ಶ್ರೀ ಮಹೀಪತಿ ದಾಸರು: ದಾಸ ಸಾಹಿತ್ಯದ ಎಲೆಮರೆಯ ಹಣ್ಣು

ದಾಸ ಸಾಹಿತ್ಯಕ್ಕೆ  ಮಹಿಪತಿದಾಸರು,ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಕೀರ್ತನೆಗಳ ಮೂಲಕ ನೀಡಿದ ಕೊಡುಗೆ ಅನುಪಮವಾದದ್ದು. ಬಹುಶಃ ಇಷ್ಟೊಂದು ಅಗಾಧ ಪ್ರಮಾಣದ ಸಾಹಿತ್ಯದ ಕೊಡುಗೆ ಒಂದು ದಾಖಲೆಯೆಂದರೂ ತಪ್ಪಾಗಲಿಕ್ಕಿಲ್ಲ…. | ನಾರಾಯಣ ಬಾಬಾನಗರ  

ಕನ್ನಡ ಸಾರಸ್ವತ ಲೋಕಕ್ಕೆ ದಾಸಸಾಹಿತ್ಯದ ಕೊಡುಗೆ ಅನನ್ಯವಾದದ್ದು. ಎರಡು ನೂರು ಮಿಗಿಲಕ್ಕಿಂತಲೂ ಹೆಚ್ಚಿನ ದಾಸರು ದಾಸಸಾಹಿತ್ಯದ ಹಿರಿಮೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.ಶಾಸ್ತ್ರದ ವಿಷಯಗಳನ್ನು ಜನಸಾಮಾನ್ಯರಿಗೆ ಸರಳವಾಗಿ ಪದ್ಯಗಳ ಮೂಲಕ ತಲುಪಿಸಿದ ಕೀರ್ತಿ ದಾಸರಿಗೆ ಮುಟ್ಟಬೇಕು.ಶ್ರೀಪಾದರಾಜರು ಒಬ್ಬ ಯತಿಗಳಾಗಿದ್ದುಕೊಂಡು ದೇವರ ಪೂಜೆಯ ಸಂದರ್ಭದಲ್ಲಿ ಹಾಡುಗಳ ನೈವೇದ್ಯವನ್ನು ತೋರಿಸುವ ಪರಂಪರೆಯನ್ನು ಹುಟ್ಟು ಹಾಕಿದರೆಂದು ಹೇಳಬಹುದು.ಅನಂತರ ವ್ಯಾಸರಾಯರು ಅದನ್ನು ಪೋಷಿಸಿ ಬೆಳೆಸಿದರು. ವ್ಯಾಸರಾಯರ ಶಿಷ್ಯರಾದ ಪುರಂದರದಾಸರು ಮತ್ತು ಕನಕದಾಸರು ಅದಕ್ಕೆ ಇನ್ನಿಷ್ಟು ಮೆರಗನ್ನು ನೀಡಿದರು.ಪುರಂದರದಾಸರು ಮತ್ತು ಕನಕದಾಸರ ಅನಂತರ ವಿಜಯದಾಸರು, ಗೋಪಾಲದಾಸರು ಮತ್ತು ಜಗನ್ನಾಥದಾಸರ ಹೆಸರುಗಳನ್ನು ಮುಂಚೂಣಿಯಲ್ಲಿ ಹೇಳಿಕೊಂಡು ಬರಲಾಗುತ್ತಿದೆ. ಆದರೆ ಪುರಂದರದಾಸರು ಮತ್ತು ಕನಕದಾಸರ ಅನಂತರದ ಅವಧಿಯಲ್ಲಿ, ವಿಜಯದಾಸರ ಕಾಲ ಪ್ರಾರಂಭವಾಗುವ ಪೂರ್ವದಲ್ಲಿ ವಿಜಯಪುರ ಜಿಲ್ಲೆಯ ಕಾಖಂಡಕಿಯ ಗ್ರಾಮದಲ್ಲಿ ವಾಸವಿದ್ದ ಮಹಿಪತಿದಾಸರು ಮತ್ತು ಅವರ ವಂಶಜರಿಂದ ಹರಿದಾಸ ಸಾಹಿತ್ಯದ ಕೃಷಿ ಸಮೃದ್ಧವಾಗಿ ನಡೆಯಿತು. ಆದರೆ ದುರ್ದೈವದ ಸಂಗತಿ ಎಂದರೆ ಬೆಳಕಿಗೆ ಬಾರದೇ ಹೋಯಿತು.

