ಬಾಯಲಿ ಹಾಡಿ ಮನದಿ ಚಿಂತಿಸೆ… । ಧನುರ್ ಉತ್ಸವ ~ 5

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ. ಇದು ಐದನೇ ಕಂತು.

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಐದನೇಯ ದಿನ

ಮಾಯಾವಿ ದಿವ್ಯ ಉತ್ತರದ ಮಧುರೆಯೊಡೆಯನ

ಶುದ್ಧ ಪ್ರವಾಹದಂದಿರ್ಪ ಯಮುನಾ ತೀರವಾಸಿಯ

ಗೊಲ್ಲರಕುಲದಿ ಬೆಳಗುವ ರತ್ನ ದೀಪವ

ತಾಯೊಡಲು ಬೆಳಗಿಸಿದ ದಾಮೋದರನ

ಪರಿಶುದ್ಧದಿಂ ಬಂದು ನಾವ್ ಶುದ್ಧ ಹೂಗಳನ್ನಿಟ್ಟು ಸೇವಿಸಿ

ಬಾಯಲಿ ಹಾಡಿ ಮನದಿ ಚಿಂತಿಸೆ

ಹಳೆಯ ಪಾಪಂಗಳುಂ ಮುಂದೆ ಮಾಡ್ವಂತಹವುಂ

ಬೆಂಕಿಯಲಿ ಹತ್ತಿಯಂತಾಗುವುವೊ ನಮ್ಮೀ ಪವಿತ್ರ ವ್ರತ ಸಾರ್ಥಕವು

-ಬಿಂದಿಗನವಲೆ ನಾರಾಯಣಸ್ವಾಮಿ ( ತೋಡಿ ರಾಗ – ರೂಪಕ ತಾಳ)

“ಮಾಯ ಕೆಲಸಗಳನ್ನು ಮಾಡಿದವನು….ಮಥುರಾದಲ್ಲಿ ಜನಿಸಿದವನು…..

ಪವಿತ್ರವಾದ ಯಮುನಾ ನದಿಯ ದಂಡೆಯಲ್ಲಿ ಆಟವಾಡಿ ಹರುಷದಿಂದಿದ್ದವನು…..

ತನ್ನ ಹಿರಿಮೆಯಿಂದ ತನ್ನ ತಾಯಿಯನ್ನು ಅರಿಯುವಂತೆ ಮಾಡಿದವನು…..

ಅಂತಹ ಕೃಷ್ಣನನ್ನು  ಮನಸಾರೆ ವಂದಿಸಿ, ಪವಿತ್ರವಾದ ಪುಷ್ಪಗಳಿಂದ ಪೂಜಿಸಿ, ಅವನನ್ನು ಮನ ತುಂಬ ಹೊಗಳಿ ಹಾಡಿದರೆ  ನಾವು ಮಾಡಿದ ಹಳೆಯ ಅಪರಾಧಗಳೆಲ್ಲವೂ ಬೆಂಕಿಗೆ ಬಿದ್ದ ಹತ್ತಿಯಂತೆ ಭಸ್ಮವಾಗುತ್ತದೆ….

ಅವನನ್ನು ಹೊಗಳಿ ಹಾಡೋಣ ಬನ್ನಿ ಸ್ತ್ರೀಯರೇ….!

ಎಂದು ಆ ಮಾಯಾಂಗನನ್ನು ಹಾಡಲು ತನ್ನ ಗೆಳತಿಯರನ್ನು ಕರೆಯುತ್ತಾಳೆ ಗೋದೈ ಆಂಡಾಳ್….!”

“ತಾಯೊಡಲು ಬೆಳಗಿಸಿದ ದಾಮೋದರನ…..!” ಎಂದು ಈ ಹಾಡಿನಲ್ಲಿ ಭಗವಂತನನ್ನು ಕರೆಯುತ್ತಾಳೆ ಗೋದೈ…? ‘ದಾಮೋದರ’ ಎಂಬ ಪದಕ್ಕೆ ಅರ್ಥವೇನು..?

