ಸುಂದರ ದೇಹ, ಸ್ವಸ್ಥ ಮನಸಿಗಾಗಿ ಸ್ಪಿರಿಚುವಲ್ ಡಯೆಟ್

ಪ್ರಾರ್ಥಿಸಿ ಉಣ್ಣುವ ಉಣಿಸು ನಮಗೆ ಆಹಾರದ ಬಗ್ಗೆ ಪ್ರೀತಿಯನ್ನೂ ಗೌರವವನ್ನೂ ಉಂಟು ಮಾಡುತ್ತದೆ. ಪ್ರೀತಿಪೂರ್ಣ ಮನಸ್ಸು ಆರೋಗ್ಯಪೂರ್ಣವೂ ಆಗಿರುತ್ತದೆ ಮತ್ತು ಆರೋಗ್ಯಪೂರ್ಣ ಮನಸ್ಸು ದೇಹವನ್ನೂ ಸ್ವಸ್ಥವಾಗಿಡುತ್ತದೆ. ಸ್ವಸ್ಥ ದೇಹ ಸಹಜವಾಗಿ ಸುಂದರವಾಗಿರುತ್ತದೆ ~ ಚಿತ್ಕಲಾ

ಮೊಟ್ಟ ಮೊದಲಿಗೆ, ಇಲ್ಲಿ ‘ಸುಂದರ ದೇಹ’ ಎಂದು ಹೇಳಿರುವುದು ಗ್ಲಾಮರ್ ಆಧಾರಿತ ಸೌಂದರ್ಯವನ್ನಲ್ಲ. ಬಣ್ಣ, ಎತ್ತರ, ಸುತ್ತಳತೆ ಇತ್ಯಾದಿಗಳ ಮಾಪನವನ್ನು ಇಲ್ಲಿ ಸುಂದರ ಎಂದು ಕರೆಯಲಾಗಿಲ್ಲ. ನಾವು ಪಡೆದುಬಂದ ದೇಹವನ್ನು ರೋಗರಹಿತವಾಗಿ, ಸ್ವಚ್ಛ – ಶುಭ್ರವಾಗಿ, ಕಾಂತಿಯುತವಾಗಿ ಇಟ್ಟುಕೊಳ್ಳುವುದೇ ಸೌಂದರ್ಯದ ಮಾಪನ. ಇಂಥಾ ಸುಂದರ ದೇಹವನ್ನೂ, ಅದರೊಳಗೆ ಸ್ವಸ್ಥ ಮನಸ್ಸನ್ನೂ ಕಾಯ್ದಿಟ್ಟುಕೊಳ್ಳುವುದು ಸುಲಭದ ಮಾತಲ್ಲ. ಕಲುಷಿತ ವಾತಾವರಣ ದೇಹವನ್ನು ಹಾಳುಗೆಡವುತ್ತಿದ್ದರೆ, ಪ್ರಚಲಿತ ವಿದ್ಯಮಾನಗಳು ಮನಸ್ಸನ್ನು ಕುರೂಪಗೊಳಿಸುತ್ತಿರುತ್ತದೆ. ಇಂಥಾ ಸನ್ನಿವೇಶದಲ್ಲಿ ಮನೋದೈಹಿಕ ಸೌಂದರ್ಯ ಮತ್ತು ಸ್ವಾಸ್ಥ್ಯ ಕಾಪಾಡಿಕೊಳ್ಳುವುದು ಹೇಗೆ?

ಇಲ್ಲಿದೆ ಕೆಲವು ಟಿಪ್ಸ್….
ಬಹುತೇಕ ನಮ್ಮ ಆರೋಗ್ಯವನ್ನು ಕಾಪಿಡುವುದೂ ಬಿಗಡಾಯಿಸುವುದೂ ಆಹಾರವೇ. ಆಹಾರದ ಜೊತೆ ನೀರು ಮತ್ತು ಗಾಳಿ. ಇವಿಷ್ಟು ಮೂಲಭೂತ ಸಂಗತಿಗಳನ್ನು ಹೇಗೆ ಸೇವಿಸಬೇಕು ಅನ್ನುವ ಅರಿವು ಮುಖ್ಯ.

