ನಿಮ್ಮ ಕಣ ಕಣದಲ್ಲೂ ಬೆಳಕು ತುಂಬಿಕೊಳ್ಳುತ್ತದೆ. ನೀವು ದೀಪ ಸ್ತಂಭವಾಗುತ್ತೀರಿ. ರೂಹು ಮತ್ತು ಖಾಲೀತನ ಎರಡನ್ನೂ ದಾಟಿ ಹೋಗುತ್ತೀರಿ… ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ
Return to the root | ಭಾಗ 4.4
ಒಳಗಿನ ಅರಿವು ಘಟಿಸುತ್ತಿರುವ ಘಳಿಗೆಯಲ್ಲೇ
ರೂಹು ಮತ್ತು ಖಾಲೀತನ ಎರಡನ್ನೂ ನೀವು ದಾಟುತ್ತೀರಿ.
ಖಾಲೀ ಜಗತ್ತಿನಲ್ಲಿ ಘಟಿಸುವ ಬದಲಾವಣೆಗಳನ್ನ
ನಾವು ನಿಜ ಎಂದುಕೊಳ್ಳುವುದು
ಕೇವಲ ನಮ್ಮ ಅಜ್ಞಾನದ ಕಾರಣಕ್ಕಾಗಿ.
ಸತ್ಯದ ಹುಡುಕಾಟ ನಿಲ್ಲಿಸಿ,
ಪರ ವಿರೋಧ ದ ಬಗೆಗಿನ ಚರ್ಚೆಯನ್ನು ನಿಲ್ಲಿಸಿ ~ ಸೊಸಾನ್
****
ಒಳಗಿನ ಅರಿವು ಘಟಿಸುತ್ತಿರುವ ಘಳಿಗೆಯಲ್ಲೇ
ರೂಹು ಮತ್ತು ಖಾಲೀತನ ಎರಡನ್ನೂ ನೀವು ದಾಟುತ್ತೀರಿ.
ಒಳಗಿನ ಅರಿವು ಘಟಿಸಿದಾಗ
ನಿಮ್ಮನ್ನು ಬೆಳಕು ತುಂಬಿಕೊಳ್ಳುತ್ತದೆ
ಈ ಬೆಳಕು ಹೊರಗಿನ ಹಾದಿ ಹಿಡಿದರೆ
ನೀವು ಏನನ್ನು ಬಯಸುತ್ತೀರೋ
ಅದು ಮಾತ್ರ ನಿಮಗೆ ಕಾಣಿಸುತ್ತದೆ.
ಸಂಪತ್ತಿನ ಬಯಕೆ ನಿಮ್ಮಲ್ಲಿ ತೀವ್ರವಾಗಿದ್ದಲ್ಲಿ
ನಿಮ್ಮ ಸಮಸ್ತವೂ ಸಂಪತ್ತಿನ ಮೇಲೆ ಕೇಂದ್ರಿಕೃತವಾಗುತ್ತದೆ,
ಮನುಷ್ಯರು ನಿಮಗೆ ಕಾಣುವುದಿಲ್ಲ
ಕೇವಲ ಅವನ ಸಂಪತ್ತು ನಿಮಗೆ ಗೋಚರವಾಗುತ್ತದೆ.
ಮನುಷ್ಯ ಬಡವನಾಗಿದ್ದಲ್ಲಿ
ನಿಮ್ಮ ಮನಸ್ಸಿನಲ್ಲಿ ಅವನ ಒಂದು ಅಂಶವೂ ದಾಖಲಾಗುವುದಿಲ್ಲ.
ಬೆಳಕು ತನ್ನ ದಾರಿ ಬದಲಿಸಿ ಅಂತರ್ಮುಖವಾದಾಗ
ನಿಮ್ಮ ಕಣ ಕಣದಲ್ಲೂ ಬೆಳಕು ತುಂಬಿಕೊಳ್ಳುತ್ತದೆ.
ನೀವು ದೀಪ ಸ್ತಂಭವಾಗುತ್ತೀರಿ.
