ನಮ್ಮನ್ನು ನಾವು ಗೆದ್ದರಷ್ಟೆ ಗೆಲುವು : ಬೆಳಗಿನ ಹೊಳಹು

ಸೋಲು ಮತ್ತು ಗೆಲುವುಗಳು ಸಂದರ್ಭಾನುಸಾರ ಅರ್ಥ ಪಡೆಯುತ್ತವೆ…. ನಾವು ಏನನ್ನು ಗೆದ್ದೆವು, ಏನನ್ನು ಸೋತೆವು ಅನ್ನುವುದು ಕೂಡಾ ಮುಖ್ಯವಾಗುತ್ತದೆ. 

 

ಕೆಲವು ಗೆಲುಗಳು ಮತ್ತೊಂದು ಸೋಲಿನ ಕಾರಣದಿಂದ ಮೌಲ್ಯ ಕಳೆದುಕೊಳ್ಳುವುದುಂಟು. ಹಾಗೆಯೇ ಕೆಲವು ಸೋಲುಗಳು ಮತ್ತೊಂದರ ಗೆಲುವಿನ ಕಾರಣದಿಂದ ಸಾರ್ಥಕಗೊಳ್ಳುವುದೂ ಉಂಟು. 

ಉದಾಹರಣೆಗೆ ಪ್ರೇಮದಲ್ಲಿ, ಸ್ನೇಹದಲ್ಲಿ ನಾವು ಸೋತರಷ್ಟೆ ಗೆಲ್ಲುವೆವು. ಭಗವಂತನೆದುರು ಶರಣಾದರಷ್ಟೆ ವರದಾನದ ವಿಜಯಮಾಲೆ ನಮ್ಮನ್ನು ಅಲಂಕರಿಸುವುದು. ಹಾಗೆಯೇ, ಯುದ್ಧದಲ್ಲಿ ಗೆದ್ದರೂ ಸಾವುಗಳು, ಆಸ್ತಿ – ಪಾಸ್ತಿ ನಷ್ಟಗಳು ಸೋಲಿಗಿಂತ ಕಡಿಮೆಯೇನಲ್ಲ. 

ಸೋಲು ಗೆಲುವುಗಳ ವಿಷಯ ಬಂದಾಗ ಬುದ್ಧ ಹೇಳುತ್ತಾನೆ, “ನಮ್ಮನ್ನು ನಾವು ಗೆಲ್ಲುವುದೇ ನಿಜವಾದ ಗೆಲುವು. ಅದರ ಹೊರತಾಗಿ ಇನ್ನಾವ ಗೆಲುವಿಗೂ ಮಹತ್ವವಿಲ್ಲ. ಸಾವಿರ ಯುದ್ಧಗಳನ್ನು ಗೆದ್ದ ವೀರನು ತನ್ನನ್ನು ತಾನು ಗೆಲ್ಲದೆ ಹೋದರೆ ಆತ ಸಾಮ್ರಾಟನಾಗಿದ್ದರೂ ಸೋತವನು” ಎಂದು. 

ಜೀವನದಲ್ಲಿ ನಾವು ಸುಖವಾಗಿರಬೇಕೆಂದರೆ ನಮ್ಮೊಳಗೆ ಶಾಂತಿ ಮತ್ತು ನೆಮ್ಮದಿಗಳು ನೆಲೆಸಿರಬೇಕು. ಇವನ್ನು ನಮಗೆ ಅಷ್ಟೈಶ್ವರ್ಯಗಳೂ ದಕ್ಕಿಸಿಕೊಡಲಾರವು. ನಮ್ಮ ಕಾಮನೆಗಳನ್ನು, ವಾಂಛೆಗಳನ್ನು, ನಮ್ಮೊಳಗಿನ ಅರಿಷಡ್ವರ್ಗಗಳನ್ನು ನಾವು ಗೆದ್ದುಕೊಂಡರೆ ಮಾತ್ರ ಶಾಂತಿಯಿಂದಿರಲು ಸಾಧ್ಯ. 

Leave a Reply