ಸತ್ಯ ಇರುವುದು ಸತ್ಯ; ಇದು ಕೇವಲ ಸಿದ್ಧಾಂತವಲ್ಲ. ಇದನ್ನ ಅನುಭವಿಸಿಯೇ ಕಂಡುಕೊಳ್ಳಬೇಕು. ಸತ್ಯದ ಬಗ್ಗೆ ಯೋಚನೆ ಸಾಧ್ಯವಿಲ್ಲ. ಸತ್ಯದ ಬಗ್ಗೆ ಫಿಲಾಸಫಿ ಸಾಧ್ಯವಿಲ್ಲ… ಅದಕ್ಕೆಂದೆ ಹೇಳುತ್ತೇನೆ, ಪಾಪಿಗಳು ಕಂಡಷ್ಟು ಸತ್ಯದ ಹೊಳಹುಗಳನ್ನ
ತತ್ವಶಾಸ್ತ್ರಜ್ಞರೂ ಕಾಣುವುದು ಸಾಧ್ಯವಿಲ್ಲ…! ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ
Return to the root | ಅಧ್ಯಾಯ 4, ಭಾಗ 5
ಸತ್ಯದ ಹುಡುಕಾಟ ನಿಲ್ಲಿಸಿ,
ಪರ ವಿರೋಧ ದ ಬಗೆಗಿನ ಚರ್ಚೆಯನ್ನು ನಿಲ್ಲಿಸಿ.
ಹಿಂದೂ, ಮುಸ್ಲೀಂ, ಕ್ರಿಶ್ಚಿಯನ್, ಜೈನ್
ಯಾವ ಧರ್ಮದ ಬಗ್ಗೆಯೂ
ಅಭಿಪ್ರಾಯಗಳನ್ನು ಹೊಂದದಿರಿ.
ಧರ್ಮಶಾಸ್ತ್ರಗಳ ಮೇಲೆ ನಿಮ್ಮ ಬದುಕಿನ ಭಾರ ಹಾಕದಿರಿ.
ಇವುಗಳನ್ನ ಬಾಯಿಪಾಠ ಮಾಡಿ
ನೀವು ಪಂಡಿತರಾಗಬಹುದೇ ವಿನಃ ಜ್ಞಾನಿಗಳಾಗುವುದಿಲ್ಲ.
ಈ ಎಲ್ಲ ವಿಷಯ ಸಂಗ್ರಹಣೆ ಬಾಡಿಗೆಯದು.
ಅಭಿಪ್ರಾಯಗಳು ಮನಸ್ಸಿಗೆ ಸಂಬಂಧಿಸಿದ್ದು
ಆದರೆ ಸತ್ಯಕ್ಕೂ ಮನಸ್ಸಿಗೂ ಸಂಬಂಧವಿಲ್ಲ
ಮನಸ್ಸಿನ ಆಟ ಇಲ್ಲದೇ ಹೋದಾಗಲೇ
ಸತ್ಯದ ಅನಾವರಣ.
ಪ್ರಜ್ಞೆ ಕನ್ನಡಿಯ ಹಾಗೆ
ತನ್ನ ಎದುರಿಗೆ ಬಂದ ಎಲ್ಲವನ್ನೂ ಅದು
ಯಾವ ಪಕ್ಷಪಾತವಿಲ್ಲದೆ ಪ್ರತಿಫಲಿಸುತ್ತದೆ.
ನನ್ನ ಎದುರು ನಿಂತಿರುವ ಹೆಣ್ಣು
ಸುಂದರಿಯಾಗಿದ್ದರೆ ಮಾತ್ರ ಅವಳನ್ನು ಪ್ರತಿಫಲಿಸುತ್ತೇನೆ
ಎಂದು ಕನ್ನಡಿ ಎಂದೂ ಹೇಳುವುದಿಲ್ಲ,
ಕನ್ನಡಿಗೆ ಸ್ವಂತ ಅಭಿಪ್ರಾಯಗಳಿಲ್ಲ,
ಪ್ರತಿಫಲಿಸುವುದು ಕನ್ನಡಿಯ ಸಹಜ ಧರ್ಮ.
ವಸ್ತು ತನ್ನೆದುರಿಗಿದ್ದಾಗ ಮಾತ್ರ
ಕನ್ನಡಿ ಪ್ರತಿಫಲಿಸುತ್ತದೆ.
