ಸಂತ ತುಕಾರಾಮರು “ಭೇದಗಳನ್ನೆಲ್ಲ ನಾನು ಸುಡುವೆನು. ಇದಕ್ಕೆ ವೇದವೇ ಪ್ರಮಾಣವು” ಎಂದು ಪ್ರತಿಜ್ಞೆಯನ್ನು ಮಾಡಿದರು. ಸಮಾಜದ ಕಲ್ಯಾಣವನ್ನು ಬಯಸುವ ಪ್ರತಿಯೊಬ್ಬರೂ ಈ ಪ್ರತಿಜ್ಞೆಯನ್ನು ಮಾಡಿಯೇ ತೀರಬೇಕು ~ ಸಾನೆ ಗುರೂಜಿ
ಸಾಗರೇ ಸರ್ವತೀರ್ಥಾನಿ ಎನ್ನಲಾಗುತ್ತದೆ. “ಎಲ್ಲ ಪ್ರವಾಹಗಳು ಸಮುದ್ರದಲ್ಲಿ ಲೀನವಾಗುತ್ತವೆ” ಎಂದು ಇದರ ಅರ್ಥ. ಆದ್ದರಿಂದಲೇ ಸಮುದ್ರವು ಹಗಲಿರುಳು ಉಕ್ಕೇರುವುದು. ಮಳೆ ಬೀಳಲಿ, ಬೀಳದೇ ಇರಲಿ; ಸಮುದ್ರವು ಬತ್ತುವುದಿಲ್ಲ. ಎಲ್ಲವನ್ನೂ ಬರಮಾಡಿಕೊಳ್ಳುವವನ ಬಳಿ ಸಕಲ ತೀರ್ಥಗಳೂ ಇರುತ್ತವೆ ಎಂದು ಋಷಿಗಳು ಹೇಳುತ್ತಾರೆ. ಜ್ಞಾನ ಭೇದಾಭೇದದ ಆಚೆ ಹೋಗಿರುವ ಸಜ್ಜನರಲ್ಲಿಯೇ ಭಗವಂತ ವಾಸಿಸುತ್ತಾನೆ.
ಭಾರತೀಯ ಸಂತರು ನಮಗೆ ಈ ಪಾಠ ಹೇಳಿಕೊಟ್ಟರು. ಆದರೆ ಅದರಲ್ಲಿ ಅಡಗಿರುವ ಹಿರಿದರ್ಥವನ್ನು ನಾವು ಮನಗಂಡಿಲ್ಲ. ಸಂಗಮ ಮತ್ತು ಸಮುದ್ರಗಳಲ್ಲಿ ಸ್ನಾನ ಮಾಡಿದಾಕ್ಷಣ ಪಾಪಗಳು ಸುಟ್ಟುಹೋಗುವುದಿಲ್ಲ. ಅಲ್ಲಿ ಸ್ನಾನ ಮಾಡುವ ಮೂಲಕ ಜೀವನದಲ್ಲಿ ಅದ್ವೈತದ ಸಂದೇಶವನ್ನು ಅರಿತು ಆಚರಿಸಿದರೆ ಮಾತ್ರ ವ್ಯಕ್ತಿಯು ನಿಷ್ಪಾಪಿಯೂ ನಿರ್ದೋಷಿಯೂ ಆಗಿರಲು ಸಾಧ್ಯ.
ಸಂತ ತುಕಾರಾಮರು “ಭೇದಗಳನ್ನೆಲ್ಲ ನಾನು ಸುಡುವೆನು. ಇದಕ್ಕೆ ವೇದವೇ ಪ್ರಮಾಣವು” ಎಂದು ಪ್ರತಿಜ್ಞೆಯನ್ನು ಮಾಡಿದರು. ಸಮಾಜದ ಕಲ್ಯಾಣವನ್ನು ಬಯಸುವ ಪ್ರತಿಯೊಬ್ಬರೂ ಈ ಪ್ರತಿಜ್ಞೆಯನ್ನು ಮಾಡಿಯೇ ತೀರಬೇಕು.
