ಋಗ್ವೇದದ ‘ಋತ’ ದ ಪರಿಕಲ್ಪನೆ : ಅರವಿಂದ ಚೊಕ್ಕಾಡಿ ಬರಹ

chokkadiಋಗ್ವೇದದ ಬಹಳ ಮುಖ್ಯವಾದ ಪರಿಕಲ್ಪನೆ ‘ಋತ’. ಋತ ಎಂದರೆ ಸತ್ಯ. ಸತ್ಯವೆಂದರೆ ಸುಳ್ಳು ಹೇಳದಿರುವುದು ಎಂಬ ಸರಳ ಅರ್ಥವಲ್ಲ. ಋತ ಎಂದರೆ ವಿಶ್ವ ನಿಯಮ.ಈ ವಿಶ್ವನಿಯಮ ಎಂಬ ಪರಿಕಲ್ಪನೆಗೆ ಋಗ್ವೇದವು ನಿಷ್ಠವಾಗಿದೆ. ಆದ್ದರಿಂದಲೆ ಒಬ್ಬ ವ್ಯಕ್ತಿಯನ್ನು ಆಶೀರ್ವದಿಸುವಾಗ ‘ಶತಮಾನಂ ಭವತಿಃ’ಎಂದು ಆಶೀರ್ವದಿಸಲಾಗುತ್ತದೆ ಹೊರತು ಶಾಶ್ವತವಾಗಿ ಬಾಳು ಎಂದು ಆಶೀರ್ವದಿಸುವುದಿಲ್ಲ. ಏಕೆಂದರೆ ಶಾಶ್ವತವಾಗಿ ಬಾಳುವುದು ವಿಶ್ವನಿಯಮ ಅಲ್ಲ  ~ ಅರವಿಂದ ಚೊಕ್ಕಾಡಿ

ಎರಡು ದಿನಗಳ ಹಿಂದೆ ಕಾಶ್ಮೀರ ಸಮಸ್ಯೆಯ ಸೃಷ್ಟಿಗೆ ಹರಿಸಿಂಗ್ ಕಾರಣರೆ ಹೊರತು ಜವಾಹರ ಲಾಲ್ ನೆಹರೂ ಅಲ್ಲ; ದೇಶಕ್ಕೆ ನೆಹರೂ ಅವರ ಕೊಡುಗೆ ಇದೆ ಎಂದು ಹೇಳಿದ್ದಕ್ಕಾಗಿ ಕೆಲವು ಸ್ನೇಹಿತರ ಕಿರುಕುಳಗಳು,ನಂತರ ಅವರನ್ನು ‘ಗೆಟ್ ಔಟ್’ ಎಂದು ನಾನನ್ನುವುದು,ಅವರಿಗೆ ಬೇಜಾರಾಗುವುದು-ಇವೆಲ್ಲದರಿಂದ ಮನಸಿಗೆ ಬಹಳ ಹಿಂಸೆಯಾಗಿ ‘ಋಗ್ವೇದ’ವನ್ನು ಒಮ್ಮೆ ಓದುವ ಎನಿಸಿತು.ಅದೂ ಕೂಡ ಬಹಳ ಭಾರ ಎನಿಸಿ ಋಗ್ವೇದದ ಬಗ್ಗೆ ಹಿರಿಯ ಮಾರ್ಕ್ಸವಾದಿ ಚಿಂತಕ ಡಾ.ಜಿ.ರಾಮಕೃಷ್ಣ ಅವರು ಬರೆದ ‘ಋಗ್ವೇದ-ಐತಿಹ್ಯ ಮತ್ತು ವಾಸ್ತವ’ಹಾಗೂ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಬರೆದ ‘ಋಗ್ವೇದ ಸ್ಫುರಣ’ ಪುಸ್ತಕಗಳನ್ನು ಓದಿದೆ. ಇಲ್ಲಿನ‌ನನ್ನ ಬರಹದ ಹಲವು ಅಂಶಗಳು ವೆಂಕಟೇಶಮೂರ್ತಿಯವರ ಕೃತಿಯಿಂದಲೆ ತೆಗೆದುಕೊಂಡದ್ದು.

