7 ಸ್ವಸ್ತಿಮಂತ್ರಗಳು ಮತ್ತು ಕನ್ನಡ ಭಾವಾರ್ಥ ~ ನಿತ್ಯಪಾಠ

ಸ್ವಸ್ತಿ ಎಂದರೆ ಶುಭ ಅಥವಾ ಮಂಗಳ ಎಂದು. ಮಂಗಳಕರ ವಾತಾವರಣವು ಸದಾ ನಮ್ಮೊಳಗೆ ಸಕಾರಾತ್ಮಕತೆ ತುಂಬುತ್ತದೆ. ಹಾಗೂ ಸಕಾರಾತ್ಮಕ ಚಿಂತನೆ ನಮ್ಮನ್ನು ಲೌಕಿಕಾಲೌಕಿಕ ಎರಡುಬಗೆಯ ಪ್ರಯಾಣದಲ್ಲೂ ಯಶಸ್ಸು ನೀಡುತ್ತದೆ. ಅಂತಹಾ ವಾತಾವರಣ ನಿರ್ಮಾಣಕ್ಕಾಗಿ ಪ್ರತಿನಿತ್ಯ ಹೇಳಬೇಕಾದ ಸ್ವಸ್ತಿ ಮಂತ್ರಗಳು ಅಥವಾ ಪ್ರಾರ್ಥನೆ ಇಲ್ಲಿದೆ….


ಓಂ ಸ್ವಸ್ತಿ ನೋ ಮಿಮೀತಾಶ್ವಿನಾ ಭಗಃ ಸ್ವಸ್ತಿ ದೇವ್ಯದಿತಿರ್ವಣಃ |
ಸ್ವಸ್ತಿ ಪೂಷಾ ಅಸುರೋ ದಧಾತು ನಃ ಸ್ವಸ್ತಿ ದ್ಯಾವಾ ಪೃಥುವೀ ಸುಚೇತುನಾ ||1||
ಭಾವಾರ್ಥ: ಅಶ್ವಿನಿದೇವತೆಗಳು, ಸೂರ್ಯ, ಚಂದ್ರ, ನಕ್ಷತ್ರಾದಿಗಳು, ಐಶ್ವರ್ಯದೇವತೆ, ಭೂದೇವಿ, ಗೋಮಾತೆ ನಮಗೆ ಶುಭವನ್ನುಂಟುಮಾಡಲಿ. ಸೂರ್ಯ, ಹಾಗೂ ದ್ಯಾವಾಪೃಥುವಿಗಳು ನಮಗೆ ಮಂಗಳವನ್ನುಂಟು ಮಾಡಲಿ.

ಸ್ವಸ್ತಯೇ ವಾಯುಮುಪ ಬ್ರವಾಮಹೈ ಸೋಮಗ್ಗ್ ಸ್ವಸ್ತಿ ಭುವನಸ್ಯ ಯಸ್ಪತಿಃ |
ಬೃಹಸ್ಪತಿಂ ಸರ್ವಗಣಗ್ಗ್ ಸ್ವಸ್ತಯೇ ಸ್ವಸ್ತಯ ಆದಿತ್ಯಾಸೋ ಭವಂತು ನಃ ||2||
ಭಾವಾರ್ಥ: ನಮ್ಮ ಒಳಿತಿಗಾಗಿ ವಾಯುವನ್ನು ಸ್ತುತಿಸುವೆವು. ಜಗತ್ಪಾಲಕನಾದ ಶಿವನನ್ನು, ಮತ್ತು ಸಮಸ್ತ ದೇವತಾಸಮೂಹದೊಂದಿಗೆ ಗುರುವನ್ನು ನೆಮ್ಮದಿಗಾಗಿ ಸ್ತುತಿಸುವೆವು. ಅದಿತಿಯ ಮಕ್ಕಳಾದ ದ್ವಾದಶಾದಿತ್ಯರು ಮತ್ತು ಸಮಸ್ತ ದೇವರ್ಕಳು ನಮಗೆ ಸುಖಾರೋಗ್ಯ ಕರುಣಿಸುವವರಾಗಲಿ.

