ಸಂಚಿತ, ಆಗಾಮಿ ಮತ್ತು ಮಾಯಾಜಾಲಗಳಿಂದ ಪಾರಾಗುವ ಬಗೆ ಯಾವುದು?

ಇಂಥಾ ಪರಿಸ್ಥಿತಿಯಲ್ಲಿದ್ದರೂ ಭಗವಂತನ ಕಡೆ ಗಮನ ಹರಿಸದೆ ಇಂದ್ರಿಯಭೋಗವೆಂಬ ಜೇನಿನ ರುಚಿಗೆ ಹಪಹಪಿಸುತ್ತಿದ್ದೇವೆ! ಈ ಮಧು – ಮಾಯೆಯ ಜಾಲಕ್ಕೆ ಬಿದ್ದು ವರ್ತಮಾನವನ್ನು ಕಳೆದುಕೊಂಡು, ನಮ್ಮ ಜನ್ಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ…

ಈ ದೃಷ್ಟಾಂತ ಚಿತ್ರವನ್ನು ಗಮನವಿಟ್ಟು ನೋಡಿ; ಮನುಷ್ಯ ಮರದ ಕೊಂಬೆಯಲ್ಲಿ ನೇತಾಡುತ್ತಿದ್ದಾನೆ. ಆನೆಯೊಂದು ಅದರ ಬುಡವನ್ನೇ ಹಿಡಿದು ಎಳೆಯುತ್ತಿದೆ. ಅವನು ಹಿಡಿದಿರುವ ಕೊಂಬೆಯನ್ನು ಎರಡು ಇಲಿಗಳು ಕೊರೆದು ತಿನ್ನುತ್ತಿವೆ. ತಲೆಯ ಮೇಲ್ಭಾಗದಲ್ಲಿ ಜೇನುಗೂಡು ಕಟ್ಟಿದೆ, ಅದರಿಂದ ಮಧು ಸುರಿಯುತ್ತುದೆ. ಆ ಮನುಷ್ಯನ ಕಾಲ ಬುಡದಲ್ಲಿ ನ ಕೊಳದಲ್ಲಿ ವಿಷಸರ್ಪಗಳು ಹೆಡೆ ಎತ್ತಿ ಕುಳಿತಿವೆ. ಪಕ್ಕದಲ್ಲಿ ಭಗವಂತ ಆಸರೆ ಕೊಡಲು ಕೈಚಾಚಿದ್ದಾನೆ. ಆದರೆ ಮನುಷ್ಯ ನಾಲಿಗೆ ಚಾಚಿಕೊಂಡು ಮೇಲಿಂದ ತೊಟ್ಟಿಕ್ಕುತ್ತಿರುವ ಮಧುವಿನ ರುಚಿಯಲ್ಲಿ ಮೈಮರೆತಿದ್ದಾನೆ!

ಇಲ್ಲಿ, ಆನೆ ಪೂರ್ವಜನ್ಮದ ಕರ್ಮ (ಸಂಚಿತ). ಕೊಳದಲ್ಲಿರುವ ಹಾವುಗಳು ಭವಿಷ್ಯದ ಕರ್ಮಗಳು (ಆಗಾಮಿ). ಮರದ ಕೊಂಬೆ ಪ್ರಸ್ತುತ ಬದುಕು. ಕಪ್ಪು – ಬಿಳುಪು ಇಲಿಗಳು ಅದನ್ನು ತಿಂದು ಮುಗಿಸುತ್ತಿರುವ ಹಗಲು-ರಾತ್ರಿಗಳು. ಮಧು ಸುರಿಯುತ್ತಿರುವ ಜೇನುಗೂಡು ಬೇರೇನಲ್ಲ, ಅದು ಮಾಯೆ! ವರ್ತಮಾನದ ರೆಂಬೆಗೆ ಜೋತಾಡುತ್ತಿರುವ ಮನುಷ್ಯ ತನ್ನನ್ನು ಉಳಿಸಲೆಂದು ಕೈ ಚಾಚಿದ ಭಗವಂತನನ್ನು ಕಡೆಗಣ್ಣಿಂದಲೂ ನೋಡದೆ ನಾಲ್ಕು ಹನಿ ಜೇನಿಗಾಗಿ ನಾಲಿಗೆ ಚಾಚುತ್ತಿದ್ದಾನೆ….! ಮಾಯೆಯ ಸೆಳೆತ ಇಂಥದ್ದು.

