“ಅಂಟಿಕೊಳ್ಳುವುದೆಂದರೆ ದಾರಿ ತಪ್ಪುವುದು” : Hsin Hsin Ming ಓಶೋ ಉಪನ್ಯಾಸ, ಅಧ್ಯಾಯ ~ 6.4

ಸಹಜವಾಗಿರಿಯಾವುದಕ್ಕೂ ಕಾಯುತ್ತ ಕೂಡಬೇಡಿ ಯಾವುದನ್ನೂ ಹಂಬಲಿಸಬೇಡಿ ಯಾವುದಕ್ಕೂ ಪ್ರಯತ್ನ ಮಾಡಬೇಡಿ. ಹೀಗೆ ಸಾಧ್ಯವಾಗದೆಹೋದರೆ, ಜ್ಞಾನೋದಯ, ನಿರ್ವಾಣಗಳೂ ಬಂಧನಗಳೇ | ~ ಸೊಸಾನ್ | ಓಶೋ ವ್ಯಾಖ್ಯಾನ; ಭಾವಾನುವಾದ : ಚಿದಂಬರ ನರೇಂದ್ರ

Strive to no goals |ಭಾಗ 6.4

ತಾವೋ ಸುಲಭವೂ ಅಲ್ಲ ಕಠಿಣವೂ ಅಲ್ಲ
ಆದರೆ ಸೀಮಿತ ದೃಷ್ಟಿಯಿರುವವರು
ಭಯಭೀತರು ಮತ್ತು ಹಟವಾದಿಗಳು :
ಅವಸರ ಮತ್ತು ವೇಗ ನಮ್ಮನ್ನು ನಿಧಾನವಾಗಿ ಮುನ್ನಡೆಸುವವು,
ಮತ್ತು ಅಂಟಿಕೊಳ್ಳುವುದು ದಾರಿತಪ್ಪಿಸುವುದು ;
ನಿರ್ವಾಣದ ಬಗ್ಗೆ ಸಂಭ್ರಮಿಸುವುದೆಂದರೆ
ನಮ್ಮ ಕಣ್ಣಿಗೆ ನಾವೇ ಪಟ್ಟಿ ಕಟ್ಟಿಕೊಳ್ಳುವುದು,
ಸುಮ್ಮನೇ ಎಲ್ಲವನ್ನೂ ಅವುಗಳ ಸಹಜತೆಗೆ ಬಿಟ್ಟಾಗ
ಯಾವ ಬರುವಿಕೆಯೂ ಇಲ್ಲ , ಯಾವ ಹೋಗುವಿಕೆಯೂ.

****

ಹೌದು ಸಹಜವಾಗಿರಿ
ಯಾವುದಕ್ಕೂ ಕಾಯುತ್ತ ಕೂಡಬೇಡಿ
ಯಾವುದನ್ನೂ ಹಂಬಲಿಸಬೇಡಿ
ಯಾವುದಕ್ಕೂ ಪ್ರಯತ್ನ ಮಾಡಬೇಡಿ.
ಹೀಗೆ ಸಾಧ್ಯವಾಗದೆಹೋದರೆ,
ಜ್ಞಾನೋದಯ, ನಿರ್ವಾಣಗಳೂ ಬಂಧನಗಳೇ.
ಎಷ್ಟೋ ಜನ ಹಿಂದೂ ಸನ್ಯಾಸಿಗಳಾಗುತ್ತಾರೆ
ಬೌದ್ಧ ಭಿಕ್ಕುಗಳಾಗುತ್ತಾರೆ
ಆಶ್ರಮ, ವಿಹಾರಗಳನ್ನು ಸೇರಿಕೊಳ್ಳುತ್ತಾರೆ
ಅಲ್ಲಿನ ಆಚರಣೆಗಳಲ್ಲಿ ಸಿಕ್ಕಿಹಾಕಿಕೊಂಡು
ಅಲ್ಲೇ ಬಂಧಿಗಳಾಗುತ್ತಾರೆ.

ಸಾಮಾನ್ಯರು,
ಮಾರುಕಟ್ಟೆ, ಪ್ರೀತಿ, ಪ್ರೇಮದ
ವ್ಯವಹಾರಗಳಲ್ಲಿ ಸಿಕ್ಕಿಹಾಕಿಕೊಂಡಿದ್ದರೆ
ಈ ಸಾಧನಾಕಾಂಕ್ಷಿಗಳು
ಜ್ಞಾನೋದಯದ ಹುಡುಕಾಟದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ
ಇಬ್ಬರ ನಡುವೆ ಅಂಥ ವ್ಯತ್ಯಾಸವೆನಿಲ್ಲ.
ಇಬ್ಬರಿಗೂ ಗುರಿ ಇದೆ
ಅದಕ್ಕೆಂದೆ ಇಬ್ಬರೂ ಸೋತಿದ್ದಾರೆ.

