ವಸ್ತುವನ್ನು ಅದು ಇರುವ ಹಾಗೇ ನೋಡಲು ಸಾಧ್ಯವೇ? : ಯೂಜಿ ಜೊತೆ ಮಾತು ಕಥೆ #6

ನೀವು ಒಂದು ವಸ್ತುವನ್ನ ನೋಡಿದ್ದೀರಿ ಎಂದರೆ ನೀವು ಈಗಾಗಲೇ ಆ ವಸ್ತುವಿನಿಂದ ದೂರವಾಗಿದ್ದೀರಿ ಎಂದೇ ಅರ್ಥ… ~ ಯುಜಿ ಕೃಷ್ಣಮೂರ್ತಿ| ಸಂಗ್ರಹ ಮತ್ತು ಅನುವಾದ : ಚಿದಂಬರ ನರೇಂದ್ರ

ಒಂದು ವಸ್ತುವನ್ನ ಅದು ಇರುವ ಹಾಗೆಯೇ ನೋಡುವುದು ಸಾಧ್ಯವೆ?

ಯೂಜಿ : ಸಾಧ್ಯವೇ ಇಲ್ಲ. ನಮ್ಮ ಭೌತಿಕ ಕಣ್ಣು ತಾನು ನೋಡಿದ್ದರ ಬಗ್ಗೆ ಏನೂ ಹೇಳುವುದಿಲ್ಲ. ನೀವು ಯಾವುದನ್ನ ನೋಡುತ್ತಿದ್ದಿರೋ ಅದರಿಂದ ನಿಮ್ಮನ್ನು ಬೇರ್ಪಡಿಸಿಕೊಳ್ಳುವುದು ಸಾಧ್ಯವೇ ಇಲ್ಲ. ನಮಗಿರೋದು ಕೇವಲ ಇಂದ್ರೀಯ ಗ್ರಹಿಕೆಗಳು. ಅವು ನಾವು ನೋಡುತ್ತಿರುವ ವಸ್ತುವಿನ ಬಗ್ಗೆ ಏನೂ ಹೇಳಲಾರವು.

ಉದಾಹರಣೆಗೆ, ನೀವು ಒಂದು ವಸ್ತುವನ್ನ ಅದು ಕ್ಯಾಮೆರಾ, ಸೋನೀ ಕ್ಯಾಮೆರಾ ಅಂತ ಗುರುತಿಸಿದೊಡನೆ ನೀವು ಆ ವಸ್ತುವಿನಿಂದ ದೂರವಾಗಿದ್ದೀರಿ. ಈಗ ನೀವು ಏನು ಮಾಡುತ್ತಿದ್ದೀರಿ ಎಂದರೆ, ನಿಮ್ಮ ಇಂದ್ರಿಯ ಗ್ರಹಿಕೆಯನ್ನ ನಿಮಗೆ ಈಗಾಗಲೆ ಇರುವ ವಿಷಯ ಜ್ಞಾನದ ಚೌಕಟ್ಟಿನಲ್ಲಿ ಅನುವಾದಿಸಿ ಹೇಳುತ್ತಿದ್ದೀರಿ ಅದು ಸೋನೀ ಕ್ಯಾಮೆರಾ ಎಂದು. ಈ ವಿಷಯ ಜ್ಞಾನದ ಸಹಾಯವಿಲ್ಲದೆ ನಾವು ಏನನ್ನೂ ನೋಡುವುದೇ ಇಲ್ಲ. ನಾವು ನಮಗೆ ಇರುವ ತಿಳುವಳಿಕೆಯನ್ನ ಆ ವಸ್ತುವಿನ ಮೇಲೆ ಪ್ರೊಜೆಕ್ಟ್ ಮಾಡಿ ಅದನ್ನು ಗುರುತಿಸುತ್ತಿದ್ದೇವೆ.

