ಸಾಮರ್ಥ್ಯ, ಚೈತನ್ಯ ಮತ್ತು ಅನುಗ್ರಹಕ್ಕಾಗಿ ಪ್ರಜಾಪ್ರತಿಗೆ ಮೂರು ಪ್ರಾರ್ಥನೆಗಳು : ಋಗ್ವೇದದಿಂದ

ಋಗ್ವೇದದ ಹತ್ತನೇ ಮಂಡಲದಲ್ಲಿ ಬರುವ ಪ್ರಜಾಪತಿಯನ್ನು ಸ್ತುತಿಸುವ ಮೂರು ಪ್ರಾರ್ಥನೆಗಳನ್ನು ಇಲ್ಲಿ ನೀಡಲಾಗಿದೆ. ಇಲ್ಲಿ ಋಷಿಗಳು ಪ್ರಜಾಪತಿಯನ್ನು ಬಣ್ಣಿಸುತ್ತಾ “ಇವನಿಗಲ್ಲದೆ ಇನ್ನಾರಿಗೆ ಹವಿಸ್ಸನ್ನು ಸಮರ್ಪಿಸೋಣ?” ಎಂದು ಕೇಳುತ್ತಿದ್ದಾರೆ. ಕಲಿಯುಗದಲ್ಲಿ ಪ್ರಾರ್ಥನೆಯೇ ಹವಿಸಮರ್ಪಣೆಯಾಗಿದೆ.

ಹಿರಣ್ಯಗರ್ಭಃ ಸಮವರ್ತತಾಗ್ರೇ ಭೂತಸ್ಯ ಜಾತಃ ಪತಿರೇಕ ಆಸೀತ್|
ಸ ದಧಾರ ಪೃಥ್ವೀಂ ದ್ಯಾಮುತೇಮಾಂ ಕಸ್ಮೈ ದೇವಾಯ ಹವಿಷಾ ವಿಧೇಮ ||
ಹಿರಣ್ಯ ಗರ್ಭ ಎಂಬ ಸಂಜ್ಞೆಯಿಂದ ಪ್ರಸಿದ್ಧನಾದ ಪ್ರಜಾಪತಿಯು ಜಗತ್ತಿನ ಸೃಷ್ಟಿಗೆ ಮೊದಲು ತಾನೊಬ್ಬನೇ ಇದ್ದನು. ಅನಂತರ ತನ್ನಿಂದಲೇ ಸೃಷ್ಟಿಯಾದ ಸಕಲ ಜಗತ್ತಿಗೂ ತಾನೊಬ್ಬನೇ ಪಾಲಕನೂ ಪ್ರಭುವೂ ಆದನು. ಅವನು ವಿಸ್ತಾರವಾದ ಸ್ವರ್ಗಲೋಕವನ್ನೂ, ಭೂಮಿ – ಅಂತರಿಕ್ಷಗಳನ್ನೂ ತನ್ನ ಸಾಮರ್ಥ್ಯದಿಂದ ಧರಿಸಿರುವನು. ಇಂತಹ ದೇವತಾತ್ಮನಾದ ಪ್ರಜಾಪತಿಗಲ್ಲದೆ ಇನ್ನಾರಿಗೆ ನಮ್ಮ ಪ್ರಾರ್ಥನೆ ಸಲ್ಲಿಸೋಣ!?

ಯ ಆತ್ಮದಾ ಬಲದಾ ಯಸ್ಯ ವಿಶ್ವ ಉಪಾಸತೇ ಪ್ರಶಿಷಂ ಯಸ್ಯ ದೇವಾಃ |
ಯಸ್ಯ ಛಾಯಾಮೃತಂ ಯಸ್ಯ ಮೃತ್ಯುಃ ಕಸ್ಮೈ ದೇವಾಯ ಹವಿಷಾ ವಿಧೇಮ ||
ಪ್ರಜಾಪತಿಯು ಸಕಲ ಜಗತ್ತಿಗೂ ಶಕ್ತಿಯನ್ನೂ ಚೈತನ್ಯವನ್ನೂ ನೀಡುತ್ತಾನೆ. ಅವನ ಉತ್ಕೃಷ್ಟ ಶಾಸನವನ್ನು ಎಲ್ಲ ದೇವತೆಗಳೂ ಉಳಿದೆಲ್ಲ ಜಗತ್ತೂ ಪಾಲಿಸುತ್ತವೆ. ಮೃತ್ಯು – ಅಮೃತತ್ವಗಳೆರಡೂ ಅವನಿಗೆ ನೆರಳಿನಂತೆ ಇರುವವು. ಇಂತಹ ದೇವತಾತ್ಮನಾದ ಪ್ರಜಾಪತಿಗಲ್ಲದೆ ಇನ್ನಾರಿಗೆ ನಮ್ಮ ಪ್ರಾರ್ಥನೆ ಸಲ್ಲಿಸೋಣ!?

ಯಸ್ಯೇಮೇ ಹಿಮವಂತೋ ಮಹಿತ್ವಾ ಯಸ್ಯ ಸಮುದ್ರಂ ರಸಯಾ ಸಹಾಹುಃ |
ಯಸ್ಯೇಮಾಃ ಪ್ರದಿಶೋ ಯಸ್ಯ ಬಾಹೂ ಕಸ್ಮೈ ದೇವಾಯ ಹವಿಷಾ ವಿಧೇಮ ||
ಹಿಮಾಲಯವೇ ಮೊದಲಾದ ಸಕಲ ಪರ್ವತಗಳು, ಸಕಲ ನದಿಗಳಿಂದ ಕೂಡಿದ ಎಲ್ಲಾ ಸಮುದ್ರಗಳು, ಪ್ರಜಾಪತಿಯ ಪ್ರಭಾವದಿಂದಲೇ ನಿರ್ಮಾಣಗೊಂಡವು. ಅದಲ್ಲದೆ, ಎಲ್ಲ ದಿಕ್ಕುಗಳೂ ಅವನ ಭುಜಗಳೇ ಆಗಿವೆ. ಇಂತಹ ದೇವತಾತ್ಮನಾದ ಪ್ರಜಾಪತಿಗಲ್ಲದೆ ಇನ್ನಾರಿಗೆ ನಮ್ಮ ಪ್ರಾರ್ಥನೆ ಸಲ್ಲಿಸೋಣ!?
(ಋಗ್ವೇದ | 10. 121 : 1,2,4)

1 Comment

  1. ಮೂರು ಪ್ರಾರ್ಥನೆಗಳು ಸುಂದರವಾಗಿದ್ದು ಅವುಗಳ ಅರ್ಥ ತಿಳಿದು ತುಂಬಾ ಸಂತೋಷ ಆಯಿತು.

Leave a Reply to NVVaidyaCancel reply