ದಾಮೋದರ ಎಂಬುದು ವಿಷ್ಣುವಿನ ಹನ್ನೆರಡು ನಾಮಗಳಲ್ಲಿ ಹನ್ನೆರಡನೇಯ ಹೆಸರು. ರಣರಂಗದಲ್ಲಿ ತನ್ನ ಅಂತಿಮಕಾಲದಲ್ಲಿ ಶರ ಶಯ್ಯೆಯ ಮೇಲೆ ಭೀಷ್ಮ ಉಪದೇಶಿಸಿದ ವಿಷ್ಣು ಸಹಸ್ರನಾಮದಲ್ಲಿ, ದಾಮೋದರ ಎಂಬುದು 367 ನೇಯ ಹೆಸರಾಗಿ ಹೇಳಲ್ಪಟ್ಟಿದೆ.

ಭಗವಂತನ ಹಿರಿಮೆಯನ್ನು ಹೇಳುವ ಹೆಸರೇ ದಾಮೋದರ ಎಂದು ಪುರಾಣಗಳು ನಮಗೆ ಹೇಳಿದರೂ ನಿಜವಾಗಲೂ ಭಗವಂತನ ಸರಳತೆಯನ್ನು ನಮಗೆ ತಿಳಿಸಿ ಹೇಳುವ ಹೆಸರು ಇದು.

“ದಾಮ’ ಎಂದರೆ ಹಗ್ಗ ಎಂದೂ, ‘ಉದರ’ ಎಂದರೆ ಹೊಟ್ಟೆಯುಳ್ಳವನೆಂದು ಅರ್ಥ. ಅಂದರೆ ಹೊಟ್ಟೆಗೆ ಹಗ್ಗ ಕಟ್ಟಿದ್ದರಿಂದ ಉಂಟಾದ  ಕಲೆಗಳನ್ನುಳ್ಳವನು ಎಂಬುದು ನಿಜವಾದ ಅರ್ಥ.

ಭಗವಂತನ ಹೊಟ್ಟೆಯನ್ನು ಹಗ್ಗದಿಂದ ಬಿಗಿದ ಕಲೆಗಳೇ..? ದೇವರನ್ನೂ ಸಹ ಮನುಷ್ಯರಿಂದ ಕಟ್ಟಿಹಾಕಲು ಸಾಧ್ಯವೇ ಏನು..? ಎಂಬ ಪ್ರಶ್ನೆ ಏಳುವಾಗ, ಅವನನ್ನು ಕಟ್ಟಲ್ಪಟ್ಟ ಕಥೆಗಳು ಅನೇಕ ನಮಗೆ ಕಾಣಲು  ದೊರಕುತ್ತವೆ…!

ಭಗವಂತನಲ್ಲಿ ಯಾಕೆ ಕೃಷ್ಣ ಮಾತ್ರ ಎಲ್ಲರಿಗೂ ಪ್ರಿಯ ಎಂದರೆ, ಭಗವಂತ ತನ್ನ ಹತ್ತು ಅವತಾರಗಳಲ್ಲಿ ವಾಮನ, ರಾಮ, ಕೃಷ್ಣ ಎಂಬ ಮೂರನ್ನೇ ಮನುಷ್ಯ ಅವತಾರವಾಗಿ ತಾಳಿದನು.

ಅದರಲ್ಲಿ ವಾಮನ ಭೂಮಿಯಲ್ಲಿ ತಂಗಲಿಲ್ಲ. ತಾನು ಬಂದ ಕೆಲಸ ಮುಗಿದ ಕೂಡಲೇ ತನ್ನ ಸ್ವಸ್ಥಾನಕ್ಕೆ ಹಿಂತಿರುಗಿಬಿಟ್ಟನು. ಬಹಳ ಒಳ್ಳೆಯ ಗುಣಗಳನ್ನೂ, ತುಂಬು ಸುಸಂಸ್ಕೃತನೂ ಆಗಿ ಮಾನವ ಅವತಾರ ತಾಳಿದ ರಾಮನೋ, ತಂದೆಯ ಮಾತಿಗೆ ವಿಧೇಯನಾಗಿ ವನವಾಸಕ್ಕೆ ಹೋದನು. ಸಾಮಾನ್ಯ ಮನುಷ್ಯರಂತೆ ಹಲವು ದುಃಖಗಳನ್ನು ಅನುಭವಿಸಿದರೂ, ಕ್ಷತ್ರಿಯ ವಂಶದಲ್ಲಿ ಹುಟ್ಟಿ ರಾಜಕುಮಾರನಾಗಿ ಬದುಕಿದನು.

