ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ನಾಲ್ಕನೇ ಕಂತು ಇಲ್ಲಿದೆ… ।
ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ
ಧನುರ್ ಉತ್ಸವ ಇಪ್ಪತ್ತನಾಲ್ಕನೇಯ ದಿನ
ಅಂದು ಲೋಕಗಳಳೆದ ಚರಣಕ್ಕೆ ಜಯಜಯ
ಪೋಗಲ್ಲಿ ರಮ್ಯ ಲಂಕೆಯಳಿಸಿದ ತೋಳ್ಬಲಕೆ ಜಯಜಯ
ನಾಶಮಾಗುವ ತೆರದಿ ಶಕಟನಂ ಒದೆದ ಕೀರ್ತಿಗಂ ಜಯಜಯ
ವತ್ಸಾಸುರನ ಕವಣೆಯೆಂತೆಸೆದ ಪಾದಕ್ಕೆ ಜಯಜಯ
ಗಿರಿಯ ಕೊಡೆಯಂತೆತ್ತಿದಾ ಗುಣಕೆ ಜಯಜಯ
ಗೆದ್ದು ಹಗೆಯನಳಿಸುವ ನಿನ್ನ ಕೈಯ ಶೂಲಕ್ಕೆ ಜಯಜಯ
ಹೀಗೆಂದು ಹೇಳುತ್ತ ನಿನ್ನ ಬಲವಂ ತುತಿಸಿ ಇಷ್ಟಾರ್ಥವಂ ಪಡೆಯೆ
ಇಂದು ನಾವ್ ಬಂದಿಹೆವು ಕೃಪೆಗೈಯ್ಯೆ ನಮ್ಮೀ ಪವಿತ್ರ ವ್ರತವು ಸಾರ್ಥಕವು
-ಬಿಂಡಿಗನವಿಲೆ ನಾರಾಯಣಸ್ವಾಮಿ (ಬೇಗಡೆ ರಾಗ – ತ್ರಿಪುಟ ತಾಳ)
‘ಮಹಾಬಲಿ ಈ ಜಗವನ್ನು ವಶಮಾಡಿಕೊಂಡಾಗ, ನಿನ್ನ ಶ್ರೀಪಾದಗಳಿಂದ ಲೋಕವನ್ನು ಅಳೆದವನೇ, ನಿನಗೆ ಜಯವಾಗಲಿ!
ಸೀತೆಯನು ಮರಳಿ ಪಡೆಯಲು ದಕ್ಷಿಣದಲ್ಲಿರುವ ಲಂಕೆಗೆ ಹೋಗಿ ರಾವಣನನ್ನು ಜಯಿಸಿದವನೇ, ನಿನ್ನ ಶೌರ್ಯಕ್ಕೆ ಜಯವಾಗಲಿ…!
ಚಕ್ರದಾಕಾರದಲ್ಲಿ ಬಂದ ಶಕಟಾಸುರನನ್ನು ಒಂದೇ ಒದೆಗೆ ಬೀಳಿಸಿದವನೇ, ನಿನ್ನ ಹಿರಿಮೆಗೆ ಜಯವಾಗಲಿ!
ಕರುವ ರೂಪದಲ್ಲಿ ಬಂದ ವತ್ಸಾಸುರನನ್ನು ಕೋಲಾಗಿಸಿ ಅವನನ್ನು ಕಪಿತ್ತಾಸುರನ ಮೇಲೆಸೆದು ಅಳಿಸಿದವನೇ… ನಿನ್ನ ಕಾಲ್ಗಳಲ್ಲಿ ತೊಟ್ಟ ಕಾಲಕಡಗಕ್ಕೆ ಜಯವಾಗಲಿ!
ಗೋವರ್ಧನಗಿರಿಯನ್ನು ಕೊಡೆಯಾಗಿಸಿ ಯಾದವಕುಲದವರನ್ನು ಇಂದ್ರ ಕಳುಹಿಸಿದ ಮಳೆಯಿಂದ ಕಾಪಾಡಿದವನೇ , ನಿನ್ನ ಗುಣಕ್ಕೆ ಜಯವಾಗಲಿ!
ವೈರಿಗಳನ್ನು ಕೊಲ್ಲುವ ನಿನ್ನ ಕೈಯಲ್ಲಿರುವ ಶೂಲಕ್ಕೆ ಜಯವಾಗಲಿ!
