ಗೆಳೆತನದ ಕುರಿತು….. : ಖಲೀಲ್ ಗಿಬ್ರಾನನ ‘ಪ್ರವಾದಿ’

ಚೇತನವನ್ನು ಆಳವಾಗಿಸುವುದರ ಹೊರತಾಗಿ ಬೇರೆ ಯಾವ ಉದ್ದೇಶವೂ ಇರದಿರಲಿ ಗೆಳೆತನಕ್ಕೆ ~ ಖಲೀಲ್ ಗಿಬ್ರಾನ್ | ಕನ್ನಡಕ್ಕೆ : ಚಿದಂಬರ ನರೇಂದ್ರ

ನಿಮ್ಮ ಗೆಳೆಯ,
ನಿಮ್ಮ ಸಂತೃಪ್ತಿಯ ಕಾರಣ.
ನೀವು ಪ್ರೀತಿಯಿಂದ ಬಿತ್ತುವ,
ಕೃತಜ್ಞತೆಯಿಂದ ಕಟಾವು ಮಾಡುವ
ನಿಮ್ಮದೇ ಸ್ವಂತ ಹೊಲ ಅವನು.

ಹಸಿವಾದಾಗ ಅವನ ಬಳಿಯೇ ಧಾವಿಸುತ್ತೀರಿ
ಸಮಾಧಾನಕ್ಕಾಗಿ ಅವನನ್ನೇ ಹುಡುಕುತ್ತೀರಿ

ಆದ್ದರಿಂದ
ಅವನೇ ನಿಮ್ಮ ಅಡುಗೆ ಒಲೆ,
ಅವನೇ ನಿಮ್ಮ ಬೆಂಕಿಗೂಡು.

ನಿಮ್ಮ ಗೆಳೆಯ,
ನಿಮ್ಮೆದುರು ಮನ ಬಿಚ್ಚಿ ಮಾತಾಡುವಾಗ
ನೀವು ಉಹೂಂ ಎನ್ನಲೂ ಹೆದರುವುದಿಲ್ಲ
ಹೂಂ ಎನ್ನಲೂ.

ಅವನು ಮಾತಾಡದೇ ಸುಮ್ಮನಿರುವಾಗಲೂ
ನಿಮ್ಮ ಹೃದಯ,
ಅವನ ಹೃದಯದ ಮಾತ ಕೇಳುವುದನ್ನು ನಿಲ್ಲಿಸುವುದಿಲ್ಲ ;

ಅಂತೆಯೇ ಗೆಳೆತನದಲ್ಲಿ
ಮಾತುಗಳಿಲ್ಲದಿರುವಾಗಲೂ
ವಿಚಾರಗಳು, ಬಯಕೆಗಳು, ನಿರೀಕ್ಷೆಗಳು
ಹುಟ್ಟುತ್ತಲೇ ಇರುತ್ತವೆ ಮತ್ತು
ಪರಸ್ಪರರ ನಡುವೆ ಹೇಳಿಕೊಳ್ಳಲಾಗದ ಖುಷಿಯಿಂದ
ವಿನಿಮಯವಾಗುತ್ತಲೇ ಇರುತ್ತವೆ.

ಗೆಳೆಯ ದೂರಾದಾಗ ದುಃಖಿಸಬೇಡಿ ;

ಅವನಲ್ಲಿ ಅತಿ ಹೆಚ್ಚಾಗಿ ಇಷ್ಟವಾಗೋದು.
ನಿಮಗೆ ಅವನ ಅನುಪಸ್ಥಿತಿಯಲ್ಲೇ
ಹೆಚ್ಚು ನಿಚ್ಚಳವಾಗಿ ಕಾಣಿಸಬಹುದು;
ಬೆಟ್ಟ ಹತ್ತುವವನಿಗಿಂತ ದೂರ ನಿಂತವನಿಗೇ
ಬೆಟ್ಟ ಹೆಚ್ಚು ಸ್ಪಷ್ಟವಾಗಿ ಕಾಣುವಂತೆ.

ಚೇತನವನ್ನು ಆಳವಾಗಿಸುವುದರ ಹೊರತಾಗಿ
ಬೇರೆ ಯಾವ ಉದ್ದೇಶವೂ ಇರದಿರಲಿ ಗೆಳೆತನಕ್ಕೆ.

ಪ್ರೇಮ, ತನ್ನ ನಿಗೂಢತೆಯನ್ನು ಮಾತ್ರ
ಒರೆಗೆ ಹಚ್ಚ ಬಯಸುವುದಾದರೆ
ಅದು ಪ್ರೇಮವೇ ಅಲ್ಲ,
ಬದಲಾಗಿ ಒಂದು ಜಾಲ ಮಾತ್ರ,
ಉಪಯೋಗಕ್ಕೆ ಬಾರದ್ದನ್ನು ಮಾತ್ರ ಹಿಡಿಯುವ
ನಿರರ್ಥಕ ಜಾಲ.

ನಿಮ್ಮ ಅತ್ತ್ಯುತ್ತಮ, ನಿಮ್ಮ ಗೆಳೆಯನಿಗಾಗಿರಲಿ.

ನಿಮ್ಮ ಜೀವನದಲೆಯ ಇಳಿತ
ಅವನಿಗೆ ಗೊತ್ತಿರಲಿ ಎಂದು ಬಯಸುವಿರಾದರೆ,
ಅದರ ಉಬ್ಬರದ ಮಾಹಿತಿಯೂ ಅವನಿಗಿರಲಿ.

ಗೆಳೆಯ, ಕೇವಲ ಕಾಲಹರಣಕ್ಕಲ್ಲ.
ಬದುಕಿನ ಘಳಿಗೆಗಳು ಸಾರ್ಥಕವಾಗಲು
ಅವನನ್ನು ಬಯಸಿರಿ.

ಅವ, ನಿಮ್ಮ ಅವಶ್ಯಕತೆಗಳನ್ನು ಪೂರೈಸಬಲ್ಲನೇ ಹೊರತು
ನಿಮ್ಮ ಪೊಳ್ಳುತನವನ್ನು ಪೋಷಿಸುವುದಿಲ್ಲ.
ಗೆಳೆತನದ ಮಾಧುರ್ಯದಲ್ಲಿ
ಹರುಷವಿರಲಿ, ಹರುಷದ ಕೊಡು ಕೊಳ್ಳುವಿಕೆಯಿರಲಿ.

ಏಕೆಂದರೆ,
ಇಂಥ ಪುಟ್ಟ ಪುಟ್ಟ ಇಬ್ಬನಿ ಹನಿಗಳಲ್ಲಿಯೇ
ಹೃದಯ ತನ್ನ ಮುಂಜಾವನ್ನು ಕಾಣುವುದು,
ಹೊಸ ಹುರುಪು ಕಂಡುಕೊಳ್ಳುವುದು.

1 Comment

Leave a Reply to ಮಾತು : ಖಲೀಲ್ ಗಿಬ್ರಾನನ ‘ಪ್ರವಾದಿ’ ~ ಅಧ್ಯಾಯ 19 – ಅರಳಿಮರCancel reply