂಥ ಚಂದ ಮೋರೆ
ಬಾಣ, ಬಿಲ್ಲು,ಅಂಕುಶ, ಪಾಶಗಳ ಕರಗಳಲ್ಲಿ ಹಿಡಿದು
ಪುರಹರನ ಗರಿಮೆಯಾಗಿ ತೋರವ್ವ ನಮ್ಮ ಮುಂದೆ | 07 |

ಸುತ್ತಾ ಸುಧೆಯ ಕಡಲು ಸುರಮರದ ತೋಪಿನಲ್ಲಿ
ಮಾಣಿಕ್ಯದ್ವೀಪದ ಕದಂಬಮರದ ಬದಿಯ ಗೇಹದಲ್ಲಿ
ಶಿವನ ರೂಪಿನ ಮಂಚದಲ್ಲಿ ಪರಶಿವ ದಿಂಬಿಗೊರಗಿ
ಇರುವೆ. ಧನ್ಯ ನಿನ್ನ ಭಜಿಸುವಾತ ಚಿದಾನಂದಲಹರಿ | 08 |

ಮೂಲದಲ್ಲಿ ನೆಲ, ಜಲ ಸ್ವಾಧಿಷ್ಠಾನದಲಿ, ಬೆಂಕಿ
ಮಣಿಪೂರದಲ್ಲಿ,, ಹೃದಯದಲ್ಲಿ ವಾಯು, ಗಂಟಲಿನ
ಆಕಾಶದಲ್ಲಿ ಮನಸು-ಈ ಎಲ್ಲವನ್ನು ಸೀಳಿಕೊಂಡು
ನಡುಹಾದಿ ಹಿಡಿವೆ ಸಖನ ಸಂಗ ಸಹಸ್ರಾರದನಕ | 09 |

ಅಡಿಯೆರಡರಿಂದ ಹರಿದು ಬರುವ ಸುಧಾಸಾರ ರಸವ
ಸಿಂಪಡಿಸುತಿರುವೆ ಇಡೀ ಜಗಕೆ ರಸದ ತುಂತರಂತೆ
ಕೆಳಗೆ ಸಹಸ್ರಾರದಿಂದ ಹಾವಂತೆ ಹೊರಳಿ ಮೂರುಸುರಳಿ
ನಿದ್ದೆ ಹೋಗುವೆ ಮೂಲಕುಂಡದಲ್ಲಿರುವ ಮೂಲೆಯಲ್ಲಿ  | 10 |

ಮೇಲುಮುಖದ ಶಿವಕೋನ ನಾಕು, ಕೆಳಮುಖದ ಶಕ್ತಿ ಕೋನ
ಐದು ಕೂಡಿ ಮೂಲ ಪ್ರಕೃತಿ ಒಂಭತ್ತು ಕೋಣ
ಈರೆಂಟು ದಲ,ಮೂವಲಯ, ಮೂರು ಸುತ್ತ ರೇಖೆ
ನಲವತ್ತು ನಾಕು ಕೋಣ ನಿನ್ನ ತವರು ತಾಯಿ  | 11 |

ಮಂಜು ಬೆಟ್ಟದ ಮಗಳೆ ಬಣ್ಣಿಸುವವರು ನಿನ್ನ ಚಲುವ
ಬೊಮ್ಮ ಮಂತಾದ ಕವಿಗಳರಸರು. ಆ ಚಲುವ ಕಾಂಬ
ಕಣ್ದಾಹದಿಂದ ದಿವಿಜ ಲಲನೆಯರು ತಮ್ಮ ಮನಸಿನಲೆ
ಶಿವಪದವನಡೆವರು ತಾಪಸಿಗಳೂ ಪಡೆಯಲಾರದನ್ನು | 12 |

ಕಣ್ಣು ಹಿಂಗಿದ, ರಸ ಬತ್ತಿದ , ಮುಪ್ಪಿನಡಿಗೆ ಸಿಕ್ಕ
ಮುದಿಯರನ್ನೇನಾರ ಸೋಕಲು ನಿನ್ನ ಕಡೆಯನೋಟ
ಹರಡುಗೂದಲ, ತೆರೆದ ಎದೆಯ, ಡಾಬು, ಉಡುಪುಕಳೆದ
ನೂರುನೂರು ಹರೆ ಹುಡುಗಿಯರ ಬರುವರವರನರಸಿ  | 13 |