ಮೊದಲನೆಯದಾಗಿ, ನೀವು ಸಸ್ಯಾಹಾರವನ್ನಾದರೂ ಸೇವಿಸಿ, ಮಾಂಸಾಹಾರವನ್ನಾದರೂ ಸೇವಿಸಿ; ನೀವು ಸೇವಿಸುವ ಆಹಾರ ನಿಮ್ಮ ಶ್ರಮದುಡಿಮೆಯದ್ದಾಗಿರಲಿ. ನಿಮ್ಮ ದಣಿವಿನ ಅನ್ನ ನೀಡುವ ಕಸುವು ಇನ್ಯಾವುದರಿಂದಲೂ ನಿಮಗೆ ಸಿಗಲು ಸಾಧ್ಯವೇ ಇಲ್ಲ. ಮನೆಯಲ್ಲಾದರೂ ಸರಿ, ಹೊರಗಿನಲ್ಲಾದರೂ ಸರಿ, ಒಟ್ಟಾರೆ ದುಡಿದು ತಿನ್ನಿ. ದುಡಿಮೆ ನಿಮ್ಮ ದೇಹವನ್ನು ಸುಪುಷ್ಟವಾಗಿಡುತ್ತದೆ. ಜೊತೆಗೆ ಮಾನಸಿಕ ನೆಮ್ಮದಿಯನ್ನೂ ನೀಡುತ್ತದೆ.

ಭ್ರಷ್ಟಾಚಾರ ಅಥವಾ ವಂಚನೆಯಿಂದ ಗಳಿಸಿದ ಅಥವಾ ಕಸಿದು ತಿನ್ನುವ ಅನ್ನಾಹಾರ ನಿಮ್ಮ ಮನಸಿನ ಕಸಿವಿಸಿಯ ಪರಿಣಾಮ ದೇಹದ ಜೀರ್ಣಾಂಗಗಳ ಮೇಲಾಗಿ ಸರಿಯಾಗಿ ಜೀರ್ಣವಾಗದೆ ಹೋಗಬಹುದು. ಜೀರ್ಣವಾಗದ ಆಹಾರ ಹಲವು ರೋಗಗಳಿಗೆ ಮೂಲ ಅನ್ನುವುದು ನೆನಪಿರಲಿ. ಹಾಗೆಯೇ ಅಜೀರ್ಣ ನಿಮ್ಮ ಮನಸಿನ ಮೇಲೂ ಪರಿಣಾಮ ಬೀರುವುದು. ನಿಮ್ಮ ಕೆಲಸ ಕಾರ್ಯಗಳನ್ನು ಸರಿಯಾಗಿ ನಿರ್ವಹಿಸಲು ಅಡ್ಡಿ ಮಾಡುವುದು.

ಎರಡನೆಯದಾಗಿ, ಸಾಧ್ಯವಾದಷ್ಟೂ ಬುಟ್ಟಿಯಲ್ಲಿ ಹೊತ್ತು ತಂದು ಮಾರುವವರಿಂದ ತರಕಾರಿ ಖರೀದಿಸಲು ಪ್ರಯತ್ನಿಸಿ. ಸಹಜವಾಗಿ ಬಾಡಿರುವ ಅಥವಾ ಬಣ್ಣಗೆಟ್ಟ ತರಕಾರಿ ಮಾಲ್’ಗಳ ರಾಸಾಯನಿಕ ಲೇಪಿತ ಹೊಳಪಿಗಿಂತ ಅತ್ಯುತ್ತಮ ಮತ್ತು ಸಹಜ. ಕೃತಕ ಶೈತ್ಯಾಗಾರದಲ್ಲಿಟ್ಟ ತರಕಾರಿಗಿಂತ ಸೂರ್ಯನ ಬಿಸಿಲಿಗೆ ಬತ್ತಿದ ತರಕಾರಿ ಹೆಚ್ಚು ಪೌಷ್ಟಿಕ. ನೋಡಲು ಚೆಂದ ಕಾಣಬೇಕೆಂದು ರಾಸಾಯನಿಕಲೇಪಿತ ಹಣ್ಣು ತರಕಾರಿ ತಂದು ತಿಂದರೆ ನಷ್ಟ ನಿಮಗೇ.

