ಎರಡು ವಿಚಾರಗಳ ನಡುವಿನ ಮಧ್ಯಂತರದ ಜಾಗದಲ್ಲೇ ಅರಿವು ತನ್ನ ಮನೆ ಕಟ್ಟಿಕೊಂಡಿದೆ. ಆ ಮಧ್ಯಂತರದಲ್ಲಿಯೇ ನೀಲ ಆಕಾಶವಿದೆ… ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ
ಅಧ್ಯಾಯ 5 ಭಾಗ 4 : Unity of Emptiness
ಹೌದು, ವಿಚಾರಗಳು ನಿಮ್ಮ ಸ್ವಂತದವುಗಳಲ್ಲ.
ಹಾಗು ನೀವು ಸ್ವತಃ ನಿಮ್ಮ ವಿಚಾರವಲ್ಲ.
ನೀವು ತೀರಿಕೊಂಡಾಗ
ನಿಮ್ಮೊಳಗಿನ ವಿಚಾರಗಳು
ನಿಮ್ಮ ಸುತ್ತ ಮುತ್ತ
ಚೆಲ್ಲಾಪಿಲ್ಲಿಯಾಗಿ ಹರಡಿಕೊಳ್ಳುತ್ತವೆ.
ಇದನ್ನು ಸೂಕ್ಷ್ಮವಾಗಿ ಗಮನಿಸಿ,
ಮುಂದಿನಬಾರಿ ನೀವು
ಸಾವಿನ ಹಾಸಿಗೆಯಲ್ಲಿರುವ ಮನುಷ್ಯನ ಭೇಟಿಗೆ ಹೋದಾಗ,
ಸಾಯುತ್ತಿರುವವನ ಕೈಹಿಡಿದುಕೊಂಡು
ಸ್ವಲ್ಪ ಹೊತ್ತು ಕಳೆಯಿರಿ.
ಆಗ ನೀವು ಅನನ್ಯ ಅನುಭವವೊಂದರ ಭಾಗವಾಗುವಿರಿ.
ನಿಮಗೆ ಆಶ್ಚರ್ಯವಾಗಬಹುದು
ಯಾವ ವಿಚಾರಗಳು ನಿಮ್ಮವಲ್ಲವೋ,
ಯಾವ ವಿಚಾರಗಳು ಎಂದೂ
ನಿಮ್ಮ ಹತ್ತಿರ ಸುಳಿದಾಡಿಲ್ಲವೋ,
ಯಾವ ವಿಚಾರಗಳ ಬಗ್ಗೆ ನಿಮಗೆ ಏನೂ ಗೊತ್ತಿಲ್ಲೋ,
ಆ ವಿಚಾರಗಳು ಧಿಡೀರನೇ
ನಿಮ್ಮ ಮನಸ್ಸಿನ ಒಳಗೆ ಹುಟ್ಟಲು ಶುರು ಮಾಡುವವು.
ಆ ಸಾಯುತ್ತಿರುವ ಮನುಷ್ಯ,
ಸಾಯುತ್ತಿರುವ ಮರವೊಂದು ಗಾಳಿಯಲ್ಲಿ
ತನ್ನ ಬೀಜಗಳನ್ನು ತೂರುವಂತೆ,
ತನ್ನ ವಿಚಾರಗಳನ್ನು ಸುತ್ತ ಹರಡುತ್ತಿದ್ದಾನೆ,
ತಾನು ಸಾಯುವ ಮೊದಲು
ತನ್ನಂಥ ಇನ್ನೊಂದು ಹುಟ್ಟಲಿ ಎಂದು
ಆ ಮರ ಬಯಸುವಂತೆ.
ನೀವು ಸಂಪೂರ್ಣವಾಗಿ ಎಚ್ಚರವಾಗಿರದಿದ್ದರೆ,
ಸಾಯುವ ಮನುಷ್ಯನ ಹತ್ತಿರ ಹೋಗುವುದು
ಒಂದು ಸಾಹಸದ ಸಂಗತಿ.