ಹೀಗೆ, ನಿನ್ನ ಶೌರ್ಯದ ಗುಣಗಾನ ಹಾಡಿ, ನಿನ್ನ ಕೃಪೆಯನ್ನು ಪಡೆಯುವುದಕ್ಕೆ ನಾವು ಬಂದಿದ್ದೇವೆ. ನಮ್ಮ ಮೇಲೆ ಕರುಣೆ ತೋರಿಸುವಂತವನಾಗು!
‘ಎಂದೆಂದಿಗೂ ನಿನ್ನ ಬಲವಂ ತುತಿಸಿ ಇಷ್ಟಾರ್ಥವಂ ಪಡೆಯೇ..”
ಎಂದು ಗೋದೈ ಕೃಷ್ಣನನ್ನು ನೆನೆದು ಭಕ್ತಿ ಪರವಶತೆಯಿಂದ ಹಾಡಿದ ಈ ಹಾಡು, ಇದನ್ನು “ಗುಣಗಾನ ಬಾಸುರ” ಎಂದು ಕರೆಯುತ್ತಾರೆ.
ಸದಾ ನಿನಗೆ ಸೇವೆ ಮಾಡುವುದಕ್ಕಾಗಿಯೇ ನಾವು ಬಂದಿದ್ದೇವೆ. ನಮಗೆ ಇಷ್ಟವಾದ ಮೋಕ್ಷವನ್ನು ತರುವಂತವನಾಗು ಎಂದು ಗೋದೈ ಭಗವಂತನನ್ನು ಬೇಡುತ್ತಾಳೆ.
ಭಗವಂತನನ್ನು ಪಡೆಯುವ ನಿಯಮಗಳಾದ ಕರ್ಮ ಯೋಗ, ಜ್ಞಾನ ಯೋಗ, ಭಕ್ತಿ ಯೋಗ, ಮುಂತಾದುವನ್ನು ಮನಸಾರೆ ಮಾಡಿದರೆ ಬಯಸಿದ ಮೋಕ್ಷವನ್ನು ಅವನು ಪ್ರೀತಿಯಿಂದ ದಯಪಾಲಿಸುತ್ತಾನೆ ಎನ್ನುತ್ತವೆ ‘ತಿರುಮುರೈ’ ಎಂಬ ತಮಿಳು ಗ್ರಂಥ. (ಶೈವ ಪಂತದಲ್ಲಿ ನಾಯನ್ಮಾರ್ಗಲೂ ಅಡಿಯಾರ್ಗಲೂ ಹನ್ನೆರಡು ಭಾಗಗಳಾಗಿ ವಿಂಗಡಿಸಿ ಸಂಕಲಿಸಿದ ಕೃತಿ)
ಆದರೆ, ನಾರಾಯಣ ಎಂಬ ಪರಂದಾಮನನ್ನು, ಅವನು ವಾಸವಿರುವ ವೈಕುಂಠವನ್ನು ತಲುಪಲು ಎಷ್ಟೇ ದಾರಿಗಳಿದ್ದರೂ, ಎಲ್ಲಕ್ಕಿಂತಲೂ ಸರಳವಾದ ಹಾದಿ ವೈಕುಂಠ ಏಕಾದಶಿ ವ್ರತ ಆಚರಿಸುವುದೇ ಎನ್ನುತ್ತದೆ ತಿರುಮರೈ. ವೈಕುಂಠ ಏಕಾದಶಿಯಂದು ವ್ರತವಿದ್ದು ಪೂಜಿಸುವವರ ಜನ್ಮ ದುಃಖ ಕಳೆದು, “ಇನ್ನು ಪಡೆಯುವುದು ಏನೂ ಇಲ್ಲ” ಎಂದು ಮನುಷ್ಯ ಗಳಿಸುವ ಸ್ಥಿತಿಗಳಲ್ಲೇ ಉನ್ನತವಾದ, ಪರಮಾತ್ಮ ಪ್ರಾಪ್ತಿ ಎಂಬ ವೈಕುಂಠ ಪದವಿಯನ್ನು ಪಡೆಯುವುದು ಎಂಬುದು ನಂಬಿಕೆ.
ವೈಕುಂಠ ಏಕಾದಶಿಗೆ ಮಾತ್ರ ಯಾಕೆ ಅಂತಹ ವಿಶೇಷ ಶ್ರೇಷ್ಠತೆ?
