“ಮನಸ್ಸು-ಬುದ್ಧಿ ಒಂದು ಯಂತ್ರದ ಹಾಗೆ…” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 5.3

ಧ್ಯಾನದ ಮೂಲ ಉದ್ದೇಶವೇ ಇದು. ನಿಮಗೆ ಹಾಗು ನಿಮ್ಮ ಬುದ್ಧಿ-ಮನಸ್ಸಿಗೆ ಯಾವುದೇ ಸಂಬಂಧವಿಲ್ಲ ಎನ್ನುವುದನ್ನ ನಿಮಗೆ ಮನದಟ್ಟು ಮಾಡಿಸುವುದು ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

ಅಧ್ಯಾಯ 5 ಭಾಗ 3 : Unity of Emptiness

ಈಗ ಸೊಸಾನ್ ನ ಪದ್ಯ ಗಮನಿಸಿ:

ವಿಚಾರ ಮಾಡಲ್ಪಡುವ ಸಂಗತಿಗಳು ಇಲ್ಲವಾದಾಗ
ವಿಚಾರ ಮಾಡುವ ಬುದ್ಧಿ-ಮನಸ್ಸು ಕೂಡ ಮಾಯವಾಗುತ್ತವೆ.
ಹಾಗೆಯೇ, ಬುದ್ಧಿ-ಮನಸ್ಸು ಇಲ್ಲವಾದಾಗ
ವಿಚಾರ ಮಾಡಲ್ಪಡುವ ಸಂಗತಿಗಳೂ ಕಾಣೆಯಾಗುತ್ತವೆ.
ಬುದ್ಧಿ-ಮನಸ್ಸು ಇರುವುದರಿಂದಲೇ
ವಿಷಯಗಳ, ಸಂಗತಿಗಳ ಅಸ್ತಿತ್ವ
ಹಾಗು, ಬುದ್ಧಿ-ಮನಸ್ಸು ಹೀಗಿರುವುದಕ್ಕೆ ಕಾರಣವೇ
ಸುತ್ತಲಿನ ವಿಷಯ ಮತ್ತು ಸಂಗತಿಗಳು.

**

ನಿಮ್ಮ ಸುತ್ತಲಿನ ಸಂಗತಿಗಳು ಹಾಗಿರೋದು
ನಿಮ್ಮ ಬುದ್ಧಿ-ಮನಸ್ಸು ಗಳ ಕಾರಣಕ್ಕೆ.
ಬುದ್ಧಿ-ಮನಸ್ಸು ಪ್ರೊಜೆಕ್ಟರ್ ನ ಹಾಗೆ,
ಸುತ್ತ ಇರುವುದೆಲ್ಲ ಸ್ಕ್ರೀನ್ ಗಳು,
ಪ್ರೊಜೆಕ್ಟರ್ ಏನನ್ನು ಪ್ರೊಜೆಕ್ಟ್ ಮಾಡತ್ತೋ
ನೀವು ಸ್ಕ್ರೀನ್ ಮೇಲೆ ಅದನ್ನು ನೋಡುತ್ತೀರಿ.
ನಿಮಗೆ ಸುತ್ತಲಿನ ಸಂಗತಿಗಳು
ಕುರೂಪ ಎಂಬಂತೆ ಕಾಣಿಸಿದರೆ
ಆ ಸಂಗತಿಗಳನ್ನು ಬದಲಾಯಿಸಲು ಹೋಗಬೇಡಿ
ನಿಮ್ಮ ಬುದ್ಧಿ-ಮನಸ್ಸ ನ್ನ ಎದುರು ಕೂರಿಸಿಕೊಂಡು ಮಾತನಾಡಿ.

ಆದರೆ ಒಂದು ಸಮಸ್ಯೆ.
ನಿಮ್ಮನ್ನು ನೀವು ಬುದ್ಧಿ-ಮನಸ್ಸು ಗಳ ಪ್ರತೀಕ ಎಂದುಕೊಂಡಿರುವುದರಿಂದ
ಅಷ್ಟು ಸುಲಭವಾಗಿ ಅವುಗಳನ್ನ ಬಿಟ್ಟು ಬಿಡಲಾರಿರಿ.
ಎಲ್ಲ ಸಮಸ್ಯೆಗಳ ಮೂಲವೇ ಇದು.