ಯಾರ ಸಹವಾಸದಲ್ಲಿ
ನೀವು ದುಗುಡವನ್ನು ಅನುಭವಿಸುತ್ತೀರೋ
ಅಥವಾ ನಿಮಗೆ ಕಳೆಗುಂದಿದ ಹಾಗೆ
ಅನುಭವವಾಗುತ್ತದೋ
ಅಂಥವರಿಂದ ದೂರ ಇರಿ.
ನೀವು ಎಚ್ಚರದ ಸ್ಥಿತಿಯಲ್ಲಿ ಇರುವಿರಾದರೆ,
ಅರಿವು ನಿಮ್ಮನ್ನು ಕೈಹಿಡಿದು ನಡೆಸುತ್ತಿದೆಯಾದರೆ
ಚಿಂತೆಯಿಲ್ಲ ,
ಆಗ ಆ ದುಗುಡ ಅಥವಾ ಮ್ಲಾನ ಭಾವ
ನಿಮ್ಮನ್ನು ದಾಟಿ ಮುಂದೆ ಹೋಗುವುದು
ಮತ್ತು ನೀವು ಆ ದುಗುಡದ ಜೊತೆ
ನಿಮ್ಮನ್ನು ಗುರುತಿಸಿಕೊಳ್ಳುವುದಿಲ್ಲ.
ದೇವಸ್ಥಾನ, ಚರ್ಚು, ಮಸೀದಿಗೆ ಹೋದಾಗ
ಗಮನಿಸಿದ್ದೀರಾ?
ಎಷ್ಟೊಂದು ಜನ ಪ್ರಾರ್ಥನೆ ಮಾಡುತ್ತಿದ್ದಾರೆ
(ಕೆಲವರು ಕಾಟಾಚಾರಕ್ಕೆ ಕೂಡ)
ಆ ಪ್ರಾರ್ಥನಾ ಭಾವ, ಶರಣಾಗತಿಯ ಅನುಭವ
ನಿಮ್ಮನ್ನು ತಾಕುತ್ತದೆ,
ಆ ತೀವ್ರತೆ ನಿಮ್ಮನ್ನೂ ತುಂಬಿಕೊಳ್ಳುತ್ತದೆ.
ಆಗ ನಿಮ್ಮೊಳಗೆ ಆಗುತ್ತಿರುವ ಬದಲಾವಣೆಯನ್ನು
ಗುರುತಿಸುವುದೂ ಕೂಡ ನಿಮಗೆ ಸಾಧ್ಯವಾಗುತ್ತದೆ.
ನೀವು ಸಂಪೂರ್ಣ ಎಚ್ಚರದ ಸ್ಥಿತಿಯಲ್ಲಿರುವಾಗ ಮಾತ್ರ,
ಹೇಗೆ ಒಂದು ವಿಚಾರ
ನಿಮ್ಮನ್ನು ಪ್ರವೇಶಿಸುತ್ತದೆ ಮತ್ತು
ಆ ವಿಚಾರದೊಂದಿಗೆ
ಹೇಗೆ ನೀವು ನಿಮ್ಮನ್ನು ನೀವು ಗುರುತಿಸಿಕೊಳ್ಳುತ್ತಿದ್ದೀರಿ
ಎನ್ನುವುದನ್ನ ಗುರುತಿಸಬಹುದು.
ವಿಚಾರಗಳ ವೇಗ ಅಗಾಧ.
ಅವು ಎಷ್ಟು ವೇಗದಿಂದ ಚಲಿಸುತ್ತವೆಯೆಂದರೆ,
ಕಾಲದ ಲೆಕ್ಕಾಚಾರದಿಂದ ಇದನ್ನ ಅಳೆಯಲಾಗುವುದಿಲ್ಲ.
ವಿಚಾರಗಳು, ಒಂದು ಅನಂತದಿಂದ
ಇನೊಂದು ಅನಂತಕ್ಕೆ ಹಾರುವ ವೇಗಕ್ಕೆ
ಕಾಲ ದೇಶಗಳ ಹಂಗಿಲ್ಲ.
