ಭಗವಂತನನ್ನು ಏಕೆ ಭಜಿಸಬೇಕು? : ಅರ್ಥಸಹಿತ ಭಜ ಗೋವಿಂದಂ ಸ್ತೋತ್ರ ~ ಭಾಗ 1

shankara 3

ಶ್ರೀ ಶಂಕರಾಚಾರ್ಯ ವಿರಚಿತ “ಭಜ ಗೋವಿಂದಂ” ಸ್ತೋತ್ರವು ಅವರ ‘ಮೋಹಮುದ್ಗರ’ದಲ್ಲಿ ಕಾಣಸಿಗುತ್ತದೆ. ಮೂಲತಃ ಶ್ರೀ ಶಂಕರರು 11 ಶ್ಲೋಕಗಳನ್ನು ಮಾತ್ರ ರಚಿಸಿದ್ದಾರೆಂದೂ, ಉಳಿದವು ಅವರ ಶಿಷ್ಯರಿಂದ ಕಾಲಕ್ರಮದಲ್ಲಿ ಸೇರಿಸಲ್ಪಟ್ಟವೆಂದೂ ಹೇಳಲಾಗುತ್ತದೆ. ಅದೇನೇ ಇದ್ದರೂ ‘ಭಜ ಗೋವಿಂದಂ’ ಮೂವತ್ತು ಶ್ಲೋಕಗಳಲ್ಲಿ ಜೀವನ ದರ್ಶನವನ್ನೇ ಮಾಡಿಸುವ ಅತ್ಯದ್ಭುತ ಸ್ತೋತ್ರಮಾಲೆ ಎಂಬುದರಲ್ಲಿ ಸಂದೇಹವಿಲ್ಲ. ನಾವು ಭಗವಂತನನ್ನು (ಗೋವಿಂದನನ್ನು) ಏಕೆ ಭಜಿಸಬೇಕು ಎಂದು ಈ ಶ್ಲೋಕಗಳು ಮನದಟ್ಟು ಮಾಡಿಸುತ್ತವೆ. 

ಭಜ ಗೋವಿಂದಂ ಭಜ ಗೋವಿಂದಂ
ಗೋವಿಂದಂ ಭಜ ಮೂಢಮತೇ|
ಸಂಪ್ರಾಪ್ತೇ ಸನ್ನಿಹಿತೇ ಕಾಲೇ
ನ ಹಿ ನ ಹಿ ರಕ್ಷತಿ ಡುಕುರುಞ್ ಕರಣೇ || 1||
ಗೋವಿಂದನನ್ನು ಭಜಿಸು, ಗೋವಿಂದನನ್ನು ಭಜಿಸು, ಎಲೈ ಮೂಢ..! ಅಂತ್ಯ ಕಾಲವು ಸಮೀಪಿಸಿರುವಾಗ ಈ ವ್ಯಾಕರಣ ಪಾಂಡಿತ್ಯ ನಿನ್ನನ್ನು ರಕ್ಷಿಸುವುದಿಲ್ಲ.

ಮೂಢ ಜಹೀಹಿ ಧನಾಗಮತೃಷ್ಣಾಮ್
ಕುರುಸದ್ಬುದ್ಧಿಂ ಮನಸಿ ವಿತೃಷ್ಣಾಮ್|
ಯಲ್ಲಭಸೇ ನಿಜಕರ್ಮೋಪಾತ್ತಂ
ವಿತ್ತಂ ತೇನ ವಿನೋದಯ ಚಿತ್ತಮ್||2||
ಎಲೈ ಮೂಢ..! ಹಣವು ಬರಲೆಂಬ ಆಸೆಯನ್ನು ಬಿಡು. ಮನಸ್ಸಿನಲ್ಲಿರುವ ಆಸೆಯನ್ನು ತೊರೆದು ಸದ್ವಿಚಾರವನ್ನು ಮಾಡಬೇಕೆಂಬ ಬುದ್ಧಿಯನ್ನು ತಂದುಕೊ. ನೀನು ಮಾಡುವ ಕೆಲಸದಿಂದ ಎಷ್ಟು ಹಣ ನಿನಗೆ ದೊರೆಯುತ್ತದೆಯೋ ಅಷ್ಟನ್ನು ಬಳಸಿ ಮನಸ್ಸಿಗೆ ತೃಪ್ತಿಯನ್ನು ತಂದುಕೊ.

