-
ಸಾಮಾನ್ಯವಾಗಿ ಎಲ್ಲರೂ ಗೀತಾ ಪಠಣದ ಆರಂಭದಲ್ಲಿ ಒಂಭತ್ತು ಧ್ಯಾನ ಶ್ಲೋಕಗಳನ್ನು ಹೇಳುವ ರೂಢಿ ಇದೆ. ಇವು ಸೊಗಸಾದ ಭಾಷಾ ಸೌಂದರ್ಯವುಳ್ಳ , ಲಯಬದ್ಧವಾದ, ಭಕ್ತಿಪೂರ್ಣವಾದ ಶ್ಲೋಕಗಳಾಗಿವೆ…
- ಪಾರ್ಥಾಯ ಪ್ರತಿಬೋಧಿತಾಂ ಭಗವತಾ ನಾರಾಯಣೇನ ಸ್ವಯಂ,
- ವ್ಯಾಸೇನ ಗ್ರಥಿತಾಂ ಪುರಾಣಮುನಿನಾ ಮಧ್ಯೇ ಮಹಾಭಾರತಮ್ |
- ಅದ್ವೈತಾಮೃತವರ್ಷಿಣೀಂ ಭಗವತೀಂ ಅಷ್ಟಾದಶಾಧ್ಯಾಯಿನೀಮ್
- ಅಂಬ ತ್ವಾಮನುಸಂದಧಾಮಿ ಭಗವದ್ಗೀತೆ ಭವದ್ವೇಷಿಣೀಮ್ || ೧ ||
ತಾತ್ಪರ್ಯ : ಅಮ್ಮ (ಅಂಬ) ಭಗವದ್ಗೀತೆ , ಭಗವಂತನಾದ ನಾರಾಯಣನು ತಾನೇ ಅರ್ಜುನನಿಗೆ ಹೇಳಿದ್ದಾಗಿಯೂ, ಪುರಾಣಗಳನ್ನು ಬರೆದ ಋಷಿಗಳಾದ ವ್ಯಾಸರು ಮಹಾಭಾರತದ ನಡುವೆ ಪೋಣಿಸಿದ್ದಾಗಿಯೂ, ಅದ್ವೈತವೆಂಬ ಅಮೃತ ಮಳೆಯನ್ನು ಸುರಿಸುವಳಾಗಿಯೂ , ಭಗವತ್ಸ್ವರೂಪಳಾಗಿಯೂ, ಹದಿನೆಂಟು ಅಧ್ಯಾಯ ಉಳ್ಳವಳಾಗಿಯೂ, ಸಂಸಾರ ದುಃಖವನ್ನು ಹೋಗಲಾಡಿಸತಕ್ಕವಳಾಗಿಯೂ ಇರುವ ನಿನ್ನನ್ನು ಧ್ಯಾನಿಸುತ್ತೇನೆ.
- ನಮೋsಸ್ತು ತೇ ವ್ಯಾಸ ವಿಶಾಲಬುದ್ಧೆ ಫುಲ್ಲಾರವಿಂದಾಯತಪತ್ರನೇತ್ರ |
- ಯೇನ ತ್ವಯಾ ಭಾರತತೈಲಪೂರ್ಣಃ ಪ್ರಜ್ವಲಿತೋ ಜ್ಞಾನಮಯಃ ಪ್ರದೀಪಃ || ೨ ||
ತಾತ್ಪರ್ಯ : ಭಾರತವೆಂಬ ಸಮೃದ್ಧಿಯಾದ ಎಣ್ಣೆಯುಳ್ಳ ಜ್ಞಾನಮಯವೆಂಬ ದೀಪವನ್ನು ಹಚ್ಚಿದವರಾಗಿಯೂ , ಅರಳಿದ ಕಮಲದಂತೆ ಅಗಲವಾದ ಕಣ್ಣುಳ್ಳವರಾಗಿಯೂ , ವಿಸ್ತಾರವಾದ ಬುದ್ಧಿಯುಳ್ಳವರಾಗಿಯೂ , ಇರುವ ವ್ಯಾಸರೇ ನಿಮಗೆ ನಮಸ್ಕಾರ.