ದಾಸ ಸಾಹಿತ್ಯಕ್ಕೆ  ಮಹಿಪತಿದಾಸರು,ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಕೀರ್ತನೆಗಳ ಮೂಲಕ ನೀಡಿದ ಕೊಡುಗೆ ಅನುಪಮವಾದದ್ದು. ಬಹುಶಃ ಇಷ್ಟೊಂದು ಅಗಾಧ ಪ್ರಮಾಣದ ಸಾಹಿತ್ಯದ ಕೊಡುಗೆ ಒಂದು ದಾಖಲೆಯೆಂದರೂ ತಪ್ಪಾಗಲಿಕ್ಕಿಲ್ಲ.

ದಾಸಸಾಹಿತ್ಯದ ಮೂಲ ಆಶಯ ಭಕ್ತಿ. ಭಗವಂತನ ಸಾಕ್ಷಾತ್ಕಾರಕ್ಕೆ ಭಕ್ತಿಯ ಮೆಟ್ಟಿಲನ್ನು ತೋರಿಸಿಕೊಟ್ಟವರು ಹರಿದಾಸರು. ಜನಸಾಮಾನ್ಯರಿಗೆ ತಿಳಿಹೇಳುವಲ್ಲಿ ರಚಿಸಿದ ಪದ್ಯಗಳಲ್ಲಿಯೂ ಅನೇಕ ಪ್ರಯೋಗಗಳೂ ನಡೆದಿವೆ. ಅವುಗಳಲ್ಲಿ ಮಿಶ್ರಭಾಷಾ ಪದ್ಯಗಳ ರಚನೆಯೂ ಒಂದು. ಒಂದೇ ಪದ್ಯದಲ್ಲಿ ಬೇರೆ ಬೇರೆ ಭಾಷೆಯ ಪದಗಳನ್ನು ಬಳಸಿ ರಚಿಸಿದ ಕ್ರಮ ಗಮನ ಸೆಳೆಯುತ್ತದೆ. ಇಂತಹ ರಚನೆಗಳಿರುವ ಶ್ರೀಮಹಿಪತಿದಾಸರ ಎರಡು ಪದ್ಯಗಳನ್ನು ಇಲ್ಲಿ ಉದಾಹರಣೆಯಾಗಿ ತೆಗೆದುಕೊಳ್ಳಲಾಗಿದೆ.

ಪದ್ಯ-1

ಸಮಜ್ಯೊ ಯಾರಾ ಅಪನೊ ಮೆ ತರಿಕತ ಹಕೀಕತ ।

ಭಿಸ್ತ ಕೆ ದರವಾಜಾ ಹೈ ಯೊ ಶರಿಯೆತ ಮಾರುತ ॥

ತಿಳಿದರ ಕಳವದು ಅಂಧತ್ವ ಬಧಿರತ್ವ ।

ತೊಳದು ಕಳವದು ಮೂಕತ್ವ ಪಿಶಾಚತ್ವ ॥ ( 1 )

ಶರಣ ರಿಘಾ ಗುರು ಜ್ಞಾನ ಉಪದೇಶಿಲ ಪ್ರಕಾಶಿಲ ।

ಸದ್ಗುರು ಕೃಪೆಯಿಂದ ಪಾಹತಾ ಸರ್ವಮಯ ದಿಸೆಲ ಭಾಸೆಲ ॥

ಜೊ ಕೋಈ ಸಮಜೆ ಉನ ಆಪೇ ಹುಯೆ ದಿನ ಹಾಸೀಲ ವಾಸೀಲ ।

ಮುರಾದ ಕುದರತ ಹಾಸೀಲ ಹೊ ಮಿಲೆ ಮಶಗುಲ ಖುಷ ಹಾಲ ॥ ( 2 )

ಸಾಧಿಸದಲ್ಲದೆ ತಿಳಿಯದು ನಿಜ ಜ್ಞಾನ ತತ್ವ ಆದಿತತ್ವ ।

಻ಅನಾದಿ ಪದ ಘನ ಮಹಿಮಿಯು ಗುರು ನಿಜ ಬೋಧತ್ವ ಭೇದತ್ವ ॥

ಧನ್ಯ ಧನ್ಯ ತೆ ಗುರುಭಕ್ತ ವಿರಕ್ತ ।

ಮಹಿಪತಿ ಗುರುಕೃಪಾ ಹರುಷಯುಕ್ತ ಜೀವನಮುಕ್ತ ॥ ( 3 )

ಮೂರು ನುಡಿಯ ಈ ಪದ್ಯದಲ್ಲಿ ಮೂರು ಭಾಷೆಗಳಾದ ಕನ್ನಡ,ಮರಾಠಿ ಮತ್ತು ಹಿಂದಿ ಪದಗಳು ಬಳಕೆಯಾದುದನ್ನು ಗಮನಿಸಿ.

