ಜನರು ತಮ್ಮ ಮನೋವೃತ್ತಿಗೆ ತಕ್ಕಂತೆ ಒಂದೇ ಸಂದರ್ಭವನ್ನು ವಿಭಿನ್ನವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ನಿಜಕ್ಕೂ ಸಮಸ್ಯೆಗಳು ಸೃಷ್ಟಿಯಾಗುವುದೇ ಮನಸ್ಸಿನಲ್ಲಿ ಆಗಿದೆ ~ ಮೂಲ : ಪೂಜನೀಯ ಡಾ.ಕೆ.ಧಮ್ಮಾನಂದ ಥೇರೋ | ಅನುವಾದ ಮತ್ತು ಲೇಖನ ಕೃಪೆ : ಅನೀಶ್ ಬೋಧ್
ಯಾರು ತಮ್ಮ ಸಮಸ್ಯೆಗಳೊಂದಿಗೆ ಹೋರಾಡುವುದಿಲ್ಲವೋ ಅವರು ಹೆಚ್ಚಿನ ಚಿಂತೆಗಳನ್ನು ಸೃಷ್ಟಿಸುತ್ತಾರೆ. ಯಾವಾಗ ಅವರ ಕೌಟುಂಬಿಕ ಜೀವನದಲ್ಲಿ ತಪ್ಪು ತಿಳುವಳಿಕೆ ಉಂಟಾಗುವುದೋ ಆಗ ಅವರ ಜೀವನವು ಇನ್ನೂ ಹೆಚ್ಚಿನ ದುಃಖಕ್ಕೆ ಸಿಲುಕುತ್ತದೆ. ಕೆಲವೊಮ್ಮೆ ಹಿಂಸೆ, ರಕ್ತಪಾತ ಮತ್ತು ಆತ್ಮಹತ್ಯೆಗಳು ಆಗುತ್ತವೆ. ಹೀಗಾಗಿ ಪ್ರಾಪಂಚಿಕ ಜೀವನದಲ್ಲಿ ಸಂತೃಪ್ತಿ ಎಲ್ಲಿದೆ?
ಇಂದು ಜನರಿಗೆ ಹೆಚ್ಚಿನ ಆದಾಯ ಬೇಕಾಗಿದೆ. ಅದು ದಿನನಿತ್ಯದ ಚಟುವಟಿಕೆಗಳಾದ ಆಹಾರ, ವಸ್ತ್ರ, ಔಷಧಿ, ವಸತಿ ಮತ್ತು ತಮ್ಮ ಋಣ ಪೂರೈಕೆಗೆ ಮಾತ್ರವಲ್ಲ. ಅವರು ತಮ್ಮ ಜೀವನವನ್ನು ಹೆಚ್ಚಿನ ಇಂದ್ರೀಯ ಸುಖಗಳಿಗೆ ಅನುಕೂಲವಾಗುವಂತೆ ವ್ಯವಸ್ಥಿತವನ್ನಾಗಿಸಿದ್ದಾರೆ. ಇದು ಒಂದು ವಿಧವಾದ ಸ್ಪರ್ಧೆಯಂತೆ ಬದಲಾವಣೆಯಾಗಿದೆ.