ಭಾರತೀಯ ಸಂಸ್ಕೃತಿಯ ಉಪಾಸಕರೇ! ಈವರೆಗೆ ಮಾಡಿರುವ ಪಾಪವೇ ಸಾಕಷ್ಟಾಯಿತು. ಏಳಿ! ಹರಿಜನರನ್ನು ಹತ್ತಿರ ಕರೆಯಿರಿ. ಪದದಲಿತರೆಲ್ಲರನ್ನೂ ಪ್ರೀತಿಯಿಂದ ಅಪ್ಪಿಕೊಳ್ಳಿ. ನಾವೆಲ್ಲರೂ ಒಂದೇ ದೇವರ ಮಕ್ಕಳು. ನಿರ್ಮಲವಾದ, ಶುಭ್ರವಾದ ಒಂದೇ ಚೈತನ್ಯದ ರೂಪಗಳೇ. ನಾವು ಪ್ರೇಮಪೂರ್ಣರಾದಷ್ಟೂ ಅದ್ವೈತರಾದಷ್ಟೂ ಹೆಚ್ಚು ಆನಂದದಿಂದ, ಭಾಗ್ಯದಿಂದ ಬಾಳುವೆವು.
ನೀವು ಇನ್ನೊಬ್ಬರನ್ನು ತಿರಸ್ಕರಿಸಿದರೆ, ನೀವೂ ತಿರಸ್ಕರಿಸಲ್ಪಡುವಿರಿ. ಮತ್ತೊಬ್ಬರನ್ನು ಕೀಳಾಗಿ ಕಂಡರೆ, ನೀವೇನು ಆರಾಧಿಸಲ್ಪಡುವುದಿಲ್ಲ. ನಾವು ಉಣ್ಣುತ್ತಿರುವುದು ನಮ್ಮ ಪಾಪದ ಫಲಗಳನ್ನೇ, ದಾಸ್ಯವನ್ನು ಬಿತ್ತಿದ್ದೆವು. ಈಗ ಅದನ್ನೆ ಉಣ್ಣುತ್ತಿದ್ದೇವೆ.
ಹೆಂಗಸರ ಮೇಲೆ ಹೇರಲಾದ ಗಂಡಸರ ಗುಲಾಮಗಿರಿ, ಬುದ್ಧಿವಂತರು ಬುದ್ಧಿಹೀನರ ಮೇಲೆ ನಡೆಸುವ ಗುಲಾಮಗಿರಿ, ಅಸ್ಪೃಶ್ಯರ ಮೇಲೆ ಗುಲಾಮಗಿರಿ ಮೊದಲಾದ ನೂರುಮುಖದ ಗುಲಾಮಗಿರಿಯನ್ನು ಹುಟ್ಟಿಸಿ ಬೆಳೆಸಿದೆವು. ಪರಿಣಾಮ… ಇಂದು ನಾವು ಸಂಪೂರ್ಣವಾಗಿ ದಾಸ್ಯದಲ್ಲಿ ಬೀಳುವಂತಾಯಿತು. ಇದರಿಂದ ಹೊರಬಂದು ಸಮಾಜವು ಮುಂದುವರೆಯಬೇಕು, ಮೇಲಕ್ಕೇರಬೇಕು ಎಂದಾದರೆ, ಅದಕ್ಕೆ ವಿಶ್ವವನ್ನೇ ಪ್ರೀತಿಸುವ ಮಹಾಪುರುಷರ ಅವಶ್ಯಕತೆ ಇದೆ. “ಸಂತೋ ತಪಸಾ ಭೂಮಿಂ ಧಾರಯಂತಿ” : ಸಂತರು ತಮ್ಮ ಪ್ರೇಮ ಮತ್ತು ತಪಶ್ಚರ್ಯೆಗಳಿಂದ ಸಮಾಜಧಾರಣೆ ಮಾಡುತ್ತಾರೆ – ಎಂಬ ಮಾತಿನಂತೆ ಅವರು ಪ್ರೀತಿಯ ಕಡಲನ್ನೇ ಉಕ್ಕೇರಿಸಿದರೆ ನಮ್ಮ ಜೀವನದಲ್ಲಿ ಪ್ರೇಮ ಬಿಂದುಗಳು ಅವಶ್ಯವಾಗಿ ಕಾಣತೊಡಗುತ್ತವೆ.