ಆದರೆ ನೀವು
ನಿಮ್ಮ ಬುದ್ಧಿ-ಮನಸ್ಸು ಅಲ್ಲ,
ನೀವು ಹಾಗೆ ಗುರುತಿಸಿಕೊಂಡಿರುವಿರಿ ಅಷ್ಟೇ
ಆದರೆ ಅದು ಹಾಗಲ್ಲ.

ಪರಿಹಾರ?

ಧ್ಯಾನದ ಮೂಲ ಉದ್ದೇಶವೇ ಇದು.
ನಿಮಗೆ ಹಾಗು ನಿಮ್ಮ ಬುದ್ಧಿ-ಮನಸ್ಸಿಗೆ
ಯಾವುದೇ ಸಂಬಂಧವಿಲ್ಲ ಎನ್ನುವುದನ್ನ
ನಿಮಗೆ ಮನದಟ್ಟು ಮಾಡಿಸುವುದು.

ನೀವು ಈ ಸ್ಥಿತಿಯನ್ನ
ಧ್ಯಾನದಲ್ಲಿ ಕಂಡುಕೊಳ್ಳುವಿರಿ,
ಕೆಲವು ಕ್ಷಣ
ನಿಮ್ಮ ಬುದ್ಧಿ-ಮನಸ್ಸಿನ ಅನುಪಸ್ಥಿತಿಯಲ್ಲೂ
ನೀವು ಇರುವುದನ್ನ ಮತ್ತು
ಇನ್ನೂ ಹೆಚ್ಚು ಪ್ರಚಂಡವಾಗಿ ಇರುವುದನ್ನ
ಕೇವಲ ಒಂದು ಕ್ಷಣಕ್ಕಾದರೂ
ನೀವು ಅನುಭವಿಸಿರುವುರಾದರೆ,
ಆಳವಾದ ಸತ್ಯವೊಂದನ್ನು ನೀವು ಮುಟ್ಟಿದ್ದೀರಿ.
ಆಗ ನಿಮಗೆ, ಬುದ್ಧಿ-ಮನಸ್ಸುಗಳನ್ನ
ಕಳಚಿಡುವುದು ಇನ್ನೂ ಸುಲಭವಾಗುವುದು.
ಹೌದು, ಬುದ್ಧಿ-ಮನಸ್ಸುಗಳ ಜೊತೆ
ನಿಮ್ಮನ್ನು ನೀವು ಗುರುತಿಸಿಕೊಳ್ಳುವುದು
ಮೂದಲು ನಿಲ್ಲಬೇಕು,
ಆಗ ಅವನ್ನು ಕಳಚಿಡುವುದೂ ಸರಳ.

ಇಡೀ ಗುರ್ಜೀಫ್ ನ ಧ್ಯಾನ ಪದ್ಧತಿಯೇ
ಈ ಉದ್ದೇಶಕ್ಕೆ ಮೀಸಲಾಗಿದೆ.

ಮುಂದಿನ ಬಾರಿ ಧ್ಯಾನದಲ್ಲಿ,
ಒಂದು ವಿಷಯ, ಒಂದು ಸಂಗತಿ
ಮೇಲಿಂದ ಮೇಲೆ ನಿಮ್ಮನ್ನು ವಿಚಲಿತಗೊಳಿಸತೊಡಗಿದಾಗ,
ನಿರ್ಧಾರ ಮಾಡಿ
ನಾನು ದೂರ ನಿಂತು, ನಿರ್ವಿಕಾರದಿಂದ
ಈ ವಿಷಯ/ಸಂಗತಿ ನನ್ನ ಮನಃಪಟಲದಿಂದ
ಹಾಯ್ದು ಹೋಗುವುದನ್ನ ವೀಕ್ಷಿಸುತ್ತೇನೆ.

ಆಗ ನಿಮಗೇ ಗೊತ್ತಾಗದ ಹಾಗೆ
ನಿಮ್ಮ ಮತ್ತು ಆ ವಿಷಯ/ಸಂಗತಿಯ ನಡುವೆ
ಒಂದು ಅಂತರ ಸಾಧ್ಯವಾಗುವುದು.