ನೆಲದ ಮೇಲೆ ಆರುಐವತ್ತು, ನೀರಿನೊಳಗೆ ಐವತ್ತ ಎರಡು
ಬೆಂಕಿಯಳಗೆ ಅರುವತ್ತ ಎರಡು, ಗಾಳಿಯಲ್ಲಿ ಐವತ್ತ ನಾಕು
ಆಕಾಶದಲ್ಲಿ ಎಪ್ಪತ್ತೆರಡು, ಅರುವತ್ತು ನಾಕು ಮನಸಿನಲ್ಲಿ
ಇಷ್ಟು ಕಿರಣಗಳ ಮೇಲೆ ನಿನ್ನಡಿದಾವರೆಯ ಜೋಡಿಮೋಡಿ | 14 |

ತಿಳಿ ಶರದ ಬೆಳಕಿನ ಹಾಗೆ, ಚಂದ್ರಮಕುಟ ಕೂದಲ ಮೇಲೆ ,
ನಾಕು ಕೈಲಿ ಅಭಯ, ವರದ, ಹೊತ್ತಿಗೆ,ಮಣಿಯ ಮಾಲೆ,
ಒಂದು ಬಾರಿ ನಿನಗೆ ನಮಿಸಿ ಪುಣ್ಯಗಳಿಸಿದವಗೆ
ಜೇನು, ಹಾಲು, ದ್ರಾಕ್ಷಿ ಪಾಕದಿನಿವಾತು ಬಾರದೆಂತು? | 15 |

ಕವಿಗಳರಸರ ಮನಸಿನೊಳಗಣ ತಾವರೆ ತೋಟದಲ್ಲಿ
ಎಳೆವಿಸಿಲಿನ ಅರುಣರಾಗವ ಧ್ಯಾನ ಮಾಡುವರಿಗೆ
ಅವರ ಮನದಲಿ ಶಾರದೆಯ ಗಂಭೀರ ಶೃಂಗಾರ
ಹೊಳೆಯಾಗಿ ಹರಿದು ರಂಜನೆಯು ರಸಿಕರಿಗಣಕೆ  | 16 |

ಮಾಣಿಕ್ಯ ಹರಳುವೆಳಗಿನ ಮಾತ ಮಾತೃಕೆ ವಶಿನ್ಯಾದಿ
ದೇವಿಯರೊಡನೆ ಸೇರಿಸಿ ನಿನ್ನನ್ಯಾರು ಚಿಂತಿಪರೋ
ಅವರ ಕಾವ್ಯದ ಎಸೆವ ಮಾತು, ಸರಸ-ವರಸೆಗಳು
ವಾಗ್ದೇವಿ ಮೊಗದ ತಾವರೆಯ ಕೆಂಪಿಗಿಂತ ಸೊಗಸು  | 17 |

ನೆಲ, ಗಗನಗಳ ಹೊಂಗೆಂಪಲಿ ನೆನೆಸಿಬಿಡುವ ನಿನ್ನ
ಮೈಕಾಂತಿಯ ಸಿರಿಯ ಸರಣಿಯ ಧ್ಯಾನ ಮಾಡುವನಿಗೆ
ಊರ್ವಶ್ಯಾದಿ ಜಿಂಕೆಯಂತೆ ಬೆದರುಗಣ್ಣ ದೇವಸೂಳೆಯರು
ಎಷ್ಟು ಮಂದಿ ಅಂಥವನಿಗೆ ದುಂಬಾಲು ಬೀಳದವರು?  | 18 |

ಮುಖವ ಬಿಂದುವ ಮಾಡಿ ಮೊಲೆ ಎರಡು ಅದರ ಕೆಳಗೆ
ಹರನರ್ಧ ನೆನೆದು ಮನ್ಮಥಕಲೆಯ ಧ್ಯಾನ ಮಾಡುವಗೆ
ಮೂರೂಲೋಕದ ನಾರೀಮಣಿಯರು ಒಲಿಯುವುದೇನು ಮಹಾ
ಸೂರ್ಯಚಂದ್ರ ಮೊಲೆಯಾದ ಮೂಲೋಕವೆ ಅವನ ವಶ | 19 |