ತಿಥಿಗಳಲ್ಲಿ ‘ಏಕಾದಶಿ’ ಎಂದರೆ ಹದಿನೊಂದು (1+10) ಎಂದು ಅರ್ಥ. ಶುಕ್ಲ ಪಕ್ಷ ಏಕಾದಶಿ ಮತ್ತು ಕೃಷ್ಣ ಪಕ್ಷ ಏಕಾದಶಿ ಎಂದು ತಿಂಗಳಿಗೆ ಎರಡು ಸಲ ಬರುವ ಏಕಾದಶಿ, ತಿಥಿಗಳಲ್ಲಿ ಬಹಳ ಮುಖ್ಯವಾದದ್ದು. ಅವುಗಳಲ್ಲಿ, ಧನುರ್ ಮಾಸ ಶುಕ್ಲ ಪಕ್ಷ ಏಕಾದಶಿಯೇ ‘’ವೈಕುಂಠ ಏಕಾದಶಿ’ ಎಂದು ಆಚರಿಸಲಾಗುತ್ತದೆ.
ಮನುಷ್ಯರ ಒಂದು ವರ್ಷ ದೇವತೆಗಳಿಗೆ ಒಂದು ದಿನ ಎನ್ನುತ್ತಾರೆ. ಅದರಲ್ಲಿ, ಆಷಾಡದ ಮೊದಲಿನಿಂದ ಧನುರ್ ಮಾಸದವರೆಗೆ ಉಳ್ಳ ಆರು ತಿಂಗಳು ಕಾಲ ದೇವತೆಗಳಿಗೆ ರಾತ್ರಿ ಸಮಯವೇ ದಕ್ಷಿಣಾಯನ ಉಂಟಾಗುತ್ತದೆ. ದೇವತೆಗಳ ದಕ್ಷಿಣಾಯನ ಮುಗಿಯುವ ಸಮಯ ಬ್ರಹ್ಮ ಮುಹೂರ್ತ ಸಮಯವಾದ ಮುಂಜಾವಿನ ಸಮಯವೇ ಧನುರ್. ಈ ಧನುರ್ ಮಾಸದಲ್ಲಿ, ಮಹಾವಿಷ್ಣು ಗಾಢ ನಿದ್ದೆಯಿಂದ ಎಚ್ಚರಗೊಳ್ಳುವ ಆ ಒಂದು ಗಳಿಗೆಯೇ ಏಕಾದಶಿ. ಭಗವಂತ ಕಣ್ಣು ತೆರೆದು ಎಲ್ಲರನ್ನೂ ದಯಪಾಲಿಸುತ್ತಾನೆ ಎಂಬುದನ್ನು ಸೂಚಿಸುವುದಕ್ಕೆ ಏಕಾದಶಿ, ಉಳಿದ ಎಲ್ಲಕ್ಕಿಂತಲೂ ಹೆಚ್ಚು ಶ್ರೇಷ್ಟತೆಯನ್ನು ಪಡೆಯುತ್ತದೆ.
ಏಕಾದಶಿ ಹುಟ್ಟುವ ಸಮಯ ಎಷ್ಟು ಶ್ರೇಷ್ಟವೋ, ಅದರಂತೆಯೇ ಏಕಾದಶಿ ಸೃಷ್ಟಿಯಾದ ಇತಿಹಾಸವೂ ಶ್ರೇಷ್ಟವಾದದ್ದು.
ಚಂದ್ರಾವತಿ ಎಂಬ ನಗರದಲ್ಲಿ ಜಂಗಾಸುರ ಎಂಬ ಅಸುರ ಅವನ ಮಗ ಮರುವಾಸುರದೇವತೆಗಳಿಗೆ ಉಪಟಳ ನೀಡುತ್ತಿರುತ್ತಾರೆ. ಅಸುರರಿಂದ ತಾವು ಪಡುವ ಹಿಂಸೆಯನ್ನು ದೇವತೆಗಳು ಭಗವಂತನ ಬಳಿ ಮೊರೆಯಿಡಲು ಮಹಾವಿಷ್ಣು ಆ ಅಸುರರ ಮೇಲೆ ಯುದ್ದ ಹೂಡುತ್ತಾನೆ.