ಒಮ್ಮೊಮ್ಮೆ ಮರೆತು
ನೀವು ಆ ವಿಷಯದ ಜೊತೆ
ಭಾವನಾತ್ಮಕವಾಗಿ ಒಂದಾಗಿಬಿಡಬಹುದು,
ಚಿಂತೆಯಿಲ್ಲ, ನಿಮ್ಮನ್ನು ನೀವು ಹಿಂದೆ ಎಳೆದುಕೊಳ್ಳಿ,
ಆ ವಿಷಯಕ್ಕೆ ಮುಂದೆ ಹೋಗಲು
ದಾರಿ ಮಾಡಿಕೊಡಿ.
ಇದು ನಿಮ್ಮ ಅಸ್ತಿತ್ವದ ಆಕಾಶದಲ್ಲಿ
ಒಂದು ಬಯಕೆಯ ಮೋಡ ಬಂದಂತೆ,
ಬಂದಂತಯೇ ತೇಲಿ ಹೋದಂತೆ.
ಈ ಬಂದು ಹೋಗುವಿಕೆಗೆ
ನೀವು ಕೇವಲ ಸಾಕ್ಷಿ ಮಾತ್ರ.

ನೆನಪಿರಲಿ
ಸೆಕೆಂಡಿನ ಒಂದು ತುಣುಕಿನಲ್ಲಾದರೂ
ನೀವು ನಿಮ್ಮನ್ನು ಗುರುತಿಸದೇ ಹೋದರೆ,
ಆ ವಿಷಯ ಅಲ್ಲಿ ಮತ್ತು ನೀವು ಇಲ್ಲಿ,
ನಿಮ್ಮ ಮತ್ತು ಆ ವಿಷಯದ ನಡುವಿನ ಅಂತರದಲ್ಲಿ
ಒಂದು ದಿವ್ಯ ಪ್ರಕಾಶ ಮತ್ತು
ಈ ಬೆಳಕು ಈಗ ನಿಮ್ಮದು.

ಈಗ ನಿಮಗೆ ಗೊತ್ತಾಗಿದೆ
ಬುದ್ಧಿ-ಮನಸ್ಸು ಒಂದು ಯಂತ್ರದ ಹಾಗೆ.
ಈ ಯಂತ್ರವನ್ನ
ನೀವು ಪೂರ್ಣ ತ್ಯಜಿಸಬಹುದು,
ಉಪಯೋಗಿಸದೇ ಇರಬಹುದು ಅಥವಾ
ಲೌಕಿಕಕ್ಕೆ ಬಳಸಬಹುದು.
ನೀವು ಆ ಗುಲಾಮ ಯಂತ್ರಕ್ಕೆ
ಅದರ ಜಾಗ ತೋರಿಸಿದ್ದೀರಿ.
ಈಗ ಆಯ್ಕೆ ನಿಮ್ಮದು.

ಧ್ಯಾನ ಎಂದರೆ ಇದೇ.
ಸುಮ್ಮನೇ ಕುಳಿತು ಬಂದು ಹೋಗುವ
ವಿಚಾರಗಳಿಗೆ ಕೇವಲ ಸಾಕ್ಷಿಯಾಗುವುದು,
ಯಾವ ಬಲವಂತವೂ ಇಲ್ಲದೆ
ಸುಮ್ಮನೇ ನಿರ್ವಿಕಾರವಾಗಿ,
ನಿಮ್ಮ ಮತ್ತು ಆ ವಿಷಯದ ನಡುವೆ
ಒಂದು ಅಂತರವನ್ನು ಕಾಯ್ದುಕೊಂಡು.
ನಿಮ್ಮ ಆಕಾಶದಲ್ಲಿ
ಹಕ್ಕಿಗಳು ಬರುತ್ತಿವೆ, ಹೋಗುತ್ತಿವೆ.
ಆದರೆ ನಿಮಗೆ
ಆ ಹಕ್ಕಿಗಳು ಎಲ್ಲಿಂದ ಬಂದವು, ಯಾಕೆ ಬಂದವು,
ಎಲ್ಲಿ ಹೋಗುತ್ತಿವೆ
ಈ ಯಾವುದರ ಗೊಡವೆಯೂ ಇಲ್ಲ.

ಈ ವಿಚಾರಗಳೂ ಹಕ್ಕಿಗಳ ಹಾಗೆಯೇ
ಬಂದು ಹೋಗುತ್ತವೆ.

ಆದರೆ ಒಮ್ಮೊಮ್ಮೆ ಹೀಗಾಗುತ್ತದೆ.
ನಿಮ್ಮ ಸುತ್ತಲಿನ ಜನ
ನಿಮ್ಮ ಬುದ್ಧಿ-ಮನಸ್ಸುಗಳ ಆಕಾಶವನ್ನು
ಪ್ರವೇಶಿಸುತ್ತಾರೆ ಅಥವಾ,
ನಿಮ್ಮ ವಿಚಾರಗಳು ಅವರ ಅಸ್ತಿತ್ವದ
ಪರೀಧಿಯೊಳಗೆ ಧಾಖಲಾಗುತ್ತವೆ.
ಆದ್ದರಿಂದಲೇ ಕೆಲವರು ಎದುರಾದಾಗ
ನಿಮಗೆ ಧಿಡೀರನೆ ಸಂತೋಷವಾಗುತ್ತದೆ ಅಥವಾ ತೀವ್ರ ಬೇಸರವಾಗುತ್ತದೆ
ಒಂದು ಮಾತಿನ ವಿನಿಮಯವೂ ಆಗದೆ.