ಪ್ರತಿಫಲಿಸಿದ ಚಿತ್ರವನ್ನ ನೆನಪಿನಲ್ಲಿ ಇಟ್ಟುಕೊಳ್ಳುವುದಿಲ್ಲ.
ಆದರೆ ಕ್ಯಾಮರಾ ಫಿಲ್ಮ್ ಹಾಗಲ್ಲ
ಅದು ತಾನು ಪ್ರತಿಫಲಿಸಿದ ವಸ್ತುವಿನ ಚಿತ್ರವನ್ನು
ನೆನಪಿನಲ್ಲಿಟ್ಟುಕೊಳ್ಳುತ್ತದೆ.
ಈ ಮಾಹಿತಿಗೆ ಸದಾ ಅಂಟಿಕೊಂಡಿರುತ್ತದೆ.
ಇದು ಮನಸ್ಸಿನ ಸ್ವಭಾವ.
ಸತ್ಯ ಇರುವುದು ಸತ್ಯ;
ಇದು ಕೇವಲ ಸಿದ್ಧಾಂತವಲ್ಲ.
ಇದನ್ನ ಅನುಭವಿಸಿಯೇ ಕಂಡುಕೊಳ್ಳಬೇಕು
ಸತ್ಯದ ಬಗ್ಗೆ ಯೋಚನೆ ಸಾಧ್ಯವಿಲ್ಲ
ಸತ್ಯದ ಬಗ್ಗೆ ಫಿಲಾಸಫಿ ಸಾಧ್ಯವಿಲ್ಲ
ಅದಕ್ಕೆಂದೆ ಹೇಳುತ್ತೇನೆ
ಪಾಪಿಗಳು ಕಂಡಷ್ಟು ಸತ್ಯದ ಹೊಳಹುಗಳನ್ನ
ತತ್ವಶಾಸ್ತ್ರಜ್ಞರೂ ಕಾಣುವುದು ಸಾಧ್ಯವಿಲ್ಲ.
ಸತ್ಯದ ಹುಡುಕಾಟ ನಿಲ್ಲಿಸಿ,
ಪರ ವಿರೋಧ ದ ಬಗೆಗಿನ ಚರ್ಚೆಯನ್ನು ನಿಲ್ಲಿಸಿ.
ದ್ವಂದ್ವ ದ ಸ್ಥಿತಿಯಿಂದ ಹೊರಬನ್ನಿ
ಜಾಗರೂಕತೆಯಿಂದ ಇಂಥ ಹುಡುಕಾಟ ನಿಲ್ಲಿಸಿ.
ಒಂದು ಗುಲಗುಂಜಿಯಷ್ಟು ದ್ವಂದ್ವ ಉಳಿದುಕೊಂಡರೂ
ಮನಸ್ಸಿನ ನಿರ್ಧಾರಗಳು ಗೊಂದಲದಲ್ಲಿ ಕಳೆದುಹೋಗುತ್ತವೆ.
ಮೇಲು ಮೇಲಿನ ವಿಷಯಗಳನ್ನು
ಮನಸ್ಸಿನಿಂದ ತೆಗೆದುಹಾಕಿ ಬಿಡಬಹುದು,
ಹೌದು ನಾನು ಹಿಂದೂ ಅಲ್ಲ, ಮುಸ್ಲೀಂ ಅಲ್ಲ, ಕ್ರಿಶ್ಚಿಯನ್ ಅಲ್ಲ,
ಆದರೆ ಆಳದಲ್ಲಿ ಮನೆ ಮಾಡಿಕೊಂಡಿರುವ
ಸಂಗತಿಗಳ ಬಗ್ಗೆ ಏನು ಮಾಡುತ್ತೀರಿ?
ಪಾಪ- ಪುಣ್ಯ, ಒಳ್ಳೆಯದು-ಕೆಟ್ಟದ್ದು
ನೈತಿಕತೆ- ಅನೈತಿಕತೆ?
ಹಾಗಾದರೆ ನೈತಿಕತೆ ಹಿಂದೂ ಅಲ್ಲವೆ? ಕ್ರಿಶ್ಚಿಯನ್ ಅಲ್ಲವೆ?