ಜನರು ತಮ್ಮ ಕರ್ತವ್ಯ ಮತ್ತು ಹೊಣೆಗಾರಿಕೆಗೆ ಬದಲು ಇಂದ್ರೀಯ ಸುಖಗಳ ಬಗ್ಗೆಯೇ ಹೆಚ್ಚಿನ ಗಮನ ವಹಿಸುತ್ತಿದ್ದಾರೆ. ಕೆಲವು ಜನರು ವರ್ತಮಾನದಲ್ಲಿ ಸಾಕಷ್ಟಿದ್ದರೂ ಭವಿಷ್ಯದ ಬಗ್ಗೆ ಚಿಂತಿಸುತ್ತಾ ಅಸಂತೃಪ್ತಿಯನ್ನೇ ಬೆಳೆಸುತ್ತಿದ್ದಾರೆ. ಅವರು ತಮ್ಮ ರೋಗ, ವೃದ್ಧಾಪ್ಯ ಮತ್ತು ಮರಣ ಬಗ್ಗೆ ಚಿಂತಿಸುತ್ತಾ ಹಾಗೆಯೇ ಮುಂದಿನ ಜನ್ಮದ ಸ್ವರ್ಗ ಅಥವಾ ನರಕದ ಬಗ್ಗೆಯು ಆತಂಕಪಡುತ್ತಿದ್ದಾರೆ. ಅವರು ತಮ್ಮ ಜೀವನದಲ್ಲಿ ಪ್ರತಿದಿನ ಅತೃಪ್ತಿಯನ್ನೇ ಅನುಭವಿಸುತ್ತಿದ್ದಾರೆ. ಅವರು ಪರಿಹಾರವನ್ನು ಹುಡುಕುತ್ತ ಜೀವನವಿಡೀ ಇಲ್ಲಿಂದಲ್ಲಿಗೆ ಓಡುತ್ತಿದ್ದಾರೆ. ಶಾಂತಿ ಮತ್ತು ಸುಖಕ್ಕಾಗಿ ಸಾಯವವರೆಗೂ ಅನ್ವೇಷಣೆ ಮಾಡಿಯೂ ಅವರು ಎಂದಿಗೂ ನಿಜ ಪರಿಹಾರವನ್ನು ಪಡೆಯದವರಾಗಿದ್ದಾರೆ. ಅವರು ವೃದ್ಧರಾಗುತ್ತಿದ್ದಾರೆ ಎಂದು ಭಾವಿಸಿದಾಗ ಅವರು ಚಿಂತಿತರಾಗುತ್ತಾರೆ, ಅವರು ಪ್ರೀತಿಸುವ ವಸ್ತುಗಳು ಅಥವಾ ವ್ಯಕ್ತಿಯನ್ನು ಕಳೆದುಕೊಂಡಾಗ ಅವರು ಖಿನ್ನತೆ ತಾಳುತ್ತಾರೆ. ಈ ರೀತಿಯಾಗಿ ಹತಾಶೆ ಮತ್ತು ಮಾನಸಿಕ ತೀವ್ರ ಒತ್ತಡಕ್ಕೆ ಗುರಿಯಾಗುತ್ತಾರೆ. ಇನ್ನು ಪರಿಸ್ಥಿತಿ ಹದಗೆಟ್ಟರೆ ಮಾನಸಿಕ ವಿಕಲತೆಗೂ ಗುರಿಯಾಗುತ್ತಾರೆ. ನಮಗೆ ನಮ್ಮ ಅಸ್ತಿತ್ವದ ನಿಜಸ್ವರೂಪ ತಿಳಿದಿಲ್ಲ. ಆದರೂ ಜೀವನದಲ್ಲಿ ಯಾವುದೇ ತೊಂದರೆಗಳು ಮತ್ತು ಬದಲಾವಣೆಗಳಾದಂತೆ ನಿರ್ವಹಿಸಲು ಪ್ರಯತ್ನಿಸಬೇಕು.