- ಪ್ರಪನ್ನಪಾರಿಜಾತಾಯ ತೋತ್ರವೇತ್ರೈಕಪಾಣಯೆ |
- ಜ್ಞಾನಮುದ್ರಾಯ ಕೃಷ್ಣಾಯ ಗೀತಾಮೃತದುಹೇ ನಮಃ || ೩ ||
ತಾತ್ಪರ್ಯ : ಶರಣರಿಗೆ ಕಲ್ಪವೃಕ್ಷವಾದವನೂ , ಒಂದುಕೈಯಲ್ಲಿ ಚಾಟಿಯಿಂದ ಕೂಡಿದ ಬೆತ್ತ ಹಿಡಿದಿರುವವನೂ, ಜ್ಞಾನೋಪದೇಶ ಲಕ್ಷಣವನ್ನು ತೋರಿಸುವ ಹಸ್ತಮುದ್ರೆಯುಳ್ಳವನೂ, ಗೀತೆಯೆಂಬ ಅಮೃತವನ್ನು ಕರೆಯುತ್ತಿರುವವನೂ ಆದ ಕೃಷ್ಣನಿಗೆ ಅಡ್ಡಬೀಳುತ್ತೇನೆ (ನಮಸ್ಕರಿಸುತ್ತೇನೆ). ||೩||
- ಸರ್ವೋಪನಿಷದೋ ಗಾವೋ ದೋಗ್ಧಾ ಗೋಪಾಲ ನಂದನಃ|
- ಪಾರ್ಥೋ ವತ್ಸಃ ಸುಧೀರ್ಭೋಕ್ತಾ ದುಗ್ಧಂ ಗೀತಾಮೃತಂ ಮಹತ್ ||೪||
ತಾತ್ಪರ್ಯ : ಎಲ್ಲಾ ಉಪನಿಷತ್ ಗಳೂ ಆಕಳುಗಳು ; ಗೋಪಾಲ ನಂದನನಾದ ಶ್ರೀಕೃಷ್ಣ ಹಾಲು ಕರೆಯುವವನು. ಅರ್ಜುನನು ಕರು. ಹಾಲು ಕುಡಿಯುವವರು ಪಂಡಿತರು ; ಶ್ರೇಷ್ಟವಾದ ಗೀತಾಮೃತವು ಹೀಗೆ ಕರೆದ ಹಾಲು.
- ವಸುದೇವಸುತಂ ದೇವಂ ಕಂಸಚಾಣೂರಮರ್ದನಮ್ |
- ದೇವಕೀ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಮ್ || ೫ ||
ತಾತ್ಪರ್ಯ : ವಸುದೇವನ ಮಗನಾಗಿಯೂ , ದೇವತಾ ಸ್ವರೂಪನಾಗಿಯೂ, ಕಂಸ ಚಾಣೂರ ಮೊದಲಾದವರನ್ನು ಕೊಂದವನಾಗಿಯೂ, ದೇವಕಿಗೆ ಬಹು ಸಂತೋಷವನ್ನು ಉಂಟುಮಾಡುವವನಾಗಿಯೂ , ಜಗತ್ತಿಗೆಲ್ಲಾ ಧರ್ಮವನ್ನು ತಿಳಿಸುವವನಾಗಿಯೂ, ಇರುವ ಕೃಷ್ಣನಿಗೆ ಎರಗುತ್ತೇನೆ.