ವಿಚಾರಗಳ ವೇಗ ಅಸಾಧಾರಣವಾಗಿರುವುದರಿಂದ,
ಎರಡು ವಿಚಾರಗಳ ನಡುವಿನ ಖಾಲಿಯನ್ನು
ನೀವು ಗುರುತಿಸಲಾರಿರಿ.
ಈಗ ಸಾವಧಾನವಾಗಿ ಕುಳಿತುಕೊಳ್ಳಿ,
ಕಣ್ಣು ಮುಚ್ಚಿ, ನಿರಾಳವಾಗಿ,
ನಿಮ್ಮ ದೇಹದ ಪ್ರಕ್ರಿಯೆಗಳನ್ನೆಲ್ಲ ನಿಧಾನವಾಗಿಸಿಕೊಳ್ಳಿ,
ನಿಧಾನವಾಗಿ ಉಸಿರಾಡಿ,
ಆಗ ನಿಮ್ಮ ಹೃದಯದ ಮಿಡಿತ, ರಕ್ತದ ಒತ್ತಡ
ಸಾಮಾನ್ಯವಾಗುವುದು.
ಈಗ ಎಲ್ಲವೂ ನಿಧಾನವಾಗಿರುವುದರಿಂದ
ವಿಚಾರದ ಗತಿಯೂ ನಿಧಾನವಾಗುತ್ತದೆ
ಏಕೆಂದರೆ ಅದೊಂದು ಸಾಂದ್ರ ವಿಶ್ವ.
ಆದ್ದರಿಂದಲೇ
ನೀವು ಗಾಢ ನಿದ್ದೆಯಲ್ಲಿರುವಾಗ
ವಿಚಾರದ ಓಟಕ್ಕೆ ಬ್ರೇಕ್.
ನಿದ್ದೆಯಲ್ಲಿ ಎಲ್ಲವೂ ನಿಧಾನ ಗತಿಯಲ್ಲಿರುವುದರಿಂದ
ವಿಚಾರದ ಅಗಾಧ ಓಟಕ್ಕೆ ಇಂಬು ನೀಡುವ
ಯಾವ ಸಂಗತಿಗಳೂ ಇಲ್ಲವಾದ್ದರಿಂದ,
ವಿಚಾರ ತಾನೇ ತಾನಾಗಿ
ಕಣ ಬಿಟ್ಟು ಹಿಂದೆ ಸರಿಯುತ್ತದೆ.
ಆದ್ದರಿಂದ ನಿರಾಳವಾಗಿ,
ನಿಧಾನವಾಗಿ ಬಂದು ಹೋಗುತ್ತಿರುವ
ವಿಚಾರಗಳಿಗೆ ಸಾಕ್ಷಿಯಾಗಿ,
ಆಗ ನೀವು ಎರಡು ವಿಚಾರಗಳ ನಡುವಿನ
ಖಾಲಿಯನ್ನ ಗುರುತಿಸಬಲ್ಲಿರಿ.
ಎರಡು ವಿಚಾರಗಳ ನಡುವಿನ
ಮಧ್ಯಂತರದ ಜಾಗದಲ್ಲೇ
ಅರಿವು ತನ್ನ ಮನೆ ಕಟ್ಟಿಕೊಂಡಿದೆ.
ಆ ಮಧ್ಯಂತರದಲ್ಲಿಯೇ ನೀಲ ಆಕಾಶವಿದೆ.
ಹೀಗೆ, ವಿಚಾರಗಳ ಗತಿಯನ್ನ ನಿಧಾನಗೊಳಿಸಿ,
ಅವುಗಳ ನಡುವಿನ ಖಾಲಿಯನ್ನ
ಹೆಚ್ಚು ಹೆಚ್ಚಾಗಿ ಕಾಣುತ್ತ ಹೋಗಿ.
