ಆದಿ ಕವಿ, ದಾರ್ಶನಿಕ ಋಷಿ ವಾಲ್ಮೀಕಿ

ವಿಷ್ಣು ಧರ್ಮೋತ್ತರ ಪುರಾಣವು ವಾಲ್ಮೀಕಿಯನ್ನು ವಿಷ್ಣುವಿನ ಅಂಶಾವತಾರವೆಂದೂ, ರಾಮನ ಕಾರ್ಯ ಸಾಧನೆಯ ಕಥನವನ್ನು ಹಬ್ಬಲಿಕ್ಕಾಗಿಯೇ ತ್ರೇತಾ ಯುಗದಲ್ಲಿ ಅವತರಿಸಿದರೆಂದೂ ಹೇಳುತ್ತದೆ. ಜ್ಞಾನಾರ್ಜನಾಕಾಂಕ್ಷಿಗಳು ಫಲಪ್ರಾಪ್ತಿಗಾಗಿ ವಾಲ್ಮೀಕಿಯನ್ನು ಆರಾಧಿಸಬೇಕೆಂದು ಈ ಪುರಾಣವು ನಿರ್ದೇಶಿಸುತ್ತದೆ ~ ಸಾ.ಹಿರಣ್ಮಯಿ

valmikiಮಸಾ ನದಿಯ ತೀರ. ಸಂಧ್ಯಾವಂದನೆಗೆಂದು ವಯೋವೃದ್ಧ ಮುನಿಗಳೊಬ್ಬರು ಏಕಾಂಗಿ ತೆರಳಿರುತ್ತಾರೆ. ಗಾಢಾರಣ್ಯದ ನೀರವತೆಯೇ ಆ ವಾತಾವರಣಕ್ಕೊಂದು ದೈವೀಕಳೆ ಒದಗಿಸಿರುತ್ತದೆ. ಅಲ್ಲಲ್ಲಿ ಹಕ್ಕಿಗಳ ಕಲರವ. ನೆಮ್ಮದಿಯಿಂದ ಓಡಾಡಿಕೊಂಡಿರುವ ಜಿಂಕೆ – ಚಿಗರೆಗಳ ಚಿನ್ನಾಟ. ಇವುಗಳನ್ನೆಲ್ಲ ನೋಡುತ್ತ ಮಂದಸ್ಮಿತರಾಗಿ ಸಾಗುತ್ತಾರೆ ಮುನಿಗಳು. ತಮಸಾ ನದಿಯ ಪಕ್ಕದಲ್ಲೇ ಒಂದು ಮರದ ಮೇಲೆ ಜೋಡಿ ಕ್ರೌಂಚಗಳು ಹಾಡುತ್ತಿರುತ್ತವೆ. ಮುನಿಗಳು ಅರ್ಘ್ಯ ನೀಡುವ ಮುನ್ನ ತಲೆ ಮೇಲೆತ್ತಿ ಆ ಜೋಡಿಯ ಸೊಬಗನ್ನು ಆಸ್ವಾದಿಸುತ್ತಾರೆ. ಅದೇ ಸಮಯಕ್ಕೆ ಎತ್ತಲಿಂದಲೋ ಚಿಮ್ಮಿ ಬಂದ ಬಾಣವೊಂದು ಗಂಡು ಕ್ರೌಂಚವನು ನೆಲಕ್ಕುರುಳಿಸುತ್ತದೆ. ಹೆಣ್ಣು ಕ್ರೌಂಚ ಅನಿರೀಕ್ಷಿತ ಆಘಾತಕ್ಕೆ ಒಳಗಾಗಿ ಚೀರಿಡುತ್ತದೆ. ಮರದಾಚೆಯಿಂದ ಬೇಡನೊಬ್ಬ ಓಡೋಡಿ ಬರುತ್ತಾನೆ. ಅವನನ್ನು ನೋಡಿದ ಮುನಿಗಳು ಅಘ್ರ್ಯಕ್ಕೆ ಸುರುವಿಕೊಂಡಿದ್ದ ನೀರನ್ನೆ ಅವನತ್ತ ಬೀಸಿ ದುಃಖದಿಂದ ಶಪಿಸುತ್ತಾರೆ;
“ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ, ಯತ್ ಕ್ರೌಂಚ ಮಿಥುನಾದೇಕಮವಧೀಃ ಕಾಮಮೋಹಿತಮ್ !” – “ಅಕಾರಣವಾಗಿ ಹಕ್ಕಿಯನ್ನು ಕೊಂದವನೇಮ ಅದರ ಫಲವಾಗಿ ಜೀವನವಿಡೀ ನೀನು ಅಶಾಂತಿಯಿಂದ ತೊಳಲಾಡುವಂತಾಗಲಿ!”
ಇದು ಸಂಸ್ಕೃತದಲ್ಲಿ ಹುಟ್ಟಿಕೊಂಡ ಮೊತ್ತ ಮೊದಲ ಶ್ಲೋಕವೆಂದು ಪ್ರತೀತಿ. ಇದನ್ನು ರಚಿಸಿದ ಆ ಮಹಾಮುನಿಯೇ ಆದಿ ಕವಿ ವಾಲ್ಮೀಕಿ. ಈ ಶ್ಲೋಕದಿಂದ ಹಬ್ಬಿ ಹರಡಿದ ಮಹಾಕಾವ್ಯವೇ ರಾಮಾಯಣ.