ಜೀವನವು ಬದಲಾಗುತ್ತಲೇ ಇದೆ. ಅದು ಧಾತುಗಳ ಮತ್ತು ಶಕ್ತಿಗಳ ಕಂತೆಯಾಗಿದೆ. ಅವು ಸದಾ ಬದಲಾಗುತ್ತಲೇ ಇವೆ. ಇದರ ಪರಿಣಾಮವಾಗಿ ಯಾವುದೇ ಸನ್ನಿವೇಶವು ನಮ್ಮ ನಿರೀಕ್ಷೆಯಂತೆ ಸದಾ ನಡೆಯಲಾರದು. ಆಗ ನಾವು ಜೀವನವು ನಮ್ಮ ಇಷ್ಟದಂತಿಲ್ಲ ಎಂದು ಭಾವಿಸುವೆವು. ಯಾವಾಗ ಧಾತುಗಳು ಮತ್ತು ಶಕ್ತಿಗಳು ಅಸಮತೋಲನ ವಾಗುವವೋ ಆಗ ನಾವು ಅಹಿತವನ್ನು, ರೋಗವನ್ನು, ನೋವನ್ನು ಮತ್ತು ಇತರ ಸಮಸ್ಯೆಗಳನ್ನು ಅನುಭವಿಸುವೆವು. ಯಾವಾಗ ಮಾನಸಿಕ ಶಕ್ತಿಯು ಕ್ಷೊಭೆಗೆ ಒಳಗಾಗುವುದೋ. ಆಗ ನಾವು ಮಾನಸಿಕ ಸಮಸ್ಯೆಗಳನ್ನು ಅನುಭವಿಸುವೆವು. ಈ ಮಾನಸಿಕ ಸಮಸ್ಯೆಗಳನ್ನು ಗಮನಿಸದೆ ಹಾಗೆಯೇ ಬಿಟ್ಟಾಗ ಶಾರೀರಿಕ ಸಮಸ್ಯೆಗಳಾಗಿ ವ್ಯಕ್ತವಾಗುತ್ತವೆ. ಹೀಗಾಗಿ ನಮ್ಮ ಅಂಗಗಳು ಮತ್ತು ಗ್ರಂಥಿಗಳು ಸಹಾ ಬದಲಾವಣೆಯಾಗಿ ಸಾಮಾನ್ಯ ಕ್ರಿಯೆಗೆ ತಡೆಯಾಗಿ, ರಕ್ತಪರಿಚಲನೆ, ಹೃದಯಬಡಿತ ಮತ್ತು ಮೆದುಳಿನ ಜೀವಕೋಶಗಳಿಗೆ ಕೆಟ್ಟ ಪರಿಣಾಮ ಬೀರುತ್ತವೆ.
ಇಂದು ಬಹಳಷ್ಟು ಜನರು ಅಪಾಯವನ್ನು ಅರಿಯದೆ ಕೃತಕ ಜೀವನವನ್ನು ನಡೆಸುತ್ತಿದ್ದಾರೆ. ಬಹಳಷ್ಟು ಅವರ ಸಮಸ್ಯೆಗಳು ತಮ್ಮ ಅಜ್ಞಾನ ಹಾಗು ಸುಖದ ಅತಿಯಾದ ಹುಚ್ಚು ಆಸೆಯಿಂದಾಗಿದೆ. ಬಹಳಷ್ಟು ನಮ್ಮ ಸಮಸ್ಯೆಗಳು ಮತ್ತು ಹೊರೆಗಳು ಮಧ್ಯವಯಸ್ಸಿನ ನಂತರ ಬರುವುದು. ನಮ್ಮ ಸಮಸ್ಯೆಗಳು ವಯಸ್ಸಿನೊಂದಿಗೆ ಹೇಗೆ ಹೆಚ್ಚಾಗುತ್ತವೆ ಎಂದು ತಿಳಿಯಬೇಕಾದರೆ ಈ ಕೆಳಕಂಡ ದೃಷ್ಟಾಂತ ಕಲ್ಪಿಸಿಕೊಳ್ಳಿ. 