ನಾರೀ ಸ್ತನಭರನಾಭೀದೇಶಂ
ದೃಷ್ಟ್ವಾಮಾ ಗಾ ಮೋಹಾವೇಶಮ್|
ಏತನ್ಮಾಂಸವಸಾದಿವಿಕಾರಂ
ಮನಸಿ ವಿಚಿಂತಯ ವಾರಂ ವಾರಮ್ ||3||
ದೇಹವನ್ನು ಕಂಡು ಮೋಹ ವಿವಶವಾಘಬೇಡ. ಅದೆಲ್ಲವೂ ಮಾಂಸ, ಕೊಬ್ಬು ಮುಂತಾದವುಗಳ ವಿಕಾರವೆಂದು ಮನಸ್ಸಿನಲ್ಲಿ ವಿಚಾರ ಮಾಡಿ ಮನದಟ್ಟು ಮಾಡಿಕೋ.

ನಲಿನೀದಲಗತಜಲಮತಿತರಲಂ
ತದ್ವಜ್ಜೀವಿತಮತಿಶಯಚಪಲಮ್|
ವಿದ್ಧಿ ವ್ಯಾಧ್ಯಭಿಮಾನಗ್ರಸ್ತಂ
ಲೋಕಂ ಶೋಕಹತಂ ಚ ಸಮಸ್ತಮ್ ||4||
ಕಮಲದ ಎಲೆಯ ಮೇಲಿನ ನೀರು ಒಂದೆಡೆ ನಿಲ್ಲದೆ ಬಹುಬೇಗನೆ ಜಾರುತ್ತದೆ.
ಹಾಗೆಯೇ ಮನುಷ್ಯನ ಜೀವಿತವು ಅತ್ಯಂತ ಚಂಚಲ.ಯಾವ ಕ್ಷಣದಲ್ಲಾದರೂ ಜಾರಿ ಹೋಗಬಹುದು.
ಈ ಲೋಕವು ರೋಗ ದುರಂಹಕಾರಗಳಿಂದ ತುಂಬಿದೆಯೆಂದೂ ಸಮಸ್ತರೂ ಒಂದಲ್ಲ ಒಂದು ಶೋಕದಿಂದ ನರಳುತ್ತಿದ್ದಾರೆಂದೂ ತಿಳಿದುಕೋ.

ಯಾವದ್ವಿತ್ತೋಪಾರ್ಜನಸಕ್ತಃ
ಸ್ತಾವನ್ನಿಜಪರಿವಾರೋ ರಕ್ತಃ|
ಪಶ್ಚಾಜ್ಜೀವತಿ ಜರ್ಜರದೇಹೇ
ವಾರ್ತಾಂ ಕೋsಪಿ ನ ಪೃಚ್ಛತಿ ಗೇಹೇ ||5||
ನೀನು ಧನ ಸಂಪಾದನೆಯಲ್ಲಿ ತೊಡಗಿರುವವರೆಗೆ ನಿನ್ನ ಕುಟುಂಬದವರು ನಿನ್ನನ್ನು ಪ್ರೀತಿಯಿಂದ ಆದರಿಸುತ್ತಾರೆ.
ಆಮೇಲೆ ಹಣವನ್ನು ಸಂಪಾದಿಸಲಾರದೆ ಮುದಿತನದಿಂದ ದೇಹವು ಜರ್ಝರಿತವಾಗುತ್ತದೆ.
ಆಗ ಮನೆಯಲ್ಲಿರುವ ಯಾರೂ ನಿನ್ನ ಸುದ್ದಿಯನ್ನು ವಿಚಾರಿಸದೆ ದೂರವಾಗಿ ಬಿಡುತ್ತಾರೆ.