ಆ ಯುದ್ಧ ಹಲವು ವರ್ಷಗಳು ಮುಂದುವರೆದಿದ್ದರಿಂದ, ದಣಿದು ಸೊರಗಿ ಹೋದ ಭಗವಂತನು ಸಿಂಹಾವತಿ ಎಂಬ ಗುಹೆಯಲ್ಲಿ ವಿಶ್ರಾಂತಿ ಪಡೆಯಲು ನಿದ್ದೆಮಾಡುತ್ತಾನೆ. ಆಗ ಶ್ರೀಮನ್ ನಾರಾಯಣನ ಮನಸ್ಸಿನಲ್ಲಿ, ಅಸುರರನ್ನು ಸೋಲಿಸಲು ಉಂಟಾದ ಆಲೋಚನೆಗಳು, ಯೋಜನೆಗಳು ಎಲ್ಲವೂ ರೂಪಾತಾಳಿ ‘ಏಕಾದಶಿ’ ಎಂಬ ಒಂದು ಸ್ತ್ರೀಶಕ್ತಿಯಾಗಿ ಆ ಅಸುರರನ್ನು ಸೋಲಿಸುತ್ತದೆ. ಅಸುರರನ್ನು ಜಯಿಸಿದ ಮೇಲೆ ತನ್ನ ಬಳಿಯೇ ಮರಳಿದ ಏಕಾದಶಿಗೆ, ತನ್ನ ಕೆಲಸವನ್ನು ಅವಳು ವಹಿಸಿಕೊಂಡು ಅದನ್ನು ಉತ್ತಮವಾಗಿ ಮಾಡಿ ಮುಗಿಸಿದ್ದನ್ನು ಮೆಚ್ಚಿಕೊಂಡು ವರ ನೀಡಲು ತಯಾರಾದ ಭಗವಂತನ ಬಳಿ ಬಂದು, “ಭಗವಂತ, ನಿನ್ನ ಪ್ರೀತಿ ಪಾತ್ರಳಾಗಿ ನಾನು ಸದಾ ಇರಬೇಕು, ನಾನು ಹುಟ್ಟಿದ ಈ ದಿನ ಉಪವಾಸ ಇರುವವರಿಗೆ ಎಲ್ಲ ಸಿದ್ಧಿಸುವಂತೆ ಮಾಡಬೇಕು..!” ಎಂದು ಏಕಾದಶಿ ಬೇಡಿಕೊಳ್ಳುತ್ತಾಳೆ.
ಬೇಡಿದ ವರ ನೀಡಿದ ವರದನು, ತನ್ನಿಂದ ಸೃಷ್ಟಿಯಾದ ಏಕಾದಶಿಯನ್ನು ತನ್ನೊಳಗೆ ಮತ್ತೆ ಐಕ್ಯಮಾಡಿಕೊಳ್ಳುತ್ತಾನೆ.
ಹೀಗೆ ಭಗವಂತನಿಂದ ಸೃಷ್ಟಿಯಾದ ಏಕಾದಶಿ ಎಂಬ ಶಕ್ತಿಯಾದವಳು, ವರ್ಷಕ್ಕೆ 24 ಅಥವಾ 25 ಸಲ ಬರುತ್ತಾಳೆ. ಎಲ್ಲ ವ್ರತಗಳಿಗೂ ಮೇಲಾಗಿ, ಏಕಾದಶಿ ವ್ರತ ಇರುವುದು ಅತಿ ಶ್ರೇಷ್ಠ ಎನ್ನುತ್ತವೆ ಪುರಾಣಗಳು. ವರ್ಷ ಪೂರ್ತಿ ಏಕಾದಶಿ ವ್ರತ ಇರಲಾಗದವರು, ಧನುರ್ ತಿಂಗಳಲ್ಲಿ ಬರುವ ವೈಕುಂಠ ಏಕಾದಶಿಯಲ್ಲಾದರೂ ವ್ರತ ಆಚರಿಸುವುದು ಉತ್ತಮ. ಈ 24 ಏಕಾದಶಿಯಲ್ಲೂ ವ್ರತ ಇರುವ ಮೊತ್ತ ಫಲವನ್ನೂ ವೈಕುಂಠ ಏಕಾದಶಿ ಕೊಡುತ್ತದೆ ಎಂಬುದೇ ಇದರ ಶ್ರೇಷ್ಠತೆ.