ಆದರೆ ಧನ ಕಾಯುವ ಗೊಲ್ಲರ ಕುಲದಲ್ಲಿ ಹುಟ್ಟಿದ ಕೃಷ್ಣ ಹಾಗಲ್ಲ. ಬಹಳ ಸರಳವಾದವನು. ನಮ್ಮಂತೆಯೇ ನಕ್ಕು ಆಟವಾಡಿ, ನಮ್ಮಂತೆಯೇ ಪ್ರೀತಿಸಿ, ನಮ್ಮಂತೆಯೇ ತಪ್ಪುಗಳನ್ನು ಮಾಡಿ, ಮತ್ತೆ ತಿದ್ದಿಕೊಂಡು,  ನಾವು ಅನುಭವಿಸುವ ಎಲ್ಲ ಸಂತೋಷಗಳನ್ನೂ, ಸುಖ ದುಃಖಗಳನ್ನೂ ತಾನೂ ಅನುಭವಿಸಿ ನಮಗಾಗಿ ನಮ್ಮೊಂದಿಗೇ  ಬದುಕಿ ತೋರಿಸಿದವನು,

ಅಂತಹ ಕೃಷ್ಣ, ಒಂದು ಮಗುವಾಗಿ ತಾನು ಮಾಡಿದ ತುಂಟಾಟಗಳಿಗಾಗಿ ತನ್ನ ತಾಯಿಂದ ಹಗ್ಗದಿಂದ ಹೊಟ್ಟೆಯ ಸುತ್ತ ಸುತ್ತಿ ಕಟ್ಟಲ್ಪಟ್ಟ ಕಥೆಯೇ ಅವನು ದಾಮೋದರನಾದ ಕಥೆ.

‘ಜಗವನ್ನೆಲ್ಲ ತನ್ನೊಳಗೆ ಅಡಗಿಸಿಟ್ಟುಕೊಂಡ ಒಬ್ಬನನ್ನು ಹೇಗೆ ಒಂದು ಸಣ್ಣ ಹಗ್ಗದಿಂದ ಕಟ್ಟಿಹಾಕಲು ಸಾಧ್ಯವಾಯಿತು..? ಹಾಗೆಯೇ ಕಟ್ಟಿ ಹಾಕಿದ್ದರೂ ಹೊಟ್ಟೆಯ ಮೇಲೆ ಕಲೆಗಳು ಉಳಿಯುವಂತೆಯೇ ಬಿಗಿದು ಕಟ್ಟುತ್ತಾಳೆಯೇ ಒಬ್ಬ ತಾಯಿ..? ಎಂಬ ಪ್ರಶ್ನೆಗಳಿಗೆ ಕೃಷ್ಣನ ಶಿಶು ಪರ್ವದಲ್ಲಿ ನಡೆದ ಘಟನೆ ಒಂದು ಉತ್ತರ ನೀಡುತ್ತದೆ.