ಮೋಡಗಳನ್ನು ನೋಡುತ್ತ ಕುಳಿತು ಬಿಡಬೇಡಿ
ನಡುವಿನ ನೀಲ ಆಕಾಶವನ್ನ ಕಾಣಿ,
ಚಿತ್ರದ ಬದಲಾಗಿ ಸಮಷ್ಟಿಯನ್ನ ಕಣ್ತುಂಬಿಕೊಳ್ಳಿ.
ನಾನೊಂದು ಗೋಡೆಯಷ್ಟು ದೊಡ್ಡದಾದ
ಬ್ಲ್ಯಾಕ್ ಬೋರ್ಡಿನ ನಟ್ಟ ನಡುವೆ
ಬಿಳೀ ಬಣ್ಣದಿಂದ ಒಂದು ಸಣ್ಣ ಬಿಂದುವನ್ನು ಮೂಡಿಸುತ್ತೇನೆ,
ಮತ್ತು ಇದನ್ನು ನೋಡಿ ನೀವು ಕಂಡದ್ದನ್ನ ಹಂಚಿಕೊಳ್ಳಲು
ನಿಮ್ಮನ್ನು ಆಹ್ವಾನಿಸುತ್ತೇನೆ.
ಬಹುತೇಕ ನನ್ನ ತಿಳುವಳಿಕೆಯ ಪ್ರಕಾರ ನೀವು,
ಬಿಳೀ ಬಿಂದುವೊಂದನ್ನು ಕಂಡೆ ಎಂದು ಹೇಳುವಿರಿ.
ವಿಚಿತ್ರ ನೋಡಿ, ಆ ಸಣ್ಣ ಬಿಳೀ ಬಿಂದು ನಿಮಗೆ ಕಾಣಿಸಿತು ಆದರೆ
ಅಷ್ಟು ದೊಡ್ಡ ಬ್ಲ್ಯಾಕ್ ಬೋರ್ಡ್ ನಿಮಗೆ ಕಾಣಲಿಲ್ಲ.
ಯಾಕೆ ಹೀಗೆ?
ಇದು ಬುದ್ಧಿ-ಮನಸ್ಸುಗಳ ಕಲಿಕೆಯ ಶಿಸ್ತು.
ಹಿನ್ನೆಲೆಯನ್ನು ಬಿಟ್ಚು ಚಿತ್ರವನ್ನು ನೋಡುವುದು,
ಅಪಾರ ನೀಲ ಆಕಾಶ ಬಿಟ್ಟು
ಪುಟ್ಟ ಪುಟ್ಟ ಮೋಡಗಳನ್ನು ನೋಡುವುದು,
ವಿಚಾರಗಳ ವೇಗದಲ್ಲಿ ಒಂದಾಗುತ್ತ
ಅರಿವಿನ ಜಾಗವನ್ನ ಮರೆತು ಬಿಡುವುದು,
ಇದು ಬುದ್ಧಿ-ಮನಸ್ಸುಗಳ ತರಬೇತಿ.
ಈ ತರಬೇತಿಗೆ ಕೊನೆ ಹಾಡಬೇಕು.
ಹಿನ್ನೆಲೆಯನ್ನು ಹೆಚ್ಚು ಹೆಚ್ಚು ಗಮನಿಸುತ್ತ
ಚಿತ್ರಕ್ಕೆ ಕಡಿಮೆ ಆದ್ಯತೆ ನೀಡಬೇಕು.
ಆಗ ನೀವು ಸತ್ಯಕ್ಕೆ ಹತ್ತಿರವಾಗುವಿರಿ.
ಧ್ಯಾನದಲ್ಲಿ ಇದು ನಿಮಗೆ
ನಿರಂತರವಾಗಿ ಸಾಧ್ಯವಾಗಬೇಕು.