ಋಗ್ವೇದದ ಬಹಳ ಮುಖ್ಯವಾದ ಪರಿಕಲ್ಪನೆ ‘ಋತ’. ಋತ ಎಂದರೆ ಸತ್ಯ. ಸತ್ಯವೆಂದರೆ ಸುಳ್ಳು ಹೇಳದಿರುವುದು ಎಂಬ ಸರಳ ಅರ್ಥವಲ್ಲ.ಋತ ಎಂದರೆ ವಿಶ್ವ ನಿಯಮ. ಈ ವಿಶ್ವನಿಯಮ ಎಂಬ ಪರಿಕಲ್ಪನೆಗೆ ಋಗ್ವೇದವು ನಿಷ್ಠವಾಗಿದೆ. ಆದ್ದರಿಂದಲೆ ಒಬ್ಬ ವ್ಯಕ್ತಿಯನ್ನು ಆಶೀರ್ವದಿಸುವಾಗ ‘ಶತಮಾನಂ ಭವತಿಃ’ಎಂದು ಆಶೀರ್ವದಿಸಲಾಗುತ್ತದೆ ಹೊರತು ಶಾಶ್ವತವಾಗಿ ಬಾಳು ಎಂದು ಆಶೀರ್ವದಿಸುವುದಿಲ್ಲ. ಏಕೆಂದರೆ ಶಾಶ್ವತವಾಗಿ ಬಾಳುವುದು ವಿಶ್ವನಿಯಮ ಅಲ್ಲ.

ವ್ಯಕ್ತಿಗೂ ಋತವಿದೆ. ವ್ಯಕ್ತಿಯ ಋತ ಆತ/ಆಕೆಯ ಪೊಸಿಷನ್ ನಿಂದ ಬರುತ್ತದೆ. ಉದಾಹರಣೆಗೆ ನಾನು ಅಧ್ಯಾಪಕ. ನೆಹರೂ ಅವರ ಬಗ್ಗೆ ಯಾರಾದರೂ ಕೇಳಿದಾಗ ರಾಗ, ಭಾವ, ದ್ವೇಷ, ಭಯಕ್ಕೆ ಒಳಗಾಗದೆ ನನಗೆ ತಿಳಿದಿರುವ ಸರಿಯಾದ ವಿಚಾರವನ್ನು ಹೇಳಬೇಕಾದ್ದು ನನ್ನ ‘ಋತ’. ಆದರೆ ರಾಜಕಾರಣಿಗೆ ಇದು ‘ಋತ’ಆಗಬೇಕಾಗಿಲ್ಲ. ಆತನ ಪೊಸಿಷನ್ ಗೆ ಅಗತ್ಯವಾದದ್ದನ್ನು ಆತ ಹೇಳಬಹುದು. ಆದರೆ ನನ್ನ ಋತವನ್ನು ನಾನು ಪಾಲಿಸುವುದನ್ನು ತಡೆಯುವ ಅಧಿಕಾರ ಆತನಿಗಿಲ್ಲ. ಆತನ ಪೊಸಿಷನ್ ನ ಅಗತ್ಯವನ್ನು ನಿರಾಕರಿಸುವ ಅಧಿಕಾರ ನನಗೂ ಇಲ್ಲ.