ವಿಶ್ವೇದೇವಾ ನೋ ಅದ್ಯಾ ಸ್ವಸ್ತಯೇ ವೈಶ್ವಾನರೋ ವಸುರಗ್ನಿಃ ಸ್ವಸ್ತಯೇ |
ದೇವಾ ಅವಂತ್ವ್ರಭವಃ ಸ್ವಸ್ತಯೇ ಸ್ವಸ್ತಿ ನೋ ರುದ್ರಃ ಪಾತ್ವಂ ಹಸಃ ||3||
ಭಾವಾರ್ಥ: ಈ ದಿನ ಸಮಸ್ತ ದೇವತೆಗಳೂ ನಮಗೆ ಮಂಗಳದಾಯಕರಾಗಿರಲಿ. ಸರ್ವರಿಗೂ ಹಾದಿಯನ್ನು ತೋರುವವನಾದ ಮತ್ತು ನಿವಾಸವನ್ನು ಅನುಗ್ರಹಿಸುವ ಅಗ್ನಿಯು ಶುಭಕಾರಕನಾಗಲಿ. ದೇವತೆಗಳಾದ ಬ್ರಹ್ಮನ ಮಾನಸಪುತ್ರರು ಕ್ಷೇಮ ಕರುಣಿಸಿ ನಮ್ಮನ್ನು ಕಾಪಾಡಲಿ. ದೇವನಾದ ರುದ್ರನು ಶುಭವನ್ನು ಕರುಣಿಸಿ ನಮ್ಮನ್ನು ಕಾಪಾಡಲಿ.

ಸ್ವಸ್ತಿ ವಿತ್ರಾವರುಣಾ ಸ್ವಸ್ತಿ ಪಥ್ಯೇ ರೇವತಿ |
ಸ್ವಸ್ತಿ ನ ಇಂದ್ರಾಶ್ಚಾಗ್ನಿಶ್ಚ ಸ್ವಸ್ತಿ ನೋ ಅದಿತೇ ಕೃಧಿ ||4||
ಭಾವಾರ್ಥ: ಸೂರ್ಯವರುಣರೇ ನಮಗೆ ಶುಭವನ್ನು ಉಂಟುಮಾಡಿರಿ. ಅಂತರಿಕ್ಷಹಾದಿಯ ಅಭಿಮಾನಿದೇವತೆಯಾದ ರೇವತಿ ದೇವಿಯೇ; ನಮಗೆ ಸೌಖ್ಯವನ್ನುಂಟುಮಾಡು. ಇಂದ್ರಾಗ್ನಿ ದೇವತೆಗಳು ನಮಗೆ ಪಾಲಕರಾಗಲಿ. ಭೂದೇವಿಯೇ ನಮಗೆ ಮಂಗಳವನ್ನುಂಟುಮಾಡು.

ಸ್ವಸ್ತಿ ಪಂಥಾಮನುಚರೇಮ ಸೂರ್ಯಾಚಂದ್ರಮಸಾವಿವ |
ಪುನರ್ದದತಾಘ್ನತಾ ಜಾನತಾ ಸಂ ಗಮೇ ಮಹಿ ||5||
ಭಾವಾರ್ಥ: ರವಿಚಂದ್ರರು ತಮ್ಮಹಾದಿಯಲ್ಲಿ ಎಡವದೆ ಶಾಶ್ವತವಾಗಿ ಸಂಚರಿಸುವಂತೆ ನಾವುಗಳು ಕೂಡಾ ನಮ್ಮ ಜೀವನದ ಹಾದಿಯಲ್ಲಿ ಯಜ್ಞಾದಿಗಳ ನಿರ್ವಹಣೆಯಲ್ಲಿ ಯಾವುದೇ ಚ್ಯುತಿ ವಿಘ್ನಗಳಿಲ್ಲದೆ ನೆಮ್ಮದಿಯಿಂದ ಸಾಗುವಂತಾಗಲಿ. ಉಪಕಾರಕ್ಕೆ ಪ್ರತ್ಯುಪಕಾರವನ್ನು ಮಾಡುವ, ಕಾಲಮೀರಿದ ಕಾರಣಕ್ಕಾಗಿ ರೋಷಕ್ಕೊಳಗಾಗಿ ಹಿಂಸೆಗಿಳಿಯದಿರುವ, ಅಲ್ಲದೆ ನಮ್ಮ ಬಂಧುತ್ವನ್ನು ಉತ್ತಮ ರೀತಿಯಲ್ಲಿ ಅರಿತುಕೊಳ್ಳುವ ಬಂಧುಗಳೊಡನೆ ನಾವು ಬೆರೆಯುವಂತಾಗಲಿ.