ಮೂರನೆಯದಾಗಿ, ಮಿತಿಮೀರಿ ತಿನ್ನಬೇಡಿ. ಬಾಯಿರುಚಿಗಾಗಿ ತಿನ್ನಬೇಡಿ. ಏನಾದರೂ ತಿನ್ನುವಾಗ ಇನ್ನೊಂಚೂರು ಬೇಕು ಅನ್ನಿಸುತ್ತಿರುವಾಗಲೇ ಕೈತೊಳೆದುಬಿಡಿ, ಮತ್ತೆ ಬಡಿಸಿಕೊಳ್ಳಲು ಹೋಗಬೇಡಿ. ಹಿತಮಿತವಾಗಿ ತಿಂದರೆ ನೀವು ಚಟುವಟಿಕೆಯಿಂದಿರಲು ಸಾಧ್ಯ. ಪುನಃ, ಚಟುವಟಿಕೆಯ ದೇಹ ಸ್ವಸ್ಥ ಮನಸ್ಸಿಗೆ ಪೂರಕ. “ಆಹಾರದಲ್ಲಿ ಅಡಗಿರುವ ಸುಪ್ತಶಕ್ತಿಯೇ ನಿಮ್ಮ ಮನಸ್ಸಾಗಿ ಪರಿವರ್ತನೆ ಹೊಂದುತ್ತದೆ (ಪ್ರಭಾವ ಬೀರುತ್ತದೆ)” ಅನ್ನುತ್ತದೆ ಉಪನಿಷತ್ ವಾಕ್ಯ.

ಪ್ರತಿ ದಿನ ತಿನ್ನುವ ಆಹಾರದಲ್ಲಿ ಉಪ್ಪು ಹುಳಿ ಖಾರದ ಪ್ರಮಾಣ ಕಡಿಮೆಯಿರಲಿ. ಬೇಕಿದ್ದರೆ ವಾರಕ್ಕೊಮ್ಮೆ ಅಥವಾ ತಿಂಗಳಿಗೊಮ್ಮೆ ಚೀಟ್ ಮೀಲ್ ಸೇವಿಸಿ. ಅದರ ಹೊರತಾಗಿ ಬಾಕಿ ದಿನಗಳು ನಿಮ್ಮ ದೇಹಕ್ಕೂ ಮನಸ್ಸಿಗೂ ಉಪಯುಕ್ತವಾದ ಆಹಾರಕ್ರಮವಿರಲಿ. ಅರೆಬೆಂದ ತರಕಾರಿ, ಸೊಪ್ಪು, ಮಾಂಸಾಹಾರಿಗಳಾದರೆ ಲಘುವಾದ ಮಸಾಲೆಯಿಲ್ಲದ ಮಾಂಸಾಹಾರ ಇತ್ಯಾದಿ ಸೇವಿಸಿ. “ಊಟ ಬಲ್ಲವನಿಗೆ ರೋಗವಿಲ್ಲ” ಅನ್ನುವ ಗಾದೆಯನ್ನು ತಟ್ಟೆ ಹಿಡಿದಾಗೆಲ್ಲ ನೆನಪಿಸಿಕೊಳ್ಳಿ.

