ಮೋಕ್ಷ, ಬಿಡುಗಡೆ, ನಿರ್ವಾಣ ಇತ್ಯಾದಿ… : ಯುಜಿ ಜೊತೆ ಮಾತುಕತೆ

ಆತ್ಯಂತಿಕ ಎನ್ನಬಹುದಾದ ಯಾವ ಪರಮೋಚ್ಚ ಗುರಿಯೂ ಇಲ್ಲ ಎನ್ನುವ ಸ್ಪಷ್ಟ ತಿಳುವಳಿಕೆಯಲ್ಲಿ ಒಂದಾದ ಮನುಷ್ಯನಿಗೆ ಸಮಾಜದೊಂದಿಗೆ ಯಾವ ಸಂಘರ್ಷವೂ ಇಲ್ಲ, ಆತ ಸಮಾಜಘಾತುಕನಲ್ಲ, ಜಗತ್ತಿನೊಂದಿಗೆ ಯುದ್ಧನಿರತನೂ ಅಲ್ಲ. ಅವನಿಗೆ ಸಮಾಜವನ್ನು ಬದಲಾಯಿಸಬೇಕು ಎನ್ನುವ ಯಾವ ಹುಕಿಯೂ ಇಲ್ಲ, ಅವನು ಎಲ್ಲ ಥರದ ಬದಲಾವಣೆಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ…

ಯು.ಜಿ.ಕೃಷ್ಣಮೂರ್ತಿ; ಕನ್ನಡಕ್ಕೆ: ಚಿದಂಬರ ನರೇಂದ್ರ

ಪ್ರಶ್ನೆ : ಎಲ್ಲ ಧರ್ಮಗಳು ಸ್ವಾತಂತ್ರ್ಯ, ಬಿಡುಗಡೆ, ಮೋಕ್ಷ, ನಿರ್ವಾಣ, ಸ್ವರ್ಗ ಅಥವಾ ದೇವರು ಇವೇ ಮುಂತಾದ ಬಯಕೆಗಳನ್ನು ನಮ್ಮ ಬೇರೆಲ್ಲ ಆಸೆಗಳಿಗಿಂತ ಮಹತ್ವದವು ಎಂದು ಹೆಸರಿಸಿ ಇವುಗಳಿಗಾಗಿ ಸಾಧನೆ ಮಾಡುವುದು ಸೂಕ್ತ ಎಂದು ಹೇಳುತ್ತವೆ. ಆದರೆ ನಿಮ್ಮ ಪ್ರಕಾರ, ಇಂಥ ಯಾವ ಆತ್ಯಂತಿಕ ಗುರಿಗಳು ಇಲ್ಲವೇ ಇಲ್ಲ ಎಂದಮೇಲೆ, ಇವೆಲ್ಲ ಸುಳ್ಳು ಹಾಗು ತುಚ್ಛ ಬಯಕೆಗಳು, ಹಾಗಾಗಿ ಯಾವ ಸಾಧನೆ ಮುಂತಾದವಕ್ಕೆ ಅರ್ಹವಲ್ಲ. ಆದರೆ ದೇಹದ ಬಯಕೆಗಳನ್ನು ಮೀರುವ ಈ ಕೆಲ ಬಯಕೆಗಳು ದೈವಿಕವಾದವು ಎನ್ನುವದನ್ನ ನಾವು ಮತ್ತೆ ಮತ್ತೆ ಒತ್ತಾಯಪೂರ್ವಕವಾಗಿಯಾದರೂ ನಂಬಲು ಪ್ರಯತ್ನ ಮಾಡುತ್ತೇವೆ. ಯಾಕೆ ಹೀಗೆ ? ಈ ಬಗ್ಗೆ ನಿಮ್ಮ ಅಭಿಪ್ರಾಯ ಏನು ?

