“ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ…” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 4.2

ನೀವು ವೈರುಧ್ಯವನ್ನು ಬಳಸಿದಾಗ ಮಾತ್ರ ಅಸ್ತಿತ್ವವನ್ನು ಗುರುತಿಸಬಲ್ಲಿರಾದರೆ ಅದು ಅಸ್ತಿತ್ವವನ್ನು ಮಿಥ್ಯೀಕರಿಸಿದಂತೆ. ಏಕೆಂದರೆ, ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ… ! | ಓಶೋ ರಜನೀಶ್ ; ಕನ್ನಡಕ್ಕೆ : ಚಿದಂಬರ ನರೇಂದ್ರ

ಅಧ್ಯಾಯ 4 : Return to the root (ಭಾಗ 2)

ಮನಸ್ಸಿನ ಸ್ವಭಾವವೇ
ವೈರುಧ್ಯಗಳನ್ನು ಸಮೀಕರಿಸುವುದು.
ಈ ವೈರುಧ್ಯಗಳ ಸಹಾಯವಿಲ್ಲದೇ ಹೋದರೆ
ಮನಸ್ಸಿಗೆ ಏನೂ ಅರ್ಥವಾಗುವುದಿಲ್ಲ.

‘ಬೆಳಕು’ ಎಂದರೇನು ಎಂಬ ಪ್ರಶ್ನೆಗೆ
ಮನಸ್ಸು ಏನು ಉತ್ತರ ಹೇಳಬಲ್ಲದು ?
ಕೂಡಲೇ ಕತ್ತಲೆಯನ್ನು ಸಹಾಯಕ್ಕಾಗಿ ಕರೆಯಲಾಗುತ್ತದೆ,
ಯಾವುದು ಕತ್ತಲೆಯಲ್ಲವೋ
ಅದನ್ನು ಬೆಳಕು ಎಂದು ಘೋಷಿಸಲಾಗುತ್ತದೆ.
ಕತ್ತಲೆಗೂ ಅದೇ ಥರದ ವ್ಯಾಖ್ಯಾನ,
ಯಾವುದು ಬೆಳಕಲ್ಲವೋ ಅದೇ ಕತ್ತಲೆ.

ಹೌದು, ವೈರುಧ್ಯದೊಂದಿಗೆ ಸಮೀಕರಿಸದೆ
ಮನಸ್ಸು ಯಾವುದನ್ನೂ ವ್ಯಾಖ್ಯಾನ ಮಾಡುವುದಿಲ್ಲ.
ಸಾವು ಇಲ್ಲದಿದ್ದರೆ ಬದುಕು ಅರ್ಥವಾಗುವುದಿಲ್ಲ,
ದುಃಖ ಇಲ್ಲದಾಗ ಸುಖವನ್ನು ಹೇಗೆ ವ್ಯಾಖ್ಯಾನ ಮಾಡುತ್ತೀರಿ?
ನೀವು ಆರೋಗ್ಯವಂತರಿರಬಹುದು ಆದರೆ
ಯಾವುದು ಅನಾರೋಗ್ಯ ಎನ್ನುವುದು ಗೊತ್ತಿಲ್ಲದಾಗ
ಹೇಗೆ ನಿಮ್ಮನ್ನು ಆರೋಗ್ಯವಂತರೆಂದು ಕರೆದುಕೊಳ್ಳುತ್ತೀರಿ?
ಸೈತಾನ ಇಲ್ಲದಾಗ ಸಂತನೂ ಇಲ್ಲ.

ಆದರೆ ನೀವು ವೈರುಧ್ಯವನ್ನು ಬಳಸಿದಾಗ ಮಾತ್ರ
ಅಸ್ತಿತ್ವವನ್ನು ಗುರುತಿಸಬಲ್ಲಿರಾದರೆ ಅದು
ಅಸ್ತಿತ್ವವನ್ನು ಮಿಥ್ಯೀಕರಿಸಿದಂತೆ
ಏಕೆಂದರೆ ಅಸ್ತಿತ್ವದಲ್ಲಿ ವೈರುಧ್ಯಗಳಿಲ್ಲ.

ಮನಸ್ಸು ವೈರುಧ್ಯಗಳ ಮೇಲೆ ಸವಾರಿ ಮಾಡಿದರೆ
ಅಸ್ತಿತ್ವ ಅದ್ವೈತದ ಬೆನ್ನು ಏರುತ್ತದೆ.

