ಸೃಷ್ಟಿಯ ಪ್ರತಿಯೊಂದೂ ಹೀಗೆ ವರ್ತಮಾನದಲ್ಲಿ ಸಹಜವಾಗಿ ಬದುಕುತ್ತವೆ. ಆದರೆ ಮಾನವನಿಗೆ ಮಾತ್ರ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ ಗೀಳು ಎಷ್ಟೆಂದರೆ, ಕೆಲವರು ತಾವು ಸತ್ತ ಮೇಲೆ ನಮ್ಮ ಗೋರಿ ಹೀಗೇ ಇರಬೇಕೆಂದು ವ್ಯವಸ್ಥೆ ಮಾಡುವವರೂ ಇದ್ದಾರೆ! : ಓಶೋ ರಜನೀಶ್
ಮನುಷ್ಯ ಇವತ್ತಿಗಿಂತ ನಾಳೆಗಾಗಿ ಜೀವಿಸುವುದೇ ಹೆಚ್ಚು. ನೀವೆಲ್ಲರೂ ನಾಳೆಗಾಗಿ ವ್ಯವಸ್ಥೆ ಮಾಡುತ್ತಿರುವಿರಿ. ಮತ್ತು ಈ ಭರದಲ್ಲಿ ಇಂದಿನ ದಿನವನ್ನು ಮರೆಯುತ್ತಿದ್ದೀರಿ. ಇದು ಹೀಗೆಯೇ ಮುಂದುವರೆಯುತ್ತದೆ. ನಾಳೆಗಾಗಿ ಇಂದು ವ್ಯವಸ್ಥೆ ಮಾಡುವುದು; ಆ ನಾಳೆ ಬಂದಾಗ ನಾಡಿದ್ದಿಗಾಗಿ ವ್ಯವಸ್ಥೆ ಮಾಡತೊಡಗುವುದು. ಒಟ್ಟಾರೆ ನಿಮಗೆ ಇಂದಿನ ಬದುಕಿನ ಬಗ್ಗೆ ಕಾಳಜಿಯೇ ಇಲ್ಲ. ಅದನ್ನು ನಿಮ್ಮ ಕೈಯಾರೆ ವ್ಯರ್ಥ ಮಾಡಿಕೊಳ್ಳುತ್ತಿದ್ದೀರಿ. ನಿಮ್ಮ ವರ್ತಮಾನವನ್ನು ನಾಶ ಮಾಡಿಕೊಳ್ಳುತ್ತಿದ್ದೀರಿ.
ನೆನಪಿಡಿ. ವಸ್ತುತಃ ಇರುವುದು ಇಂದು, ಈ ಕ್ಷಣ ಮಾತ್ರ. ನಾಳೆ ಎಂಬುದು ಇಲ್ಲವೇ ಇಲ್ಲ. ಅದು ಯಾವತ್ತೂ ಬರುವುದಿಲ್ಲ. ಅದು ಬಂದರೂ ಬರುವುದು ‘ಇಂದು’ ಆಗಿಯೇ ಹೊರತು ನಾಳೆಯಾಗಿ ಅಲ್ಲ. ಅದು ವರ್ತಮಾನವಾಗಿಯೇ ಬರುತ್ತದೆ ಹೊರತು ಭವಿಷ್ಯತ್ ಕಾಲವಾಗಿ ಅಲ್ಲ. ಏಕೆಂದರೆ ಭವಿಷ್ಯತ್ತನ್ನು ನಾವು ನೋಡಲೂ ಆಗದು, ಅನುಭವಿಸಲೂ ಆಗದು, ಜೀವಿಸಲೂ ಆಗದು. ಹೋಗಿರುವಾಗ ಅದಕ್ಕೆ ಅಸ್ತಿತ್ವ ಇರುವುದಾದರೂ ಹೇಗೆ?