ಯಾವ ಕಾರಣಕ್ಕೂ ಆಹಾರವನ್ನು ಹೊರಗೆ ಚೆಲ್ಲಬೇಡಿ. ಯೂಟ್ಯೂಬಿನಲ್ಲಿ ಉಳಿದ ಆಹಾರವನ್ನು ರುಚಿಕಟ್ಟು ಮಾಡಿಕೊಂಡು ಪುನಃ ಸೇವಿಸುವ ರೆಸಿಪಿಗಳು ಯಥೇಚ್ಛ ಸಿಗುತ್ತವೆ. ಆಹಾರ ಚೆಲ್ಲುವುದು ಪ್ರತಿಷ್ಠೆಯಲ್ಲ, ದ್ರೋಹ. ದ್ರೋಹಿಗಳ ಚಿಂತನೆ ಅವರ ಮನಸ್ಸನ್ನು ಸ್ವಸ್ಥವಾಗಿಡಲು ಸಾಧ್ಯವೇ ಇಲ್ಲ. ಆದ್ದರಿಂದ, ಒಂದೋ ಉಳಿದ ಆಹಾರವನ್ನು ಸರಿಯಾಗಿ ಸಂಸ್ಕರಿಸಿ ಮರುದಿನ ಬಳಸಿ; ಇಲ್ಲವೇ ಯಾರಾದರೂ ಹಸಿದವರು ಸಿಕ್ಕರೆ, ಉಳಿದ ಆಹಾರ ಸಂಗ್ರಹಿಸುವವರು ಸಿಕ್ಕರೆ, ಅವರಿಗೆ ಕೊಟ್ಟುಬಿಡಿ.

ವಾರಕ್ಕೊಮ್ಮೆ, ಕೊನೆಪಕ್ಷ ತಿಂಗಳಿಗೊಮ್ಮೆ ಉಪವಾಸ ಮಾಡಲು ಪ್ರಯತ್ನಿಸಿ. ‘ಲಂಘನಂ ಪರಮೌಷಧಮ್’ ಅನ್ನುವ ಮಾತು ನೆನಪಿರಲಿ. ವಿಶೇಷವಾಗಿ ಉದರಸಂಬಂಧಿ ಕಾಯಿಲೆಗಳಿಗೆ ಉಪವಾಸವೇ ಮದ್ದು. ಧಾರ್ಮಿಕ ನಂಬಿಕೆಗಳಿಂದಲೋ, ದೇಹಾರೋಗ್ಯಕ್ಕಾಗಿಯೋ, ಮನಸು ಆಹ್ಲಾದಕರವಾಗಿರಲೆಂದೋ… ಕಾರಣ ಏನಾದರೂ ಇರಲಿ, ಒಟ್ಟಿನಲ್ಲಿ ಆಗಾಗ ಉಪವಾಸ ಮಾಡುವುದನ್ನು ರೂಢಿಸಿಕೊಳ್ಳಿ. ಕೆಲವರಿಗೆ ಮನಸ್ಸು ಗೊಂದಲ ಅಥವಾ ಬೇಸರಕ್ಕೆ ಒಳಗಾದಾಗ, ಟೆನ್ಷನ್ ಅಥವಾ ಡಿಪ್ರೆಶನ್ ಆದಾಗ ವಿಪರೀತ ತಿನ್ನುವ ಖಯಾಲಿ ಬೆಳೆಯುತ್ತದೆ. ಅಂಥ ಸಂದರ್ಭದಲ್ಲಿ ಸಾಧ್ಯವಾದಷ್ಟೂ ದ್ರವಾಹಾರ ಸೇವಿಸಿ. ತಿನ್ನಬೇಕು ಅನಿಸಿದಾಗೆಲ್ಲ ಹೊಕ್ಕುಳ ಮೇಲೆ ಕೈಯಿಟ್ಟು ನಿಧಾನ ಉಸಿರಾಡುವ ತಂತ್ರವನ್ನು ಅನುಸರಿಸಿ.