ಕೊನೆಗೂ
ಗುರಿಯಾಧಾರಿತ ಹುಡುಕಾಟ
ಅದು ಲೌಕಿಕವಾಗಿರಲಿ, ಅಲೌಕಿಕವಾಗಿರಲಿ
ಸೋಲು, ನಿರಾಸೆ ಶತಸಿದ್ಧ.
ಸುಮ್ಮನೆ ಸಹಜವಾಗಿರಿ
ಅಂತಿಮ ಸತ್ಯ ನಿಮ್ಮ ಮನೆಯ ಬಾಗಿಲ ತಟ್ಟುವುದು.
ಖುಶಿಯಾಗಿರಿ, ಹಾಡಿರಿ, ಕುಣಿಯಿರಿ, ಉನ್ಮತ್ತರಾಗಿರಿ
ಬಾಕಿ ಎಲ್ಲವನ್ನೂ ಪರಮ ಚೈತನ್ಯಕ್ಕೆ ಬಿಡಿ.

ಭಯದಿಂದ ಮುಕ್ತರಾಗಿ,
ಸಾಧನೆಯ ಹಿಂದೆ ಬಿದ್ದಿರಾದರೆ
ಭವಿಷ್ಯದತ್ತ ಕಣ್ಣು ನೆಡಬೇಕಾಗುವುದು
ಆದರೆ ಸಾಧ್ಯವಾಗಬಹುದಾದದ್ದು ಏನಿದ್ದರೂ
ಅದು ‘ ಈಗ ಮತ್ತು ಇಲ್ಲಿ’
ಹೀಗಾಗಿ ನಿಮ್ಮನ್ನ ನಿರಾಸೆ ತುಂಬಿಕೊಳ್ಳುತ್ತ ಹೋಗುವುದು.

ಯಹೂದಿಗಳು, ಶತಮಾನಗಳಿಂದ
ಪ್ರವಾದಿಗಾಗಿ ಕಾಯುತ್ತಿದ್ದರು.
ಆತ ಬಂದಾಗಲೂ ಅವರ ಕಾಯುವಿಕೆ ಮುಗಿದಿರಲಿಲ್ಲ
ಅವನನ್ನು ಸ್ವಾಗತಿಸಲು ಅವರು ಸಿದ್ಧರಾಗಿರಲಿಲ್ಲ.
ಜೀಸಸ್ ನ ವಿಷಯದಲ್ಲಿ ಕೂಡ
ಆದದ್ದು ಇದೇ,
“ಯಾರಿಗಾಗಿ ಕಾಯುತ್ತಿದ್ದೀರಿ, ನಾನು ಬಂದಿದ್ದೇನೆ”
ಎಂದು ಜೀಸಸ್ ಘೋಷಿಸಿದರೂ
ಜನ ಪ್ರವಾದಿ ಬರುವುದು ಯಾವಾಗ ಎಂದು
ಭವಿಷ್ಯದಲ್ಲಿ ಕಣ್ಣು ನೆಟ್ಟಿದ್ದರು.

ಭಗವಂತನ ಚೈತನ್ಯ
ಎಲ್ಲೆಡೆ ಉಕ್ಕಿ ಹರಿಯುತ್ತಿದೆ.
ಮಹಮ್ಮದರಾಗಿ, ಜೀಸಸ್ ಆಗಿ,
ಬುದ್ಧನಾಗಿ, ಸೊಸಾನ್ ಜುವಾಂಗ್ ತ್ಸು ಆಗಿ
ಸತತವಾಗಿ ಎಲ್ಲೆಡೆ ಪ್ರವಹಿಸುತ್ತಿದೆ.
ಭಗವಂತ ಉದಾರಿ ಅಂತಲ್ಲ
ಇದು ಅವನ ಸಹಜ ಗುಣ.

ಆದರೆ ಕೆಲ ಧರ್ಮಗಳಲ್ಲಿ ಮಾತ್ರ
ಯಾಕೆ ಒಬ್ಬನೇ ಪ್ರವಾದಿ?
ಭಗವಂತನ ಕ್ರಿಯಾಶಕ್ತಿಗೆ ಏನಾಯ್ತು?
ಭಗವಂತನ ತಪ್ಪಲ್ಲ
ಸಂಪ್ರದಾಯಕ್ಕೆ ಜೋತು ಬೀಳುವ,
ಭಗವಂತನ ಕಲ್ಪನೆಗೆ ಹೊರತಾದ
ಮನುಷ್ಯನೇ ಕಾರಣ.