ಒಮ್ಮೆ ಕ್ರಿಸ್ತ ನಡೆದು ಹೋಗುವಾಗ ತೋಟವೊಂದು ಎದುರಾಗುತ್ತದೆ. ಅಲ್ಲಿ ಅರಳಿ ನಿಂತ ಹೂಗಳನ್ನು ನೋಡಿ ಅವನು ಉದ್ಗರಿಸುತ್ತಾನೆ, “ನಾಳೆ ಸೂರ್ಯ ಉದಯಿಸ್ತಾನೋ ಇಲ್ಲವೋ ಎಂದು ಇವಕ್ಕೆ ಗೊತ್ತಿಲ್ಲ. ನಾಳೆ ನೀರು ಸಿಗುವುದೆಂಬ ಭರವಸೆಯೂ ಅವಕ್ಕಿಲ್ಲ. ಆದರೂ ಸಹ ಅವು ಇಂದು ಎಷ್ಟು ಸಂತೋಷದಿಂದ ಅರಳಿ ನಿಂತಿವೆ ನೋಡಿ!”
ಸೃಷ್ಟಿಯ ಪ್ರತಿಯೊಂದೂ ಹೀಗೆ ವರ್ತಮಾನದಲ್ಲಿ ಸಹಜವಾಗಿ ಬದುಕುತ್ತವೆ. ಆದರೆ ಮಾನವನಿಗೆ ಮಾತ್ರ ನಾಳೆಯದೇ ಚಿಂತೆ. ಮನುಷ್ಯರಷ್ಟೆ ನಾಳೆಗೆ ಬೇಕಾಗುತ್ತದೆ, ನಾಡಿದ್ದಿಗೆ ಬೇಕಾಗುತ್ತದೆ ಎಂದು ವ್ಯವಸ್ಥೆ ಮಾಡಿಟ್ಟುಕೊಳ್ಳುವುದು. ಈ ಗೀಳು ಎಷ್ಟೆಂದರೆ, ಕೆಲವರು ತಾವು ಸತ್ತ ಮೇಲೆ ನಮ್ಮ ಗೋರಿ ಹೀಗೇ ಇರಬೇಕೆಂದು ವ್ಯವಸ್ಥೆ ಮಾಡುವವರೂ ಇದ್ದಾರೆ!
ಇದು ಭದ್ರತೆಯನ್ನು ಬಯಸುವವರ ಸ್ಥಿತಿ. ಅವರು ನಾಳೆಗಳಲ್ಲಿ ತಮಗೆ ಸುರಕ್ಷೆ ಇದೆ ಎಂದು ಭಾವಿಸುತ್ತಾರೆ. ಆದರೆ ನಾಳೆಯ ಸನ್ನಿವೇಶಗಳು ಹೇಗಿರುತ್ತವೆ ಎಂಬುದನ್ನು ಯಾರು ತಾನೆ ಊಹಿಸಬಲ್ಲರು? ನಾಳೆ ಏನು ಬೇಕಾದರೂ ಆಗಬಹುದು. ಪ್ರಕೃತಿ ವಿಕೋಪ ಉಂಟಾಗಿ ನೀವು ಎಲ್ಲವನ್ನೂ ಕಳೆದುಕೊಳ್ಳಬಹುದು. ನಿಮ್ಮ ಪ್ರೀತಿಪಾತ್ರರು ನಮ್ಮನ್ನು ತೊರೆದುಹೋಗಬಹುದು. ಅಥವಾ ಹೆಚ್ಚಿನ ಜವಾಬ್ದಾರಿ ನಿಮ್ಮ ಹೆಗಲೇರಬಹುದು. ನೀವು ಧಿಡೀರ್ ಶ್ರೀಮಂತರಾಗಬಹುದು ಅಥವಾ ಬಡವರಾಗಬಹುದು. ನಾಳೆ ನೀವೊಬ್ಬರು ಪ್ರೇಮಿಯಾಗಬಹುದು ಅಥವಾ ವಿರಹಿಯಾಗಲೂಬಹುದು. ಅದನ್ನು ಹೇಗೆ ಹೇಳುವುದು? ಅದನ್ನು ಯಾರು ಹೇಳಬಲ್ಲರು?
ಆದ್ದರಿಂದ, ಇಂದು ಜೀವಿಸಿ. ವರ್ತಮಾನದಲ್ಲಿ ಬದುಕುವವರೇ ನಿಜದಲ್ಲಿ ಜೀವಿಸುತ್ತಿರುವವರು. ಉಳಿದವರು ಸುಮ್ಮನೆ ತಮ್ಮ ಆಯಸ್ಸನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದಾರಷ್ಟೆ.