100 ಅಡಿ ಆಳದ ಒಂದು ಹಳ್ಳವೊಂದಿರುತ್ತದೆ. ನಾವು ಜನರಿಗೆ ಏಣಿಯನ್ನು ಇಟ್ಟು ಒಬ್ಬೊಬ್ಬರಾಗಿ ಇಳಿಯಿರಿ ಎಂದು ಸೂಚನೆ ಕೊಡುತ್ತೇವೆ, ಆ ಹಳ್ಳದ ತಳದಲ್ಲಿ ಉರಿಯುವ ಕೆಂಡದ ರಾಶಿಯಿರುತ್ತದೆ. ಜನರು 40 ರಿಂದ 50 ಅಡಿ ಇಳಿಯುವವರೆಗೂ ಅವರಿಗೆ ತಾಪದ ಅನುಭವ ಗೊತ್ತಾಗುವುದಿಲ್ಲ. ನಂತರ ಅವರಿಗೆ ತಾಪದ ಅನುಭವ ಗೊತ್ತಾಗುವುದು. ನಂತರ 70 ರಿಂದ 80 ಅಡಿ ಆಳದಲ್ಲಿ ಹೋಗುವಾಗ ಅವರಿಗೆ ದೇಹವೇ ಸುಡುವಂತಹ ವೇದನೆಯಾಗುತ್ತದೆ. ನಂತರ ಅವರು ಬೇರೆಯವರಿಗೆ ಇನ್ನು ಕೆಳಗೆ ಇಳಿಯದಂತೆ ಎಚ್ಚರಿಕೆ ನೀಡುತ್ತಾರೆ. ಆದರೂ ಮೇಲೆ ಇರುವ ಯಾರೂ ಲೆಕ್ಕಿಸುವುದಿಲ್ಲ. ಇದೇ ರೀತಿಯಾಗಿ ಯುವಕರು ಸಹಾ ದುಃಖವನ್ನು ಲೆಕ್ಕಿಸುವುದಿಲ್ಲ, ಅವರಿಗೆ ಅಂತಹ ನೋವುಗಳು ಸಿಕ್ಕಿರುವುದಿಲ್ಲ. ಆದರೆ ವೃದ್ಧರಾಗುತ್ತಿದ್ದಂತೆ ವೃದ್ಧಾಪ್ಯ ರೋಗ ಮತ್ತು ಮರಣದ ಸುಡುವ ಅನುಭವ ಪಡೆಯುತ್ತಾರೆ.
ಬುದ್ಧರು ಜೀವನವು ದುಃಖ ಎನ್ನುತ್ತಾರೆ. ಯುವಜನರಿಗೆ ಅಸ್ತಿತ್ವದ ಸ್ವರೂಪವನ್ನು ಅರಿಯಲು ಇದು ಉತ್ತಮವಾದ ಉದಾಹರಣೆಯಾಗಿದೆ, ವೃದ್ಧರಿಗೆ ಈ ಪ್ರಜ್ಞೆಯು ಸ್ವಲ್ಪ ಇರುತ್ತದೆ. ಯುವಜನರು ಹಿರಿಯರ ನುಡಿಗಳನ್ನು ಆಲಿಸಿದರೆ ಅವರು ಬಹಳಷ್ಟು ತಪ್ಪುಗಳನ್ನು ತಡೆಯಬಹುದು. ನಾವೇಕೆ ಹಿರಿಯರ ನುಡಿಗಳನ್ನು ಆಲಿಸಬೇಕು ಎಂಬುದಕ್ಕೆ ಮತ್ತೊಂದು ಉದಾಹರಣೆಯು ಇಲ್ಲಿದೆ:
ಮೀನುಗಳ ಗುಂಪೊಂದು ನೀರಿನೊಳಗೆ ಚಿಕ್ಕ ಅಸಮಾನ್ಯ ಕಲುಕುವಿಕೆ ಕಂಡವು. ಅದು ನಿಜಕ್ಕೂ ಮೀನುಗಾರನ ಬಲೆಯ ಹಂಚಿಕೆಯಾಗಿತ್ತು. ಕೆಲವು ಚಿಕ್ಕ ಮೀನುಗಳು ಅದರೊಳಗೆ ಹೋಗಲು ಇಷ್ಟಪಟ್ಟವು ಮತ್ತು ಸಂಚಾರ ಮಾಡಲು ಬಯಸಿದವು. ಆದರೆ ಹಿರಿಯ ಮೀನು