ರೂಹು ಮತ್ತು ಖಾಲೀತನ ಎರಡನ್ನೂ ದಾಟಿ ಹೋಗುತ್ತೀರಿ.
ಆಗ ನಿಮಗೆ ಯಾವುದೂ ಕೇವಲ ರೂಹು ಅನಿಸುವುದಿಲ್ಲ,
ಯಾವುದೂ ಖಾಲೀ ಅನಿಸುವುದಿಲ್ಲ.
ಎಲ್ಲೆಲ್ಲೂ ಪೂರ್ಣತೆ ಕಾಣತೊಡಗುತ್ತದೆ.
ನೀವು ಇದನ್ನ ಸತ್ಯ ಅಥವಾ
ಬೇರೆ ಯಾವ ಹೆಸರಿನಿಂದಾದರೂ ಕರೆಯಬಹುದು.
ನೀವೂ ಪೂರ್ಣವಾದಾಗ, ಜಗತ್ತೂ ನಿಮಗೆ ಪೂರ್ಣ.
ಖಾಲೀ ಜಗತ್ತಿನಲ್ಲಿ ಘಟಿಸುವ ಬದಲಾವಣೆಗಳನ್ನ
ನಾವು ನಿಜ ಎಂದುಕೊಳ್ಳುವುದು
ಕೇವಲ ನಮ್ಮ ಅಜ್ಞಾನದ ಕಾರಣಕ್ಕಾಗಿ.
ನೀವು ಕೆಲವರನ್ನು ವೃದ್ಧರು ಎನ್ನುತ್ತೀರಿ,
ಏಕೆಂದರೆ ಅವರ ವಯಸ್ಸನ್ನ ನಿಜ ಎಂದುಕೊಂಡಿದ್ದೀರಿ.
ಆದರೆ ನಿಮಗೆ ನಿಜ ಗೊತ್ತಿಲ್ಲ,
ವಯಸ್ಸು ಭೌತಿಕ ದೇಹಕ್ಕೆ ಮಾತ್ರ ಸಂಬಂಧಿಸಿದ್ದು
ಆತ್ಮಕ್ಕೆ ವಯಸ್ಸಿನ ಭಿಡೆಯಿಲ್ಲ
ಆದ್ದರಿಂದಲೇ ಬಾಲ್ಯ, ಹರೆಯ, ವೃದ್ಧಾಪ್ಯ ಎಲ್ಲ
ರೂಹಿಗೆ ಸಂಬಂಧಪಟ್ಟವು, ನಿಜಕ್ಕಲ್ಲ.
ಧರಿಸಿದ ಬಟ್ಟೆ ಹಳೆಯದಾಗಿದ್ದ ಮಾತ್ರಕ್ಕೆ
ಜನರನ್ನು ವೃದ್ಧರು ಎನ್ನಬಹುದೆ?
ಹೊಸ ಬಟ್ಟೆ ಹಾಕಿಕೊಂಡ ಮಾತ್ರಕ್ಕೆ
ಅವರು ಹರೆಯದವರಾಗಬಹುದೆ?
ದೇಹ ಬಟ್ಟೆಯ ಹಾಗೆ,
ಈಗ ಹೇಳಿ ಬಟ್ಟೆ ಬದಲಾದ ಮಾತ್ರಕ್ಕೆ
ನಿಜ ಬದಲಾಗುವುದೆ?
ನಿಜ ಬದಲಾಗುವುದಿಲ್ಲ,
ನಿಜವನ್ನ ಬದಲಾಯಿಸಲಾಗುವುದಿಲ್ಲ ,
ಬಟ್ಟ ಬದಲಾಗುತ್ತದೆ, ದೇಹ ಬದಲಾಗುತ್ತದೆ
ಆದ್ದರಿಂದ ಅವು ನಿಜವಲ್ಲ.
ಜ್ಞಾನಿಗಳು ಮಾತ್ರ ಈ ಸತ್ಯ ಬಲ್ಲರು.