ಇರುವುದನ್ನ ಇದ್ದ ಹಾಗೆ ನೋಡುವುದು ಅಪಾಯಕಾರಿ, ಅದು ನಮ್ಮ ಆಲೋಚನೆಯ ನಿರಂತರತೆಗೆ ಭಂಗ ತರುತ್ತದೆ. ಬೇಕಾದರೆ ತತ್ವ ಶಾಸ್ತ್ರದ ವಿದ್ಯಾರ್ಥಿಗಳು ವಸ್ತುವಿನಿಂದ ಶಬ್ದವನ್ನು ಬೇರ್ಪಡಿಸಿ ನೋಡುವ ಪ್ರಯೋಗ ಮಾಡುತ್ತ ತಮ್ಮ ಸಮಯ ಹಾಳು ಮಾಡಿಕೊಳ್ಳಲಿ. ನೀವು ಅದು ಕ್ಯಾಮೆರಾ, ಸೋನಿ ಕಂಪನಿಯದು ಎನ್ನುವ ಮಾತು ದೂರವಿರಲಿ, ನೀವು ಒಂದು ವಸ್ತುವನ್ನ ನೋಡಿದ್ದೀರಿ ಎಂದರೆ ನೀವು ಈಗಾಗಲೇ ಆ ವಸ್ತುವಿನಿಂದ ದೂರವಾಗಿದ್ದೀರಿ ಎಂದೇ ಅರ್ಥ.

ನಿಮಗೆ ಅರಿವಿಲ್ಲದಿರಬಹುದು ಆದರೆ ಎಲ್ಲ ಮಾಹಿತಿ ನಿಮ್ಮ ಮೆದುಳಿನ ಕಂಪ್ಯೂಟರ್ ನಲ್ಲಿ ತುಂಬಿಕೊಂಡಿದೆ. ಬೇಕಾದಾಗ ಈ ಮಾಹಿತಿ ತಕ್ಷಣ ಹೊರ ಬಂದು ನಿಮಗೆ ಆ ವಸ್ತುವಿನ ಬಗ್ಗೆ ಮಾಹಿತಿ ಕೊಡುತ್ತದೆ. ಒಮ್ಮೊಮ್ಮೆ ನಿಮಗೆ ಅನಿಸಬಹುದು ಇದು ಓರಿಜಿನಲ್, ಇದನ್ನ ನೀವು ಮೊದಲ ಬಾರಿ ನೋಡುತ್ತಿದ್ದೀರಿ ಎಂದು. ಆದರೆ ಅದು ಹಾಗಲ್ಲ, ಇದು ಹೊಸದು ಅನಿಸಬೇಕಾದರೆ ನೀವು ನಿಮ್ಮ ವಿಷಯ ಜ್ಞಾನದ ಚೌಕಟ್ಟಿನಲ್ಲಿ ಯಾವದೋ ಹಳೆಯದಕ್ಕೆ ಹೋಲಿಕೆ ಮಾಡುತ್ತಿದ್ದೀರಿ.

ಹಾಗಾದರೆ ಮಾಹಿತಿ ನಮ್ಮ ಮೆದುಳಿನ ಕಂಪ್ಯೂಟರ್ ನಲ್ಲಿ ಇಲ್ಲದೆ ಹೋದರೆ ನಾವು ಯಾವುದನ್ನೂ ನೋಡುವುದು ಸಾಧ್ಯವಿಲ್ಲವೆ?