ಆಮೇಲೆ ಬೆಳೆದ ಧಾರ್ಮಿಕ ಪರಂಪರೆಯಲ್ಲಿ ಆಯಾ ವ್ಯಕ್ತಿಯ ಋತದ ಪಾಲನೆಗೆ ವಿರುದ್ಧವಾಗಿ ರಾಜಾಜ್ಞೆಯೂ ಮಾಡುವ ಹಾಗಿಲ್ಲ ಎನ್ನುವುದೂ ಬಂತು. ಸಾವಿತ್ರಿ ಯಮನ ಬಳಿ ನೀನೇ ಕೊಟ್ಟ ವರದಂತೆ ನೂರು ಮಕ್ಕಳನ್ನು ಗಂಡನಿಲ್ಲದೆ ಹೇಗೆ ಪಡೆಯಲಿ ಎಂದು ಕೇಳಿದಾಗ ಯಮ ಸತ್ಯವಾನನ ಪ್ರಾಣವನ್ನು ಹಿಂದಕ್ಕೆ ಕೊಟ್ಟು ಸಾವಿತ್ರಿ ತನ್ನ ಋತವನ್ನು ಪಾಲಿಸಲು ಅವಕಾಶ ಕೊಟ್ಟ. ಏಕೆಂದರೆ ಋಗ್ವೇದದ ಪ್ರಕಾರ ದೇವರುಗಳು ಕೂಡ ಋತ ದ ಪಾಲಕರೇ ಹೊರತು ಋತದ ಸೃಷ್ಟಿಕರ್ತರಾಗಲಿ, ಋತದ ನಿಯಂತ್ರಕರಾಗಲಿ ಅಲ್ಲ.ಬ್ಲೂಮ್ ಫೀಲ್ಡ್ ಅವರು ಹೇಳುವ ಪ್ರಕಾರ “ಜೀವನ ಪ್ರವಾಹವು ಯಾವುದೆ ಅಡ್ಡಿಯಿಲ್ಲದಂತೆ ಪ್ರವಹಿಸಬೇಕೆಂದು ಋತವು ಬಯಸುತ್ತದೆ”. ಕರೆಯಲು ಅನೇಕ ದೇವರುಗಳಿದ್ದಾರೆ. ಆದರೆ ‘ಸತ್’ ಮಾತ್ರ ಒಂದೇ ಆಗಿ ಇದೆ ಎಂದು ಋಗ್ವೇದದ ಋಷಿಗಳು ಭಾವಿಸುತ್ತಾರೆ.ಋಗ್ವೇದದ ಋಷಿಗಳ ದೇವರ ಅತ್ಯುನ್ನತ ಕಲ್ಪನೆ ವಿಶ್ವವನ್ನೆ ದೇವರೆಂದು ಗ್ರಹಿಸುವುದಾಗಿದೆ.

ಸಹಸ್ರ ಶೀರ್ಷಾ ಪುರುಷಃ ಸಹಸ್ರಾಕ್ಷಾ ಸಹಸ್ರಪಾತ್ ಸಭೂಮಿಮ್ ವಿಶ್ವತೋ ವೃತ್ವಾ ಅತ್ಯತ್ತಿಷ್ಟ ದಶಾಂಗುಲಂ—ಎಂದು ಭೌಮವನ್ನು ಋಗ್ವೇದ ಕಲ್ಪಿಸಿಕೊಂಡಿದೆ.  ನಾರಾಯಣ ಋಷಿಯು ಬರೆದಿರುವ ಈ ಸೂಕ್ತವು ಪುರುಷ (ಪುರುಷ ಎಂದರೆ ಗಂಡು ಎಂದು ಅರ್ಥವಲ್ಲ. ಅದು ಲಿಂಗರಹಿತವಾದ ಶಕ್ತಿ)ವು ವಿಶ್ವವನ್ನೆ ವ್ಯಾಪಿಸಿಕೊಂಡು ಹತ್ತು ಅಂಗುಲ ಮೇಲಿದೆ. ಋಗ್ವೇದದ ಪುರುಷ ಸೂಕ್ತ ಮತ್ತು ನಾಸದೀಯ ಸೂಕ್ತಗಳು ಸೃಷ್ಟಿ ರಹಸ್ಯದ ಕುರಿತು ವಿವರಿಸುತ್ತದೆ.