ಯಾವತ್ಪವನೋ ನಿವಸತಿ ದೇಹೇ
ತಾವತ್ಪೃಚ್ಛತಿ ಕುಶಲಂ ಗೇಹೇ|
ಗತವತಿ ವಾಯೌ ದೇಹಾಪಾಯೇ
ಭಾರ್ಯಾ ಬಿಭ್ಯತಿ ತಸ್ಮಿನ್ ಕಾಯೇ||6||
ಎಲ್ಲಿಯವರೆಗೆ ದೇಹದಲ್ಲಿ ಪ್ರಾಣವಾಯು ಇರುತ್ತದೆಯೋ ಅಲ್ಲಿಯವರೆಗೆ ನಿನ್ನ ದೇಹಸ್ಥಿತಿ ಹೇಗಿದೆಯೆಂದು ಕುಶಲವನ್ನು ಮನೆಯಲ್ಲಿ ವಿಚಾರಿಸಬಹುದು. ಯಾವಾಗ ಪ್ರಾಣವಾಯು ದೇಹದಿಂದ ಹೊರಟು ಹೋಗುತ್ತದೆಯೋ ಆಗ ಆ ದೇಹದ ಬಳಿಗೆ ಬರಲು ಹೆಂಡತಿ ಕೂಡಾ ಹೆದರುತ್ತಾಳೆ.

ಬಾಲಸ್ತಾವತ್ಕ್ರೀಡಾಸಕ್ತ-
ಸ್ತರುಣಸ್ತಾವತ್ತರುಣೀಸಕ್ತಃ|
ವೃದ್ಧಸ್ತಾವತ್ಚಿಂತಾಮಗ್ನಃ
ಪರೇ ಬ್ರಹ್ಮಣಿ ಕೋsಪಿ ನ ಸಕ್ತಃ ||7||
ಬಾಲಕರಿಗೆ ಆಟದಲ್ಲಿ ಆಸಕ್ತಿ. ಯುವಕರಿಗೆ ತರುಣಿಯರಲ್ಲಿ ಆಸಕ್ತಿ. ಮುದುಕರಿಗೆ ಸಂಸಾರದ ಚಿಂತೆ ಮಾಡುವುದರಲ್ಲೇ ಆಸಕ್ತಿ. ಭಗವಂತನನ್ನು ಕುರಿತು ಚಿಂತಿಸಲು ಮಾತ್ರ ಯಾರಿಗೂ ಆಸಕ್ತಿ ಇಲ್ಲ!

ಕಾ ತೇ ಕಾಂತಾ ಕಸ್ತೇ ಪುತ್ರಃ
ಸಂಸಾರೋsಯಮತೀವ ವಿಚಿತ್ರಃ|
ಕಸ್ಯ ತ್ವಂ ಕಃ ಕುತ ಆಯಾತ-
ಸ್ತತ್ತ್ವಂ ಚಿಂತಯ ತದಿಹ ಭ್ರಾತಃ ||8||
ಈ ಸಂಸಾರ ವಿಚಿತ್ರವಾದದ್ದು. ನಿನ್ನ ಕಾಂತೆ ಎಂದುಕೊಳ್ಳುವೆಯಲ್ಲ, ಅವಳು ಯಾರು? ನನ್ನ ಪುತ್ರ ಎಂದುಕೊಳ್ಳುವೆಯಲ್ಲ ಅವನು ಮೂಲದಲ್ಲಿ ಯಾವನಾಗಿದ್ದ? ನೀನಾದರೂ ಯಾರು? ಯಾರ ಮಗ? ಎಲ್ಲಿಂದ ಇಲ್ಲಿಗೆ ಏಕೆ ಬಂದಿರುವೆ? ಈ ವಿಷಯದಲ್ಲಿ ಸತ್ಯಸ್ಥಿತಿ ಏನೆಂಬುದನ್ನು ಆಲೋಚಿಸಿ ನೋಡು.