ಇಲಿಗಳು ಕೊರೆಕೊರೆದು ರೆಂಬೆ ಮುರಿದು ಬೀಳಲಿದೆ; ಅಂದರೆ, ಹಗಲು ರಾತ್ರಿಗಳು ನಮ್ಮ ಆಯುಷ್ಯವನ್ನು ತಿಂದುಹಾಕಲಿವೆ. ಕೆಳಗೆ ಬಿದ್ದರೆ ಹಾವಿಗೆ, ಅರ್ಥಾತ್ – ಆಗಾಮಿ ಎಂಬ ಕರ್ಮದ ಬಾಯಿಗೆ ಆಹಾರವಾಗಲಿದ್ದೇವೆ. ಇತ್ತ ನಮ್ಮ ಹಿಂದಿನ ಕರ್ಮಗಳೆಲ್ಲವೂ ಬಲ ಹಾಕಿ ಆನೆಯಂತೆ ನಮ್ಮ ವರ್ತಮಾನವನ್ನೆ ಎಳೆಯುತ್ತಾ ಬುಡಸಹಿತ ಅಲುಗಾಡಿಸುತ್ತಿವೆ. ಆದರೆ ನಾವೇನು ಮಾಡುತ್ತೇವೆ? ಇಂಥಾ ಪರಿಸ್ಥಿತಿಯಲ್ಲಿದ್ದರೂ ಭಗವಂತನ ಕಡೆ ಗಮನ ಹರಿಸದೆ ಇಂದ್ರಿಯಭೋಗವೆಂಬ ಜೇನಿನ ರುಚಿಗೆ ಹಪಹಪಿಸುತ್ತಿದ್ದೇವೆ! ಈ ಮಧು – ಮಾಯೆಯ ಜಾಲಕ್ಕೆ ಬಿದ್ದು ವರ್ತಮಾನವನ್ನು ಕಳೆದುಕೊಂಡು, ನಮ್ಮ ಜನ್ಮವನ್ನು ವ್ಯರ್ಥ ಮಾಡಿಕೊಳ್ಳುತ್ತಿದ್ದೇವೆ.

ಈ ಮಾಯೆಯ ಜಾಲದಿಂದ ನಾವು ಪಾರಾಗುವ ಉಪಾಯವನ್ನು ಗೀತಾಚಾರ್ಯನಾಗಿ ಶ್ರೀಕೃಷ್ಣ ಹೀಗೆ ಹೇಳಿದ್ದಾನೆ:

ತಪಸ್ವಿಭ್ಯೋಧಿಕೋ ಯೋಗೀ ಜ್ಞಾನಿಭ್ಯೋಪಿ ಮತೋಧಿಕಃ |ಕರ್ಮಿಭ್ಯಶ್ಚಾಧಿಕೋ ಯೋಗೀ ತಸ್ಮಾದ್ಯೋಗೀ ಭವಾರ್ಜುನ ||ಭಗವದ್ಗೀತೆ | ಧ್ಯಾನಯೋಗ 46 ||

“ಯೋಗಿ ತಪಸ್ವಿಗಳಿಗಿಂತಲೂ ಅಧಿಕ, ಜ್ಞಾನಿಗಳಿಗಿಂತಲೂ ಅಧಿಕ, ಕರ್ಮಿಗಳಿಗಿಂತಲೂ ಅಧಿಕ ಎಂದು ನನ್ನ ಅಭಿಪ್ರಾಯ, ಆದ್ದರಿಂದ ಓ ಅರ್ಜುನ, ನೀನು ಯೋಗಿಯಾಗು”.