ಯುಜಿ : ನೀವು ಎಲ್ಲಿಯವರೆಗೆ, ಮೋಕ್ಷ, ಬಿಡುಗಡೆ, ನಿರ್ವಾಣ , ಆತ್ಮ ಸಾಕ್ಷಾತ್ಕಾರ ಮುಂತಾದ ಬಯಕೆಗಳ ಹಿಂದೆ ಬೀಳುವ ಬಯಕೆಯಿಂದ ಬಿಡಿಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ನಿಮ್ಮ ಪರಿಸ್ಥಿತಿ ಕರುಣಾಜನಕವಾಗಿಯೇ ಮುಂದುವರೆಯುತ್ತದೆ. ಸಮಾಜ, ಸಂಸ್ಕೃತಿ ನಮ್ಮ ಎದುರಿಗಿಟ್ಟಿರುವ ಈ ಪರಮೋಚ್ಚ ಗುರಿಗಳಿಂದ ದೂರವಾಗದ ಹೊರತು ನಮ್ಮ ಶೋಚನೀಯ ಸ್ಥಿತಿಗೆ ವಿಮುಕ್ತಿಯೇ ಇಲ್ಲ. ಈ ಬಗ್ಗೆ ನೀವು ಸ್ಪಷ್ಟ ತಿಳುವಳಿಕೆಯಲ್ಲಿ ಒಂದಾದಾಗ ಮಾತ್ರ ಬೇರೆಲ್ಲ ಬಯಕೆಗಳು ತಾವೇ ತಾವಾಗಿ ತಮ್ಮ ಸಹಜ ಲಯದಲ್ಲಿ ಒಂದಾಗುವವು. ಆದರೆ ಸಮಾಜದ ಶಿಕ್ಷೆಯ ಭಯದಿಂದ ಅಥವಾ ನಿಮ್ಮ ಪರಮೋಚ್ಚ ಮೋಕ್ಷದ ಗುರಿಯ ಹಾದಿಯಲ್ಲಿ ಅಡತಡೆಯಾಗುತ್ತವೆ ಎನ್ನುವ ಆತಂಕದಿಂದ ನೀವು ನಿಮ್ಮ ಇತರೆ ಬಯಕೆಗಳನ್ನು ಹತ್ತಿಕ್ಕುತ್ತೀರಿ ಆಗಲೇ ಈ ಬಯಕೆಗಳು ಬೃಹದಾಕಾರವಾಗಿ ನಿಮ್ಮನ್ನು ದುಗುಡಕ್ಕೆ ನೂಕುತ್ತವೆ.

ಆತ್ಯಂತಿಕ ಎನ್ನಬಹುದಾದ ಯಾವ ಪರಮೋಚ್ಚ ಗುರಿಯೂ ಇಲ್ಲ ಎನ್ನುವ ಸ್ಪಷ್ಟ ತಿಳುವಳಿಕೆಯಲ್ಲಿ ಒಂದಾದ ಮನುಷ್ಯನಿಗೆ ಸಮಾಜದೊಂದಿಗೆ ಯಾವ ಸಂಘರ್ಷವೂ ಇಲ್ಲ, ಆತ ಸಮಾಜಘಾತುಕನಲ್ಲ, ಜಗತ್ತಿನೊಂದಿಗೆ ಯುದ್ಧನಿರತನೂ ಅಲ್ಲ. ಅವನಿಗೆ ಸಮಾಜವನ್ನು ಬದಲಾಯಿಸಬೇಕು ಎನ್ನುವ ಯಾವ ಹುಕಿಯೂ ಇಲ್ಲ, ಅವನು ಎಲ್ಲ ಥರದ ಬದಲಾವಣೆಗಳಲ್ಲಿ ಆಸಕ್ತಿ ಕಳೆದುಕೊಂಡಿದ್ದಾನೆ. ಅವನಿಗೆ ಯಾವ ದಿಕ್ಕಿನಲ್ಲಾದರೂ ಏನಾದರೂ ಮಾಡುವುದೆಂದರೆ ಹಿಂಸೆ ಮಾಡಿದಂತೆ. ಎಲ್ಲ ಕ್ರೀಯೆಗಳೂ ಹಿಂಸೆ. ಪ್ರಶಾಂತ ಸ್ಥಿತಿಯನ್ನ ಹುಟ್ಟುಹಾಕಿಕೊಳ್ಳಲು ಅವನು ಥಾಟ್ ಬಳಸಿ ಮಾಡುವ ಪ್ರತೀ ಕ್ರೀಯೆ, ಒತ್ತಾಯ ಮಾಡಿದಂತೆ ಹಾಗಾಗಿ ಹಿಂಸೆಯಂತೆ. ಇಂಥ ಒತ್ತಾಯಗಳೇ ಅಸಹಜ. ಶಾಂತಿಯನ್ನ ಸ್ಥಾಪಿಸಲು ನೀವು ಹಿಂಸೆಯನ್ನ ಬಳಸುತ್ತಿದ್ದೀರಿ. ಯೋಗ, ಧ್ಯಾನ, ಪ್ರಾರ್ಥನೆ, ಮಂತ್ರ, ತಂತ್ರ, ಎಲ್ಲವೂ ಹಿಂಸಾತ್ಮಕ ಕ್ರೀಯೆಗಳೇ. ಜೀವಿಯ ಸಹಜ ಸ್ಥಿತಿಯೇ ಪ್ರಶಾಂತ ಸ್ಥಿತಿ, ನೀವು ಮಾಡಬೇಕಾದ್ದು ಏನೂ ಇಲ್ಲ. ಸದಾ ಪ್ರಶಾಂತ ಸ್ಥಿತಿಯಲ್ಲಿರುವ ದೇಹ, ಆನಂದ, ಭಾವೋತ್ಕರ್ಷ ಅಥವಾ ತುರೀಯ ಸ್ಥಿತಿ ಮುಂತಾದವಕ್ಕೆ ಕವಡೆ ಕಿಮ್ಮತ್ತೂ ಕೊಡುವುದಿಲ್ಲ.