ನಾಸ್ತಿಕ ಕೂಡ ನೈತಿಕತೆಯ ಬಗ್ಗೆ ಮಾತನಾಡುತ್ತಾನೆ
ಒಳ್ಳೆಯದು ಕೆಟ್ಚದರ ಬಗ್ಗೆ ಮಾತನಾಡುತ್ತಾನೆ
ಸಾಧಕನ ನಿಜವಾದ ಸಮಸ್ಯೆಯೇ ಇದು,
ಆಳದಲ್ಲಿ ಮನೆಮಾಡಿಕೊಂಡಿರುವ
ಈ ಎಲ್ಲ ಪರಿಕಲ್ಪನೆಗಳಿಂದ ಕಳಚಿಕೊಳ್ಳುವುದು.
ಒಮ್ಮೆ ಹೀಗಾಯಿತು,
ಕೆಲವೇ ಕೆಲವು ಜನ ಪ್ರಯಾಣಿಸುತ್ತಿದ್ದ
ಹಡುಗೊಂದು ಚಂಡ ಮಾರುತಕ್ಕೆ ಸಿಕ್ಕಿ ಹಾಕಿಕೊಂಡಿತು.
ಹಡುಗು ಸಮುದ್ರದಲ್ಲಿ ಮುಳುಗುವುದು
ಬಹುತೇಕ ನಿಶ್ಚಯವಾಯಿತು.
ಆ ಹಡಗಿನಲ್ಲಿ ಒಬ್ಬ ಪ್ರಸಿದ್ಧ ಸಂತ ಮತ್ತು
ಒಬ್ಬ ಕುಖ್ಯಾತ ಪಾಪಿ ಪ್ರಯಾಣಿಸುತ್ತಿದ್ದರು.
ಹಡಗಿನಲ್ಲಿದ್ದ ಎಲ್ಲರೂ ದೇವರನ್ನು ಪ್ರಾರ್ಥಿಸತೊಡಗಿದರು.
ಪಾಪಿ ಕೂಡ ದೇವರನ್ನು ಕಾಪಾಡು ಕಾಪಾಡು ಎಂದು
ಜೋರಾಗಿ ದೇವರನ್ನು ಬೇಡತೊಡಗಿದ.
ಇದನ್ನು ಗಮನಿಸಿದ ಸಂತ
ಪಾಪಿಯ ಹತ್ತಿರ ಬಂದು
“ ಮೆಲ್ಲಗೆ ಮಾತಾಡು, ನೀನು ಇಲ್ಲಿರುವುದು
ದೇವರಿಗೆ ಗೊತ್ತಾಗಿಹೋದರೆ
ನಿನ್ನೊಡನೆ ನಾವೂ ಮುಳುಗಿ ಹೋಗುತ್ತೇವೆ.”
ಸಂತನಾದವನು ಇನ್ನೊಬ್ಬನನ್ನು ಪಾಪಿ ಎಂದು ಗುರುತಿಸಬಹುದೆ?
ಅವನು ನೈತಿಕತೆಗೆ ಅಂಟಿಕೊಂಡಿದ್ದಾನೆ.
ಅವನು ದೊಡ್ಡ ನೈತಿಕ ಮನುಷ್ಯ ಅಷ್ಚೆ.
ಆದರೆ ಧಾರ್ಮಿಕ ಮನುಷ್ಯ ಹಾಗಲ್ಲ
ಅವನು ಯಾರನ್ನೂ, ಯಾವುದನ್ನೂ ಖಂಡಿಸುವುದಿಲ್ಲ
ಆತ ವಿನೀತ,
ನಾನು ಸಂತ ನೀನು ಪಾಪಿ ಎನ್ನುವುದು
ಅವನಿಗೆ ಸಾಧ್ಯವೇ ಇಲ್ಲ.
ಸೊಸಾನ್ ಹೇಳುತ್ತಾನೆ,
ದ್ವಂದ್ವ ದ ಸ್ಥಿತಿಯಿಂದ ಹೊರಬನ್ನಿ;
ಜಾಗರೂಕತೆಯಿಂದ ಇಂಥ ಹುಡುಕಾಟ ನಿಲ್ಲಿಸಿ.
ಒಂದು ಗುಲಗುಂಜಿಯಷ್ಟು ದ್ವಂದ್ವ ಉಳಿದುಕೊಂಡರೂ
ಮನಸ್ಸಿನ ನಿರ್ಧಾರಗಳು ಗೊಂದಲದಲ್ಲಿ ಕಳೆದುಹೋಗುತ್ತವೆ.