ಸಣ್ಣ ಮಗುವಾಗಿದ್ದಾಗ, ಕೃಷ್ಣ ಒಮ್ಮೆ ಯಶೋಧೆ ಕಡೆದಿಟ್ಟ ಮೊಸರು ಮಡಿಕೆಯನ್ನು ಒಡೆದು, ಅದರಿಂದ ಬೆಣ್ಣೆಯನ್ನು ತೆಗೆದು ತಿಂದಿದ್ದಾನೆ.  ಅಡುಗೆ ಕೋಣೆಯಿಂದ ಹಿಂತಿರುಗಿ ಬಂದು ನೋಡಿದ ಯಶೋಧೆ, ಮಡಿಕೆ ಒಡೆದು, ಮನೆ ಎಲ್ಲಾ ಮೊಸರು ಚೆಲ್ಲಿರುವುದನ್ನು ನೋಡಿ ಕೋಪದಿಂದ ಅವನನ್ನು ಒಂದು ಹಗ್ಗದಿಂದ ಹೊಸಿಲಲ್ಲಿದ್ದ ಒರಳಿಗೆ ಕಟ್ಟಿಹಾಕುತ್ತಾಳೆ. ತನ್ನ ತಾಯಿಯ ಹಗ್ಗದ ಕಟ್ಟಿಗೆ ಅಡಗಿಹೋದ ತುಂಟ ಕೃಷ್ಣ, ಯಶೋಧೆ ಅಲ್ಲಿಂದ ಹೋದಮೇಲೆ, ಹೊಟ್ಟೆಗೆ ಬಿಗಿದಿದ್ದ ಹಗ್ಗದೊಂದಿಗೆ ಒರಳನ್ನೂ ಸೇರಿಸಿ ಎಳೆದುಕೊಂಡು ಹೊಸಿಲಿಗೆ ಓಡಿದ್ದಾನೆ.

ಮನೆಯ ಹೊಸಿಲಿನಲ್ಲಿ ಕಂಡ ಎರಡು ಅರ್ಜುನ ಮರಗಳನ್ನು ನೋಡಿದಕೂಡಲೇ, ಆ ಮರಗಳ ನಡುವೆ ನುಸುಳಿಸಿದರೆ ಒರಳು ಹೊರಬರಲಾಗದೆ ಸಿಕ್ಕಿಹಾಕಿಕೊಂಡು ಹಗ್ಗ ತನ್ನಷ್ಟಕ್ಕೆ ತುಂಡಾಗುತ್ತದೆ ಎಂದು ಯೋಚಿಸಿ, ಹಾಗೆಯೇ ಮಾಡಿದ್ದಾನೆ. ಮರಗಳ ನಡುವೆ ನುಸುಳಿ ತನ್ನ ಬಲವನ್ನೆಲ್ಲಾ ಬಳಸಿ ಒರಳನ್ನು ಎಳೆದು ನೋಡಿದ್ದಾನೆ.  ಅವನು ಅಂದುಕೊಂಡಂತೆ ಹಗ್ಗ ತುಂಡಾಗಲಿಲ್ಲ. ಅದಕ್ಕೆ ಬದಲಾಗಿ, ಆ  ಅರ್ಜುನ ಮರಗಳೆರಡೂ ಮುರಿದು ಬಿದ್ದು, ಆ ಮರಗಳಿಂದ ಇಬ್ಬರು ದೇವಕುಮಾರರು ಹೊರಬರುತ್ತಾರೆ.

ಕುಭೇರನ ಮಕ್ಕಳಾದ ನಲಕುವರ, ಮಣಿಗ್ರೀವ ಎಂಬ ಇಬ್ಬರೂ, ಆ ಮೊದಲು ಅತಿ ಸಂಪತ್ತು ಇದ್ದ  ಧೈರ್ಯದಲ್ಲಿ, ಅತಿಯಾಗಿ ಮಧುಪಾನ ಸೇವನೆ ಮಾಡಿ ನಾರದರು ಬಂದದ್ದನ್ನೂ ಗಮನಿಸದೆ , ಗಂಧರ್ವ ಸ್ತ್ರೀಯರೊಂದಿಗೆ ತಟಾಕದಲ್ಲಿ ಸರಸ ಸಲ್ಲಾಪದಲ್ಲಿರುತ್ತಾರೆ. ಅದನ್ನು ಕಂಡು ಕೋಪಗೊಂಡ ನಾರದರು, ಮರದಂತೆ ಪ್ರಜ್ಞೆಯಿಲ್ಲದೆ ಇದ್ದ ಅವರನ್ನು ಭೂಲೋಕದಲ್ಲಿ ಎರಡು ಅರ್ಜುನ ಮರಗಳಾಗಿ ಹೋಗಿರೆಂದು ಶಾಪ ನೀಡುತ್ತಾರೆ.