ಈ ಧನುರ್ ಮಾಸದ ಏಕಾದಶಿ ದಿನದಂದೇ, ಪರಂದಾಮ ತನ್ನ ಮನಸ್ಸಿಗೆ ಹಿಡಿಸಿದ ಅಸಂಖ್ಯಾತ ಸುಕಾರ್ಯಗಳನ್ನು ಮಾಡುತ್ತಾನೆ. ಈ ದಿನ ಜಂಗಾಸುರ, ಮರುವಾಸುರಮುಂತಾದ ಅಸುರರನ್ನು ಅಳಿಸಿದ್ದಲ್ಲದೆ, ಅರ್ಜುನನಿಗೆ ಭಗವಂತ ಕೃಷ್ಣ ಗೀತೋಪದೇಶ ಮಾಡಿದ್ದಾಗಿಯೂ ಹೇಳಲ್ಪಡುತ್ತದೆ. ಮತ್ತೆ ರಾವಣನಿಂದ ಉಂಟಾಗುವ ದುಃಖಗಳಿಂದ ಬಿಡುಗಡೆ ಮಾಡುವಂತೆ ಮುಕ್ಕೋಟಿ ದೇವತೆಗಳೂ ಈ ದಿನವೇ ಪೂಜಿಸಿದ್ದರಿಂದ ಭಗವಂತನು ತಾನೇ ಒಂದು ಅವತಾರ ತಾಳಿ, ರಾವಣ ವಧೆ ಮಾಡುತ್ತಾನೆ. ಅದರ ಕಾರಣವಾಗಿ, ಈ ಧನುರ್ ಏಕಾದಶಿ ‘ಮುಕ್ಕೋಟಿ ಏಕಾದಶಿ’ ಎಂಬ ಹಿರಿಮೆಗೂ ಪಾತ್ರವಾಗಿದೆ.
ಭಗವಂತನಿಗೆ ಏಕಾದಶಿಯ ಮೇಲೆ ಬಹಳ ಪ್ರೀತಿ ಇರುವಂತೆಯೇ, ಏಕಾದಶಿ ವ್ರತವಿರುವ ತನ್ನ ಭಕ್ತರ ಮೇಲೆಯೂ ಅತಿ ಪ್ರೀತಿ ಎಂಬುದು ಸತ್ಯ. ಅದು ಹೇಗೆ ಎಂಬುದನ್ನು ಅಂಬರೀಷನ ಕಥೆ ನಮಗೆ ಸುಂದರವಾಗಿ ತಿಳಿಸಿ ಹೇಳುತ್ತದೆ.
ನಭಗ ಮಹಾರಾಜನ ಮಗನೂ, ತೀವ್ರವಾದ ವಿಷ್ಣು ಭಕ್ತನೂ ಆದ ರಾಜ ಅಂಬರೀಷ, ತಾನು ಅರಸನಾದರೂ ಲೌಕಿಕ ಸಂಪತ್ತು, ಸುಖಗಳು ಅಸ್ಥಿರವಾದವು ಎಂಬುದನ್ನು ಅರಿತು ನಿರ್ಲಿಪ್ತ ಬದುಕನ್ನು ಬದುಕುತ್ತಿರುತ್ತಾನೆ. ತನ್ನ ಭಕ್ತಿಯ ಫಲವಾಗಿ, ಆ ಭಗವಂತನು ಹರ್ಷಗೊಂಡು ತನ್ನ ಸುದರ್ಶನ ಚಕ್ರವನ್ನು ಉಡುಗೊರೆಯಾಗಿ ಕೊಡುವಷ್ಟು ಶ್ರೇಷ್ಠ ಭಕ್ತ. ಎಷ್ಟೇ ಸೇವೆ ಸಲ್ಲಿಸಿದರೂ ತನಗಾಗಿ ಏನನ್ನೂ ಕೇಳದ ಅಂಬರೀಷನ ನಿಸ್ವಾರ್ಥ ಭಕ್ತಿಯನ್ನು ಮೆಚ್ಚಿಕೊಂಡು, ತನ್ನ ಚಕ್ರಾಯುಧವನ್ನೇ ಅವನಿಗೆ ಜತೆ ನಿಲ್ಲುವಂತೆ ಶ್ರೀ ವಿಷ್ಣು ಕೃಪೆ ತೋರುತ್ತಾನೆ.
ಚಕ್ರಾಯುಧವನ್ನು ಗಳಿಸಿದ ಅಂಬರೀಷ, ತನ್ನ ಪೂಜೆಯ ಕೋಣೆಯಲ್ಲಿ ಇಟ್ಟು ಅದನ್ನು ಪೂಜಿಸಿ, ತನ್ನ ಮಡದಿಯೊಂದಿಗೆ ಒಂದು ವರ್ಷ ಪೂರ್ತಿ ಏಕಾದಶಿ ವ್ರತವಿರುತ್ತಾನೆ.