ಅವರಿಗೆ ಹಾಗೆ ಮಾಡದಂತೆ ಬುದ್ಧಿವಾದ ನುಡಿಯಿತು. ಅದು ಭಯಾನಕ ಬಲೆಯೆಂದು ಬುದ್ಧಿವಾದ ನುಡಿಯಿತು. ಆದರೆ ಆ ಯುವ ಮೀನುಗಳು ಹೀಗೆ ಅಡ್ಡಪ್ರಶ್ನೆಯನ್ನು ಹಾಕಿದವು. ಅದು ಭಯಾನಕವೂ ಅಥವಾ ಅಲ್ಲವೋ ಎಂದು ನಮಗೆ ತಿಳಿಯುವುದು ಹೇಗೆ? ನಾವು ಅಲ್ಲಿಗೆ ಹೋಗಿ ಅನ್ವೇಷಣೆ ಮಾಡಿದರಲ್ಲವೇ ತಿಳಿಯುವುದು ಎಂದು ವಿತಂಡವಾದ ಮಾಡಿ, ಬಲೆಯೊಳಗೆ ಹೋಗಿ ಸಿಕ್ಕಿಕೊಂಡು ನಂತರ ಪಶ್ಚಾತ್ತಾಪಪಟ್ಟವು.
ಈ ಸರಳ ಉದಾಹರಣೆಯಿಂದ ನಮಗೆ ತಿಳಿಯುವುದು ಏನೆಂದರೆ ಕೆಲವೊಂದು ಸರಿಯೋ ಅಥವಾ ತಪ್ಪೊ; ಒಳ್ಳೆಯದು ಅಥವಾ ಕೆಟ್ಟದೊ ಎಂಬುದನ್ನು ಅರಿಯಲು ವೈಯಕ್ತಿಕ ಅನುಭವಗಳು ಬೇಕಾಗುವುದಿಲ್ಲ. ಆದ್ದರಿಂದಾಗಿ ಬುದ್ಧರಂತಹ ಜ್ಞಾನಿಗಳ ಬುದ್ಧಿವಾದವನ್ನು ಸ್ವೀಕರಿಸಲು ಸಿದ್ಧರಾಗಬೇಕಾಗಿದೆ. ಏಕೆಂದರೆ ಅವರ ಜ್ಞಾನವು ನಮಗೆ ನಿಲುಕದಷ್ಟು ಅನಂತವಾಗಿದೆ. ಆದ್ದರಿಂದಾಗಿ ನಾವು ಎಲ್ಲವನ್ನು ಅರಿತಿದ್ದೇವೆ ಎಂದು ಭಾವಿಸಬಾರದು ಮತ್ತು ಜೀವನದ ಬಗ್ಗೆ ನಮಗೆ ಯಾರೂ ತಿಳಿಸಬೇಕಾಗಿಲ್ಲ ಹಾಗು ಸಮಸ್ಯೆಗಳನ್ನು ತಡೆಯುವುದು ಹೇಗೆ ಎಂದು ಯಾರೂ ಹೇಳಬೇಕಿಲ್ಲ ಎಂದು ಭಾವಿಸಬಾರದು. ಯಾವಾಗ ನಮ್ಮ ಹಿರಿಯರು ಮತ್ತು ಪೋಷಕರು ಕೆಲವೊಂದು ವಿಷಯಗಳನ್ನು ಹೀಗೆ ಮಾಡಬೇಡಿ ಎಂದಾಗ ನಾವು ಅವನ್ನು ಆಲಿಸಬೇಕು. ಏಕೆಂದರೆ ಪ್ರಾಪಂಚಿಕ ಜೀವನದ ಬಗ್ಗೆ ಅವರ ಅನುಭವವು ನಮ್ಮ ಸೈದ್ಧಾಂತಿಕ ಜ್ಞಾನಕ್ಕಿಂತಲೂ ಉನ್ನತವಾಗಿದೆ. ಆದ್ದರಿಂದಲೇ ಪೋಷಕರು ತಮ್ಮ ಮಕ್ಕಳಿಗೆ ಹೀಗೆ ಮಾಡಿ ಮತ್ತು ಹೀಗೆ ಮಾಡದಿರಿ ಎಂದು ಬುದ್ಧಿವಾದ ನುಡಿಯುತ್ತಾರೆ.