ಒಳ್ಳೆಯದರ ಬಗ್ಗೆ ಚಿಂತಿಸಿದರೆ ಕೆಟ್ಟದ್ದು ನಾಶವಾಗುವುದಿಲ್ಲ
ಬದಲಾಗಿ, ಹಿನ್ನೆಲೆಗೆ ಸರಿಯುತ್ತದೆ.
ಹಾಗೆಯೇ ಪಾಪಿ ಮೇಲೆ ಕೆಟ್ಟವನಾಗಿ ಕಾಣಿಸುತ್ತಾನೆಯೇ ಹೊರತು
ಹಿನ್ನೆಲೆಯಲ್ಲಿ ಒಳ್ಳೆಯತನವಿದೆ.
ಆದ್ದರಿಂದಲೇ ಒಳ್ಳೆಯವರ ಕನಸುಗಳಲ್ಲಿ ಕೆಟ್ಟತನ
ಮತ್ತು ಪಾಪಿಗಳ ಕನಸುಗಳಲ್ಲಿ ಒಳ್ಳೆಯತನವಿದೆ.
ಆದರೆ ಇಬ್ಬರೂ ದ್ವಂದ್ವದಿಂದ ಪಾರಾಗಿಲ್ಲ
ಆದ್ದರಿಂದ ಇಬ್ಬರೂ ಮೂಲವನ್ನು ಮುಟ್ಟುವುದು ಸಾಧ್ಯವಿಲ್ಲ.
ಎಲ್ಲ ದ್ವಂದ್ವಗಳು ಒಂದೇ ಮೂಲದಿಂದ ಹುಟ್ಟಿದ್ದರೂ
ಆ ಒಂದು ಮೂಲಕ್ಕೂ ಅಂಟಿಕೊಳ್ಳಬೇಡಿ.
ಎರಡಲ್ಲ, ಒಂದು ಎನ್ನುವ ಗುಂಪು ಇದೆ
ಶಂಕರರು ಮತ್ತು ಅವರ ಹಿಂಬಾಲಕರು.
ಅದ್ವೈತವೊಂದೆ ಸತ್ಯ ಎಂದು ವಾದಿಸುತ್ತಾರೆ
ಸಮರ್ಥಿಸಿಕೊಳ್ಳಲು ಸಾಕ್ಷಿಗಳನ್ನು ಸೃಷ್ಟಿಸುತ್ತಾರೆ
ತತ್ವಶಾಸ್ತ್ರವನ್ನು ಹುಟ್ಟುಹಾಕುತ್ತಾರೆ.
ದ್ವೈತಿಗಳ ಪ್ರಕಾರ ಒಂದರಿಂದ ಏನೂ ಸಾಧ್ಯವಿಲ್ಲ
ನದಿಯೊಂದು ಹರಿಯಲಿಕ್ಕೆ ಕೂಡ ಎರಡು ದಂಡೆಗಳು ಬೇಕು.
ಗಂಡು ಹೆಣ್ಣು ಎರಡೂ ಇದ್ದಾಗಲೆ ಮಗುವಿನ ಹುಟ್ಟು.
ಸಾವು ಬದುಕು ಎಂಬ ಎರಡು ದಂಡೆಗಳ ನಡುವೆ
ಬದುಕಿನ ನದಿಯ ಹರಿವು.
ಸೊಸಾನ್ ಹೇಳುತ್ತಾನೆ
ಎಲ್ಲವೂ ಒಂದೇ ಮೂಲದಿಂದ ಬಂದದ್ದು ಎನ್ನುವುದು
ನಿಮಗೆ ಖಾತ್ರಿ ಇದ್ದರೆ
ಆ ಒಂದು ಮೂಲಕ್ಕೂ ಅಂಟಿಕೊಳ್ಳಬೇಡಿ.
ಅಂಟಿಕೊಳ್ಳುವುದು ಏನನ್ನು ಸೂಚಿಸುತ್ತದೆಯೆಂದರೆ
ನೀವು ಇನ್ನೊಂದರ ವಿರುದ್ಧ ಇದ್ದೀರಿ .
“ ನಾನು ಅದ್ವೈತಿ “ ಎಂದು ನೀವು ಹೇಳುತ್ತಿದ್ದೀರಾದರೆ
ನಿಮಗೆ ಇನ್ನೂ ಸರಿಯಾಗಿ ಅರ್ಥವಾಗಿಲ್ಲ
ಇರುವುದು ‘ಒಂದು’ ಆಗಿದ್ದರೆ
ದ್ವೈತ, ಅದ್ವೈತ ಎಲ್ಲಿರುತ್ತಿತ್ತು ?