ಅದರ ನಂತರ, ತಮ್ಮ ತಪ್ಪನ್ನು ಅರಿತು ಇಬ್ಬರೂ ನಾರದರ ಬಳಿ ಕ್ಷಮೆ ಯಾಚಲು, ಶ್ರೀಮನ್ ನಾರಾಯಣ ಭೂಮಿಯಲ್ಲಿ ಕೃಷ್ಣನಾಗಿ ಅವತಾರ ತಾಳುವ ದ್ವಾಪರ ಯುಗದಲ್ಲಿ ಅವರಿಗೆ ಶಾಪ ವಿಮೋಚನೆ ದೊರಕುತ್ತದೆ ಎಂದು ಹೇಳುತ್ತಾರೆ. ನಾರದರ ಮಾತನ್ನುಳಿಸಲು, ಆ ಮರಗಳಿಗೆ ವಿಮೋಚನೆ ನೀಡಲು ಪ್ರಯತ್ನಿಸಿದ ಹಸಿಗೂಸಾದ ಕೃಷ್ಣನಿಗೆ  ಆಗ ಹೊಟ್ಟೆಯಲ್ಲಿ ಉಂಟಾದ ಕಲೆಗಳು ಜೀವನ ಪೂರ್ತಿ ಅವನನ್ನು ಬಿಟ್ಟು ಅಗಲದೆ ಉಳಿದುಬಿಡುತ್ತದೆ.

ಆದ್ದರಿಂದಲೇ ‘ದಾಮೋದರ’, ಅರ್ಥಾತ್ ಹೊಟ್ಟೆಯನ್ನು ಹಗ್ಗದಿಂದ ಬಿಗಿದದ್ದರಿಂದ ಕಲೆಗಳನ್ನು ಉಳ್ಳವನು ಎಂಬ ಹೆಸರು ಕೃಷ್ಣನಿಗೆ ಬರುತ್ತದೆ.

ಕೃಷ್ಣ ಕಣ್ಣಲ್ಲಿ ತುಂಬಿಕೊಳ್ಳಲಾಗದ, ಕೈಗೆ ಅಡಕವಾಗದ ವಿಶ್ವರೂಪಿ. ಆದರೂ ಯಶೋಧಾ ಮಾತೆ ಮಾತ್ರವಲ್ಲದೆ ಅವನನ್ನು ಪ್ರೀತಿಸುವರೂ ಅವನನ್ನು ಪ್ರೀತಿಯಿಂದ ಕಟ್ಟಿಹಾಕಿದ ಕಥೆಗಳು ಹೇರಳವಾಗುಂಟು.

ಮುಂದೆ ಮಹಾಭಾರತದ ಯುದ್ಧವನ್ನು ತಡೆಯುವ ಪ್ರಯತ್ನದಲ್ಲಿ ತೊಡಗಿಕೊಳ್ಳುವ  ಭಗವಾನ್ ಶ್ರೀ ಕೃಷ್ಣ, ಹಸ್ತಿನಾಪುರಕ್ಕೆ ಹೊರಡುವ ಮೊದಲು, ಪಾಂಡವರಲ್ಲಿ ಒಬ್ಬನಾದ ಸಹದೇವನನ್ನು ಬೇಟಿಯಾಗಿ, “ಸಹದೇವ ನೀನು ಜ್ಯೋತಿಷ್ಯ ಶಾಸ್ತ್ರ ಚೆನ್ನಾಗಿ ಬಲ್ಲವನಲ್ಲವೇ… ಈ ಮಹಾಭಾರತ ಯುದ್ಧವನ್ನು ನಡೆಯಬಿಡದಂತೆ ತಡೆದು, ಶಾಂತಿ ನೆಲಸಲು ದಾರಿ ಏನಾದರೂ ಉಂಟೆ ಎಂಬುದನ್ನು ಸ್ವಲ್ಪ ನೋಡಿ ಹೇಳು…!” ಎಂದು ಕೇಳಲು, ಅದಕ್ಕೆ ಸಹದೇವ ನಗುತ್ತಲೇ, “ಯುದ್ಧ ನಡೆಯದಂತೆ ಇರಲು ಒಂದೇ ದಾರಿ ಮಾತ್ರ ಇರುವುದು ಕೃಷ್ಣ… ನಿನ್ನನ್ನು ಎಲ್ಲಿಗೂ ಹೋಗಬಿಡದೆ ಇಲ್ಲೇ ಕಟ್ಟಿಹಾಕುವುದು ಒಂದೇ ಮಾರ್ಗ…” ಎಂದು ಉತ್ತರಿಸುತ್ತಾನೆ.