ಸ್ವಸ್ತ್ಯಯನಂ ತಾರ್ಕ್ಷ್ಯಮರಿಷ್ಟನೇಮಿಂ ಮಹದ್ಭೂತಂ ವಾಯಸಂ ದೇವತಾನಾಮ್ |
ಅಸುರಘ್ನಮಿಂದ್ರಸಖಂ ಸಮತ್ಸು ಬೃಹದ್ಯಶೋ ನಾವಮಿವ ರುಹೇಮ ||6||
ಭಾವಾರ್ಥ: ಸುಲಕ್ಷಣಗಳಿಗೆ ನೆಲೆಯಾಗಿರುವ, ಸೌಭಾಗ್ಯವೇ ಸುತ್ತಲೂ ಆವರಿಸಿಕೊಂಡಿರುವ, ಬೃಹದ್ಗಾತ್ರದ ಹಾಗೂ ದೇವತೆಗಳ ಪಕ್ಷಿಯಾಗಿರುವ, ಅಸುರಸಂಹಾರಿಯಾಗಿರುವ ದೇವೇಂದ್ರನ ಸ್ನೇಹಿತನಾಗಿರುವ ಗರುಡನನ್ನು ಮಹಾನ್ ಕೀರ್ತಿಶಾಲಿಯಾದ ಭಗವಂತನು ನಾವೆಯನ್ನು ಏರುವ ರೀತಿಯಲ್ಲಿ ನಾವು ಸವಾರಿ ಮಾಡೋಣ.

ಅಂ ಹೋಮುಚಮಾಂಗೀರಸಂ ಗಯಂ ಚ ಸ್ವಸ್ತ್ಯಾತ್ರೇಯಂ ಮನಸಾ ಚ ತಾರ್ಕ್ಷ್ಯಮ್ |
ಪ್ರಯತ ಪಾಣಿಃ ಶರಣಂ ಪ್ರ ಪದ್ಯೇ ಸ್ವಸ್ತಿ ಸಂ ಬಾಧೇಷ್ವಭಯಂ ನೋ ಅಸ್ತು ||7||
ಭಾವಾರ್ಥ: ಕ್ರೂರಿಗಳಿಂದ ನಮ್ಮನ್ನು ಪಾರು ಮಾಡುವ ಅಂಗೀರಸನಿಗೆ, ಗಾಯತ್ರೀಮಾತೆಗೆ, ಶುಭಕರನಾದ ಆತ್ರೇಯ ಮಹರ್ಷಿಗೆ, ಅಂತೆಯೇ ಗರುಡನಿಗೆ ನಮಸ್ಕರಿಸುವೆನು. ಎಲ್ಲವೂ ಸುಖವಾಗಿರಲಿ, ಯಾವಾಗಲೂ ಯಾವ ಭಾದೆಯೂ ಉಂಟಾಗದಿರಲೆಂದು ನಾನು ಹೃತ್ಪೂರ್ವಕವಾಗಿ ಕೈಜೋಡಿಸುತ್ತಾ ಶರಣು ಹೋಗುವೆನು.

Leave a Reply