- ಭೀಷ್ಮದ್ರೋಣತಟಾ ಜಯದ್ರಥಜಲಾ ಗಾಂಧಾರನೀಲೋತ್ಪಲಾ
- ಶಲ್ಯಗ್ರಾಹವತೀ ಕ್ರಪೇಣ ವಹನೀ ಕರ್ಣೇನ ವೇಲಾಕುಲಾ |
- ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರರ್ತಿನೀ
- ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || ೬ ||
ತಾತ್ಪರ್ಯ : ಭೀಷ್ಮ , ದ್ರೋಣ ಎಂಬುವವರು ದಡದಂತೆಯೂ , ಜಯದ್ರಥನು ನೀರಿನಂತೆಯೂ, ಕೌರವರು ಕಲ್ಲು ಬಂಡೆಗಳಂತೆಯೂ, ಶಲ್ಯನು ದೊಡ್ಡ ಮೀನಿನಂತೆಯೂ, ಅಶ್ವತ್ಥಾಮ ವಿಕರ್ಣ ಇವರು ಭಯಂಕರವಾದ ಮೊಸಳೆಗಳಂತೆಯೂ, ದುರ್ಯೋಧನನು ಸುಳಿಯಂತೆಯೂ, ಇದ್ದ ಯುದ್ಧವೆಂಬ ನದಿಯನ್ನು ಪಾಂಡವರು ದಾಟಿದರು, ದಾಟಿಸಿದವನು ಶ್ರೀ ಕೃಷ್ಣನು .
- ಪಾರಾಶರ್ಯವಚಃ ಸರೋಜಮಮಲಂ ಗೀತಾರ್ಥಗಂಧೋತ್ಕಟಮ್
- ನಾನಾಖ್ಯಾನಕಕೇಸರಂ ಹರಿಕಥಾಸಂಬೋಧನಾಬೋಧಿತಮ್ |
- ಲೋಕೆ ಸಜ್ಜನಷಟ್ಪದೈರಹರಹಃ ಪೇಪೀಯಮಾನಂ ಮುದಾ
- ಭೂಯಾದ್ಭಾರತಪಂಕಜಂ ಕಲಿಮಲಪ್ರಧ್ವಂಸಿ ನಃ ಶ್ರೇಯಸೇ || ೭ ||
ತಾತ್ಪರ್ಯ : ಪರಾಶರರ ಮಗನಾದ ವ್ಯಾಸರ ಮಾತುಗಳೆಂಬ ಸರೋವರದಲ್ಲಿ ಹುಟ್ಟಿದ್ದಾಗಿಯೂ , ನಿರ್ಮಲವಾಗಿಯೂ, ಗೀತೆಯೆಂಬ ಶ್ರೇಷ್ಠವಾದ ಗಂಧವನ್ನುಳ್ಳದ್ದಾಗಿಯೂ, ಅನೇಕ ಉಪಕಥೆ ಗಳೆಂಬ ಎಸಳುಗಳನ್ನುಳ್ಳದ್ದಾಗಿಯೂ, ಹರಿಕಥೆಯೆಂಬತಿಳಿವಿನಿಂದ ಅರಳಿದ್ದಗಿಯೂ, ಜಗತ್ತಿನಲ್ಲಿ ಸಜ್ಜನರೆಂಬ ಭ್ರಮರಗಳು ಯಾವಾಗಲೂ ಸಂತೋಷದಿಂದ ಕುಡಿಯುತ್ತಿರುವುದಾಗಿಯೂ , ಕಲಿಯುಗದ ದೋಷವನ್ನು ಕಳೆಯುವುದಾಗಿಯೂ ಇರುವ ಭಾರತವೆಂಬ ಕಮಲವು ನಮಗೆ ಶ್ರೇಯಸ್ಸನ್ನುಂಟುಮಾಡಲಿ.
- ಮೂಕಂ ಕರೋತಿ ವಾಚಾಲಂ ಪಂಗುಂ ಲಂಘಯತೇ ಗಿರಿಮ್ |
- ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ ||೮||
ತಾತ್ಪರ್ಯ : ಯಾರ ಕೃಪೆಯು ಮೂಕನನ್ನು ಮಾತಾಳಿಯನ್ನಾಗಿಯೂ , ಕುಂಟನನ್ನು ಪರ್ವತವನ್ನು ದಾಟುವವನನ್ನಾಗಿಯೂ , ಮಾಡುವುದೋ ಆ ಪರಮಾನಂದ ಸ್ವರೂಪನಾದ ಶ್ರೀಕೃಷ್ಣನನ್ನು ನಮಸ್ಕರಿಸುತ್ತೇನೆ.
