ಸಾಇಲ್ ಹೇಳಿದ ಸಾವಿನ ರಹಸ್ಯ! : ರಾ-ಉಮ್ ಕಥೆಗಳು

sa-ilವಾ-ಐನ್ ಸಾಇಲ್‌ಗೆ ಸಾವಿನ ರಹಸ್ಯವನ್ನು ಅರಿತೇ ಬಿಡಬೇಕು ಎಂಬ ಹುಕಿ ಹುಟ್ಟಿತು. ರಾ-ಉಮ್‌ಳನ್ನು ಕೇಳಿದರೆ ಅವಳು ನಿಗೂಢವಾಗಿ ನಕ್ಕು, “ಅದು ಅರಿಯಬೇಕಾದ ವಿದ್ಯೆ. ಹೇಳಿಕೊಡುವುದಲ್ಲ” ಎಂದಳು.

ಅವನೂ ರಾ-ಉಮ್ ಶಿಷ್ಯನಲ್ಲವೇ? ಅರಿವಿನ ಅನ್ವೇಷಣೆಗೆ ಹೊರಟೇ ಬಿಟ್ಟ. ಸಾವಿನ ರಹಸ್ಯ ಹುಡುಕುವ ಯಾತ್ರೆಯಲ್ಲಿ ಅವನು ಅದೆಷ್ಟೋ ಮಂದಿಯನ್ನು ಕಂಡ. ಸಾವನ್ನು ಜಯಿಸಿ ಬಂದವರೆಂದು ಪ್ರಸಿದ್ಧರಾದ ಹಲವರನ್ನು ಭೇಟಿಯಾದ. ಅವನಿಗೆ ಯಾತ್ರೆಯಿನ್ನೂ ಅಪೂರ್ಣ ಎನಿಸುತ್ತಿತ್ತು. ಆದರೆ ಆಶ್ರಮ ಅವನನ್ನು ತೀವ್ರವಾಗಿ ಸೆಳೆಯಿತು. ನೇರವಾಗಿ ಆಶ್ರಮಕ್ಕೆ ಹಿಂದಿರುಗಿದ.

ಆಶ್ರಮದಲ್ಲಿ ಎಲ್ಲವೂ ಎಂದಿನಂತೆ ನಡೆಯುತ್ತಿತ್ತು. ರಾ-ಉಮ್ ಅವನಲ್ಲಿ ಏನನ್ನೂ ಕೇಳಲಿಲ್ಲ. ಎಲ್ಲಾ ದಿನಗಳಂತೆಯೇ ಮತ್ತಷ್ಟು ದಿನಗಳು ಉರುಳಿದವು. ಒಂದು ದಿನ ಸಂಜೆಯ ಪಾನೀಯ ಧ್ಯಾನದ ಸಂದರ್ಭದಲ್ಲಿ ರಾ-ಉಮ್ ಘೋಷಿಸಿದಳು: “ವಾ-ಐನ್ ಸಾವಿನ ರಹಸ್ಯವನ್ನು ಬೋಧಿಸುವ ಕ್ಷಣ ಬಂತು!”

ದಿಢೀರ್ ಘೋಷಣೆಯಿಂದ ವಾ-ಐನ್ ಅರೆಕ್ಷಣ ವಿಚಲಿತನಾದ. ಸಾವರಿಸಿಕೊಂಡು ಪಾನೀಯದ ಬುರುಡೆಯನ್ನು ಬದಿಗಿಟ್ಟು ಎದ್ದು ನಿಂತು ಗಟ್ಟಿ ಧ್ವನಿಯಲ್ಲಿ ಹೇಳಿದ, “ಬದುಕಿನುದ್ದಕ್ಕೂ ನಾವು ಸತ್ತಿಲ್ಲ ಎಂದು ಖಾತರಿ ಪಡಿಸಿಕೊಳ್ಳುವುದು ಮುಖ್ಯ!”

ಶಿಷ್ಯರೆಲ್ಲಾ ಪಾನಪಾತ್ರೆಯನ್ನು ಕೈಗೆತ್ತಿಕೊಂಡು ಅದು ಮುಗಿಯುವವರೆಗೂ ಕೆಳಗಿಳಿಸಲಿಲ್ಲ. ರಾ-ಉಮ್ ಧ್ಯಾನದಲ್ಲಿದ್ದಳು!

2 Comments

Leave a Reply