ರಾಮಕಥೆಯ ಬರೆದ ಕವಿ
ವಾಲ್ಮೀಕಿ ಬೇಡನನ್ನು ಶಪಿಸಲು ಬಳಸಿದ ಮಾತುಗಳು ಎಂದಿನಂತಿರದೆ ವಿಶಿಷ್ಟ ಓಘದಲ್ಲಿದ್ದವು. ಅವನ್ನು ನೆನೆದು ಸ್ವತಃ ಅವರೇ ವಿಸ್ಮಯ ಪಟ್ಟರು. ಆ ದಿನವಿಡೀ ಕ್ರೌಂಚದ ಘಟನೆ ಹಾಗೂ ಬೇಡನಿಗೆ ನೀಡಿದ ಶಾಪಗಳೇ ಕಾಡುತ್ತ ಉಳಿದವು. `ಮಾ ನಿಷಾದ….’ ಮತ್ತೆ ಮತ್ತೆ ಹೇಳಿಕೊಂಡು ತಮ್ಮ ರಚನೆಗೆ ತಾವೇ ಬೆರಗಾದರು ವಾಲ್ಮೀಕಿ. ಅವರ ಶಾಪದ ಮಾತು ಗದ್ಯ ರೂಪದಲ್ಲಿರದೆ, ಪ್ರಾಸಬದ್ಧವಾಗಿ ಲಯ-ಛಂದಸ್ಸುಗಳಿಂದ ಕೂಡಿತ್ತು. ಇಂಥ ಸೋಜಿಗ ತನ್ನಲ್ಲಿ ಸಂಭವಿಸಿದ್ದು ಹೇಗೆಂಬ ಯೋಚನೆ ಅವರನ್ನು ಬಿಡಲೇ ಇಲ್ಲ. ಅದು ಬಗೆಹರೆದಿದ್ದು ದೇವರ್ಷಿ ನಾರದರು ಬಂದಾಗಲೇ.

ನಾರದರು ವಾಲ್ಮೀಕಿ ಮುನಿಗಳಿಗೆ ಅವರು ಉದ್ಘರಿಸಿದ ಶ್ಲೋಕದ ವೈಶಿಷ್ಟ್ಯವನ್ನು ಮನದಟ್ಟು ಮಾಡುತ್ತಾರೆ. ಯಾವ `ರಾಮ’ನಾಮ ಜಪದಿಂದ ವಾಲ್ಮೀಕಿಯ ಜನ್ಮವಾಗಿತ್ತೋ ಅಂತಹ ರಾಮನ ಕಥೆಯನ್ನು ಸಂಕ್ಷಿಪ್ತವಾಗಿ ವಿವರಿಸುತ್ತಾರೆ. ಅದನ್ನೇ ವಾಲ್ಮೀಕಿ ಮಹರ್ಷಿಗಳು 24,000 ಶ್ಲೋಕಗಳನ್ನೊಳಗೊಂಡ ಮಹಾಕಾವ್ಯವಾಗಿ ರೂಪಿಸುತ್ತಾರೆ. ಹೀಗೆ ತಾವೇ ಹುಟ್ಟುಹಾಕಿದ ಶ್ಲೋಕದ ಲಯಬದ್ಧ ಶೈಲಿಯಲ್ಲಿ `ರಾಮಾಯಣ’ ರೂಪುಗೊಳ್ಳುತ್ತದೆ. ಹಿಂದೊಮ್ಮೆ ನಾರದರಿಂದಲೇ ವಾಲ್ಮೀಕಿಯ ಬದುಕು ಮಹತ್ವದ ತಿರುವು ಕಂಡಿರುತ್ತದೆ. ಈಗ ಮತ್ತೊಂದು ಮಗ್ಗುಲಿನ ದರ್ಶನ ಮಾಡಿಸುತ್ತಾರೆ ನಾರದರು.

