ಯಾವ ಶುಚಿತ್ವ ಶ್ರೇಷ್ಠ? : ಇಂದಿನ ಸುಭಾಷಿತ

ಇಂದಿನ ಸುಭಾಷಿತ…

ವೃತ್ತಶೌಚಂ ಮನಃಶೌಚಂ ತೀರ್ಥಶೌಚಮತಃ ಪರಂ |
ಜ್ಞಾನೋತ್ಪನ್ನಂ ಚ ಯಚ್ಛೌಚಂ ತಚ್ಛೌಚಂ ಪರಮಂ ಸ್ಮೃತಂ || ಸುಭಾಷಿತ ||
ಅರ್ಥ : “ನಡತೆಯಲ್ಲಿ ಶುಚಿತ್ವ, ಮನಸ್ಸಿನ ಶುಚಿತ್ವ – ಇವು ತೀರ್ಥಕ್ಷೇತ್ರ ದರ್ಶನಾದಿಗಳಿಗಿಂತ ಮಿಗಿಲಾದವು. ಆದರೆ ಜ್ಞಾನದಿಂದ ಉಂಟಾದ ಶುಚಿತ್ವವು ಪರಮಶ್ರೇಷ್ಠವಾದುದೆಂದು ಹೇಳಲಾಗಿದೆ”.
ತಾತ್ಪರ್ಯ: ನಾವು ಶುಚಿಯಾಗಿರದೆ ತೀರ್ಥಕ್ಷೇತ್ರಗಳನ್ನು ಸುತ್ತುವುದರಿಂದ ಯಾವ ಪ್ರಯೋಜನವೂ ಇಲ್ಲ. ನಮ್ಮ ನಡೆನುಡಿಗಳು ಶುಚಿಯಾಗಿರಬೇಕು. ಮನಸ್ಸಿನಲ್ಲಿ ಯಾವುದೇ ರೀತಿಯ ಕಶ್ಮಲಗಳು ಇರಬಾರದು, ದುಷ್ಟ ಚಿಂತನೆಗಳು ಇರಬಾರದು. ಹೀಗೆ ನಾವು ಅಂತರಂಗದ ಶುಚಿತ್ವವನ್ನು ಕಾಯ್ದುಕೊಂಡರೆ, ಅದು ತೀರ್ಥಕ್ಷೇತ್ರ ಮಾಡುವುದಕ್ಕಿಂತ ಮಿಗಿಲಾದುದು.

ಹಾಗೆಯೇ ಈ ಅಂತರಂಗದ ಶುಚಿತ್ವವನ್ನು ಪ್ರಜ್ಞಾಪೂರ್ವಕವಾಗಿ ಕಾಪಾಡಿಕೊಂಡರೆ ಅದು ಎಲ್ಲಕ್ಕಿಂತ ಮಿಗಿಲಾದುದು.

ಜ್ಞಾನವು ನಮ್ಮ ಮನಸ್ಸಿನ ತಾಮಸಿಕ ಚಿಂತನೆಗಳನ್ನು ತೊಡೆದುಹಾಕುತ್ತದೆ. ನಮ್ಮನ್ನು ನಮ್ಮ ಅರಿವಿನಿಂದಲೇ ಶುಚಿಯಾಗಿಡುತ್ತದೆ. ಆದ್ದರಿಂದ “ಸಹಜ ಬದುಕಿನಲ್ಲಿ ಜ್ಞಾನ ಸಂಪಾದನೆಗೆ ಆದ್ಯತೆ ನೀಡಬೇಕು, ಆ ಮೂಲಕ ಸತ್ಫಲಗಳನ್ನು ಪಡೆಯಬೇಕು ಮತ್ತು ಸ್ವಚ್ಛ ಸುಂದರ ಬದುಕು ರೂಪಿಸಿಕೊಳ್ಳಬೇಕು” ಎನ್ನುವುದು ಈ ಸುಭಾಷಿತದ ತಾತ್ಪರ್ಯ.

Leave a Reply