ಯೂಜಿ : ಇಲ್ಲ ಸಾಧ್ಯವೇ ಇಲ್ಲ. ಮಾಹಿತಿ ಇಲ್ಲದೆ ಹೋದರೆ ನೀವು ಏನನ್ನೂ ನೋಡಲಾರಿರಿ. ಆಗ ನಿಮ್ಮ ಕಣ್ಣಿನ ಪರದೆಯ ಮೇಲೆ ಆ ವಸ್ತುವಿನ ಪ್ರತಿಬಿಂಬ ಮೂಡುತ್ತದೆ ಅಷ್ಟೇ. ಹಾಗಾಗಿ ಸ್ವಂತ ಅನುಭವ, ಓರಿಜಿನಲ್ ಥಿಂಕಿಂಗ್ ಎನ್ನುವುದೆಲ್ಲ ಬೊಗಳೆ. ಪ್ರಚೋದನೆ ಮತ್ತು ಪ್ರತಿಕ್ರಿಯೆಗಳದು ಏಕಮುಖಿ ಚಲನೆ. ಒಂದು ವೇಳೆ ನೀವು ವಸ್ತುವಿನಿಂದ ಬೇರೆಯಾಗಿದ್ದೀರಿ ಎಂದರೆ ಒಂದು ಸಮಸ್ಯೆಯನ್ನ ಸೃಷ್ಟಿ ಮಾಡಿದ್ದೀರಿ. ನೀವು ಬದುಕಿನಲ್ಲಿ ಏಕತೆ, ಸೃಷ್ಟಿಯ ಏಕತ್ವ ಮುಂತಾದವುಗಳ ಬಗ್ಗೆ ಮಾತನಾಡಬಹುದು ಆದರೆ, ನಿಮ್ಮ ಪ್ರಯತ್ನದ ಮೂಲಕ ಈ ಏಕಮುಖಿ ಚಲನೆಯನ್ನು ಸಾಧಿಸುವುದು ಆಗದ ಮಾತು.

ಇದೆಲ್ಲ ಏನು ಎಂದು ತಿಳಿಯಬಯಸುವವರು ಮಾಡಬಹುದಾದದ್ದು ಇಷ್ಟೇ, ಹೇಗೆ ಈ ಬೇರ್ಪಡಿಸುವಿಕೆ ನಡೆಯುತ್ತಿದೆ ಎನ್ನುವುದನ್ನ ಸುಮ್ಮನೇ ಗಮನಿಸುವುದು. ಹೇಗೆ ನೀವು, ನಿಮ್ಮ ಸುತ್ತ ಮತ್ತು ನಿಮ್ಮ ಒಳಗೆ ನಡೆಯುತ್ತಿರುವ ಸಂಗತಿಗಳಿಂದ ಬೇರ್ಪಡುತ್ತಿದ್ದೀರಿ ಎನ್ನುವುದನ್ನ ಗಮನಿಸುವುದು. ಹಾಗೆ ನೋಡಿದರೆ, ನಿಮ್ಮ ಒಳಗೆ ಮತ್ತು ಹೊರಗೆ ಅಂಥ ವ್ಯತ್ಯಾಸವೆನಿಲ್ಲ. ನಿಮ್ಮ ಆಲೋಚನೆ ಈ ಗಡಿಯನ್ನು ನಿರ್ಮಾಣ ಮಾಡಿ ಹೇಳುತ್ತಿದೆ ಇದು ಒಳಗಿನದು ಇದು ಹೊರಗಿನದು ಎಂದು. ನನಗೆ ಖುಶಿ, ಅಥವಾ ದುಃಖ, ಅಥವಾ ನಿರಾಸಕ್ತಿ ಎಂದು ಹೇಳುವಾಗಲೇ ನೀವು ನಿಮ್ಮ ಒಳಗಿನ ಅನುಭವದಿಂದ ಬೇರ್ಪಟ್ಟಿದ್ದೀರಿ.

ಹಾಗಾದರೆ ನಮ್ಮ ಅನುಭವಗಳನ್ನು ಹೆಸರಿಸುವುದರಿಂದ ನಮ್ಮ ಭೌತಿಕ ಪ್ರಕ್ರಿಯೆಗಳಿಗೆ ಅಪಾಯವೆ?