ಪ್ರತಿದಿನ ಊಟ ಮಾಡುವಾಗ ಆಹಾರ ಕಣ್ಣಿಗೊತ್ತಿಕೊಂಡು ತಿನ್ನುವ ರೂಢಿ ಹಲವರಲ್ಲಿದೆ. ಬಹುತೇಕ ಎಲ್ಲ ಧರ್ಮಗಳ ಜನರೂ ಆಹಾರವನ್ನು ದೇವರ ಪ್ರಸಾದವೆಂದೇ ಭಾವಿಸುತ್ತಾರೆ. ಹಾಗೆಯೇ ಹಿಂದೂಗಳಲ್ಲಿ “ಅನ್ನಪೂರ್ಣೆ ಸದಾಪೂರ್ಣೇ ಶಂಕರ ಪ್ರಾಣವಲ್ಲಭೇ | ಜ್ಞಾನ ವೈರಾಗ್ಯಸಿಧ್ಯರ್ಥಮ್ ಭಿಕ್ಷಾಂ ದೇಹಿ ಚ ಪಾರ್ವತೀ ||” ಎಂಬ ಪ್ರಾರ್ಥನೆ ಸಲ್ಲಿಸಿ ಆಹಾರ ಸೇವಿಸುವ ರೂಢಿ ಇದೆ.
ಪ್ರಾರ್ಥನೆಯನ್ನು ಮೂಢನಂಬಿಕೆ ಎಂದು ತಿಳಿಯಬೇಕಿಲ್ಲ. ಪ್ರಾರ್ಥನೆ ಅಂತರಂಗದ ಪ್ರತಿಸ್ಪಂದನೆ. ಪರಮಅಸ್ತಿತ್ವಕ್ಕೆ ಕೃತಜ್ಞತೆ ಸಲ್ಲಿಸುವ, ಅದರೊಡನೆ ಸಂಪರ್ಕ ಸಾಧಿಸುವ ಸೇತುವೆ. ಪ್ರಾರ್ಥಿಸಿ ಉಣ್ಣುವ ಉಣಿಸು ನಮಗೆ ಆಹಾರದ ಬಗ್ಗೆ ಪ್ರೀತಿಯನ್ನೂ ಗೌರವವನ್ನೂ ಉಂಟು ಮಾಡುತ್ತದೆ. ಪ್ರೀತಿಪೂರ್ಣ ಮನಸ್ಸು ಆರೋಗ್ಯಪೂರ್ಣವೂ ಆಗಿರುತ್ತದೆ ಮತ್ತು ಆರೋಗ್ಯಪೂರ್ಣ ಮನಸ್ಸು ದೇಹವನ್ನೂ ಸ್ವಸ್ಥವಾಗಿಡುತ್ತದೆ. ಸ್ವಸ್ಥ ದೇಹ ಸಹಜವಾಗಿ ಸುಂದರವಾಗಿರುತ್ತದೆ. ಆದ್ದರಿಂದ, ಈ ಹೊತ್ತಿನ ತುತ್ತು ಕರುಣಿಸಿದ ಪ್ರಕೃತಿಗೂ, ಪರಮ ಅಸ್ತಿತ್ವಕ್ಕೂ (ಅದನ್ನು ದೇವರು ಎಂದೂ ಕರೆಯುತ್ತಾರೆ), ರೈತರಿಗೂ, ನಮ್ಮ ತಟ್ಟೆವರೆಗೆ ತಲುಪಿಸುವಲ್ಲಿ ಹಲವು ಸ್ತರಗಳಲ್ಲಿ ದುಡಿದ ಸಮಾಜಕ್ಕೂ, ರುಚಿಯಾಗಿ ಅಡುಗೆ ಮಾಡಿದ ಅಮ್ಮ/ಅಪ್ಪ/ಹೆಂಡತಿ/ಗಂಡ/ಮಕ್ಕಳು/ಅಡುಗೆಯವರು – ಯಾರೇ ಆಗಿದ್ದರೂ ಅವರಿಗೂ ಪ್ರೀತಿಯ ನಮನ ಸಲ್ಲಿಸಿ, ಅನಂತರ ತಿನ್ನಿ. ಪ್ರಚಂಡವೇಗಿ ಮನಸಿಗೆ ಈ ಎಲ್ಲರನ್ನೂ ನೆನೆಯಲು ಕ್ಷಣ ಹೊತ್ತು ಸಾಕು!