116ಆದರೆ ಋಗ್ವೇದವು ಎಷ್ಟೆಲ್ಲ ರೀತಿಯಲ್ಲಿ ವಿವರಿಸಿದ ನಂತರವೂ ತನ್ನ ಜ್ಞಾನದ ಮಿತಿಯನ್ನು ಒಪ್ಪಿಕೊಳ್ಳುವುದು ಅದರ ಶಕ್ತಿ, ಸೌಂದರ್ಯ ಮತ್ತು ತನ್ನ ಬಗ್ಗೆ ತಾನೇ ತೆಗೆದುಕೊಳ್ಳುವ ನಿಷ್ಠುರ ನಿರ್ಧಾರವಾಗಿ ಋಗ್ವೇದವನ್ನು ಸಾರ್ವಕಾಲಿಕ ಶ್ರೇಷ್ಠ ಕೃತಿಯ ಸಾಲಿನಲ್ಲಿ ನಿಲ್ಲಿಸುತ್ತದೆ: ಇಯಂ ವಿಸೃಷ್ಟಿಃ ಯತಂ ಆಬಭೂವ ಯದಿ ವಾ ದಧೇ ಯದಿ ವಾ ದಧೇ ಯದಿವಾಸಯೋ ಅಸ್ಯಾ ಧಕ್ಷಃ ಪರಮೇ ಓಮನ್ ಸಃ ಅಂಗ ವೇದ ಯದಿ ವಾನವೇದ

ಅಂದರೆ “ಮೇಲೆ ನಿಂತು ಅಧಿವೀಕ್ಷಕನು ವಿಶ್ವವನ್ನು ನೋಡುತ್ತಿದ್ದಾನೆ. ಸೃಷ್ಟಿಯ ವಿವರಗಳು ಅವನಿಗೆ ತಿಳಿದಿವೆಯೊ ಏನೊ. ಯಾರು ಬಲ್ಲರು. ಅದು ಅವನಿಗೂ ತಿಳಿಯದಿರಬಹುದು” ಎನ್ನುವ ಮಾತಿನಿಂದ ನಾಸದೀಯ ಸೂಕ್ತವು ಮುಕ್ತಾಯವಾಗುತ್ತದೆ.

ವೆಂಕಟೇಶಮೂರ್ತಿಯವರು ಅನುವಾದಿಸಿದ ಇನ್ನೊಂದು ಋಕ್ಕು ಹೀಗಿದೆ: “ಯಾರು ಸೃಜಿಸಿದರು ಈ ಲೋಕವನು? ಸೃಜಿಸಿದ್ದು ಯಾವ ವಸ್ತುವನ್ನು ಬಳಸಿಕೊಂಡು? ದೇವತೆಗಳು ಕೂಡ ಲೋಕ ಹುಟ್ಟಿದ ಬಳಿಕ ಹುಟ್ಟಿದರು ತಲೆಬುಡವ ತಿಳಿಯರವರು”

ಈ ತತ್ವವನ್ನೆ ಆಧರಿಸಿ ಶಿವಪುರಾಣದಲ್ಲಿ ವಿಷ್ಣು ಮತ್ತು ಬ್ರಹ್ಮ ಬ್ರಹ್ಮಾಂಡವನ್ನು ತಿಳಿಯಲು ಹೋಗುವ ಕಥೆ ಬರುತ್ತದೆ. ತಾನೇ ಕಂಡುಕೊಂಡ ದೇವರ ಬಗ್ಗೆ ಇಷ್ಟೊಂದು ನಿಷ್ಠುರವಾಗಿ ಮಾತನಾಡಿದ ಮತ್ತೊಂದು ಧಾರ್ಮಿಕ ಗ್ರಂಥ ನನ್ನ ತಿಳಿವಳಿಕೆಯಲ್ಲಿ ಇಲ್ಲ. ಆದರೆ ಋತಕ್ಕೆ ಮಾತ್ರ ಋಗ್ವೇದದ ನಿಷ್ಠೆ ಎಲ್ಲಿಯೂ ವಿಚಲಿತವಾಗುವುದಿಲ್ಲ. ನೀತಿಯುತವಾಗಿ ಧನ ಸಂಪಾದನೆ ಮಾಡುವುದು ಅರ್ಥ ಋತ. ಧನ ಸಂಪಾದನೆಗೆ ಅಪಮಾರ್ಗಕ್ಕೆ ತೊಡಗದೆ ವ್ಯವಸಾಯ ನಿರತನಾಗು ಎಂದು ಹೇಳುತ್ತದೆ.