ಕೆಲ ಜಾಗೆಗಳ ಬಗ್ಗೆಯೂ ಇದು ನಿಜ.
ಒಂದು ಮನೆಗೆ, ಜಾಗಕ್ಕೆ ಹೋದಾಗ
ನೀವು ಮಂಕಾಗುತ್ತೀರಿ ಅಥವಾ
ಒಂದು ಜಾಗಕ್ಕೆ ಹೋದಾಗ ಗೆಲುವಾಗುತ್ತೀರಿ
ಹೊಸ ರೆಕ್ಕೆ ಬಂದಂತೆ.
ಒಂದು ಗುಂಪನ್ನು ಪ್ರವೇಶಿಸಿದಾಗ
ಕಳೆದು ಹೋಗುತ್ತೀರಿ,
ಇನ್ನೊಂದು ಗುಂಪಿನಲ್ಲಿ
ಎಲ್ಲೆಲ್ಲೂ ನೀವೇ ಕಾಣುತ್ತೀರಿ.

ಗುರುವಿನ ಸಂಗದ ಮಹತ್ವ ಇರುವುದೇ ಇಲ್ಲಿ.
ಬುದ್ಧಿ-ಮನಸ್ಸುಗಳ ಮೇಲೆ ಹತೋಟಿ ಸಾಧಿಸಿರುವ
ಗುರುವಿನ ಸನ್ನಿಧಿಯಲ್ಲಿ ದೀನರಾದಾಗ,
ಅವರ ನೋ ಥಾಟ್, ನೋ ಮೈಂಡ್ ಸ್ಥಿತಿ
ನಿಮ್ಮ ಬಾಗಿಲು ತಟ್ಚುವುದು.
ಈ ಅನುಭವವನ್ನು ಬಲವಂತವಾಗಿ ದಾಟಿಸಲಾಗದು,
ತಾಳ್ಮೆ ಬೇಕು.
ಏಕೆಂದರೆ ಆ ಸ್ಥಿತಿ ವಿಚಾರ (ಥಾಟ್) ಅಲ್ಲ
ನಿರ್ವಿಚಾರ ( ಥಾಟ್ ಲೆಸ್) ಸ್ಥಿತಿ.
ವಿಚಾರವಾಗಿದ್ದರೆ ಬಹು ಸುಲಭವಾಗಿ
ದಾಟಿಸಬಹುದಿತ್ತು.

ತಲೆಯಲ್ಲಿ ಹತ್ತಾರು ವಿಚಾರಗಳನ್ನು
ತುಂಬಿಕೊಂಡಿರುವ ಮನುಷ್ಯನ ಸಂಗಾತದಲ್ಲಿ,
ನೀವೂ ಪ್ರಭಾವಿತರಾಗುವಿರಿ,
ಅವ ನಿಮ್ಮೊಳಗೂ ತನ್ನ ಗೊಂದಲಗಳನ್ನು ತುಂಬುತ್ತಾನೆ,
ಹಾಗೆಯೇ ಸಂತನ ಸಾಂಗತ್ಯದಲ್ಲಿ
ನಿಮಗೂ ನಿರ್ವಿಚಾರ ಸ್ಥಿತಿ ಸಾಧ್ಯವಾಗಬಹುದು,
ಮಾತಿನ ವ್ಯಾಪಾರದ ಕಳವಳವಿಲ್ಲದೆ

ಮುಂದುವರೆಯುತ್ತದೆ…….

ಹಿಂದಿನ ಭಾಗ ಇಲ್ಲಿ ನೋಡಿ… https://aralimara.com/2020/03/22/ming-4/

1 Comment

Leave a Reply to “ವಿಚಾರ ಒಂದು ಸಾಂದ್ರ ವಿಶ್ವ” : Hsin Hisn Ming ಓಶೋ ಉಪನ್ಯಾಸ, ಅಧ್ಯಾಯ ~ 5.4 – ಅರಳಿಮರCancel reply