“ನನ್ನನ್ನು ಕಟ್ಟಿಹಾಕುವುದೇ..? ಎಲ್ಲಿ ನಿನ್ನಿಂದ ಸಾಧ್ಯವಾದರೆ ಕಟ್ಟಿಹಾಕು ನೋಡೋಣಾ..” ಎಂದು ಸಹದೇವನನ್ನು ಮುದ್ದಿನಿಂದ ಛೇಡಿಸುತ್ತಾನಂತೆ ಕೃಷ್ಣ.

“ನಿನ್ನನ್ನು ಕಟ್ಟಿಹಾಕುವುದು ಅಷ್ಟು ಕಷ್ಟವೇ ಏನು..?” ಎಂದು ಕೃಷ್ಣನನ್ನು ಕಟ್ಟಿಹಾಕಲು ಹಗ್ಗವನ್ನು ತರುತ್ತಾನೆ  ಸಹದೇವ. ಸಹದೇವನನ್ನು ಮೋಸ ಮಾಡಲು, ಹಲವು ಸಾವಿರ ರೂಪಗಳನ್ನು ತಾಳಿ ಆ ಮಂಟಪದ ತುಂಬ  ನಿಲ್ಲುತ್ತಾನೆ ಮಾಯ ಕೃಷ್ಣ.

ಬೇರೆ ಯಾರಾದರೂ ಆಗಿದ್ದರೆ ಕಂಡ ದೃಶ್ಯಕ್ಕೆ ಭ್ರಮಿಸಿ ಹೋಗಿರುವರು. ಆದರೆ ಸಹದೇವನೋ, ಸ್ವಲ್ಪವೂ ಗೊಂದಲಗೊಳ್ಳದೆ ಧ್ಯಾನಕ್ಕೆ ಕುಳಿತು, ಶ್ರೀ ಕೃಷ್ಣನ ನಾಮವನ್ನು ಉಚ್ಚರಿಸಲು ಕೃಷ್ಣನ ಮಾಯ ರೂಪಗಳು ಒಂದೊಂದಾಗಿ ಮರೆಯಾಗಿ ಒಬ್ಬನೇ ಕೃಷ್ಣನಾಗಿ ಸಹದೇವನ ಪ್ರೀತಿಗೆ ಕಟ್ಟುಪಟ್ಟು ನಿಂತನಂತೆ ಆ ದಾಮೋದರ.

ನಿಜವಾದ ಪ್ರೀತಿಯಿಂದ ಕೃಷ್ಣನನ್ನು ಒರಳಿಗೂ ಕಟ್ಟಿಹಾಕಬಹುದು, ಮನಸ್ಸಿನಲ್ಲಿ ಅಡಗಿಸಿ ಇಡಲೂ ಬಹುದು ಎಂಬುದು ಮಾತ್ರವಲ್ಲ, ಅವನನ್ನು ನಮಗಾಗಿ ಕಾದಿರುವಂತೆಯೂ ಮಾಡಬಹುದು ಎನ್ನುತ್ತದೆ ಮತ್ತೊಂದು ಕಥೆ.

ಉತ್ತರ ಭಾಷೆಯಲ್ಲಿ ಕೃಷ್ಣನಿಗೆ ‘ವಿಠಲ’ ಎಂಬ ಮತ್ತೊಂದು ಹೆಸರೂ ಉಂಟು. ‘ವಿಠ್ಠಲ್’ ಎಂದರೆ ‘ಸುಮ್ಮನಿರು’ ಎಂಬುದೇ ಅರ್ಥ.