ಋಗ್ವೇದದ ಪ್ರಕಾರ ಗಂಡ-ಹೆಂಡತಿಯರು ಆಕಾಶ ಮತ್ತು ಭೂಮಿಯ ಪ್ರತಿನಿಧಿಗಳು.ಆದರೆ ವಿಧವೆಯಾಗಿ ಬಾಳುವುದನ್ನು ಋಗ್ವೇದವು ಋತ ಎಂದು ಒಪ್ಪುವುದಿಲ್ಲ.”ವಿಧವೆ ತನ್ನ ಮೈದುನನನ್ನು ಸ್ವೀಕರಿಸಿ ಹೊಸ ಬಾಳು ಪ್ರಾರಂಭಿಸಬೇಕು”ಎಂದು ಋಗ್ವೇದವು ಹೇಳುತ್ತದೆ.ಸತ್ತ ಗಂಡನ ದೇಹದ ಮೇಲೆ ವಿಲಾಪಿಸುವ ಹೆಣ್ಣಿಗೆ,“ಪತಿಯ ಗತ ದೇಹವನು ತಬ್ಬಿ ಮಲಗಿರುವಂಥ ಗೃಹಿಣಿಯೇ ಹಿಂದಿರುಗು ಗೃಹದ ಕಡೆಗೆ ಮೊಮ್ಮಕ್ಕಳಿದ್ದಾರೆ. ಮಕ್ಕಳೂ ಇದ್ದಾರೆ.ನಡೆ ನಿನ್ನ‌ಕಾಯುತಿಹ ನಿನ್ನ‌ ಮನೆಗೆ”ಎಂದು ಆಕೆಯ ಋತವನ್ನು ಎಚ್ಚರಿಸುತ್ತದೆ.

ಗಂಡ-ಹೆಂಡತಿ ಸಂಬಂಧವೂ ಋಗ್ವೇದಕ್ಕೆ ಋತವೇ.ರೋಮಶಾ ಎಂಬ ಋಷಿಕೆ ಭಾವಯವ್ಯ ನ ಅಪ್ರಾಪ್ತ ವಯಸ್ಕ ಪತ್ನಿ.ಆಕೆ ಪ್ರಾಪ್ತ ವಯಸ್ಕಳಾದಾಗ:” ರೋಮಶಾ ಎಂಬ ಹುಡುಗಿ ತನ್ನ ಪತಿಗೆ ನುಡಿದಳು:ರತಿಗೆ ಒಂದು ಗತಿಯ ಕೊಡು ಎಂದು ಕೈಯ್ಯ ಹಿಡಿದಳು.ಹದಗೊಂಡಿಹೆ ಬೆದೆಗೊಂಡಿಹೆ ತಣಿಸು ನನ್ನ ರಾಗವ.ನೋಡು ಕೇಶಭರಿತವಾದ ನನ್ನ ಊರು ಭಾಗವ”ಎಂದು ಹೇಳುವುದನ್ನು ರುಕ್ಕು ಹೇಳುತ್ತದೆ. ಪತ್ನಿಯ ಬಗ್ಗೆ ಅನಾಸಕ್ತಿಯನ್ನು ಋತವೆಂದು ಋಗ್ವೇದ ಒಪ್ಪುವುದಿಲ್ಲ. ತನ್ನ ಬಗ್ಗೆ ಅನಾಸಕ್ತನಾದ ಅಗಸ್ತ್ಯನ ಗಮನ ಸೆಳೆಯಲು ಲೋಪಾಮುದ್ರೆ “ಎರಡು ತುಟಿಗಳ ಬಳಸಿ ಮಧುರ ಮಾತುಗಳನಾಡಿ ಹಾಲನೂಡಿರಿ ಎರಡು ಮೊಲೆಗಳಂತೆ. ಆಕಾಶ ಭೂಮಿಯಂತೆ ನೆಲೆಸಲೆಡೆಯನು ನೀಡಿ ಸ್ತುತಿಯ ಮಸೆಯಿರಿ ಕತ್ತಿ ಮಸೆವಂತೆ” ಎಂದು ಅಶ್ವಿನೀ ದೇವತೆಗಳನ್ನು ಸ್ತುತಿಸಿದಾಗ ಅಗಸ್ತ್ಯನಿಗೆ ಅರಿವಾಯಿತು.