ಅಂಗ ಸೂಸುವ ಸುಧಾರಶ್ಮಿಗಳ ಹಿಮಕರ ಮೂರ್ತಿ ನಿನ್ನ
ಧ್ಯಾನ ಮಾಡುವ ಶಾಂತಗೊಳಿಸುವ ಸರ್ಪದರ್ಪವನ್ನೂ
ಗರುಡನಂತೆ; ಶಮನಗೊಳಿಸುವ ಜ್ವರದ ಬಾಧೆಯನ್ನೂ
ಸಂತಸಗೊಳಿಸುವ ಸೊದೆಯ ಮಳೆಸುರಿವ ನೋಟದಿಂದ  | 20 |

ಮಿಂಚುಬಳ್ಳಿಯೆ ತೆಳ್ಳನೆ ಇನಚಂದ್ರಾಗ್ನಿ ರೂಪಿಣಿ ನೀ
ಆರು ಕಮಲಗಳ ಆಚೆ ನಿನ್ನ ಮನೆ ಮಹಾಪದ್ಮಾಟವಿ
ಮಾಯೆ ಮಲಗಳ ಕಳಚಿದ ಮಹಿಮರ ಮನಸುಗಳಲಿ
ತುಂಶಯ ಹರಿಯುವೆ ನೀನು ಪರಮಾನಂದ ಲಹರಿ  | 21 |

ಭವಾನೀ ನಿನ್ನ ದಾಸನ ಮೇಲೆ ಕರುಣೆ ನೋಟ ಬೀರು
ಭವಾನೀ ಭವ ನೀ ನಾ ಭವಾನೀ ನಾನೀ ಅನುವದರಲ್ಲಿ
ಅನುಗ್ರಹ ಮಾಡುವೆ ನಿಜ ಸಾಯುಜ್ಯ ಪದವಿಯನ್ನೇ
ಹರಿ-ಬ್ರಹ್ಮೇಂದ್ರ ಮಕುಟಗಳಾರತಿಬೆಳಗುವ ಅಡಿಗಳಲಿ | 22 |

ಹರನೊಡಲಿನ ಅರೆಭಾಗವ ಧರಿಸಿಯೂ ಸಾಲದಾಯಿತಾ?
ಹರಣ ಮಾಡಿದೆಯಾ ಇನ್ನರ್ಧವನೂ? ನನಗನುಮಾನ
ನಿನ್ನೀಗಿನ ರೂಪ:ಅಡಿಮುಡಿ ಕೆಂಪು , ಮೂರು ಕಂಗಳು,
ಹೆಮ್ಮೊಲೆಗಳ ಬಾಗು,ಬಾಗುದಿಂಗಳ ಥಳಥಳ ಮಕುಟ  | 23 |

ಮಾಡುವನು ಅಜ, ಕಾಯುವನು ಹರಿ, ರುದ್ರನಳಿಸುವಾತ
ಮೂವರನೂ ತನ್ನೊಡಲಡಗಸುವ ಈಶ ಸದಾಶಿವ ತಾನೇ
ಮರಳಿ ಈ ಲೋಕ ಪಾಲಿಸುವ ನಿನ್ನ ಅನುಗ್ರಹವೆಂದು
ಹುಬ್ಬುಬಳ್ಳಿ ಹೊರಳಿಂದ ನೀನೀವ ಆಣತಿಯಂತೆ  | 24 |

ಮೂರೂ ದೇವರ ಹಡೆದವು ನಿನ್ನ ಮೂರು ಗುಣಗಳು
ಸಲ್ಲುವುದು ನಿನಗೆ ಸಲಿಸಿದ ಪೂಜೆ ಆ ಮೂವರಿಗೂ
ನಿನ್ನಡಿಗಳ ಅಡಿಯ ಮಣಿ ಪೀಠದ ಹಂತಿಯಲವರು
ಮಣಿಯುತಿರಲು ಕರಬಾಗಿಸಿ ಮಕುಟಗಳ ಜೊತೆಗೆ | 25 |