ಗುರುವಿನ ಮಹತ್ವ ಮತ್ತು ಗುರುಭಕ್ತಿಯನ್ನು ಇಡೀ ಪದ್ಯ ಹೇಳುತ್ತಾ ಹೋಗುತ್ತದೆ. ಮೊದಲನೇ ಸಾಲು ಮನುಷ್ಯನ ಻಻ಅಸ್ತಿತ್ವವನ್ನು ಬಡಿದೆಬ್ಬಿಸಿದಂತಿದೆ. ‘’ ತಿಳಿದುಕೊ ನಿನ್ನ ಆಚರಣ ಮತ್ತು ಅಸ್ತಿತ್ವ ‘’ ಎಂಬುದನ್ನು ದಾಸವರೇಣ್ಯರು ಮನುಷ್ಯನ ಮೂಲಕ್ಕೆ ಕೈ ಹಾಕುತ್ತಾರೆ. ‘’ ಸ್ವರ್ಗದ ಬಾಗಿಲು ಆಧ್ಯಾತ್ಮದಲ್ಲಿ ಮತ್ತು ಸದಾಚರಣದಲ್ಲಿ ಯಾರು ಮುಳುಗಿರುತ್ತಾರೋ ಅವರಿಗೆ ತೆರೆದಿದೆ ’’ ಎಂಬುದು ಎರಡನೆಯ ಸಾಲಿನ ಅರ್ಥ. ಎರಡನೆಯ ಸಾಲಿನಲ್ಲಿ ಬಹಿಸ್ತ ಶಬ್ದ ಭಿಸ್ತವಾಗಿಯೂ ಮಾರಿಫತ ಪದವು ಮಾರುತವಾಗಿಯೂ ಬಳಕೆಯಾಗಿರುವ ಸಾಧ್ಯತೆ ಇದೆ. ಇವೆರಡೂ ಸಾಲುಗಳು ಕನ್ನಡೇತರ ಎಂಬುದನ್ನು ಗಮನಿಸಿ. ಮುಂದಿನ ಎರಡು ಸಾಲುಗಳು ಕನ್ನಡ ನುಡಿಗಳು. ಲೌಕಿಕ ಬದುಕಿನಿಂದ ಅಲೌಕಿಕ ಬದುಕಿನೆಡೆಗೆ ಸಾಗುವ ಹೆಜ್ಜೆಗಳಿಗೆ ಬೆಳಕು ಚೆಲ್ಲುವಂತೆ ಮೊದಲನೆಯ ನುಡಿ ಇದೆ.

ಎರಡನೆಯ ನುಡಿಯ ನಾಲ್ಕೂ ಸಾಲುಗಳು ಕನ್ನಡೇತರ ಶಬ್ದಗಳಾಗಿರುವುದು ವಿಶೇಷ. ಻ಅಲೌಕಿಕ ಬದುಕಿನ ದಾರಿ ತೋರುವವ ಗುರು.ಅದಕ್ಕೆಂತಲೆ ಎರಡನೆಯ ನುಡಿಯ ಮೊದಲ ಸಾಲಿನಲ್ಲಿ ‘’ಗುರುಗಳಿಗೆ ಶರಣು ಹೋದರೆ ಜ್ಞಾನದಿಂದ ಪ್ರಕಾಶ ತೋರಿಸುತ್ತಾರೆ ‘’ ಎಂದು ಹೇಳುತ್ತಾರೆ. ಮುಂದುವರೆದು ‘’ ಸದ್ಗುರುವಿನ ಕೃಪೆಯಿಂದಲೇ ಸರ್ವಸ್ವ ಕಾಣುವುದು. ಅಷ್ಟೇ ಅಲ್ಲದೆ ಅನುಭವಕ್ಕೆ ಸಿಕ್ಕುವುದು ’’ ಎಂದು ಗುರುವಿಗೆ ಶರಣಾಗತಿಗೆ ಇರುವ ಮಹತ್ವವನ್ನು ಸಾರುತ್ತಾರೆ. ‘’ ಯಾರು ಅವನನ್ನು ತಿಳಿದುಕೊಳ್ಳುವರೊ ಻ಅವನಿಗೆ ಒಳ್ಳೆಯ ದಿವಸ ಬರುವುದು ಮತ್ತು ದಕ್ಕುವುದು. ಇದರಿಂದಾಗಿ ಭಗವಂತನ ಸಾಕ್ಷಾತ್ಕಾರದ ಇಚ್ಛೆಯಾದರೆ ಮನಸ್ಸಿಗೆ ಆಗುವ ಆನಂದ ಻಻ಅಷ್ಟಿಷ್ಟಲ್ಲ.