ಆಗ ಏನಾಯಿತೆಂದು ರುಕ್ಕು ಹೇಳುತ್ತದೆ: “ತಡೆಹಿಡಿದ ನದಿಯಂತೆ ಒಡಲಿನೆಲ್ಲೆಡೆಯಿಂದ ಉಕ್ಕುಕ್ಕುತ್ತಿದೆ ಕಾಮ ಒಂದೇ ಸಮನೆ.ದೃಢಕಾಯನಾದ ಪತಿಯೊಡನೆ ಲೋಪಾಮುದ್ರೆ ಬೆರೆಯುತಿರೆ ಉಸಿರೊತ್ತಿ ಬಂತವನಿಗೆ”. ಈ ತತ್ವದ ಆಧಾರದಲ್ಲೆ ಮಹಾಭಾರತದಲ್ಲಿ ಸುಧನ್ವ ಮತ್ತು ಪ್ರಭಾವತಿಯರ ಕಥೆ ಬರುತ್ತದೆ.ಋಗ್ವೇದದಲ್ಲಿ ಬರುವ ಆಂಗೀರಸ ಪುತ್ರಿ ಶಶ್ವತಿಯ ಗಂಡ ಅಸಂಗ ನಪುಂಸಕ. ಆಗ ಶಶ್ವತಿಯು ದೇವರನ್ನು ಮೆಚ್ಚಿಸಿ ಅವನ ನಪುಂಸಕತ್ವವನ್ನು ಹೋಗಲಾಡಿಸುತ್ತಾಳೆ. ಆಕೆಯೇ ರಚಿಸಿದ ರುಕ್ಕು,“ಅಸಂಗದೊರೆಮರ್ಮಾಂಗ ಕಂಡೊಡನೆ ಹರ್ಷಪಡುತ ಶಶ್ವತಿಯು ತನ್ನ ದೀರ್ಘ ತಪ ಫಲಿಸಿತೆಂದು ಬಾಚಿ ತಬ್ಬುವಳು ಪತಿಯನು”. ಹೀಗೆ ಗಂಡ ಮತ್ತು ಹೆಂಡತಿ ಇಬ್ಬರೂ ತಮ್ಮ ಋತಕ್ಕೆ ಬದ್ಧರು.