ಸತ್ಸಂಗತ್ವೇ ನಿಸ್ಸಂಗತ್ವಂ
ನಿಸ್ಸಂಗತ್ವೇ ನಿರ್ಮೋಹತ್ವಮ್|
ನಿರ್ಮೋಹತ್ವೇ ನಿಶ್ಚಲತತ್ತ್ವಂ
ನಿಶ್ಚಲತತ್ತ್ವೇ ಜೀವನ್ಮುಕ್ತಿಃ ||9||
ಸಜ್ಜನರ ಸಂಪರ್ಕದಲ್ಲಿದ್ದರೆ ಧನಾದಿ ವಿಷಯಗಳ ಚಿಂತೆ ತಪ್ಪುತ್ತದೆ. ಈ ಚಿಂತೆ ಹೋದಾಗ ಅವುಗಳ ಮೋಹವೂ ಹೋಗುತ್ತದೆ.
ಅಜ್ಞಾನದಿಂದಾದ ಮೋಹವು ಹೋದರೆ ಶಾಶ್ವತವಾದ ಸತ್ಯವೇನೆಂಬುದರ ಜ್ಞಾನವಾಗುತ್ತದೆ. ಅಂತಹ ಜ್ಞಾನ ಉದಿಸಿದರೆ ಜೀವನ್ಮುಕ್ತಿಯೇ ಪ್ರಾಪ್ತವಾಯಿತೆಂದು ತಿಳಿಯಬೇಕು.

ವಯಸಿ ಗತೇ ಕಃ ಕಾಮವಿಕಾರಃ
ಶುಷ್ಕೇ ನೀರೇ ಕಃ ಕಾಸಾರಃ|
ಕ್ಷೀಣೇ ವಿತ್ತೇ ಕಃ ಪರಿವಾರೋ
ಜ್ಞಾತೇ ತತ್ತ್ವೇ ಕಃ ಸಂಸಾರಃ ||10||
ವಯಸ್ಸು ಕಳೆದು ಹೋದ ಮೇಲೆ ಕಾಮವಿಕಾರವೆಲ್ಲಿರುತ್ತದೆ? ನೀರು ಒಣಗಿದ ಮೇಲೆ ಕೆರೆಯೆಂದರೆ ಯಾವುದು?
ಹಣವು ಕ್ಷೀಣಿಸಿ ಇಲ್ಲವಾದಾಗ ಸಂಸಾರದ ಪರಿವಾರವೆಲ್ಲಿರುತ್ತದೆ? ತತ್ತ್ವಜ್ಞಾನವಾದಾಗ ಈ ಸಂಸಾರ ಎಲ್ಲಿದ್ದೀತು?

ಮಾ ಕುರು ಧನಜನಯೌವನಗರ್ವಂ
ಹರತಿ ನಿಮೇಷಾತ್ಕಾಲಃ ಸರ್ವಮ್|
ಮಾಯಾಮಯಮಿದಮಖಿಲಂ ಮತ್ವಾ
ಬ್ರಹ್ಮಪದಂ ತ್ವಂ ಪ್ರವಿಶ ವಿದಿತ್ವಾ||11||
ಎಲೈ ಮಾನವ, “ನನಗೆ ಧನಬಲವಿದೆ, ಜನಬಲವಿದೆ, ಯೌವನವಿದೆ” ಎಂದು ಗರ್ವಪಡಬೇಡ. ಒಂದು ನಿಮಿಷದಲ್ಲಿ ಕಾಲವು ಇದೆಲ್ಲವನ್ನು ನಾಶ ಮಾಡಬಲ್ಲದು. ಇವುಗಳ ಅನಿತ್ಯತೆಯನ್ನು ಗುರುತಿಸಿ, ನಿತ್ಯಸತ್ಯವು ಶಾಶ್ವತವೂ ಆದುದರಲ್ಲಿ (ಆದ ಪರಬ್ರಹ್ಮದಲ್ಲಿ) ಮನಸಿಡು. 