ಬುದ್ಧಿ-ಮನಸ್ಸು
ತಮ್ಮ ಹಳೆಯ ತರಬೇತಿಯ ಕಾರಣವಾಗಿ
ಚಿತ್ರದ ಸುತ್ತ ನಿಮ್ಮ ಗಮನವನ್ನು ಕೇಂದ್ರೀಕರಿಸುವ ಪ್ರಕ್ರಿಯೆಯಿಂದ ಬಿಡಿಸಿಕೊಳ್ಳಿ,
ಚಿತ್ರದ ಸುತ್ತ ಮುತ್ತ ಇರುವ ಹಿನ್ನೆಲೆಯನ್ನು
ಧ್ಯಾನ ಮಾಡಿ.
ನೀವು ನನ್ನ ಎದುರು ಇರುವಿರಿ.
ನಾವು ಒಬ್ಬರನ್ಮೊಬ್ಬರು
ಎರಡು ವಿಧದಿಂದ ನೋಡಬಹುದು.
ನಾನು, ನಿಮ್ಮ ಸುತ್ತ ಮುತ್ತ, ಹಿಂದೆ ಮುಂದೆ ಇರುವ
ಪ್ರಕೃತಿಯನ್ನು ನೋಡುತ್ತೇನೆ,
ಅಲ್ಲಿ ಗಿಡ ಮರಗಳಿವೆ, ಹಸಿರು ಇದೆ,
ನೀಲ ಆಕಾಶವಿದೆ, ಸಮಸ್ತ ಬ್ರಹ್ಮಾಂಡವಿದೆ,
ಅಥವಾ ನಾನು ಕೇವಲ ನಿಮ್ಮನ್ನು ನೋಡುತ್ತೇನೆ.
ನೀವು ಚಿತ್ರ.
ಬುದ್ಧಿ-ಮನಸ್ಸು, ತಮ್ಮ ಕಲಿಕೆಯ ಪ್ರಕಾರ
ಚಿತ್ರವನ್ನು ಮಾತ್ರ ನೋಡುತ್ತವೆ.
ಆದ್ದರಿಂದಲೇ ನೀವು
ಸೊಸಾನ್, ಬುದ್ಧ, ಜೀಸಸ್ ಮುಂತಾದವರಿಗೆ ಹತ್ತಿರವಾದಾಗ,
ನಿಮ್ಮೊಡನೆಯ ಅವರ
ನಿರ್ಭಾವುಕ ವ್ಯವಹಾರದಿಂದ ಬೆಚ್ಚಿ ಬೀಳುತ್ತೀರಿ.
ನೀವು ಚಿತ್ರ ಮಾತ್ರ ,
ಆದರೆ ಅವರು ಸಮಸ್ತವನ್ನು ನೋಡುತ್ತಿದ್ದಾರೆ.
ಅವರು ನಿಮ್ಮನ್ನೂ ನೋಡುತ್ತಾರೆ
ಆದರೆ ಸಮಸ್ತ ವಾತಾವರಣದ
ಭಾಗವಾಗಿ ಮಾತ್ರ.
ನೀವು ಆ ಒಂದು ಬಿಳೀ ಬಿಂದು ಮಾತ್ರ,
ಆದರೆ ಅವರು ಕೇವಲ
ನಿಮ್ಮನ್ನು ಮಾತ್ರ ನೋಡಲಿ ಎಂದು ನೀವು ಬಯಸುತ್ತೀರಿ,
ನೀವೇ ಸಮಸ್ತ ಎನ್ನುವ ಹಾಗೆ,
ನಿಮ್ಮ ಹೊರತು ಬೇರಾವುದೂ
ಅಸ್ತಿತ್ವದಲ್ಲಿ ಇಲ್ಲ ಎನ್ನುವ ಹಾಗೆ.