ರತ್ನಾಕರ ವಾಲ್ಮೀಕಿಯಾದ ಕಥೆ
ವಾಲ್ಮೀಕಿಯ ಜೀವನದ ಕುರಿತಾಗಿ ಅನೇಕ ಕಥೆಗಳಿವೆ. ಅದರಲ್ಲಿ ಒಂದು ಕಥೆಯ ಪ್ರಕಾರ, ವಾಲ್ಮೀಕಿ ಋಷಿಯಾಗುವ ಮೊದಲು ರತ್ನಾಕರ ಎಂಬ ಹೆಸರಿನ ಒಬ್ಬ ಬೇಡರ ನಾಯಕನಾಗಿರುತ್ತಾನೆ. ಕಾಡಿನ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರನ್ನು ದೋಚಿ ಜೀವನ ನಡೆಸುತ್ತ ಇರುತ್ತಾನೆ. ಒಮ್ಮೆ ನಾರದ ಋಷಿಯು ಕಾಡಿನಲ್ಲಿ ಹಾದುಹೋಗುವಾಗ ರತ್ನಾಕರನು ಅವರನ್ನು ಅಡ್ಡಗಟ್ಟಿ ಬೆದರಿಸಲು ಯತ್ನಿಸುತ್ತಾನೆ. ಆಗ ನಾರದರು ಆತನನ್ನು ಕುರಿತು, `ನಿನ್ನ ಲೂಟಿಯಲ್ಲಿ ಎಲ್ಲರೂ ಪಾಲು ಪಡೆದಂತೆಮ ನಿನ್ನ ಪಾಪ ಸಂಚಯದಲ್ಲಿ ಯಾರಾದರೂ ಪಾಲು ಪಡೆಯುತ್ತಾರೆಯೇ?’ ಎಂದು ಕೇಳುತ್ತಾರೆ. ಆಗ ರತ್ನಾಕರನು ತನ್ನ ಪರಿವಾರದವರು, ಬಂಧುಗಳು, ಏನಿಲ್ಲವೆಂದರೂ ತನ್ನ ಪ್ರಿತಿಪಾತ್ರ ಪತ್ನಿಯರು ಖಂಡಿತವಾಗಿ ಪಾಲು ಪಡೆಯುತ್ತಾರೆ ಎಂದು ಎದೆಯುಬ್ಬಿಸಿ ಹೇಳುತ್ತಾನೆ. ಸರಿ ಹಾಗಾದರೆ ಕೇಳಿಕೊಂಡು ಬಾ ಎನ್ನುತ್ತಾರೆ ನಾರದರು.

ಅದರಂತೆ ರತ್ನಾಕರ ಮನೆಗೆ ತೆರಳಿ ಪತ್ನಿಯರನ್ನು ಕೇಳಲಾಗಿ ಅವರು ನಿರಾಕರಿಸಿಬಿಡುತ್ತಾರೆ. ಬಾಂಧವರು, ಪರಿವಾರದವರೊಂದಿಗೂ ಇದೇ ಅನುಭವವಾಗುತ್ತದೆ. ಇದರಿಂದ `ತಾನು ಮಾಡಿದ ಕರ್ಮಫಲ ತಾನೇ ಉಣ್ಣಬೇಕು. ಹೀಗಿರುವಾಗ ಸತ್ಕರ್ಮಗಳನ್ನೇ ಮಾಡುವುದು ಬುದ್ಧಿವಂತಿಕೆ’ ಎಂಬ ಅರಿವನ್ನು ರತ್ನಾಕರನು ಪಡೆಯುತ್ತಾನೆ. ನಾರದರ ಉಪದೇಶದಂತೆ `ರಾಮ’ ನಾಮ ಜಪ ಮಾಡುತ್ತಾ ವರ್ಷಗಟ್ಟಲೆ ತಪಸ್ಸು ನಡೆಸುತ್ತಾನೆ. ಈ ಸಂದರ್ಭದಲ್ಲಿ ಅಚಲವಾಗಿ ಕುಳಿತಿದ್ದ ರತ್ನಾಕರನ ಮೈಮೇಲೆ ಹುತ್ತ ಬೆಳೆಯುತ್ತದೆ. ತಪಸ್ಸಿನ ಅಂತ್ಯದಲ್ಲಿ ಹುತ್ತ (ಸಂಸ್ಕೃತದಲ್ಲಿ-ವಲ್ಮೀಕ)ವನ್ನು ಭೇದಿಸಿಕೊಂಡು ಹೊರಗೆ ಬಂದಿದ್ದರಿಂದ ಆತನಿಗೆ ‘ವಾಲ್ಮೀಕಿ’ ಎಂಬ ಹೆಸರು ಉಂಟಾಗುತ್ತದೆ.

 

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.