ಬ್ರಹ್ಮ ಸಾಯುವ ಹರಿಯೂ ಮಡಿಯವ
ಯಮಗಂಡ ಯಮಗೆ ಕುಬೇರನಿಗೂ ಮೃತ್ಯು
ಕಣ್ಮುಚ್ಚುವರು ಮಹೇಂದ್ರಾದಿಗಳೂ ಮಹಾಸಂಸಾರದಲಿ
ವಿನಾಶದ ನಡುವೆ ವಿಹರಸುವವನು ಸದಾ ನಿನ್ನ ಪತಿ  | 26 |

ಮಾತೇ ಮಂತ್ರ ತಾಯಿ ನನ್ನ ಕ್ರೀಗಳೆಲ್ಲ ಮುದ್ರೆ
ಸುತ್ತಲಿ ನಿನ್ನ ನನ್ನೆಲ್ಲ ನಡಿಗೆ ನಾನುಂಡುದೆಲ್ಲ ನಿನ-
ಗಿತ್ತ ಆಹುತಿ, ನಿದ್ದೆ, ಹೊರಳಿಕೆ ಪೊಡಮುಡುವಿಕೆ
ಸದ್ದು, ಸೋಕು, ರೂಹು,ರಸ, ಗಂಧ ಸುಖವೆ ನಿನ್ನ ಪೂಜೆ | 27 |

ಮುಪ್ಪು, ಖಾಯಿಲೆ, ಸಾವು ತಪ್ಪಿಸುವ ಸುಧೆಕುಡಿದರೂ
ಸತ್ತುಹೋಗುವರಜ ಸಮಂತಕಾದಿ ದಿವಿಜರ ದೊಡ್ಡವರು
ಕಪ್ಪ್ಪು ನಂಜುಂಡ ನಿನ ಗಂಡ ಶಂಭು ಅದೃಷ್ಟವಂತ
ಗೆದ್ದ ಮೃತ್ಯುವನು ನಿನ್ನ ವಾಲೆಯ ಮಹಿಮೆ ಮಾತ್ರದಿಂದ  | 28 |

‘ತುಳಿಯದಿರು ವಿರಿಂಚಿಯ ಕಿರೀಟವನು! ಅಡಿಯಿಡದಿರು
ಕೈಟಭಾರಿಯ ವಜ್ರ ಮಕುಟದ ಮೇಲೆ! ಹುಷಾರು
ಅಲ್ಲಿದೆ ಇಂದ್ರ ಮಕುಟ’ ಎಚ್ಚರಿಸುವರು ನಿನ್ನ ಆಳುಗಳು
ಬರುತಿರಲು ಮಕುಟಗಳಾಸಿ ಭವ ನಿನ್ನ ಭವನದೆಡೆಗೆ  | 29 |

ನಿನ್ನೊಡಲಿಂದ ಸುತ್ತ ಹೊಮ್ಮಿರುವ ಅಣಿಮಾದಿ ಕಿರಣಗಳನು
ನಿತ್ಯೋಪಾಸಿತೆಯೆ ತಾನೇ ಎಂದು ಭಾವಿಸಿದಾತನಿಗೆ
ನಿನ್ನೊಡೆಯ ಶಿವನೇ ಆಗುವ ಭಾವವೂ ತೃಣ ಸಮಾನ
ಮಹಾಪ್ರಳಯಾಗ್ನಿಯೆ ಮಂಗಳೆ ನಿನಗಾರತಿ ಎತ್ತಿರಲು  | 30 |

ಅರುವತ್ತುನಾಕು ತಂತ್ರ ಮಾಡಿ ಏಮಾರಿಸಿ ಜಗವನ್ನೇ
ಹರನು ತಾನವುಗೊಳಿಗವುಗಳ ಮಿತಿಯಂತೆ ಸಿಧ್ಧಿಯಿತ್ತ
ತರುವಾಯ ನಿನ್ನ ಹುಕುಮಿನಂತೆ ಒಂದಾಗಿ ಹೊಸೆದುಕೊಟ್ಟ
ಪುರುಷಾರ್ಥವೆಲ್ಲವನು ಸ್ವತಂತ್ರವಾದ ನಿನ್ನ ತಂತ್ರದಲ್ಲಿ | 31 |