ನಿಜದ ಅದ್ವೈತಿ,
“ ನನಗೆ ಅದ್ವೈತದಲ್ಲಿ ನಂಬಿಕೆ ಇದೆ ” ಎಂದು
ಎಂದೂ ಹೇಳಲಾರ,
ಏಕೆಂದರೆ ನೀವು ಒಂದನ್ನು ನಂಬುತ್ತೀರಿ ಎಂದರೆ
ಇನ್ನೊಂದರ ವಿರೋಧದಲ್ಲಿದ್ದೀರಿ,
ಆಗ ಎರಡು ಹುಟ್ಚಿದವಲ್ಲ ?
ಮನಸ್ಸು ನಿಶ್ಚಲವಾಗಿದ್ದಾಗ
ಜಗತ್ತಿನ ಯಾವುದೂ ಗೊಂದಲವನ್ನುಂಟು ಮಾಡುವುದಿಲ್ಲ ಮತ್ತು
ಯಾವಾಗ ಯಾವುದೂ ಗೊಂದಲವನ್ನುಂಟು ಮಾಡುವುದಿಲ್ಲೋ ಆಗ
ಮನಸ್ಸು ತನ್ನ ಸಹಜ ಸ್ಥಿತಿಗೆ ಮರಳುತ್ತದೆ.
ಮನಸ್ಸು ನಿಶ್ಚಲವಾಗಿದ್ದಾಗ
ಯಾರೂ ನಿಮ್ಮನ್ನು ಅವಮಾನಿಸಲಾರರು.
ಯಾವಾಗ ಅವಮಾನ ನಿಮ್ಮನ್ನು ತಟ್ಟುವುದಿಲ್ಲೋ
ಅವಮಾನ, ಅವಮಾನವಾಗಿ ಉಳಿಯುವುದಿಲ್ಲ.
ಯಾರಿಗಾದರೂ ಸಿಟ್ಚು ಬಂದಾಗ,
ನೀವು ಆ ಸಿಟ್ಚನ್ನು ಗುರುತಿಸಬಲ್ಲಿರಾದರೆ
ನೀವೂ ಕೂಡ ಸಿಟ್ಟಿನ ಕಾರಣಕ್ಕಾಗಿ ವ್ಯಾಕುಲರಾಗಿದ್ದೀರಿ.
ಅಕಸ್ಮಾತ್ ನೀವು ಶಾಂತಚಿತ್ತರಾಗಿದ್ದರೆ
ಆ ಸಿಟ್ಟು ನಿಮಗೆ ಹೇಗೆ ಗೊತ್ತಾಗಬಲ್ಲದು?
ಯಾರಾದರೂ ನಿಮ್ಮನ್ನು ದ್ವೇಷಿಸುತ್ತಿದ್ದರೆ
ಮತ್ತು ಆ ದ್ವೇಷ ನಿಮ್ಮನ್ನು ತಟ್ಟುತ್ತಿದೆಯೆಂದರೆ
ನಮ್ಮ ಮನಸ್ಸು ತಳಮಳಮಳದಲ್ಲಿದೆ.
ನಿಮ್ಮ ಮನಸ್ಸು ಶಾಂತವಾಗಿದ್ದಾಗ
ಅವರ ಸಿಟ್ಟು / ದ್ವೇಷದ ಬಗ್ಗೆ
ನಿಮ್ಮಲ್ಲಿ ಅಂತಃಕರಣ ಹುಟ್ಚುತ್ತದೆ,
ಅವನಿಗೆ ಸಹಾಯ ಮಾಡಲು ಮುಂದಾಗುತ್ತೀರಿ,
ಅವನ ಈ ಸ್ಥಿತಿಯಿಂದಾಗಿ ಅವನ ದೇಹ
ವಿಷಮಯವಾಗಿದೆ,
ಅವನು ಕಾಯಿಲೆಯಿಂದ ಬಳಲುತ್ತಿದ್ದಾನೆ.
ಅವನಿಗೆ ಉಪಚಾರ ಬೇಕಿದೆ.
ಬುದ್ಧ, ಸೊಸಾನ್ ಉಪಚಾರಕ್ಕೆ ಧಾವಿಸುವಂಥವರು.
(ಹಿಂದಿನ ಭಾಗ ಇಲ್ಲಿ ಓದಿ : https://aralimara.com/2019/10/15/hsin/ )