ಅದ್ವೈತವನ್ನು ಅಳವಡಿಸಿಕೊಂಡ ನಮ್ಮ ಪೂರ್ವಜರು ತಮ್ಮ ಬದುಕಿನಲ್ಲಿ ಸಂತಸದ ಹೊಳೆಯನ್ನೇ ಹರಿಸಿದರು. ಆದರೆ ನಾವು ಸ್ವಯಂ ಭೇದಗಳನ್ನು ಸೃಷ್ಟಿಸಿಕೊಳ್ಳತ್ತೂ, ಬೇರೆಯವರು ಅದರ ಲಾಭ ಪಡೆಯಲು ಅವಕಾಶ ನೀಡುತ್ತಾ ಸಾಗಿದ್ದೇವೆ. ಭೇದವನ್ನು ಅಭೇದದಿಂದ ಒಡೆಯಬೇಕು. ಆದರೆ ನಾವು ಭೇದಕ್ಕೆ ಭೇದವನ್ನು ಸೇರಿಸುವ ಕೆಲಸ ಮಾಡುತ್ತಿದ್ದೇವೆ.
ಆದ್ದರಿಂದ, ನಾವು ಹೊಸತೇನೂ ಮಾಡಬೇಕಿಲ್ಲ; ನಮ್ಮ ಹಿರಿಯರು ಅನುಸರಿಸಿದ ಅಭೇದ ಬುದ್ಧಿಯನ್ನು, ಅದ್ವೈತವನ್ನೇ ಅನುಸರಿಸಿದರೆ ಸಾಕು. ಭಾರತ ಭೂಮಿಯಲ್ಲಿ ಮೊದಲು ಒಗ್ಗಟ್ಟು ಸಾಧಿಸೋಣ ಸಾಕು. ಅದಕ್ಕಾಗಿ ಮೊದಲುನಮ್ಮಲ್ಲಿರುವ ಕ್ಷುದ್ರ ಭಾವನೆಗಳನ್ನು ನಾವು ಕಿತ್ತೆಸೆಯೋಣ. ಅನಂತರ ಇತರ ಜನಾಂಗಗಳತ್ತ ಹೋಗುವ ಚಿಂತನೆ ನಡೆಸಬಹುದು.
ಪಾಂಡುರಂಗ ಸದಾಶಿವ ಸಾನೆ, ಮಹಾರಾಷ್ಟ್ರದಲ್ಲಿ ಆಗಿಹೋದ (1899 – 1950) ಚಿಂತಕ, ಲೇಖಕ, ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತ. ಇವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು. ಮರಾಠಿ ಭಾಷೆಯಲ್ಲಿ ಇವರು ಹಲವು ಕೃತಿಗಳನ್ನು ರಚಿಸಿದ್ದು, ಅವುಗಳಲ್ಲಿ ಶ್ಯಾಮಾ ಚಿ ಆಯಿ ಮತ್ತು ಭಾರತೀಯ ಸಂಸ್ಕೃತಿ ಮುಖ್ಯವಾದವು. ಈ ಲೇಖನವನ್ನು ‘ಭಾರತೀಯ ಸಂಸ್ಕೃತಿ’ ಪುಸ್ತಕದಿಂದ ಆಯ್ದುಕೊಳ್ಳಲಾಗಿದೆ.
1 Comment