ದಾಂಪತ್ಯದ ಋತದಲ್ಲಿ ನವ ವಧುವಿಗೆ ವರ ಹೀಗೆ ಹೇಳುತ್ತಾನೆ:”ಶ್ರೇಯಸ್ಸಿಗಾಗಿ ನಿನ್ನ‌ಕೈಹಿಡಿಯೆ ಬಂದಿರುವೆ.ಹೀಗೇ ಜೊತೆಗೇ ಮುದುಕರಾಗೋಣ.ದೇವತೆಗಳೆ ಕೊಟ್ಟರು ನಿನ್ನ….ವಿಶ್ವೇ ದೇವರು ನಮ್ಮ‌ ಹೃದಯಗಳ ಒಂದಾಗಿಸಲಿ ಎಂದೆಂದೂ ಮಾತರಿಶ್ವ ಸರಸತಿ ಅಬ್ದೇವತೆ ಉಳಿಸಿ ಬೆಳೆಸಲಿ ನಮ್ಮ ಅನ್ಯೋನ್ಯತೆಯನು”.ಇನ್ನೊಂದು ರುಕ್ಕು,”ವ್ಯಸನವಿಲ್ಲದ ಗಂಡು ಸತಿಗೆ ಕೊಡುವನು ಸುಖವ ಚಂದವಾಗಿಸುವನು ನಿನ್ನ‌ ಮನೆಯ”ಎಂದು ಹೇಳುತ್ತದೆ.

ಜೀವನೋದ್ದೇಶವನ್ನು,ಗಾಂಧೀಜಿಯವರ ಸ್ವಾವಲಂಬಿ ತತ್ವವನ್ನು ಋಗ್ವೇದ ಎಷ್ಟೊಂದು ಸುಂದರವಾಗಿ ಹೇಳುತ್ತದೆ ನೋಡಿ:

“ದೇವತೆಗಳೆ ಅನುಗ್ರಹಿಸಿರಿ ನೂರು ವರುಷದಾಯುವನ್ನು.ಆಯು ಮುಗಿವ ಮುನ್ನ ಮುಪ್ಪು ಸಾವ ಕೊಡದಿರಿ.ಮಧ್ಯ ವಯಸ್ಸಿನಲ್ಲಿ ಮಕ್ಕಳಾಶ್ರಯಕೆ ಬೀಳದಂತೆ ಸ್ವಾವಲಂಬಿ ಬದುಕ ನಮಗೆ ಅನುಗ್ರಹಿಸಿರಿ

ಋತ ಮಾರ್ಗದ ಅನುಸರಣೆಯೆ ನಮಗೆ ಅನ್ನದಾಯಕ ದೃಢ ಮತ್ತೂ ಆಕರ್ಷಕ ಋತದ ಸ್ವರೂಪ.

ಋತದ ನಿಯಮ ಪಾಲಿಸುವುವು ಜ್ಯೋತಿರೂಪಿ ಲೋಕಗಳು.

ಋತ ಮಾರ್ಗದ ಅನುಸರಣೆಯೆ ಜೀವಿಗೆ ಶ್ರೇಯ”.

ರುದ್ರ, ವರುಣ, ಪೂಷ, ಮಿತ್ರ , ಆದಿತ್ಯ, ವಿಷ್ಣು ಮುಂತಾದ ದೇವರುಗಳನ್ನೆಲ್ಲ ಬಣ್ಣಿಸಿದ ಮೇಲೆ ‘ಸತ್’ ಅನ್ನು ಋಗ್ವೇದ ಕಾಣಿಸಿಕೊಡುವುದು ಹೀಗೆ:

“ಒಬ್ಬನೇ ಆದಿತ್ಯ,ಇಂದ್ರ, ವರುಣ ಎಂದು ಕರೆಯುತ್ತಾರೆ ಹಲವು ರೀತಿ. ಒಬ್ಬನೇ ಪರಮಾತ್ಮ. ಹೆಸರೇನೊ ಹಲವಾರು. ಕೂಗುವರು ಒಂದನ್ನೆ ಹಲವು ಮಾಡಿ.