ಮನುಷ್ಯ, ದೇಹದ ಸಹಜ ತಿಳುವಳಿಕೆಯಿಂದ ವಂಚಿತನಾಗಿದ್ದಾನೆ. ಆದ್ದರಿಂದಲೇ ನಾನು ಹೇಳುವುದು, ಯಾವತ್ತು ಮನುಷ್ಯನಲ್ಲಿ Self consciousness ಮೊದಲ ಬಾರಿಗೆ ಕಾಣಿಸಿಕೊಂಡಿತೋ, ಯಾವತ್ತು ಅವನು ತನ್ನನ್ನು ತನ್ನ ಸುತ್ತಲಿನ ಪ್ರಕೃತಿಯ ಇತರ ಜೀವಿಗಳಿಂತ ಶ್ರೇಷ್ಠ ಎಂದು ಗುರುತಿಸಿಕೊಂಡನೋ ಅಂದೇ ಅವನ ಅವನತಿ ಶುರುವಾಯಿತು. ಬದುಕಿನ ಬಗೆಗಿನ ಈ ತಿರುಚಿದ ದೃಷ್ಟಿಕೋನ ಅವನನ್ನು ಸರ್ವನಾಶದ ದಿಕ್ಕಿನಲ್ಲಿ ಕರೆದೊಯ್ಯುತಿದೆ. ಈ ಬಗ್ಗೆ ಏನೂ ಮಾಡುವುದು ಈಗ ಸಾಧ್ಯವಿಲ್ಲ.

ನಾನು ನಿಮ್ಮನ್ನು ಸುಮ್ಮನೇ ಭಯಭೀತರನ್ನಾಗಿಸುತ್ತಿಲ್ಲ, ನನಗೆ ಜಗತ್ತನ್ನ ಕಾಪಾಡಿಕೊಳ್ಳಬೇಕೆನ್ನುವ ಯಾವ ಬಯಕೆಯೂ ಇಲ್ಲ. ನಾನು ಇಷ್ಟೆಲ್ಲ ಹೇಳುವ ಉದ್ದೇಶ, ನೀವು ಹುಡುಕುತ್ತಿರುವ ಶಾಂತಿ, ಸಮಾಧಾನ ಈಗಾಗಲೇ ನಿಮ್ಮೊಳಗೆ ಇದೆ, ದೇಹದ ಅದ್ಭುತ ತಿಳುವಳಿಕೆಯಲ್ಲಿ, ದೇಹ ಕೆಲಸ ಮಾಡುವ ಸಾಮರಸ್ಯದಲ್ಲಿ.