ರಾಮಕೃಷ್ಣರ ಮರಣ ಸನ್ನಿಹಿತವಾಗಿದೆ
ಎಂದು ವೈದ್ಯರು ಘೋಷಿಸಿದಾಗ
ಸುತ್ತಲಿನ ಎಲ್ಲರೂ ದುಃಖದಿಂದ ಅಳತೊಡಗಿದರು.
ಆಗ ರಾಮಕೃಷ್ಣರು ಹೇಳಿದ ಮಾತು ಇದೇ,
“ ದುಃಖಿಸಬೇಡಿ, ನಾನು ಸಾಯುತ್ತಿಲ್ಲ, ವೈದ್ಯರು ಹೇಳಿದ ಮಾತು
ಕೇವಲ ದೇಹಕ್ಕೆ ಸಂಬಂಧಿಸಿದ್ದು , ವೈದ್ಯರನ್ನ ನಂಬಬೇಡಿ, ನನ್ನನ್ನು ನಂಬಿ”
ರಾಮಕೃಷ್ಣರು ಹೇಳಿದ ಮಾತು ಶಾರದಾ ದೇವಿಗೆ ಅರ್ಥವಾಗಿತ್ತು,
ಅದಕ್ಕೆಂದೇ ಅವರು ವಿಧವೆಯ ಬದುಕನ್ನ ಬದುಕಲೇ ಇಲ್ಲ.
ತಮ್ಮನ್ನು ಆಡಿಕೊಂಡವರಿಗೆ
ಶಾರದಾ ಮಾತೆಯವರು ಕೊಟ್ಟ ಉತ್ತರ,
“ ನನ್ನ ಮದುವೆಯಾಗಿದ್ದು ರಾಮಕೃಷ್ಣರ ಜೊತೆ
ಅವರು ತೊಟ್ಟ ಬಟ್ಟೆಯ ಜೊತೆಯಲ್ಲ,
ರಾಮಕೃಷ್ಣರು ಒಂದು ನಿಜ;
ಆದ್ದರಿಂದಲೇ ಅವರು ಅವಿನಾಶಿ”
ಶಾರದಾ ಮಾತೆ ಪ್ರತೀ ದಿನ
ರಾಮಕೃಷ್ಣರಿಗಾಗಿ ಊಟ ತಯಾರಿಸುತ್ತಿದ್ದರು,
ರಾತ್ರಿ ಮಲಗಲು ಹಾಸಿಗೆ ಸಿದ್ಧಪಡಿಸುತ್ತಿದ್ದರು.
ಊಟ್ಟಕ್ಕೆ, ನಿದ್ದೆಗೆ ರಾಮಕೃಷ್ಣರನ್ನ
ಕೂಗಿ ಕೂಗಿ ಕರೆಯುತ್ತಿದ್ದರು.
ರಾಮಕೃಷ್ಣರು ಜ್ಞಾನಿಯಾಗಿದ್ದರು
ಶಾರದಾ ಮಾತೆ ಜ್ಞಾನಿಯಾಗಿದ್ದರು.
ಸತ್ಯದ ಹುಡುಕಾಟ ನಿಲ್ಲಿಸಿ,
ಪರ ವಿರೋಧ ದ ಬಗೆಗಿನ ಚರ್ಚೆಯನ್ನು ನಿಲ್ಲಿಸಿ.
ಇದು ಬೀಜ ಮಂತ್ರ.
ನಿಮ್ಮಿಂದ ಸತ್ಯದ ಹುಡುಕಾಟ ಹೇಗೆ ಸಾಧ್ಯ?
ನೀವು ಹುಡುಕುತ್ತಿದ್ದೀರಿ ಎಂದರೆ
ನಿಮ್ಮ ಮನಸ್ಸು ಹುಡುಕುತ್ತಿದೆ ಎಂದೇ ಅರ್ಥ.
ಮನಸ್ಸಿಗೆ ಹುಡುಕಾಟ ಸಾಧ್ಯವಿಲ್ಲ
ಆಗಲೇ ಮನಸ್ಸು ಕಪಟ ತಂತ್ರಗಳನ್ನು ಬಳಸುತ್ತದೆ,
ನೀವು ಸತ್ಯವನ್ನು ಕಲ್ಪನೆ ಮಾಡಲು ಶುರು ಮಾಡುತ್ತೀರಿ,
ಸತ್ಯದ ಬಗ್ಗೆ ಕನಸು ಕಾಣಲು ಶುರು ಮಾಡುತ್ತೀರಿ.
