ಧನ ಸಂಪತ್ತಿನ ಕುರಿತು ಶ್ರೀ ರಾಮಕೃಷ್ಣರ ಸರಳ ಬೋಧನೆ

ರಾಮಕೃಷ್ಣ ಪರಮಹಂಸರು ಅತ್ಯಂತ ಸರಳವಾಗಿ, ನೇರವಾಗಿ ಮತ್ತು ಸಾಮತಿಗಳನ್ನು ಬಳಸಿ ಮನಮುಟ್ಟುವಂತೆ ಜನರಿಗೆ ತಿಳಿವನ್ನು ಹಂಚುತ್ತಿದ್ದರು. ಪರಮಹಂಸರು ಹಣ – ಸಂಪತ್ತಿನ ಬಗ್ಗೆ ನೀಡಿದ ಸರಳ ತಿಳಿವಿನ ಒಂದೆರಡು ಹೊಳವು ಇಲ್ಲಿದೆ…

“ಹಣದಿಂದ ಅನ್ನ ಮಾತ್ರ ಸಿಕ್ಕುತ್ತದೆ. ಅದನ್ನೇ ನಿನ್ನ ಜೀವನದ ಗುರಿಯನ್ನಾಗಿ ಮಾಡಿಕೊಳ್ಳಬೇಡ” ಅನ್ನುತ್ತಿದ್ದ ಶ್ರೀ ರಾಮಕೃಷ್ಣ ಪರಮಹಂಸರು, ಸಂಪತ್ತು ಬಹಳ ಪ್ರಬಲವಾದ ಉಪಾಧಿ. ಒಬ್ಬನು ಧನವಂತನಾದೊಡನೆ ತನ್ನ ರೀತಿಯನ್ನೇ ಬದಲಾಯಿಸುವನು ಎಂದು ತಿಳಿ ಹೇಳುತ್ತಿದ್ದರು. “ಕೆಲವರು ತಮ್ಮ ಐಶ್ವರ್ಯ, ದರ್ಪ, ಹೆಸರು, ಕೀರ್ತಿ, ಸಮಾಜದಲ್ಲಿ ತಮಗೆ ಇರುವ ಸ್ಥಾನಮಾನ ಇವುಗಳ ಬಗ್ಗೆ ಜಂಭ ಕೊಚ್ಚಿಕೊಳ್ಳುವರು. ಆದರೆ ಇವೆಲ್ಲವೂ ಕೆಲವು ದಿನ ಮಾತ್ರ. ಸತ್ತಮೇಲೆ ಇವುಗಳಾವುವೂ ಹಿಂದೆ ಬರುವುದಿಲ್ಲ” ಅನ್ನುವುದು ಅವರು ಮೇಲಿಂದ ಮೇಲೆ ಆಡುತ್ತಿದ್ದ ಮಾತು.

ಇದಕ್ಕೆ ಅವರು ನೀಡುತ್ತಿದ್ದ ಎರಡು ಜನಪ್ರಿಯ ಸಾಮತಿಗಳು ಇಲ್ಲಿವೆ:

~ ದೇವರು ನಗುವುದು ಯಾವಾಗ!? ~

ದೇವರು ಎರಡು ಸಂದರ್ಭಗಳಲ್ಲಿ ನಗುತ್ತಾನೆ. ಮೊದಲನೆ ಸಲ;  ವೈದ್ಯನು ಇನ್ನೇನು ಸಾಯಲಿರುವ ರೋಗಿಯ ಬಳಿಗೆ ಬಂದು “ಏನೂ ಆಂಜಿಕೊಳ್ಳಬೇಕಾಗಿಲ್ಲ. ನಿನ್ನ ಮಗನ ಜೀವವನ್ನು ಉಳಿಸುವ ಜನಾಬ್ದಾರಿಯನ್ನು ನಾನು ವಹಿಸಿಕೊಳ್ಳುತ್ತೇನೆ” ಅಂದಾಗ.  ಎರಡನೆಸಲ, ಇಬ್ಬರು ಅಣ್ಣ ತಮ್ಮಂದಿರು ಭೂಮಿಯನ್ನು ವಿಭಾಗ ಮಾಡಿಕೊಳ್ಳುವಾಗ, ಅಳೆಯುವ ದಾರವನ್ನು ಜಮಿಾನಿನ ಮೇಲೆ ಇಟ್ಟು “ ಈ ಕಡೆಯದು ನನ್ನದು, ಆ ಕಡೆಯದು ನಿನ್ನದು” ಎಂದು ಹೇಳುವಾಗ!

~ ಸಂಪತ್ತು ತಂದ ಬದಲಾವಣೆ ~

ಬಹಳ ನಮ್ರನಾದ ಸಾಧು ಸ್ವಭಾವದ ವ್ಯಕ್ತಿಯೊಬ್ಬ ಇಲ್ಲಿಗೆ (ದಕ್ಷಿಣೇಶ್ವರಕ್ಕೆ) ಆಗಾಗ ಬರುತ್ತಿದ್ದನು. ಕೆಲವು ಕಾಲದ ನಂತರ ಅವನು ಇದ್ದಕ್ಕಿದ್ದಂತೆ ಬ್ಬರುವುದನ್ನು ನಿಲ್ಲಿಸಿಬಿಟ್ಟನು. ಅವನಿಗೆ ಏನಾಗಿದೆ ಎಂಬುದು ನಮಗೆ ಗೊತ್ತಾಗಲಿಲ್ಲ.

ಒಂದು ದಿನ ಕೊನ್ನಗರಕ್ಕೆ ದೋಣಿಯಲ್ಲಿ ಹೋದೆವು. ನಾವು ದೋಣಿಯಿಂದ ಇಳಿಯುವಾಗ ಅವನು ಗಂಗಾನದಿಯ ತೀರದಲ್ಲಿ ದೊಡ್ಡ ಮನುಷ್ಯನಂತೆ ನದಿಯಮೇಲೆ ಬೀಸುವ ತಂಗಾಳಿಯನ್ನು ಸೇವಿಸುತ್ತಿದ್ದನು. ನನ್ನನ್ನು ನೋಡಿದ ಕೂಡಲೆ “ಓಹೋ! ಥಾಕೂರರೆ ಹೇಗಿರುವಿರಿ?” ಎಂದು ಕೇಳಿದನು. ಅನನ ಧ್ವನಿಯಲ್ಲಿ ಆದ ಬದಲಾವಣೆಯನ್ನು ನಾನು ತಕ್ಷಣ ಕಂಡುಹಿಡಿದು, ನನ್ನ ಹತ್ತಿರ ಇದ್ದ ಹೃದಯನಿಗೆ “ನೋಡಿದೆಯಾ, ಇವನಿಗೆ ಏನೋ ಆಸ್ತಿ ಸಿಕ್ಕಿರಬೇಕು. ಇವನಲ್ಲಿ ಆದ ಬದಲಾವಣೆಯನ್ನು ನೋಡು’ ಎಂದೆ. ಆಗೇನೋ ಹೃದಯ ನಕ್ಕುಬಿಟ್ಟ. ಅನಂತರದಲ್ಲಿ ನನ್ನ ಮಾತು ನಿಜವಾಗಿತ್ತೆಂದೂ ಅವನೇ ತಿಳಿಸಿದ!

Leave a Reply