ಶಿವ, ಶಕ್ತಿ,, ಮನುಮಥ, ಪೃಥ್ವಿ, ಸೂರ್ಯ, ಚಂದ್ರ
ಸ್ಮರ, ಚಕ್ರ, ಪರಾ, ಮಾರ,ಹರೀ-ಈರಾರು ವರ್ಣಗಳ
ಮೂಖಂಡ ಮಾಡಿ ಹ್ರೀಂಕಾರ ತುದಿಗೆಮೂರನಿಡಲು
ನಿನ್ನ ನಾಮದವಯವಗಳಿವೇ ಕೇಳು ನನ್ನ ತಾಯಿ | 32 |

ಸ್ಮರನ ಕ್ಲೀಮ್, ಜೊತೆಗೆ ಹ್ರೀಂ ಮತ್ತು ಶ್ರೀಂ ಬೀಜಗಳನು
ಇರಿಸಿ ನಿನ್ನ ವಿದ್ಯೆ ಮೊದಲಲ್ಲಿ ನಿತ್ಯ ಯೋಗಿವರರು
ಹರನ ಬೆಂಕಿಯಲಿ ಸುರಭಿ ತುಪ್ಪ ನೂರು ಬಾರಿ ಸುರಿದು
ನಿತ್ಯೆ ಪೂಜಿಪರು ನಿನ್ನ ಮಣಿಮಾಲೆ ಜಪವ ಮಾಡಿ | 33 |

ನಿನ್ನ ಮೈಯಿ ಶಂಭುವಿನ ಮೈ, ಇನ-ಚಂದ್ರರಂತೆ
ನಿನ್ನ ಜೋಡಿ ಮೊಲೆ. ಒಂಭತ್ತು ವ್ಯೂಹ ಮಾಡಿ
ನಿನ್ನ ಪೂಜೆ. ಇಡಿ, ಬಿಡಿ— ಈ ಭಾವವುಂಟು
ನಿನ್ನ, ಶಿವನ ನಡುವೆ ಸಮರಸ ರಸದ ಸೊಗಸು | 34 |

ನೀ ಮನಸು ನೀ ವ್ಯೋಮ ನೀ ಬೆಂಕಿ ನೀನೆ ಗಾಳಿ
ನೀ ನೀರು ನೀ ನೆಲ ನೀ ಎಲ್ಲ ಆಗಿ ಇಲ್ಲ
ನಿನ್ನನು ನೀನೇ ಮಾಡಿಕೊಂಡಿರುವೆ ಜಗದ ಮೈಯಾಗಿ
ನೀನೇ ಆದೆ ಚಿದಾನಂದದಾಕಾರ ನಿನ್ನಿಚ್ಛೆಯ ಪ್ರಕಾರ  | 35 |

ನಿನ್ನ ನಡುಹುಬ್ಬಲ್ಲಿ ನಿಂತ ಕೋಟಿ ತಿಂಗಳು ನೇಸರಿನ ಬೆಳಗಿನ
ಪರಮ ಶಂಭುವಿಗೆ ನಮೋ. ಅವನ ಎಡಬಲದಲ್ಲಿ
ನೆಲೆಸಿರಲು ಪರಾಶಕ್ತಿ. ಪೂಜಿಸುವಾತ ಮನೆಗೊಂಬ
ಇನ, ಶಶಿ,ಅಗ್ನಿಯಾಚೆಗಿನಾಲೋಕದಾಲೋಕದಲ್ಲಿ  | 36 |