ನಿಮಗೆ ನಂಬಿಕೆ ಇದ್ದರೆ, ನಿಮ್ಮ ನಿಮ್ಮ ಧರ್ಮದ ಪ್ರಾರ್ಥನೆಯೊಡನೆ ಆಹಾರ ಸೇವಿಸಿ. “ನಾನು ಉಣ್ಣುತ್ತಿರುವ ಈ ಹೊತ್ತು ಯಾವ ಜೀವಿಯೂ ಹಸಿದಿರದೆ ಇರಲಿ” ಅನ್ನುವ ಬೇಡಿಕೆ ನಿಮ್ಮ ಪ್ರಾರ್ಥನೆಯಲ್ಲಿರಲಿ.

ಕೊನೆಯದಾಗಿ, ಕಸಿದು ತಿನ್ನಬೇಡಿ. ಇಲ್ಲಿ ಕಸಿಯುವುದು ಅಂದರೆ ಅಕ್ಷರಶಃ ತಟ್ಟೆ ಕಸಿಯುವುದು ಒಂದಾದರೆ, ಮತ್ತೊಬ್ಬರ ಅವಕಾಶ, ಶ್ರಮದ ದುಡಿಮೆ, ಕನಸು ಯಾವುದನ್ನೂ ನಿಮ್ಮ ಹೊಟ್ಟೆಯ, ಅಹಂಕಾರದ, ಮತ್ಸರದ ಹಸಿವು ತೀರಿಸಿಕೊಳ್ಳಲು ಕಸಿಯಬೇಡಿ.

‘ಡಯೆಟ್’ ಅಂದಕೂಡಲೆ ಇಂತಿಷ್ಟು ಸೊಪ್ಪು, ಇಂತಿಷ್ಟೇ ತುಪ್ಪ ಅನ್ನುವ ನಿರ್ದೇಶನಗಳನ್ನು ನಿರೀಕ್ಷಿಸಿ ನೀವು ನಿರಾಶರಾಗಿರುತ್ತೀರಿ. ಖಂಡಿತಾ ನಿರಾಶರಾಗುವ ಅಗತ್ಯವಿಲ್ಲ. ಮೇಲೆ ಹೇಳಿದ ರೀತಿಯಲ್ಲಿ ಆಹಾರ ಸೇವನೆ ಮಾಡಿದರೆ, ಸಹಜವಾಗಿಯೇ ನೀವು ಅತಿಯಾಗಿ ಮತ್ತು ಸಿಕ್ಕಿದ್ದೆಲ್ಲ ತಿನ್ನಲು ಸಾಧ್ಯವೇ ಇಲ್ಲ! ಆಹಾರದ ಮೇಲಿನ ನಿಯಂತ್ರಣದ ಪರಿಣಾಮ ಸುಂದರೆ ದೇಹ ಮತ್ತುಸ ಸ್ವಸ್ಥ ಮನಸ್ಸೇ ಆಗಿರುತ್ತದೆಯಾದ್ದರಿಂದ, ಮತ್ತೊಮ್ಮೆ ನಿರ್ದೇಶನಗಳನ್ನು ಗಮನವಿಟ್ಟು ಓದಿ, ಪಾಲಿಸಲು ಪ್ರಯತ್ನಿಸಿ.
ಧನ್ಯವಾದ.

Leave a Reply