ದಿನಯಾಮಿನ್ಯೌ ಸಾಯಂ ಪ್ರಾತಃ
ಶಿಶಿರವಸಂತೌ ಪುನರಾಯಾತಃ|
ಕಾಲಃಕ್ರೀಡತಿ ಗಚ್ಛತ್ಯಾಯುಃ
ತದಪಿ ನ ಮುಂಚತ್ಯಾಶಾವಯುಃ ||12||
ಹಗಲು ರಾತ್ರಿ, ಸಂಜೆ, ಪ್ರಾತಃಕಾಲ ಶಿಶಿರಋತು, ವಸಂತಋತು ಮುಂತಾದವೆಲ್ಲವೂ ಬರುತ್ತವೆ – ಹೋಗುತ್ತವೆ, ಇದು ಕಾಲಪುರುಷನ  ಆಟ. ಈ ಆಟದ ಹೆಸರಿನಲ್ಲಿ ಮನುಷ್ಯನ ಆಯಸ್ಸು ಕಳೆದುಹೋಗುತ್ತದೆ. ಇದೆಲ್ಲ ತಿಳಿದಿದ್ದರೂ ಆಸೆಯೆಂಬ ವಾತರೋಗವು ಬಿಟ್ಟು ಹೋಗುವುದೇ ಇಲ್ಲ.

ಕಾ ತೇ ಕಾಂತಾ ಧನಗತಚಿಂತಾ
ವಾತುಲ ಕಿಂ ತವ ನಾಸ್ತಿ ನಿಯಂತಾ|
ತ್ರಿಜಗತಿ ಸಜ್ಜನಸಂಗತಿರೇಕಾ
ಭವತಿ ಭವಾರ್ಣವತರಣೇ ನೌಕಾ ||13||
ಎಲೈ (ರೋಗಪೀಡಿತ) ಮನುಷ್ಯನೇ! ನಿನಗೆ ಪ್ರಿಯಳಾದ ಮಡದಿ ಯಾರು? ನಿನಗೆ ಇನ್ನೂ ಹಣದ ಆಸೆ ಏಕೆ?
ನಿನಗೆ ಬುದ್ದಿ ಹೇಳು ದಾರಿ ತೋರಿಸತಕ್ಕವರಿಲ್ಲವೇನು? ತಿಳಿದುಕೋ, ಮೂರು ಲೋಕಗಳಲ್ಲಿ ಹುಡುಕಿದರೂ ಸತ್ಸಂಗವೆಂಬುದೊಂದೇ ಸಂಸಾರಸಾಗರವನ್ನುದಾಟಿಸಬಲ್ಲ ದೋಣಿಯಾಗಿದೆ. 

ಜಟಿಲೋ ಮುಂಡೀ ಲುಂಚಿತಕೇಶಃ
ಕಾಷಾಯಾಂಬರಬಹುಕೃತ ವೇಷಃ|
ಪಶ್ಯನ್ನಪಿ ಚ ನ ಪಶ್ಯತಿ ಮೂಢಃ
ಉದರನಿಮಿತ್ತಂ ಬಹುಕೃತವೇಷಃ ||14||
ಒಬ್ಬನು ಜಟೆ ಬಿಟ್ಟವನು, ಇನ್ನೊಬ್ಬನು ತಲೆ ಬೋಳಿಸಿಕೊಂಡವನು, ಮತ್ತೊಬ್ಬನು ಕೇಶವನ್ನು ಎಳೆದೆಳೆದು ಕಿತ್ತುಹಾಕಿಕೊಂಡವನು, ಮಗದೊಬ್ಬನು ಕಾವಿ ಬಟ್ಟೆಯನ್ನುಟ್ಟು ಬಹುವಿಧವಾಗಿ ಅಲಂಕರಿಸಿಕೊಂಡವನು. ದೃಷ್ಟಿ ಸರಿಯಾಗಿದ್ದರೂ ಸತ್ಯವನ್ನು ಕಾಣಲಾರದ ಇಂತಹ ಅನೇಕ ಮೂಢರಿದ್ದಾರೆ. ಇವರು ಹೊಟ್ಟೆಪಾಡಿಗಾಗಿ ಇಂತಹ ನಾನಾ ವೇಷವನ್ನು ಧರಿಸಿರುತ್ತಾರೆ.