ಹಗಲು ಮತ್ತು ರಾತ್ರಿಗಳ ನಡುವೆ
ಸೀಮಾರೇಖೆ ಇದೆಯೇ?
ಯಾವಾಗ ಹಗಲು ಮುಗಿಯುತ್ತದೆ ?
ಯಾವಾಗ ರಾತ್ರಿ ಶುರುವಾಗುತ್ತದೆ ?
ಇವುಗಳ ನಡುವೆ ಅಂತರ ಇದ್ದಾಗ ಮಾತ್ರ
ಸೀಮಾರೇಖೆ ಎಳೆಯಬಹುದು.
ಆದರೆ ಹಾಗಿಲ್ಲ
ಹಗಲು ಸುಮ್ಮನೇ ರಾತ್ರಿಯಲ್ಲಿ ಕರಗಿ ಹೋಗುತ್ತದೆ ಹಾಗು
ರಾತ್ರಿ ಸದ್ದುಗದ್ದಲವಿಲ್ಲದೇ ಬೆಳಕಿನಲ್ಲಿ ಒಂದಾಗುತ್ತದೆ.

ಬದುಕು ಒಂದು, ಅಸ್ತಿತ್ವ ಒಂದು
ಆದರೆ
ಮನಸ್ಸಿಗೆ ಮಾತ್ರ ದ್ವಂದ್ವ.

ಆದ್ದರಿಂದಲೇ ನೀವು
ಆಯ್ಕೆಗಳನ್ನು ಆಯ್ದುಕೊಳ್ಳುತ್ತ ಹೋದಂತೆ
ಮೂಲದ ವಿಳಾಸವನ್ನು ಮರೆಯುತ್ತ ಹೋಗುತ್ತೀರಿ.
ಬದುಕಿನ ಸುಳಿಗೆ ಸಿಲುಕುತ್ತೀರಿ
ಸಾವಿಗೆ ಹೆದರಲು ಶುರು ಮಾಡುತ್ತೀರಿ.
ಪ್ರೀತಿಯನ್ನು ಅಪ್ಪಿಕೊಳ್ಳುತ್ತೀರಿ
ದ್ವೇಷ ಎಂದರೆ ಗಾಬರಿಯಾಗುತ್ತೀರಿ.
ಒಳ್ಳೆಯದು – ಕೆಟ್ಟದ್ದು ಎಂದು ಗೋಳಾಡುತ್ತೀರಿ.
ದೇವರಿಗೆ ದೀನರಾಗುತ್ತೀರಿ.
ಸೈತಾನನಿಗೆ ಹೆದರುತ್ತೀರಿ.

ಆದರೆ ಹಾಗಲ್ಲ.

ಬದುಕು ಒಂದು, ದೇವ- ಸೈತಾನ ಒಂದು.
ಎಲ್ಲಿ ದೈವತ್ವ ಮುಗಿದು ರಾಕ್ಷಸತ್ವ ಶುರುವಾಗುತ್ತದೆ
ಎಂದು ಗುರುತಿಸಲಾಗುವುದಿಲ್ಲ.
ಆದರೆ ಮನಸ್ಸಿಗೆ ಹೀಗೆ ಅರ್ಥವಾಗುವುದಿಲ್ಲ.
ಅದು ಒಂದನ್ನು ಇನ್ನೊಂದರ ವಿರುದ್ಧ ಇಟ್ಟು ನೋಡುತ್ತದೆ
ಆಗಲೇ ನೀವು ಆಯ್ಕೆಗೆ ಮುಂದಾಗುತ್ತೀರಿ
ಮತ್ತೆ ಗೊಂದಲದ ವಿಷವೃತ್ತಕ್ಕೆ ಸಿಲುಕುತ್ತೀರಿ.

ನೆನಪಿನಲ್ಲಿರಲಿ
‘ಆಯ್ಕೆ ಮಾಡದೇ ಇರುವುದು’ ನಿಮ್ಮ ಆಯ್ಕೆಯಾಗದಿರಲಿ.
ಸೊಸಾನ್ ಆಗಲಿ, ನಾನಾಗಲಿ, ಜಿಡ್ಡು ಆಗಲಿ
ನೀವು ನಮ್ಮ ಮಾತು ಕೇಳುವಾಗ ನಮ್ಮ
‘ಆಯ್ಕೆ ಮಾಡದೇ ಇರುವ ‘ ಪರಿಕಲ್ಪನೆ ಕೇಳಿ
ಭಾವ ಪರವಶರಾಗದಿರಿ
ನಿಮ್ಮ ಮನಸ್ಸು ಈ ಶಬ್ದ ಕೇಳಿದೊಡನೆ
ಉದ್ರೇಕಗೊಳ್ಳುತ್ತದೆ.
ಒಂದು ಬಗೆಯ ದಿವ್ಯ ಆನಂದ ನಿಮ್ಮಲ್ಲಿ ಮನೆ ಮಾಡುತ್ತದೆ.
ಆಗಲೇ ನಿಮ್ಮ ಮನಸಿಗೆ ದುರಾಸೆ
ಈ ಭಾವಪರವಶತೆಯನ್ನು ಮತ್ತೆ ಮತ್ತೆ
ಅವುಭವಿಸುವ ಆಸೆ
ಆಗ ನೀವು ಈ ‘ ಆಯ್ಕೆ ಮಾಡದಿರುವ’ ಪರಿಕಲ್ಪನೆಯನ್ನು
ಆಯ್ಕೆ ಮಾಡಿಕೊಳ್ಳುತ್ತೀರಿ.
ಮತ್ತೆ ಹಳೆಯ ಹಳ್ಳಕ್ಕೆ ಬೀಳುತ್ತೀರಿ.