ಕೊರಳ ಚಕ್ರದಲಿ ನಿನ್ನ ಪಳಿಕ ತಿಳಿ ಬೆಳಕಲಿ ಹೊಳೆವ
ಬಯಲ ತಂದೆ ಶಿವನ ತಾಯಿಯ ಜೊತೆ ಪೂಜೆ ಮಾಡಿಗಾಗ
ಅವರ ಬೆಳಬೆಳಗಿಂದೊಗೆವ ಬೆಳಕಿನ ಕಿರಣ ಬಳಗಗಳಿಂದ
ನಲಿಯುವುದು ಇಳೆ ಇರುಳನತಿಗಳೆದ ಚಕೋರಹಕ್ಕಿ ಹಾಗೆ | 37 |

ಬಿರಿದ ಮನದಾವರೆಯ ಮಕರಂದ ಮಾತ್ರ ಹೀರಿ
ಚರಿಸುವ ‘ಹಂ’ ‘ಸಃ’ ಅನುವ ಹಂಸಜೋಡಿಗೆ ನಮೋ
ಆ ಆಲಾಪದಿಂದ ಸೂಸುವವರವತ್ತು ನಾಕು ವಿದ್ಯೆ
ಸೋಸುವುವು ಗುಣದೋಷಗಳ ನೀರಿಂದ ಹಾಲಿನಂತೆ | 38 |

ನಿನ್ನ ಹೊಕ್ಕುಳದ ಚಕ್ರದಲಿ ಬೆಂಕಿಯಾಗುರಿದುರಿವ
ಸಂವರ್ತ ಶಿವ. ಅವನೊಡನೆ ನಮೋ ಸಮಯೆ ನಿನಗೆ
ಸುಡುತಿರಲಾತ ಸಿಟ್ಟುಸೂಡಿನಲಿ ಮಹದಾದಿ ಜಗಗಳನು
ಕರುಣಿ, ಕಂಬನಿಯ ನೋಟದಿಂದ ನೀ ಶೀತೋಪಚರಿಸವೆ | 39 |

ಇರುಳುಗೆದುರಾಳಿ ದಾಳಿಯೆಂಬಂತೆ ಮಿಂಚಾಗಿ ಮಿಂಚಿ
ಹಲವು ಹಲ ರತ್ನದೊಡವೆಗಳ ಧರಿಸಿದಿಂದ್ರ ಧನುಷ
ಮಣಿಪೂರದಲ್ಲಿ ಮನೆಯ ಮಾಡಿರುವ ಕರೀಮೋಡಗಳಿಗೆ
ನಮಿಸುವೆನು ಮೂಲೋಕವಳಿಸುವ ಹರಮಿಹಿರದುರಿಗೆ | 40 |

ನಿನ್ನ ಆಧಾರದಲಿ ಸಮಯೆ ಸಮೇತ ಲಾಸ್ಯವಾಡುತಿರುವ
ನವರಸದ ನವನವಾತ್ಮ ತಾಂಡವ ನಟರಾಜ ನಿನಗೆ ನಮೊ
ಈರ್ವರೊಂದಾಗಿ ಸೃಷ್ಟಿಮುಖವಾಗಿ ಕರಣೆ ಮುಂದಾಗಿ
ಇರುತಿರುವಿರಿ ತಂದೆತಾಯಾಗಿ ಸಕಲಭುವನಕೆಲ್ಲ  | 41 |

(ಮುಂದುವರಿಯುವುದು….)

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

1 Response

  1. […] ಮೂಲ ಸಂಸ್ಕೃತದಲ್ಲಿರುವ ಸೌಂದರ್ಯ ಲಹರಿ ಶ್ಲೋಕಗಳನ್ನು ನಾಡಿನ ಮುಖ್ಯ ಕವಿಗಳಲ್ಲಿ ಒಬ್ಬರಾದ ಡಾ.ಎಚ್.ಎಸ್.ಶಿವಪ್ರಕಾಶ್ ಕನ್ನಡಕ್ಕೆ ಅನುವಾದಿಸಿದ್ದು ಅದನ್ನು ಎರಡು ಕಂತುಗಳಲ್ಲಿ ಪ್ರಕಟಿಸಿದ್ದೇವೆ. ಮೊದಲ ಕಂತು ಇಲ್ಲಿದೆ:  https://aralimara.com/2019/03/24/saundarya/ […]

    Like

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.