ಯೂಜಿ: ನಮ್ಮ ಜೀವಕೋಶಗಳು ಸವೆದು ಹೋಗುತ್ತಿವೆ. ಈ ಕಾರಣಕ್ಕೇ ನಾನು ಹೇಳುವುದು ಮಾನವ ಜನಾಂಗ ಎದುರುಸುತ್ತಿರುವ ಅಪಾಯ ಏಡ್ಸ್, ಕ್ಯಾನ್ಸರ್ ಅಲ್ಲ ಬದಲಾಗಿ ಅಲ್ಝೈಮರ್. ನಮ್ಮ ಅಸ್ತಿತ್ವವನ್ನು ಗುರುತಿಸಿಕೊಳ್ಳಲು ನಾವು ಬಳಸಿಕೊಳ್ಳುವುದು ನಮ್ಮ ನ್ಯೂರಾನ್ ಗಳನ್ನ, ನಮ್ಮ ನೆನಪನ್ನ. ನಾವು ಎಚ್ಚರಿರಲಿ, ಮಲಗಿರಲಿ, ಕನಸು ಕಾಣುತ್ತಿರಲಿ ಈ ಪ್ರಕ್ರಿಯೆ ನಿರಂತರವಾಗಿ ನಡೆದಿರುತ್ತದೆ ಆದರೆ ಇದು ನಿಧಾನವಾಗಿ ಸವೆದು ಹೋಗುತ್ತಿದೆ.

ನೀವು ಏನನ್ನ ನೋಡುತ್ತಿದ್ದೀರಿ ಎನ್ನುವುದು ನಿಮಗೆ ಗೊತ್ತಾಗದೆ ಹೋದರೆ, ನಿಮಗೆ ಗೊತ್ತಿರುವ ಆ ‘ನೀವು’ , ಮತ್ತು ನಿಮ್ಮ ಅನುಭವಕ್ಕೆ ಬಂದಿರುವ ಆ ‘ನೀವು’ ಕೊನೆಯನ್ನು ಮುಟ್ಟುತ್ತದೆ. ಇದು ಸಾವು. ಇದು ಮಾತ್ರ ಸಾವು, ಇದರ ಹೊರತಾಗಿ ಬೇರೆ ಯಾವ ಸಾವೂ ಇಲ್ಲ.

ಈ ಸ್ಥಿತಿ ಭಯಾನಕವಾದದ್ದು.

ಯೂಜಿ: ಹೌದು ಭಯಾನಕ, ನಿಮಗೆ ಗೊತ್ತಿರುವುದನ್ನ ಕಳೆದುಕೊಳ್ಳುವ ಭಯ. ನೀವು ಈ ಭಯದಿಂದ ಮುಕ್ತರಾಗ ಬಯಸುವುದಿಲ್ಲ. ಭಯದಿಂದ ಮುಕ್ತರಾಗಲು ನೀವು ಉಪಯೋಗಿಸುತ್ತಿರುವ ಎಲ್ಲ ತಂತ್ರಗಳು, ಥೆರಪಿಗಳು ಈ ಭಯವನ್ನು ಕಾಯಂಗೊಳಿಸಲು ಮತ್ತು ಭಯಕ್ಕೆ ನಿರಂತರತೆಯನ್ನು ಒದಗಿಸಲು ಸಹಾಯ ಮಾಡುತ್ತವೆ. ನಿಮಗೆ ಭಯದಿಂದ ಬಿಡಿಸಿಕೊಳ್ಳಲು ಇಷ್ಟವಿಲ್ಲ. ನಿಮಗೆ ಗೊತ್ತು ಅಕಸ್ಮಾತ್ ಭಯ ಕೊನೆಯಾದರೆ, ನಿಮಗೆ ಗೊತ್ತಿರುವುದನ್ನ ಕಳೆದುಕೊಳ್ಳುವ ಭಯ ಕೂಡ ಕೊನೆಯಾಗುತ್ತದೆ. ಆಗ ನೀವು ಭೌತಿಕವಾಗಿ ಸಾವಿಗೆ ಶರಣಾಗುವಿರಿ, ವೈದ್ಯಕೀಯ ಸಾವು ಸಂಭವಿಸುವುದು ಮತ್ತು ಇದು ನಿಮಗೆ ಇಷ್ಟವಿಲ್ಲ.

1 Comment

Leave a Reply