ಈಗ ಸೊಸಾನ್ ನ ಸಾಲುಗಳನ್ನು
ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಿ.

“ಮೂಲಕ್ಕೆ ಮರಳುವುದೆಂದರೆ, ಅರ್ಥಕ್ಕೆ ಲಗ್ಗೆ ಹಾಕಿದಂತೆ
ಆದರೆ ರೂಪವನ್ನು ಬಯಸುವುದೆಂದರೆ, ಮೂಲದ ವಿಳಾಸ ಮರೆತಂತೆ “~ ಸೊಸಾನ್

ಈ ಜಗನ್ನಾಟಕದ ಅರ್ಥವಾದರೂ ಏನು?
ಈ ಮರಗಳು, ಮನುಷ್ಯರು, ಪ್ರಾಣಿಗಳು, ಪಕ್ಷಿಗಳು
ಇರುವುದಾದರೂ ಏತಕ್ಕೆ?
ಎಲ್ಲಿ ಹುಡುಕುವುದು ಅರ್ಥ ?

ಮನಸ್ಸು, ಬದುಕಿನ ಅರ್ಥವನ್ನು
ಬದುಕಿನ ಗುರಿಯಲ್ಲಿ ಹುಡುಕುತ್ತದೆ .

ಆದರೆ ಸೊಸಾನ್ ಹೇಳುತ್ತಾನೆ,

ಬದುಕಿನ ಅರ್ಥ ಇರೋದು
ಭವಿಷ್ಯದಲ್ಲಲ್ಲ, ಬಯಕೆಯಲ್ಲಿ ಅಲ್ಲ, ಗುರಿಯಲ್ಲಿ ಅಲ್ಲ.
ಅರ್ಥ ಬೇಕಾದರೆ ಮೂಲಕ್ಕೆ ಮರಳಬೇಕು.

ಅರ್ಥ ಅನ್ನೋದು ಏನಾದರೂ ಇದ್ದರೆ
ಅದು ಬೀಜದಲ್ಲಿ ಇರಬೇಕಲ್ಲವೆ?
ಬೀಜದಲ್ಲಿ ಇರದ ಯಾವುದೂ
ಬದುಕಿನಲ್ಲಿ ಕಾಣುವುದಿಲ್ಲ.
ಶೂನ್ಯದಲ್ಲಿ ಏನೂ ಹುಟ್ಟುವುದಿಲ್ಲ.
ಭವಿಷ್ಯ, ಗುರಿ ಅದು ಏನೇ ಇದ್ದರೂ
ಅದು ಬೀಜದಲ್ಲಿಯೇ ಇರಬೇಕು.

ಹೂವು, ಮರದ ಅರ್ಥ.
ಮರ ಹೂವಿನಿಂದ ಸಿಂಗಾರಗೊಂಡಾಗ
ಭಾವ ಪರವಶವಾಗುತ್ತದೆ, ಹಾಡುತ್ತದೆ, ಕುಣಿಯುತ್ತದೆ.
ಹೌದು ಹೂವು, ಮರದ ಪರಮ ಸಿದ್ಧಿ.
ಆದರೆ ಆ ಹೂವಿನ ಹುಟ್ಟಿನ ಗುಟ್ಟು ಇರೋದು
ಆ ಮರದ ಬೀಜದಲ್ಲಿಯೇ ಅಲ್ಲವೆ?

ಆದಿ ಅಂತ್ಯ ಎರಡೂ ಒಂದೇ.
ಜೀಸಸ್ ಹೇಳಿರುವುದೂ ಅದೇ ತಾನೆ?
“ ನಾನೇ ಆದಿ ಪುರುಷ, ನಾನೇ ಅಂತ್ಯ ಪುರುಷ “

(ಮುಂದುವರೆಯುತ್ತದೆ…….)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/07/29/osho-28/

Leave a Reply