ಪ್ರತೀ ಬಾರಿ ಚಿತ್ರಕಾರ ತನ್ನನ್ನು ತಾನು
ಮೀರಲು ಪ್ರಯತ್ನಿಸುತ್ತಾನೆ.
ಒಮ್ಮೆ ಪೇಂಟರ್ ಒಬ್ಬ ವ್ಯಾನ್ ಗೋ ನ ಕೇಳಿದನಂತೆ,
“ ಯಾವುದು ನಿನ್ನ ಶ್ರೇಷ್ಠ ಪೇಂಟಿಂಗ್ ?”

“ ಈಗ ಬಿಡಿಸುತ್ತಿದ್ದೆನಲ್ಲ ಅದೇ ನನ್ನ
ಈವರೆಗಿನ ಅತ್ಯುತ್ತಮ ಪೇಂಟಿಂಗ್ “
ಎಂದನಂತೆ ವ್ಯಾನ್ ಗೋ.

ಕೆಲ ದಿನಗಳ ನಂತರ, ಆ ಪೇಂಟರ್
ಮತ್ತೊಂದು ಪೇಂಟಿಂಗ್ ಮಾಡುತ್ತಿದ್ದ
ವ್ಯಾನ್ ಗೋ ನ ಮತ್ತೆ ಅದೇ ಪ್ರಶ್ನೆ ಕೇಳಿದ,
ಅವನಿಗೆ ವ್ಯಾನ್ ಗೋ ನಿಂದ ಸಿಕ್ಕ ಉತ್ತರ ಕೂಡ ಅದೇ ಆಗಿತ್ತು,

“ ಈಗ ಬಿಡಿಸುತ್ತಿದ್ದೆನಲ್ಲ ಅದೇ ನನ್ನ
ಈವರೆಗಿನ ಅತ್ಯುತ್ತಮ ಪೇಂಟಿಂಗ್ “

ಭಗವಂತ ಶ್ರೇಷ್ಠವಾದದ್ದನೇ ಸೃಷ್ಟಿಸುತ್ತಾನೆ
ಜೀಸಸ್ ನ ಕಾಲದಲ್ಲಿ ಜೀಸಸ್
ಮಹಮ್ಮದರಿದ್ದಾಗ ಮಹಮ್ಮದ
ಬುದ್ಧ ಬಂದಾಗ ಬುದ್ಧ
ಹೀಗೆ ಎಲ್ಲರೂ ಅನನ್ಯರೇ.

ಭವಿಷ್ಯದಲ್ಲಿ ಕಣ್ಣೊತ್ತಿಕೊಂಡಿರುವ,
ಕಾಯುವುದನ್ನ ಚಟ ಮಾಡಿಕೊಂಡಿರುವ ಮನುಷ್ಯನಿಗೆ
ಬಾಗಿಲಲ್ಲಿ ಕಾಯುತ್ತಿರುವ ಭಗವಂತನ ಬಗ್ಗೆ
ಗೊತ್ತಿರುವುದು ಹೇಗೆ ಸಾಧ್ಯ?
ಪರಿಸ್ಥಿತಿ ಹೀಗಿರುವಾಗ ಮನುಷ್ಯನ
ದೇವರ ಭೇಟಿ ಹೇಗೆ ಸಾಧ್ಯ?

ಬಾಕಿ ಎಲ್ಲ ಚಿಂತೆ ಬಿಟ್ಟು, ನೀವು ಸಹಜವಾಗಿರಿ.
ಈ ಎರಡು ಸ್ಥಿತಿಗಳು ಮಾತ್ರ ನಿಮ್ಮಿಂದ ಸಾಧ್ಯ
ಒಂದು ನೀವು ಚಿಂತಿತರಾಗಿರುವುದು
ಇನ್ನೊಂದು ನೀವು ಉನ್ನತ್ತರಾಗಿರುವುದು.
ಈ ಎರಡೂ ಸ್ಥಿತಿಗಳು ಒಟ್ಟಿಗೆ
ಸಂಸಾರ ಮಾಡುವುದು ಸಾಧ್ಯವಿಲ್ಲ.
ನೀವೇ ನಿರ್ಧರಿಸಿ
ಚಿಂತೆಯಲ್ಲಿ ಹುಚ್ಚರಾಗಿ
ಮನೋವೈದ್ಯರೊಂದಿಗೆ ಸಮಯ ಕಳೆಯಲು ಬಯಸುವಿರೋ
ಇಲ್ಲ ಖುಶಿಯಲ್ಲಿ ಉನ್ಮತ್ತರಾಗಿ ಭಗವಂತನನ್ನು ಆಹ್ವಾನಿಸುವಿರೋ.