ಭಗವಂತನ ಸಾಕ್ಷಾತ್ಕಾರವಾಗಬೇಕಾದರೆ ದಾರಿ ತೋರುವ ಸಮರ್ಥ ಗುರು ದಕ್ಕಬೇಕೇನೋ ನಿಜ. ಆದರೆ ಇಷ್ಟೇ ಸಾಲದು. ಅದಕ್ಕಾಗಿ ಸಾಧನೆ ಬೇಕು. ಸಾಧಿಸದಲ್ಲದೆ ತಿಳಿಯದು ನಿಜವಾದ ಜ್ಞಾನ, ತತ್ವ , ಆದಿತತ್ವಗಳೆಲ್ಲ. ಻ಅದಕ್ಕಾಗಿ ಗುರುವಿನ ಬೋಧ ಬೇಕು. ಗುರುವಿನ ಕರುಣೆ ದಕ್ಕಿದರೆ ಅದೆಂಥ ಧನ್ಯತೆ ನೋಡಿ. ಗುರುವಿನ ಕೃಪೆಯಿಂದ ಹರುಷವಲ್ಲದೆ ಜೀವನಮುಕ್ತಿಯೂ ಸಿಗುವುದು. ಇನ್ನೇನು ಬೇಕು ಹೇಳಿ.

ಪದ್ಯ-2     

ಸೀಧಾ ನುಡಿಯೊ ಸಾಕ್ಷಾತ್ಕಾರವಾ  ॥ ಧ್ರು ॥

 

ಸಾಧು ಕಾ ದಸ್ತ ಪಂಜ್ಯಾ ಲೇಣಾ, ಸಾಧು ಕೆ ಸಂಗ ಕರಣಾ ।

ಸಾಧ್ಯವಾಹುದು ಸದ್ಗುರೂ ಕರುಣಾ, ನಿರ್ಧಾರ ಹೇ ಜಾಣಾ । ( 1 )

 

ಬಾಹಂ ಯಾತ್ರಿ ಜೋ ಪಾಹೇ ಗೋವಿಂದಾ ಇಹಪರ ಆವಾಗಾನಂದಾ ।

ದೇಹಶ್ರಾಂತಿಗೆ ಸಿಲುಕದೆ ನಿಂದಾ, ವಹಿ ಖುದಾ ಕಾ ಬಂದಾ । ( 2 )

 

ಪಾಕ ದಿಲ್ಲ ಸು ಜಿಕರ ಕರಣಾ, ಲೇಕಿನ ಸಾಬಿತ ರಹಣಾ ।

ಠಾಕಾ ಅಭಾವ ಮೀ-ತೂ ಪಣಾ ಐಕ್ಯಕಿದು ಭೂಷಣಾ । ( 3 )

 

ನಿಸದಿನ ಕರೀಮ ಕಹೊ ಯಾರಾ, ವಾಸುದೇವ ಸಹಕಾರಾ ।

ವಿಶ್ವ ವ್ಯಾಪ ಮ್ಹಣಉನಿ ಸ್ಮರಾ ಲೇಸು ಅವನ ಸಂಸಾರಾ । ( 4 )

 

ಮೂವಿಧೀ ಪರಿಯಲಿ ಹೇಳಿದ ಭಾಷಾ ಮಹಾಗುರುವಿನ ಉಪದೇಶಾ ।

ಮಹಿಪತಿಗಾಯಿತು ಅತಿ ಸಂತೋಷಾ ಜೀವಕೆ ಭವ ಭಯ ನಾಶಾ । ( 5 )