ಋತಕ್ಕೆ ನಿಷ್ಠವಾದ ಋಗ್ವೇದದಲ್ಲಿ ಶ್ರದ್ಧಾ ಎಂಬ ಋಷಿಕೆ ಬರೆಯುತ್ತಾಳೆ:”ಶ್ರದ್ಧೆಯಿಂದಲೆ ಅಗ್ನಿ ಪ್ರಜ್ವಲನಗೊಳ್ಳುವುದು.ಶ್ರದ್ಧೆಯಿಂದಲೆ ಹವಿಸ್ಸಿನ ಹೋಮವು.ನಾನು ಶ್ರದ್ಧಾ ಎಂಬ ಋಷಿಕೆ.ಸ್ತುತಿಸುತ್ತೇನೆ ಶ್ರದ್ಧಾಭಿಮಾನಿ ದೇವತೆ ಒಲಿಯಲಿ….ಶ್ರದ್ಧಾಳು ಮಾಡು ನಮ್ಮೆಲ್ಲರನ್ನೂ”.

ಋತವನ್ನು ಸಾಧಿಸಲು ಕೆಲವು ಉನ್ನತ ತತ್ವಗಳನ್ನೂ ಋಗ್ವೇದ ಬೋಧಿಸುತ್ತದೆ: “ಸರ್ವಂ ಖಲ್ವಿದಂ ಬ್ರಹ್ಮ(ಎಲ್ಲವೂ ಬ್ರಹ್ಮಮಯ),”ಮಾಶೂನೇ ಅಗ್ನೇ ನಿಷದಾಮ ನೃಣಾಂ(ನಾವು ಅನ್ಯರ ಆಶ್ರಯ ಪಡೆಯುವಂತಾಗದಿರಲಿ),”ಮಾಹಂ ರಾಜನ್ನನ್ಯಕೃತೇನ ಭೋಜಂ(ಅನ್ಯರು ಸಂಪಾದಿಸಿದ ಹಣದಲ್ಲಿ ಭೋಗವನ್ನು ಅನುಭವಿಸುವ ಸ್ಥಿತಿಯಲ್ಲಿ ನನ್ನನ್ನು ಇಡಬೇಡ)”.”ಮಾತಂತುಶ್ಚೇಧಿ ವಯತೊ ಧಿಯಂ ಮೇ (ಜೀವನದ ಪರಿಪೂರ್ಣತೆಯ ಸಾಧಕವಾದ ಕರ್ಮತಂತು ಛೇಧಿಸಲ್ಪಡದಿರಲಿ)”.

ಹೀಗೆ ಋಗ್ವೇದದ 10552ರುಕ್ಕುಗಳು ಆರ್ಥಿಕ, ಕೌಟುಂಬಿಕ, ಧಾರ್ಮಿಕ, ಲೈಂಗಿಕ, ಆಧ್ಯಾತ್ಮಿಕ ಮುಂತಾದ ಜೀವನದ ಅನೇಕ ಸಂಗತಿಗಳನ್ನು ಹೇಳುತ್ತಾ ಹೋದಾಗಲೂ ಋತವನ್ನು ಮಾತ್ರ ಎಲ್ಲಿಯೂ ಕೈಬಿಡುವುದಿಲ್ಲ.ಋತವನ್ನು ಅರ್ಥ ಮಾಡಿಕೊಳ್ಳದೆ ಹಿಂದೂ ಎನ್ನುವುದಕ್ಕೂ ಅರ್ಥ ಉಳಿಯುವುದಿಲ್ಲ.

3 Comments

  1. ಅತ್ಯಂತ ಹಾಗೂ ಸ್ಪಷ್ಟವಾಗಿ ಋಗ್ವೇದದ ಬಗ್ಗೆ ಮಿತ್ರರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಲ್ಲಾ ವೇದಗಳಲ್ಲಿ ಬಹಳ ಪ್ರಾಮುಖ್ಯತೆ ಹಾಗು ಅತೀ ದೊಡ್ಡದಾದ ಋಗ್ವೇದದ ಮಹತ್ವ ಅಪಾರವಾದುದು.ಇವರಿಂದ ಇನ್ನು ಮುಂದೆ ಇದರ ಬಗ್ಗೆ ಹೆಚ್ಚಿನ ಮಾಹಿತಿ ನೀಡಲಿ.

Leave a Reply