ಅಂಗಂ ಗಲಿತಂ ಪಲಿತಂ ಮುಂಡಂ
ದಶನವಿಹೀನಂ ಜಾತಂ ತುಂಡಮ್|
ವೃದ್ಧೋ ಯಾತಿ ಗೃಹೀತ್ವಾ ದಂಡಂ
ತದಪಿ ನ ಮುಂಚತ್ಯಾಶಾಪಿಂಡಮ್||15||
ವಯಸ್ಸಾದ ಮೇಲೆ ದೇಹವು  ಬಲಹೀನವಾಗಿರುತ್ತದೆ. ಕೂದಲು ನೆರೆತು ತಲೆಯು ಬೆಳ್ಳಗಾಗಿರುತ್ತದೆ.
ಬಾಯಿಯಲ್ಲಿದ್ದ ಹಲ್ಲುಗಳೆಲ್ಲ ಉದುರಿಹೋಗಿರುತ್ತವೆ. ಇಷ್ಟಾದರೂ ಮುದುಕರು ದೊಣ್ಣೆ  ಹಿಡಿದು ಎಲ್ಲಿಗೋ ಹೋಗುತ್ತಲೇ ಇರುತ್ತಾರೆ. ವಯಸ್ಸಾದರೂ ಆಶೆಯು ಶರೀರವನ್ನು ಬಿಟ್ಟು ಹೋಗುವುದಿಲ್ಲ.

ಅಗ್ರೇ ವಹ್ನಿಃ ಪೃಷ್ಠೇ ಭಾನುಃ
ರಾತ್ರೌ ಚುಬುಕಸಮರ್ಪಿತಜಾನುಃ|
ಕರತಲಭಿಕ್ಷಸ್ತರುತಲವಾಸ-
ಸ್ತದಪಿ ನ ಮುಂಚತ್ಯಾಶಾಪಾಶಃ ||16||
(ತಮ್ಮನ್ನು ವಿರಾಗಿಗಳೆಂದುಕೊಳ್ಳುವವರು) ಛಳಿಯನ್ನು ತಾಳಲಾರದೆ ಬೆಂಕಿ ಹೊತ್ತಿಸಿ ಮೈಯನ್ನು ಕಾಯಿಸುತ್ತಾನೆ. ಸೂರ್ಯನ ಕಡೆಗೆ ಬೆನ್ನು ಮಾಡಿ ಬಿಸಿಲು ಕಾಯಿಸುತ್ತಾನೆ. ರಾತ್ರಿಯಲ್ಲಿ ಮೊಳಕಾಲು ಗದ್ದವನ್ನು ಮುಟ್ಟುವಂತೆ ಬಾಗಿ ಮಲಗುತ್ತಾನೆ. ಭಿಕ್ಷಾಪಾತ್ರೆಯೂ ಇಲ್ಲದ್ದರಿಂದ ಕೈಯಲ್ಲಿಯೇ ಭಿಕ್ಷೆ ಬೇಡಿ ತಿನ್ನುತ್ತಾನೆ. ಮರದ ಬುಡದಲ್ಲಿ ಮಲಗುತ್ತಾನೆ. ಇಷ್ಟಾದರೂ ಆಸೆಯೆಂಬ ವಾತರೋಗವು ಇವನನ್ನು ಬಿಡುವುದೇ ಇಲ್ಲ!

(ಮುಂದುವರಿಯುವುದು….)

 

1 Comment

Leave a Reply