ಚಿಕ್ಕ ತಪ್ಪನ್ನೂ ಕುರಿತು ಎಚ್ಚರವಾಗಿರಿ; ಸಣ್ಣ ತೂತು, ಬೃಹತ್ ಹಡಗನ್ನು ಮುಳುಗಿಸಬಲ್ಲದು (ಬೆಂಜಮಿನ್ ಫ್ರಾಂಕ್ಲಿನ್).
ಯಾವಾಗ ಯುವಕರು ಹಿರಿಯರ ಬುದ್ಧಿವಾದವನ್ನು ಅಲಕ್ಷಿಸುವರೋ ಆಗ ತಮ್ಮದೇ ರೀತಿ ಯೋಚಿಸಿ ನಾನಾ ಕಾರ್ಯಗಳನ್ನು ಮಾಡುವರು.
ಒಮ್ಮೆ ಬುದ್ಧ ಭಗವಾನರು ಮತ್ತು ಅವರ ಶಿಷ್ಯರು ಹಳ್ಳಿಗೆ ಹೋದರು. ಆ ಹಳ್ಳಿಯ ಕೆಲವರು ಬುದ್ಧರ ಮೇಲೆ ಕೋಪಗೊಂಡರು. ಯಾವಾಗ ಹೀಗೆ ಹಳ್ಳಿಯ ಕೆಲವರು ಬಯ್ಯತೊಡಗಿದಾಗ ಅವರ ಶಿಷ್ಯರು ಈ ಕಟುವಾಕ್ಯಗಳಿಂದ ಪಾರಾಗಲು ಬೇರೊಂದು ಹಳ್ಳಿಗೆ ಹೋಗಲು ಸಲಹೆ ನೀಡುತ್ತಾರೆ. ಆಗ ಭಗವಾನರು ಅವರಿಗೆ ಹೀಗೆ ಹೇಳಿದರು. ಆ ಹೊಸ ಸ್ಥಳದಲ್ಲಿಯು ಯಾವುದೇ ತೊಂದರೆಗಳು ಆಗುವುದಿಲ್ಲ ಎಂದು ಖಚಿತತೆ ಇದೆಯೆ? ಎಂದು ಹೇಳಿ ಪುನಃ ಹೀಗೆ ಮುಂದುವರೆಸಿದರು ತೊಂದರೆಗಳಿಂದ ಪಾರಾಗಲು, ಅಲ್ಲಿಂದ ಓಡಿಹೋಗುವುದೇ ಪರಿಹಾರವಲ್ಲ. ನಮ್ಮಲ್ಲಿ ಅಪರಾಧಿ ಪ್ರಜ್ಞೆಯಿಲ್ಲದಿದ್ದರೆ, ಯಾವ ದೋಷಣೆಯು, ಕಟುವಾಕ್ಯವು ನಮ್ಮನ್ನು ಎಂದಿಗೂ ತಲುಪದು. ಆದ್ದರಿಂದ ನಾವು ಸಹನೆಯಿಂದಿರಬೇಕು ಮತ್ತು ಅವರಿಗೆ ದಣಿವಾಗುವವರೆಗೆ ತೃಪ್ತಿಯಾಗುವವರೆಗೆ ದೋಷಿಸಲು ಬಿಡಿ ಎಂದರು. ಆಗ ಭಿಕ್ಷುಗಳು ಸಹಾ ತಟಸ್ಥರಾದರು. ಹೀಗೆ ಬುದ್ಧರಿಂದ ಮತ್ತು ಭಿಕ್ಷುಗಳಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದುದರಿಂದಾಗಿ, ಕೆಲವು ದಿನಗಳ ನಂತರ ಆ ಜನರೇ ದೂಷಿಸುವುದನ್ನು ನಿಲ್ಲಿಸಿದರು.