ಆಗ ನಿಮಗೆ ಬುದ್ಧನ ಪ್ರೇಮ
ತಣ್ಣಗೆ ಕೊರೆಯಲು ಶುರುಮಾಡುತ್ತದೆ,
ನೀವು ಅವನ ಬೆಚ್ಚಗಿನ ಅಪ್ಪುಗೆ ಬಯಸುತ್ತಿದ್ದೀರಿ,
ಅವನ ಕಣ್ಣು ಕೇವಲ ನಿಮ್ಮನ್ನ ಗಮನಿಸಲಿ
ಎಂದು ಆಸೆ ಪಡುತ್ತೀರಿ,
ಆದರೆ ಇದು ಬುದ್ಧನಿಗೆ ಸಾಧ್ಯವಿಲ್ಲ.
ಆದ್ದರಿಂದ ನಿಮ್ಮ ಅಹಂಗೆ
ಬುದ್ಧನ ಸಾಮಿಪ್ಯದಲ್ಲಿ ತೀವ್ರ ಕಸಿವಿಸಿ.
ಅಹಂ, ಸಂಪೂರ್ಣ ಆದ್ಯತೆಯನ್ನು ಬಯಸುತ್ತದೆ ;
“ ನನ್ನನ್ನು ನೋಡು
ನಾನು ಈ ಬ್ರಹ್ಮಾಂಡದ ಕೇಂದ್ರ “
ಎಂದು ಹಾಡುತ್ತದೆ.
ಆದರೆ ನೀವು ಬ್ರಹ್ಮಾಂಡದ ಕೇಂದ್ರವಲ್ಲ,
ಹಾಗೆ ನೋಡಿದರೆ ಬ್ರಹ್ಮಾಂಡಕ್ಕೆ
ಕೇಂದ್ರವೇ ಇಲ್ಲ.
ಕೇಂದ್ರ ಸಾಧ್ಯವಾಗುವುದು
ಬ್ರಹ್ಮಾಂಡ ಸೀಮಿತವಾಗಿದ್ದಾಗ ಮಾತ್ರ.
ಕೇಂದ್ರದ ಬಗ್ಗೆ ಮಾತನಾಡುವುದು
ಕೂಡ ಅಸಂಗತ.
ಜಗತ್ತಿಗೆ ಕೇಂದ್ರ ಎನ್ನುವುದಿಲ್ಲ,
ಕೇಂದ್ರ ಇಲ್ಲದೆಯೇ ಈ ಜಗತ್ತು ಅಸ್ತಿತ್ವದಲ್ಲಿದೆ.
ಎಷ್ಟು ಸುಂದರ ಈ ಸತ್ಯ!
ಕೇಂದ್ರ ಇಲ್ಲ
ಆದ್ದರಿಂದಲೇ ಎಲ್ಲ ತಮ್ಮನ್ನು ತಾವು
ಕೇಂದ್ರ ಎಂದುಕೊಳ್ಳುವುದು.
“ಅಹಂ ಬ್ರಹ್ಮಾಸ್ಮಿ” ಎನ್ನುವ
ಹಿಂದೂಗಳ ನಂಬಿಕೆಯನ್ನ
ಇಸ್ಲಾಂ, ಕ್ರಿಶ್ಚಿಯಾನಿಟಿ, ಯಹೂದಿಗಳು ಇದೇ ಕಾರಣಕ್ಕೆ ಒಪ್ಪುವುದಿಲ್ಲ.
ಅವರಿಗೆ ಭಗವಂತ ಮಾತ್ರ ಕೇಂದ್ರ.
ಆದರೆ ನಾನೇ ಬ್ರಹ್ಮ ಎನ್ನುವುದು
ಹಿಂದೂಗಳಿಗೆ ತುಂಬ ಸಹಜ.
ಕೇಂದ್ರ ಎನ್ನುವುದೇ ಇಲ್ಲ ಎಂದ ಮೇಲೆ
ಎಲ್ಲವೂ, ಎಲ್ಲರೂ ಕೇಂದ್ರವೇ.
ಮುಂದುವರೆಯುತ್ತದೆ……
ಹಿಂದಿನ ಭಾಗ ಇಲ್ಲಿ ನೋಡಿ… https://aralimara.com/2020/03/29/ming-5/
[…] ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2020/04/05/ming-6/ […]
LikeLike