ಒಮ್ಮೆ ಕೃಷ್ಣನ ಮೇಲೆ ತೀವ್ರ ಭಕ್ತಿಯುಳ್ಳವನೊಬ್ಬ ಸಾಯುವ ಸ್ಥಿತಿಯಲ್ಲಿರುವ ತನ್ನ ತಾಯಿಗೆ ಅನ್ನ ನಿದ್ದೆಯಿಲ್ಲದೆ ನಿರಂತರವಾಗಿ ಸೇವೆ ಮಾಡುತ್ತಿರುತ್ತಾನೆ. . ತನ್ನ ಭಕ್ತನೊಬ್ಬ ಹೀಗೆ ಶ್ರಮಪಡುವುದನ್ನು ನೋಡಿದ ಕೃಷ್ಣ, ಅವನಿಗೆ ಸಹಾಯ ಮಾಡಬೇಕೆಂದುಕೊಂಡು, ಅವನ ಬಳಿ ಹೋಗಿ, “ನಾನು ನಿನಗೆ ಸಹಾಯ ಮಾಡಲು ಬಂದಿದ್ದೇನೆ. ಏನಾದರು ಸಹಾಯ ಬೇಕೆ..?” ಎಂದು ಕೇಳಿದಾಗ, ಆ ಭಕ್ತನೋ ಬಂದದ್ದು ಯಾರೆಂದೂ ಸಹ ತಿರುಗಿ ನೋಡದೆ “ನನ್ನ ತಾಯಿಗೆ ನಾನೇ ಶುಶ್ರೂಷೆ ಮಾಡಿಕೊಳ್ಳುತ್ತೇನೆ . ಸೇವೆ ಮುಗಿಸಿ ಬರುವವರೆಗೆ ಸ್ವಲ್ಪ ಹೊರಗೆ ಕಾದಿರು..!” ಎಂದು ಉತ್ತರಿಸುತ್ತಾನೆ.

ಭಗವಾನ್ ಕೃಷ್ಣನೋ, ತಾನು ಯಾರೆಂಬುದನ್ನೂ ಮರೆತು ಅವನಿಗೆ ಸಹಾಯ ಮಾಡಲು  ಮನೆಯ ಹೊಸಿಲಿನಲ್ಲಿ ಒಂದು ಕಲ್ಲಿನ ಮೇಲೆ ಶಾಂತವಾಗಿ ಕುಳಿತು ಅವನ ಕರೆಗಾಗಿ ಕಾದಿದ್ದನಂತೆ.

ಭಕ್ತ ಹೇಳಿದ್ದಕ್ಕಾಗಿ ‘ಸುಮ್ಮನೆ’ ಇದ್ದುದ್ದರಿಂದಲೇ ಕೃಷ್ಣನಿಗೆ ‘ವಿಠ್ಠಲ’ ಎಂಬ ಹೆಸರು ಬಂದಿತು ಎನ್ನುತ್ತದೆ ಉತ್ತರ ಭಾರತದ ಒಂದು ಕಥೆ.

ಕೃಷ್ಣನ ಪ್ರೀತಿ ಒಂದು ಅಪಾರವಾದ ಕಡಲು…!

ಅವನಿಗೆ ನಾವು ಅಡಗಿದ್ದರೆ, ಅವನೂ ನಮ್ಮೊಳಗೆ ಅಡಗಿರುತ್ತಾನೆ ಎಂಬುದನ್ನು ಈ ಒಂದೊಂದು ಕಥೆಗಳು ನಮಗೆ ಹೇಳುತ್ತವೆ. ಹೀಗೆ ನಮ್ಮ ಪ್ರೀತಿಗೆ ಕಟ್ಟು ಬೀಳುವ ಆ ಅದ್ಭುತ ಕೃಷ್ಣನನ್ನು, ದಾಮೋದರನನ್ನು, ಪ್ರೀತಿ, ಭಕ್ತಿಯಿಂದ, ಪವಿತ್ರ ಪುಷ್ಪಗಳಿಂದ ಹೊಗಳಿ ಹಾಡೋಣ ಬನ್ನಿರೇ ಗೆಳತಿಯರೇ…. ಎಂದು ಗೋಪಿಯರನ್ನು ಐದನೇಯ ದಿನಕ್ಕೆ ಆಹ್ವಾನಿಸುತ್ತಾಳೆ ಗೋದೈ ಆಂಡಾಳ್..!

Leave a Reply