ಈ ದೃಷ್ಟಾಂತವನ್ನು ಗಮನಿಸಿ, ನಡೆದ ಕೆಲವೊಂದನ್ನು ಗಮನಿಸಿ ಅಥವಾ ಕೇಳಿ ಕೆಲವರು ಅದನ್ನು ಸಮಸ್ಯೆಯೆಂದು ಪರಿಗಣಿಸಿ ಗಂಭೀರವಾಗಿ ತೆಗೆದುಕೊಳ್ಳುತ್ತಾರೆ. ಮತ್ತೆ ಕೆಲವರು ಅದನ್ನು ಮನಸ್ಸಿಗೆ ತೆಗೆದುಕೊಳ್ಳದೆ ಅಲಕ್ಷಿಸುತ್ತಾರೆ. ಇನ್ನೂ ಕೆಲವರು ಅಸಮಂಜಸ ಭಯ ಮತ್ತು ಚಿಂತೆಯನ್ನು ಅದಕ್ಕಾಗಿ ಸೃಷ್ಟಿಸಿಕೊಳ್ಳುತ್ತಾರೆ. ಮತ್ತೆ ಕೆಲವರು ಅದನ್ನು ಮನಸ್ಸಿಗೆ ತೆಗೆದುಕೊಂಡು, ಚಿಂತನೆಮಾಡಿ ಉತ್ತಮ ನೀತಿಪಾಠವೆಂದು ಪರಿಗಣಿಸುತ್ತಾರೆ. ಇನ್ನೂ ಕೆಲವರಿದ್ದಾರೆ ಅವರು ಇದನ್ನು ಹಾಸ್ಯ ತುಣುಕು ಎಂದು ಭಾವಿಸಿ ತಳ್ಳಿಹಾಕುತ್ತಾರೆ. ಇನ್ನು ಕೆಲವರು ಇದ್ದಾರೆ ಅವರು ಇದನ್ನು ಟೀಕಾ ವಿಷಯವನ್ನಾಗಿಸಿ ದೂಷಣೆ ಮಾಡಲು ಆರಂಭಸುತ್ತಾರೆ.
ಹೀಗೆ ಜನರು ತಮ್ಮ ಮನೋವೃತ್ತಿಗೆ ತಕ್ಕಂತೆ ಒಂದೇ ಸಂದರ್ಭವನ್ನು ವಿಭಿನ್ನವಾಗಿ ಕಾಣುತ್ತಾರೆ ಮತ್ತು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಾರೆ. ನಿಜಕ್ಕೂ ಸಮಸ್ಯೆಗಳು ಸೃಷ್ಟಿಯಾಗುವುದೇ ಮನಸ್ಸಿನಲ್ಲಿ ಆಗಿದೆ. ನಾವು ನಮ್ಮ ಮನಸ್ಸಿನಲ್ಲಿ ಸಹನೆಗೆ, ತಾಳ್ಮೆಗೆ ಮತ್ತು ಅರಿವಿಗೆ ಸ್ಥಳವಿತ್ತು ವೃದ್ದಿಸಿದರೆ ಆಗ ನಾವು ಯಾವುದೇ ಸನ್ನಿವೇಶವನ್ನು ಗಂಭೀರವಾಗಿ ತೆಗೆದುಕೊಳ್ಳಲಾರೆವು ಹಾಗು ಇನ್ನೂ ಹೆಚ್ಚಿನ ಸಮಸ್ಯೆಯನ್ನು ಸೃಷ್ಟಿಸಲಾರೆವು. ನಮ್ಮ ಸಮಸ್ಯೆಗಳು ನಮ್ಮ ಸೃಷ್ಟಿಯೇ ಆಗಿವೆ ಹೊರತು ಇತರರಿಂದ ಒದಗಿಬರುವಂಥವಲ್ಲ.