ಅತಿಯಾದ ಪರಿಚಯ ಒಳ್ಳೆಯದಲ್ಲ : ಇಂದಿನ ಸುಭಾಷಿತ

ಇಂದಿನ ಸುಭಾಷಿತ, ‘ಸಮಯೋಚಿತ ಪದ್ಯಮಾಲಿಕಾ’ದಿಂದ…

ಅತಿಪರಿಚಯಾದವಜ್ಞಾ ಸಂತತಗಮನಾದನಾದರೋ ಭವತಿ ।
ಮಲಯೇ ಭಿಲ್ಲಪುರಂಧ್ರೀ ಚಂದನತರುಕಾಷ್ಠಮಿಂಧನಂ ಕುರುತೇ ।। ಸಮಯೋಚಿತ ಪದ್ಯಮಾಲಿಕಾ ॥ 
ಅರ್ಥ: ಪರಿಚಯವು ಅತಿಯಾದರೆ ಆ ವಸ್ತು – ವ್ಯಕ್ತಿಯ ಕುರಿತು ಉಪೇಕ್ಷೆ ಬೆಳೆಯುತ್ತದೆ. ಒಂದು ಜಾಗಕ್ಕೆ ಮತ್ತೆ ಮತ್ತೆ ಹೋಗುತ್ತಿದ್ದರೆ ಅಲ್ಲಿ ನಮಗೆ ಗೌರವ ಸಿಗುವುದಿಲ್ಲ. (ಇದು ಹೇಗೆಂದರೆ) ಮಲಯಗಿರಿಯಲ್ಲಿ ಬೇಡರ ಹೆಣ್ಣು ಶ್ರೀಗಂಧದ ಮರವನ್ನು ಸೌದೆಯಾಗಿ ಬಳಸುವ ಹಾಗೆ! 

ತಾತ್ಪರ್ಯ: ಯಾವುದೇ ಆದರೂ ಅದು ಮಿತಿಯಲ್ಲಿರಬೇಕು. ಅತಿಯಾದರೆ ಅದಕ್ಕೆ ಬೆಲೆ ಇರುವುದಿಲ್ಲ. ಮೇಲಿನ ಸುಭಾಷಿತದಲ್ಲಿ ಹೇಳಿರುವಂತೆ, ಮಲಯ ಬೆಟ್ಟದಲ್ಲಿ ಗಂಧದ ಮರಗಳ ಸಂಖ್ಯೆ ಅತಿ ಅನಿಸುವಷ್ಟು ಜಾಸ್ತಿ. ಆದ್ದರಿಂದ ಅಲ್ಲಿ ನೆಲೆಸಿರುವ ಜನಕ್ಕೆ ಗಂಧದ ಮರ ವಿಶೇಷವೇನಲ್ಲ, ಅವರ ಪಾಲಿಗೆ ಅದು ಹೆಚ್ಚು ಬೆಲೆಯುಳ್ಳದ್ದೂ ಅಲ್ಲ. ಆ ಭಾಗದ ಜನರು ಗಂಧದ ಮರಗಳನ್ನು ಸೌದೆಯಾಗಿ ಬಳಸುವಷ್ಟು ಅಗ್ಗ!

ಹಾಗೆಯೇ ಒಬ್ಬ ದಾರ್ಶನಿಕ, ಸಾಧಕ, ಕಲಾವಿದ ಇತ್ಯಾದಿ ಯಾರನ್ನಾದರೂ ಹೆಚ್ಚು ಗಮನಿಸಿ ನೋಡಿದರೆ, ಅವರಿಗೆ ಅವರ ಅತ್ಯಂತ ಹತ್ತಿರದವರು ಹೊರಗಿನ ಜನ ಕೊಟ್ಟಷ್ಟು ಮನ್ನಣೆ ಕೊಡದೆ ಇರುವುದನ್ನು ನೋಡುತ್ತೇವೆ. ಇದಕ್ಕೆ ಕಾರಣ ಅವರಿಗೆ ಆ ವ್ಯಕ್ತಿಯ ಬಗೆಗೆ ಇರುವ ಅತಿಯಾದ ಪರಿಚಯವಷ್ಟೇ. ಆದ್ದರಿಂದ, ವಿಶೇಷ ವ್ಯಕ್ತಿಗಳು ಅಥವಾ ಸಾಧಕರು ಮಾತ್ರವಲ್ಲ, ನಾವು ಜನ ಸಾಮಾನ್ಯರೂ ಕೂಡಾ ಯಾರನ್ನೂ ಹೆಚ್ಚಾಗಿ ಹಚ್ಚಿಕೊಳ್ಳಬಾರದು. ನಮ್ಮ ಪ್ರತಿಯೊಂದು ಸಂಗತಿಯನ್ನೂ ಜಾಹೀರು ಮಾಡಿ ಅತಿಯಾದ ಪರಿಚಯ ಕೊಟ್ಟುಕೊಳ್ಳಬಾರದು. ಹಾಗೇನಾದರೂ ಮಾಡಿದರೆ ನಾಳೆ ಅವರು ನಮ್ಮನ್ನು ಕಡೆಗಣಿಸುತ್ತಾರೆ. ಯಾರನ್ನು ಎಷ್ಟು ಬೇಕೋ ಅಷ್ಟು ಹತ್ತಿರ, ಎಷ್ಟು ಬೇಕೋ ಅಷ್ಟು ದೂರ ಇಟ್ಟುಕೊಳ್ಳುವುದು ಸಂಬಂಧಗಳ ಉಳಿವಿಗೂ ಒಳ್ಳೆಯದು, ನಮ್ಮ ಗೌರವದ ಉಳಿವಿಗೂ ಒಳ್ಳೆಯದು!

1 Comment

  1. ಅದ್ಭುತವಾದ ಸುಭಾಷಿತ,ಬೇಡರ ಹೆಣ್ಣಿನ ಉದಾಹರಣೆ ನಿಜಕ್ಕೂ ಸರಿಯಾಗಿದೆ…ಅತಿಯಾದರೆ ಅಮೃತವೂ ವಿಷವಾಗುವುದು…💖💐👍🙏

Leave a Reply