ಸೊಸಾನ್ ನ ಮಾತು ಗಮನಿಸಿ

ಸುಮ್ಮನೇ ಎಲ್ಲವನ್ನೂ ಅವುಗಳ ಸಹಜತೆಗೆ ಬಿಟ್ಟಾಗ
ಯಾವ ಬರುವಿಕೆಯೂ ಇಲ್ಲ , ಯಾವ ಹೋಗುವಿಕೆಯೂ.

ಅಪರಿಮಿತ ಘನತೆಯಲ್ಲಿ
ಯಾವ ಬರುವಿಕೆಯೂ ಇಲ್ಲ , ಯಾವ ಹೋಗುವಿಕೆಯೂ.
ಅಪರಿಮಿತ ಮೌನದಲ್ಲಿ
ಯಾವ ಬರುವಿಕೆಯೂ ಇಲ್ಲ , ಯಾವ ಹೋಗುವಿಕೆಯೂ.
ಯಾವುದಕ್ಕೂ ಅಡ್ಡ ಬರಬೇಡಿ
ಯಾವುದನ್ನೂ ಬದಲಾಯಿಸುವ ಪ್ರಯತ್ನ ಮಾಡಬೇಡಿ
ನಿಮ್ಮ ಹಾಗೆ ನೀವಿರಿ.
ಈ ಸ್ಥಿತಿಯನ್ನು ಸಹಿಸುವುದು
ಬುದ್ಧಿ ಮತ್ತು ಮನಸ್ಸಿಗೆ ಸಾಧ್ಯವಾಗದ ಸಂಗತಿ,
ಅವು ಬದಲಾವಣೆಯನ್ನು ಸಂಭ್ರಮಿಸುತ್ತವೆ.
ಇನ್ನೂ ಒಳ್ಳೆಯವರಾಗಿ, ಇನ್ನೂ ಸುಂದರರಾಗಿ
ಇನ್ನೂ ಪುಣ್ಯವಂತರಾಗಿ ಎಂದು ಬೆನ್ನು ಬೀಳುತ್ತವೆ.
ಆದರೆ ಇದು ಸಾಧ್ಯವಾಗುವುದಿಲ್ಲ
ಆಗಲೇ ನೀವು ಇಕ್ಕಟ್ಟಿಗೆ ಸಿಲುಕುವಿರಿ
ಏಕೆಂದರೆ ನೀವು
ಈಗಾಗಲೇ ಆ ಎಲ್ಲವೂ ಆಗಿದ್ದೀರಿ.

ನೀವು ಮಾಡಬೇಕಾಗಿರುವುದು ಒಂದೇ ಕೆಲಸ,
ಭಯವನ್ನು ತ್ಯಜಿಸಿವುದು,
ಬದುಕನ್ನು ಬಾಳಲು ಶುರುಮಾಡುವುದು.
ನೀವೂ ಸಹಜವಾಗಿರಿ
ಸಮಸ್ತವನ್ನೂ ಸಹಜವಾಗಿರಲು ಬಿಡಿ.

ಹುಟ್ಟು, ಸಾವು, ಪ್ರೇಮ ಎಲ್ಲ ಸಂಭವಿಸುವುದು
ನಿಮ್ಮ ಹೊರತಾಗಿಯೇ,
ಬದುಕು ಹೀಗೆ ನಡೆಯುತ್ತಿರುವಾಗ
ನಿಮಗೆ ಯಾವ ಭಯ ?
ಯಾವ ಪರಮ ಶಕ್ತಿ ಈ ಎಲ್ಲವನ್ನೂ
ಸುಸೂತ್ರವಾಗಿ ನಿರ್ವಹಿಸುತ್ತಿದೆಯೋ,
ಆ ಶಕ್ತಿಯ ಉಡಿಗೆ ನಿಮ್ಮ ಭಯಗಳನ್ನೆಲ್ಲ ಹಾಕಿ.
ಬದುಕಲು ಶುರು ಮಾಡಿ,
ಹೀಗಿರುವಾಗ ನಿಮಗೆ ಖುಶಿಯ ಅನುಭವವಾದರೆ,
ನೀವು ಮುಟ್ಟಬೇಕಾದಲ್ಲಿ ತಲುಪಿದ್ದೀರಿ,
ಆ ಅಪರಿಮಿತ ಬದುಕನ್ನು ಮುಟ್ಟಿದ್ದೀರಿ.
ನಿಮ್ಮ ತಾವೋ ಹೀಗೆ ಪ್ರವಹಿಸುತ್ತಲಿರಲಿ.

(ಮುಂದುವರೆಯುವುದು…..)

ಹಿಂದಿನ ಭಾಗ ಇಲ್ಲಿ ನೋಡಿ : https://aralimara.com/2020/06/27/ming-10/

1 Comment

Leave a Reply