ಸಾವನ್ನು ನೋಡಿಯೂ ಶಾಶ್ವತರಂತೆ ವರ್ತಿಸುವ ಮೂರ್ಖತನ : ಸುಭಾಷಿತ

ಪ್ರತಿದಿನವೂ ಸಾವಿಗೆ ಸಾಕ್ಷಿಯಾಗುತ್ತಲೇ ಇರುವ ನಾವು ಚಿರಂಜೀವಿಗಳಂತೆ ಕಾಮಿಸುತ್ತೇವೆ. ಇದಕ್ಕಿಂತ ಆಶ್ಚರ್ಯದ ಸಂಗತಿ ಯಾವುದಿದೆ?

ಅಹನ್ಯಹನಿ ಭೂತಾನಿ ಗಚ್ಛನ್ತೀಹ ಯಮಾಲಯಂ |
ಶೇಷಾಃ ಸ್ಥಾವರಮಿಚ್ಛನ್ತಿ ಕಿಮಾಶ್ಚರ್ಯಮತಃ ಪರಮ್ || ಮಹಾಭಾರತ, ವನಪರ್ವ ||

“ಪ್ರತಿದಿನವೂ ಅಸಂಖ್ಯ ಪ್ರಾಣಿಗಳು ಯಮಪುರಿಗೆ ತೆರಳುತ್ತಲೇ ಇರುತ್ತವೆ. ಇದನ್ನು ನೋಡಿಯೂ ಉಳಿದವರು ತಾವು ಶಾಶ್ವತವಾಗಿರಬೇಕೆಂದು ಇಚ್ಛಿಸುತ್ತಾರೆ. ಲೋಕದಲ್ಲಿ ಇದಕ್ಕಿಂತ ಹೆಚ್ಚಿನ ಆಶ್ಚರ್ಯ ಯಾವುದಿದೆ?” – ಇದು ಮಹಾಬಾರತದ ವನಪರ್ವದಲ್ಲಿ ಬರುವ ಸುಭಾಷಿತ. 

ನಾವು ಪ್ರತಿನಿತ್ಯ ಒಂದಲ್ಲ ಒಂದು ಸಾವಿನ ಸುದ್ದಿ ಕೇಳುತ್ತಲೇ ಇರುತ್ತೇವೆ. ಇದ್ದಕ್ಕಿದ್ದ ಹಾಗೇ ನಮ್ಮ ಸಂಬಂಧಿಕರೊಬ್ಬರು ನಿಧನರಾಗಿರುತ್ತಾರೆ. ಅಪಘಾತದಲ್ಲಿ, ಯುದ್ಧದಲ್ಲಿ, ಜಗಳದಲ್ಲಿ, ದ್ವೇಷದಲ್ಲಿ ಹಲವಾರು ಜನ ಸಾಯುತ್ತಲೇ ಇರುತ್ತಾರೆ. ಈ ಸುದ್ದಿಗಳನ್ನು ಕೇಳಿಯೂ ಕೇಳದಂತೆ ಇರುವ ಜಾಣತನ ನಮ್ಮದು. ಸಾವಿನ ಅನಿರೀಕ್ಷತೆಯನ್ನು, ಅನಿವಾರ್ಯತೆಯನ್ನು ನೋಡುತ್ತಲೇ ಇದ್ದರೂ ನಾವು ಅದರಿಂದ ಪಾಠ ಕಲಿಯುವ ಗೋಜಿಗೆ ಹೋಗುವುದಿಲ್ಲ.

ನಮ್ಮನ್ನು ನಾವು ಅಮರರು, ಚಿರಂಜೀವಿಗಳು ಎಂದು ಭಾವಿಸಿಕೊಂಡು ಪ್ರತಿಯೊಂದರಲ್ಲೂ ಭದ್ರತೆಯನ್ನು, ರಕ್ಷಣೆಯ ಏರ್ಪಾಟನ್ನು ಮಾಡಿಕೊಳ್ಳುತ್ತೇವೆ. ಎಷ್ಟೇ ಭದ್ರ ಕಾವಲು ಮಾಡಿಕೊಂಡರೂ. ಕೋಟೆಯನ್ನೆ ಕಟ್ಟಿಕೊಂಡರೂ ಕಾಲದೊಂದಿಗೆ ಮೃತ್ಯುವು ಬಂದು ನಮ್ಮನ್ನು ಹೊತ್ತೊಯ್ಯುವುದು ಖಚಿತ. ಇದನ್ನು ನಾವು ಪ್ರತ್ಯಕ್ಷ ನೋಡಿದ್ದರೂ ಸ್ಮಶಾನ ವೈರಾಗ್ಯವೆಂಬಂತೆ ಕೆಲವು ಗಂಟೆ ಅಥವಾ ದಿನಗಳ ಕಾಲ ಬದುಕಿನ ನಶ್ವರತೆಯ ಬಗ್ಗೆ ಚಿಂತಿಸಿ ನಂತರ ಮತ್ತದೇ ಭೋಗದ ಹಾದಿಗೆ ಮರಳುತ್ತೇವೆ. 

ಮನುಷ್ಯರ ಈ ನಡವಳಿಕೆಯು ಮಹಾಭಾರತದ ವನಪರ್ವದಲ್ಲಿ ಈ ಮೇಲಿನಂತೆ ಸುಭಾಷಿತದ ರೂಪದಲ್ಲಿ ಚರ್ಚೆಗೊಂಡಿದೆ. 

2 Comments

  1. ಸುಭಾಷಿತಗಳು ಚೆನ್ನಾಗಿ ಮೂಡಿ ಬರುತ್ತಿದೆ

  2. ಜಗತ್ತಿನಲ್ಲಿ ಮುಚ್ಚಿಡಲಾಗದ ಮೂರು. ಸತ್ಯ ಗಳು ಸೂರ್ಯ, ಚಂದ್ರ ಹಾಗೂ ನಕ್ಷತ್ರ ಗಳು.

Leave a Reply