ಪಲ್ಲವಿಯೊಂದಿಗೆ ಐದು ನುಡಿಗಳ ಪದ್ಯವಿದು. ಪಲ್ಲವಿಯನ್ನು ಧ್ರುವ ಎಂದು ಕರೆದುಕೊಂಡಿದ್ದಾರೆ. ಪಲ್ಲವಿಯ ಸಾಲು ಕನ್ನಡದಲ್ಲಿದೆ.಻ಅನಂತರದ ನುಡಿಗಳ ಸಾಲುಗಳಲ್ಲಿ ದಖನಿ ಹಿಂದಿ ,ಉರ್ದು, ಮರಾಠಿ ಮತ್ತು ಕನ್ನಡದ ಪದಗಳಿವೆ. ಮೊದಲನೆಯ ನುಡಿಯಲ್ಲಿ ಎರಡು ಸಾಲುಗಳಿವೆ. ಮೊದಲನೆಯ ಸಾಲು ಕನ್ನಡೇತರ ಭಾಷೆಯಲ್ಲಿದೆ. ಎರಡನೆಯ ಸಾಲಿನ ಮೊದಲರ್ಧ ಭಾಗ ಕನ್ನಡ ಻ಅನಂತರದ ಭಾಗ ಕನ್ನಡೇತರ ಭಾಷೆಯಲ್ಲಿದೆ. ಸಂತರ ಮತ್ತು ಸತ್ಸಂಗದ ಮಹತ್ವವನ್ನು ಬಿಂಬಿಸಲಾಗಿದೆ. ‘’ ಸಂತರ ಕೈಯನ್ನು ಹಿಡಿಯಬೇಕು.ಸತ್ಸಂಗದಲ್ಲಿರಬೇಕು.’’ ಹಾಗಾದಾಗ ಮಾತ್ರ ಸದ್ಗುರುವಿನ ಕರುಣೆ ಸಲ್ಲುವುದು. ಮನದಲ್ಲಿ ಇದಕ್ಕಾಗಿ ಗಟ್ಟಿ ನಿರ್ಧಾರವನ್ನು ತೆಗೆದುಕೊಳ್ಳು. ಹೊರಗೆ ಒಳಗೆ ಯಾರು ನೋಡುವರು? ಭಗವಂತನ ಕೃಪಾದೃಷ್ಟಿ ಬಿದ್ದಾಗ ಸಾಧಕನಿಗೆ ಆನಂದವಾಗುವುದು. ದೇಹವಾಸನೆಗೆ ಸಿಲುಕದೆ ,ನಿಂದೆಯನ್ನು ನಿರ್ಲಕ್ಷಿಸಿದವನು ಭಗವಂತನ ದಾಸನಾಗಬಲ್ಲ. ಪವಿತ್ರ ಮನಸ್ಸಿನಿಂದ ನಾಮಸ್ಮರಣೆ ಮಾಡಬೇಕು ಜೊತೆಗೆ ಶರೀರದ ರಕ್ಷಣೆಯೂ ಇರಲಿ. ನಾನು ನೀನು ಎನ್ನುವುದು ನಾಶವಾದ ಮೇಲೆ ಭಗವಂತನ ಸಾಕ್ಷಾತ್ಕಾರಕ್ಕೆ ಹಾದಿ. ಅದಕ್ಕಾಗಿ ಹಗಲು ರಾತ್ರಿ ಭಗವಂತನ ನಾಮಸ್ಮರಣೆ ಮಾಡಿದರೆ ವಾಸುದೇವನ ಸಹಕಾರ ಸಿಗುತ್ತದೆ. ಭಗವಂತ ವಿಶ್ವವ್ಯಾಪಕ ಇದ್ದಾನೆಂದು ತಿಳಿದುಕೊಂಡು ಅವನ ಸೃಷ್ಟಿಯ ಮಹಾತ್ಮೆಯನ್ನು ಮನಸ್ಸಿಗೆ ತಂದುಕೊಳ್ಳಿ. ಕೊನೆಯ ನುಡಿಯ ಸಾಲುಗಳು ಕನ್ನಡದ ಪದಗಳಿಂದ ಕೂಡಿವೆ. ಸಾಕ್ಷಾತ್ಕಾರಕ್ಕೆ ಭಕ್ತಿ,ನಾಮಸ್ಮರಣೆ ಜೊತೆಗೆ ಗುರುವಿನ ಕಾರುಣ್ಯ ಬೇಕೆಂಬುದನ್ನು ಶ್ರೀ ಮಹಿಪತಿದಾಸರು ಇಲ್ಲಿ ಒತ್ತು ಕೊಟ್ಟು ಹೇಳಿದ್ದಾರೆ.ಭಗವಂತನ ಕಾರುಣ್ಯ ದೊರಕಿದರೆ ಸಾಕು ಅದರಷ್ಟು ಸಂತೋಷ ಮತ್ತ್ಯಾವುದೂ ಇಲ್ಲ. ಸಂಸಾರ ಭಯವೂ ಇಲ್ಲ.