ಇಲ್ಲಿ ಯೋಗಿ ಎಂದರೆ ಯಾರು? ಆದನ್ನೂ ಶ್ರೀಕೃಷ್ಣ ಮುಂಚಿತವಾಗಿಯೇ ಗೀತೆಯಲ್ಲಿ ಹೀಗೆ ಹೇಳಿದ್ದಾನೆ –

ಅನಾಶ್ರಿತಃ ಕರ್ಮಫಲಂ ಕಾರ್ಯಂ ಕರ್ಮ ಕರೋತಿ ಯಃ ಸಂನ್ಯಾಸೀ ಯೋಗೀ ನಿರಗ್ನಿರ್ನ ಚಾಕ್ರಿಯಃ ।।ಭಗವದ್ಗೀತೆ| ಧ್ಯಾನಯೋಗ 1।।
“ಕರ್ಮಫಲವನ್ನು ಆಶ್ರಯಿಸದೆ ಮಾಡಬೇಕಾದ ಕರ್ಮವನ್ನು ಯಾವನು ಮಾಡುತ್ತಿರುವನೋ ಅವನು ಸಂನ್ಯಾಸಿಯೆಂದೂ ಯೋಗಿಯೆಂದೂ ತಿಳಿಯಬೇಕು. ಕೇವಲ ನಿರಗ್ನಿಯೂ ಅಕ್ರಿಯನೂ ಆದವನಲ್ಲ” ಎನ್ನುವ ಮೂಲಕ ಶ್ರೀಕೃಷ್ಣ ಯೋಗಿ ಎಂದರೆ ಯಾರೆಂದು ಸ್ಪಷ್ಟ ಪಡಿಸುತ್ತಾನೆ. ಅಗ್ನಿಹೋತ್ರ ಮುಂತಾದ ಕರ್ಮಗಳನ್ನು ನಿತ್ಯಕರ್ಮವೆಂದು ತಿಳಿದು ಮಾಡಿದ ಹೊರತು ಕಾಮ್ಯಕರ್ಮವಾಗಿ ಮಾಡುವುದು ಯೋಗಿಯ ಲಕ್ಷಣವಲ್ಲ. ಶೃತಿ-ಸ್ಮೃತಿಗಳಲ್ಲಿ ನಿರಗ್ನಿಯೂ ಅಕ್ರಿಯನೂ ಆದವ ಸಂನ್ಯಾಸಿ ಮತ್ತು ಯೋಗಿಯೆಂದು ಹೇಳಿದ್ದರೂ ಇಲ್ಲಿ ಕರ್ಮಫಲವನ್ನು ಸಂನ್ಯಾಸ ಮಾಡಿದವನಿಗೆ ಸಂನ್ಯಾಸಿಯೆಂದು ಶ್ರೀಕೃಷ್ಣನು ಕರೆದಿದ್ದಾನೆ. ಯೋಗವನ್ನು ದೊರಕಿಸಲು ಕರ್ಮವನ್ನು ಮಾಡತಕ್ಕವನಿಗೆ ಯೋಗಿಯೆಂದು ಕರೆದಿದ್ದಾನೆ.

ಆದ್ದರಿಂದ, ಇಂದ್ರಿಯತೃಪ್ತಿಗೆ ಹಾತೊರೆಯದೆ, ಮಧು – ಮಾಯೆಗೆ ನಾಲಗೆ ಚಾಚುವ ಭೋಗಿಗಳಾಗದೆ, ಕರ್ಮಫಲವನ್ನು ಸಾಧ್ಯವಾದಷ್ಟೂ ನಿರ್ಲಿಪ್ತವಾಗಿ ಬಿಟ್ಟುಕೊಡುತ್ತಾ ಯೋಗಿಗಳಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸೋಣ. ಸಂಚಿತ – ಆಗಾಮಿಗಳೆಂಬ ಆನೆ – ಮೊಸಳೆಗಳಿಂದಲೂ; ಮಧುವೆಂಬ ಮಾಯೆಯಿಂದಲೂ ನಮ್ಮನ್ನು ರಕ್ಷಿಸಿಕೊಳ್ಳೋಣ.
ಇದು ಈ ಚಿತ್ರದ ಆಶಯ.

2 Comments

  1. ದೇವರೆಂಬುದೇನು ಸುಳ್ಳೇ ಮಿಥ್ಯವೇ ಭ್ರಮೆಯೇ ಸೊನ್ನೆಯೇ ಶೂನ್ಯವೇ ಅಂಬರವೇ ಭಯವೇ ಕಲ್ಪನೆಯೇ ಏನೂಇಲ್ಲವೇ…..ಯಾರೂ ಅರಿಯಲಿಲ್ಲವೆಂದರೇ ನಾಸ್ತಿ

  2. ಅರಳೀ ಮರದಲ್ಲಿ 33 ಕೋಟಿ ದೇವತೆಗಳ ಅಂಶ ಇರುತ್ತದೆ.

Leave a Reply