ಪ್ರಶ್ನೆ : ಸಂಗತಿಗಳನ್ನು ಅವು ಇದ್ದ ಹಾಗೆಯೇ ನೋಡಬೇಕು ಎನ್ನುತ್ತಾರಲ್ಲ …

ಯುಜಿ : ಸಂಗತಿಗಳನ್ನ ಅವು ಇರುವ ಹಾಗೇ ನೀವು ನೋಡುವ ಒಂದು ಸಾಧ್ಯತೆಯೇ ಇಲ್ಲ. ನಿಮ್ಮ ಅನುಭವಗಳಿಂದ, ಭಾವನೆಗಳಿಂದ ನೀವು ಹೊರತಾಗುವುದು ಸಾಧ್ಯವೇ ಇಲ್ಲ. ಪ್ರತೀ ಅನುಭವವನ್ನು ನೀವು ಗ್ರಹಿಸುವುದು ನಿಮ್ಮ ತಿಳುವಳಿಕೆಯ ಚೌಕಟ್ಟಿನಲ್ಲಿಯೇ. ನೀವು ಖುಶಿಯಾಗಿದ್ದೀರಿ ಅಥವಾ ದುಃಖದಲ್ಲಿದ್ದೀರಿ ಎಂದು ನಿಮಗೆ ಗೊತ್ತಾಗುವುದು, ನಿಮ್ಮಖುಶಿ ಮತ್ತು ದುಃಖದ ಅನುಭವದ ತಿಳುವಳಿಕೆಯ ಪರಿಧಿಯಲ್ಲಿಯೇ. ನೀವು ಏನನ್ನಾದರೂ ಅನುಭವಿಸುವದಕ್ಕಿಂತ ಮೊದಲೇ ಅದನ್ನು ನಿಮ್ಮ ತಿಳುವಳಿಕೆಯ ಚೌಕಟ್ಟಿನಲ್ಲಿ ಇಡಬೇಕಾಗುತ್ತದೆ. ತಿಳುವಳಿಕೆಯ ಚಲನೆ ನಿಮ್ಮೊಳಗೆ ವೇಗ ಕಂಡುಕೊಳ್ಳುತ್ತಿದೆ. ಅದರ ಮುಖ್ಯ ಉದ್ದೇಶವೇ ಮುಂದುವರಿಕೆ. ಮುಂದವರೆಸಲು ಇಲ್ಲಿ ಯಾವ ಘಟಕ ಯಾವ ಸೆಲ್ಫ್ ಇಲ್ಲ , ಇದು ಆಲೋಚನೆಗಳ ಪ್ರವಾಹ ತನ್ನನ್ನು ತಾನು ಬಚಾವು ಮಾಡಿಕೊಳ್ಳುವ ತಂತ್ರ, ಸಂಪೂರ್ಣ ಯಾಂತ್ರಿಕ ಕ್ರೀಯೆ. ಇಂಥದನ್ನು ನಿಯಂತ್ರಿಸಲು ನೀವು ಮಾಡುವ ಎಲ್ಲ ಪ್ರಯತ್ನಗಳು ಈ ಚಲನೆಯ ವೇಗವನ್ನು ಹೆಚ್ಚಿಸಲು ಸಹಾಯ ಮಾಡುತ್ತವೆ ಅಷ್ಟೇ.

ಪ್ರಶ್ನೆ : ಮನುಷ್ಯ ಬದುಕಿಗೆ ಪರಮೋಚ್ಚ ಗುರಿ ಎನ್ನುವ ಯಾವುದಾದರೊಂದು ಇದೆಯೆ ?

ಯುಜಿ : ಪರಮೋಚ್ಚ ಗುರಿ ಎನ್ನುವುದು ಬಯಲಲ್ಲಿ ನಿಂತಾಗ,ಭೂಮಿ ಆಕಾಶ ಒಂದುಗೂಡಿದಂತೆ ಕಾಣುವ ಕ್ಷಿತಿಜದಂತೆ. ನೀವು ಹತ್ತಿರ ಹೋದಂತೆಲ್ಲ ಅದು ನಿಮ್ಮಿಂದ ದೂರ ದೂರ ಸಾಗುತ್ತದೆ. ಗುರಿ ಎನ್ನುವುದು ಕ್ಷಿತಿಜದಂತೆ ಕಾಣುತ್ತದೆ ಆದರೆ ನಿಜದಲ್ಲಿ ಇಲ್ಲ. ಗುರಿ, ನಿಮ್ಮ ಭಯ ಆತಂಕಗಳ ಪ್ರೊಜೆಕ್ಷನ್, ನೀವು ಸಾಧಿಸಿದಿರಿ ಎಂದು ಕೊಳ್ಳುತ್ತಿರುವಾಗಲೆ ಅದು ಮತ್ತೆ ಮುಂದೆ ಹೋಗಿರುತ್ತದೆ. ಹೇಗೆ ತಾನೆ ಗುರಿಯನ್ನ ಮುಟ್ಟುವುದು ನಿಮಗೆ ಸಾಧ್ಯ ? ನಿಮಗೆ ಯಾವುದೂ ಸಾಧ್ಯವಿಲ್ಲ. ಆದರೂ ಬಯಕೆ ನಿಮ್ಮನ್ನ ಚಲನೆಯಲ್ಲಿಡುತ್ತದೆ ; ನೀವು ಯಾವ ದಿಕ್ಕಿನಲ್ಲಿ ಪ್ರಯಾಣ ಮುಂದುವರೆಸಿದರೂ ಈ ಪರಿಸ್ಥಿತಿಯಲ್ಲಿ ಯಾವ ಬದಲಾವಣೆ ಇಲ್ಲ.

Leave a Reply