ಆದ್ದರಿಂದಲೇ ಭಕ್ತಿಯ ಪರಾಕಾಷ್ಠತೆಯಲ್ಲಿ
ಹಿಂದುಗಳು ಕೃಷ್ಣನನ್ನೂ, ಕ್ರೈಸ್ತರು ಜೀಸಸ್ ನನ್ನೂ
ಅನುಭವಿಸುತ್ತಾರೆ.
ಇದು ಕಪಟ.
ಆದರೆ ಪ್ರಜ್ಞೆಗೆ ಈ ನಾಟಕ ಸಾಧ್ಯವಿಲ್ಲ
ಆದ್ದರಿಂದಲೇ ಪ್ರಜ್ಞೆ, ಹುಡುಕಾಟಕ್ಕೆ ತೊಡಗುವುದಿಲ್ಲ.
ಪ್ರಜ್ಞೆ ಎಂದರೆ ಕೇವಲ ಇರುವಿಕೆ, ಬಯಕೆಯಲ್ಲ.
ಆದರೆ ಹುಡುಕಾಟ ಒಂದು ಬಯಕೆ,
ಈಗಾಗಲೇ ನೀವು ಸಂಪತ್ತು, ಅಧಿಕಾರ,
ಸುಖ, ಪ್ರತಿಷ್ಠೆ ಮುಂತಾದವುಗಳನ್ನು
ಹುಡುಕಾಡಿ ಸೋತಿದ್ದೀರಿ
ಈಗ ದೇವರು, ಸತ್ಯದ ಹುಡುಕಾಟ ಮಾಡುತ್ತಿದ್ದೀರಿ
ಹೆಸರು ಮಾತ್ರ ಬೇರೆ ಬೇರೆ
ನೀವು ಬದಲಾಗಿಲ್ಲ.
ಸತ್ಯವನ್ನ ಹುಡುಕಾಡುವುದು ಸಾಧ್ಯವಿಲ್ಲ
ಬದಲಾಗಿ, ಹುಡುಕಾಟ ನಿಂತಾಗಲೇ
ಸತ್ಯ ನಿಮ್ಮ ಮನೆಯ ಬಾಗಿಲು ತಟ್ಟುವುದು.
ಹುಡುಕಾಡುವವ ಮರೆಯಾದಾಗ
ಸತ್ಯ ನಿಮ್ಮ ಕೈ ಹಿಡಿಯುವುದು.
ಎಲ್ಲ ಬಯಕೆಗಳಿಂದ ಹೊರತಾದಾಗ,
ಯಾವ ಗುರಿಯ ಬಗ್ಗೆಯೂ ಆಸಕ್ತಿ ಇಲ್ಲದಾದಾಗ
ತಕ್ಷಣವೇ ಬೆಳಕು ನಿಮ್ಮನ್ನು ತುಂಬಿಕೊಳ್ಳುವುದು.
ನೀವೇ, ನೀವು ಹುಡುಕುತ್ತಿದ್ದ ಸತ್ಯವಾಗುವಿರಿ
ಕೃಷ್ಣನಾಗುವಿರಿ, ಕ್ರಿಸ್ತನಾಗುವಿರಿ.
ನಿಮ್ಮ ದೃಷ್ಟಿಯಲ್ಲಿ ಯಾವ ಗುರಿಯೂ ಇಲ್ಲ,
ನೀವೇ ಎಲ್ಲದರ ಸ್ರೋತವಾಗಿರುವಿರಿ
ನೀವೇ, ನೀವು ಹುಡುಕಾಡುತ್ತಿದ್ದ ಸತ್ಯವಾಗಿರುವಿರಿ.
ಮುಂದುವರೆಯುತ್ತದೆ…..
ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2019/09/22/ming/
2 Comments