ವಿವಿಧ ಭಾಷಾ ಪದಗಳ ಪ್ರಯೋಗದಿಂದಾಗಿ ಈ ರಚನೆಗಳು ಗಮನ ಸೆಳೆಯುತ್ತವೆ. ಈ ರಚನೆಗಳನ್ನು ಬೇರೆ ಬೇರೆ ದೃಷ್ಟಿಕೋನದಿಂದಲೂ ಅಧ್ಯಯನ ಮಾಡಲು ಅವಕಾಶದ ಹಾದಿಗಳು ಗೋಚರವಾಗುತ್ತವೆ. ದಾಸಸಾಹಿತ್ಯದ ರಚನೆಯನ್ನು ಇಲ್ಲಿ ನೋಡಬಹುದು. ಶ್ರೀಮಹಿಪತಿದಾಸರ ಕಾಲಘಟ್ಟದಲ್ಲಿ ಬಳಕೆಯಾಗುತ್ತಿದ್ದ ಹಿಂದಿ ಭಾಷಾ ಪ್ರಯೋಗ ಇಲ್ಲವೆ ಉರ್ದು ಭಾಷಾ ಪ್ರಯೋಗ –ಈ ರೀತಿ ಭಿನ್ನ ಭಾಷಾ ಪದಪ್ರಯೋಗಗಳ ಬಳಕೆಯ ಕುರಿತು ಸೂಕ್ಷ್ಮವಾಗಿ ಅವಲೋಕಿಸಬಹುದು. ಜೊತೆಗೆ ಒಂದು ಭಾಷೆ ಇನ್ನೊಂದು ಭಾಷೆಯ ಮೇಲೆ ಬೀರಿರಬಹುದಾದ ಪರಿಣಾಮಗಳನ್ನು ಸಹ ನೋಡಬಹುದಾಗಿದೆ.

ದಾಸಸಾಹಿತ್ಯದಲ್ಲಿ ವಿಶಿಷ್ಟ ಪ್ರಯೋಗ ಬಹುಭಾಷಾ ಪದ್ಯಗಳ ರಚನೆ. ಶ್ರೀಮಹಿಪತಿದಾಸರು ಕನ್ನಡ ಭಾಷೆಯಲ್ಲದೆ ಮಿಶ್ರಭಾಷಾ ಪದ್ಯಗಳು,ಮರಾಠಿ ಪದ್ಯಗಳು,ಹಿಂದಿ-ದಖನ್ ಉರ್ದು ಭಾಷೆಯಲ್ಲಿ ಪದ್ಯಗಳನ್ನು ರಚಿಸಿದ್ದಾರೆ. ಶ್ರೀಮಹಿಪತಿದಾಸರು ರಚಿಸಿದ ಎಲ್ಲಾ ಪದ್ಯಗಳು ಒಂದೇ ಪುಸ್ತಕದಲ್ಲಿ ಲಭ್ಯವಾಗುವ ರೀತಿಯಲ್ಲಿ ಇನ್ನೂ ಪ್ರಕಟವಾಗದೇ ಇರುವುದು ಬೇಸರದ ಸಂಗತಿ. ಆದಷ್ಟು ಬೇಗ ಅಂತಹ ಪುಸ್ತಕವೊಂದು ಹೊರಬಂದು ಅವರ ಸಾಹಿತ್ಯದ ಸ್ವಾದ ಎಲ್ಲರಿಗೂ ಸಿಗುವಂತಾಗಲಿ.

 

   

 

 

Leave a Reply