- ಯಂ ಬ್ರಹ್ಮಾ ವರುಣೇಂದ್ರ ರುದ್ರ ಮರುತಃ ಸ್ತುನ್ವಂತಿ ದಿವ್ಯೈ ಸ್ತವೈಃ |
- ವೇದೈಃ ಸಾಂಗಪದಕ್ರಮೋಪನಿಷದೈ ರ್ಗಾಯಂತಿ$ ಯಂ ಸಾಮಗಾಃ ||
- ಧ್ಯಾನಾವಸ್ಥಿತ ತದ್ಗತೇನ ಮನಸಾ ಪಶ್ಯಂತಿ ಯಂ ಯೋಗಿನೋ |
- ಯಸ್ಯಾಂತಂ ನ ವಿದುಃ ಸುರಾಸುರಾ ಗಣಾ ದೇವಾಯ ತಸ್ಮೈ ನಮಃ ||೯||
ತಾತ್ಪರ್ಯ : ಯಾವನನ್ನು ಬ್ರಹ್ಮನೂ ವರುಣನೂ ಇಂದ್ರನೂ ಮರುತ್ತುಗಳೂ ದಿವ್ಯವಾದ ಸ್ತೋತ್ರಗಳಿಂದ ಹೊಗಳುತ್ತಾರೋ, ಯಾವನನ್ನು ಸಾಮ ಗಾಯಕರು ಪದ೧ಗಳಿಂದಲೂ, ಕ್ರಮಗಳಿಂದಲೂ ಕೂಡಿರುವ ವೇದಗಳಿಂದ ಗಾನಮಾಡುತ್ತಾರೋ, ಯಾವನನ್ನು ಯೋಗಿಗಳು ಧ್ಯಾನದಲ್ಲಿ ಮನಸ್ಸನ್ನು ಒಮ್ಮಖವಾಗಿ ಮಾಡಿಕೊಂಡು ನೋಡುವರೋ, ಯಾರ ಆಳವನ್ನು ದೇವತೆಗಳೂ, ರಾಕ್ಷಸರೂ, ಯಾರೂ ತಿಳಿಯರೋ, ಆ ದೇವನಿಗೆ ನಮಸ್ಕಾರ.
“ಅಶ್ವತ್ಥಾಮವಿಕರ್ಣಘೋರಮಕರಾ ದುರ್ಯೋಧನಾವರರ್ತಿನೀ
ಸೋತ್ತೀರ್ಣಾ ಖಲು ಪಾಂಡವೈ ರಣನದೀ ಕೈವರ್ತಕಃ ಕೇಶವಃ || ೬ ||”
ಮೇಲೆ “ದುರ್ಯೋಧನಾವರರ್ತಿನೀ” ಬದಲು “ದುರ್ಯೋಧನಾವರ್ತಿನೀ ” ಆಗಬೇಕಲ್ಲವೇ?
“ಯತ್ಕೃಪಾ ತಮಹಂ ವಂದೇ ಯತ್ಕೃಪಾ ತಮಹಂ ವಂದೇ ಪರಮಾಂದಂ ಮಾಧವಂ ||೮||”
ಮೇಲೆ “ಪರಮಾಂದಂ” ಬದಲು “ಪರಮಾನಂದಂ” ಆಗಬೇಕಲ್ಲವೇ?
ಅಕ್ಷರದೋಷದ ಪ್ರಮಾದ ಎತ್ತಿ ತೋರಿದ್ದಕ್ಕೆ ಧನ್ಯವಾದ. ಕ್ಷಮೆ ಇರಲಿ. ತಿದ್ದಿಕೊಳ್ಳಲಾಗುವುದು