ವ್ರತ ಮುಗಿಯುವ ದಿನ, ಬಡಬಗ್ಗರಿಗೆ ದಾನ ಧರ್ಮಗಳನ್ನು ಮಾಡಿ, ತಾನೂ ಸಹ ಆಹಾರವನ್ನು ಸೇವಿಸಿ ಮುಗಿಸುವ ಸಮಯದಲ್ಲಿ, ಅಲ್ಲಿಗೆ ಯಥೇಚ್ಛವಾಗಿ ದೂರ್ವಾಸ ಮುನಿಗಳು ಬರಲು, ಅವರನ್ನೂ ತನ್ನೊಂದಿಗೆ ಆಹಾರ ಸೇವಿಸಿ, ವ್ರತವನ್ನು ಮುಗಿಸಿಕೊಡುವಂತೆ ಅಂಬರೀಷ ಆಹ್ವಾನಿಸುತ್ತಾನೆ. ನದಿಯಲ್ಲಿ ಮಿಂದು ಬರುವುದಾಗಿ ಹೇಳಿ ಸಮೀಪದಲ್ಲಿರುವ ಯಮುನೆಗೆ ಹೋದ ದೂರ್ವಾಸರು ಬಹಳ ಸಮಯವಾದರೂ ಬರದಿರುವುದನ್ನು ಕಂಡು ಅಂಬರೀಷ ಗೊಂದಲಕ್ಕೆ ಒಳಗಾಗುತ್ತಾನೆ.
ಏಕಾದಶಿ ತಿಥಿ ಮುಗಿಯುವ ಸಮಯ ಸಮೀಪಿಸುತ್ತಿರುತ್ತದೆ. ಅಲ್ಲಿರುವ ಉಳಿದ ಋಷಿ ಮುನಿಗಳ ‘ಒಂದು ವರ್ಷದ ವ್ರತ ವೃಥಾ ಹಾಳಾಗುತ್ತದಲ್ಲಾ’ ಎಂದು ಅಂಬರೀಷನ ಬಳಿ ತುಳಸಿ ತೀರ್ಥವನ್ನು ಮಾತ್ರ ಸೇವಿಸಿ ವ್ರತವನ್ನು ಮುಗಿಸಿಕೊಳ್ಳೋಣ, ದೂರ್ವಾಸರು ಬಂದ ಮೇಲೆ ಆಹಾರವನ್ನು ಸೇವಿಸೋಣ ಎಂದು ಸಲಹೆ ನೀಡುತ್ತಾರೆ. ಅಂಬರೀಷನು ಅದಕ್ಕೆ ಒಪ್ಪಿಕೊಂಡು, ಬರೀ ತುಳಸಿ ತೀರ್ಥದೊಂದಿಗೆ ತನ್ನ ವ್ರತವನ್ನು ಮುಗಿಸಿಕೊಂಡು, ಆಹಾರ ಸೇವಿಸಲು ದೂರ್ವಾಸರಿಗಾಗಿ ಕಾಯುತ್ತಾನೆ.
ಸ್ನಾನ ಮಾಡಿ ಹಿಂತಿರುಗಿ ಬಂದ ದೂರ್ವಾಸರು, ತನಗಾಗಿ ಕಾದಿರದೆ ಅಂಬರೀಷನು ವ್ರತವನ್ನು ಮುಗಿಸಿದ್ದನ್ನು ಅರಿತು ಕೋಪಗೊಂಡು, ತನ್ನ ಜಟಾಮುಡಿಯಿಂದ ಉಂಟಾದ ಭೂತವನ್ನು ಅಂಬರೀಷನ ಮೇಲೆ ದಾಳಿಮಾಡಲು ಕಳುಹಿಸುತ್ತಾರೆ. ಆಗ ಅರಸನಿಗೆ ಜತೆಯಾಗಿ ನಿಂತ ಶ್ರೀವಿಷ್ಣುವಿನ ಶ್ರೀಚಕ್ರ ಒಂದೇ ಕ್ಷಣದಲ್ಲಿ ಆ ಭೂತವನ್ನು ಭಸ್ಮಮಾಡಿ ಅಳಿಸುವುದಲ್ಲದೆ, ದೂರ್ವಾಸರನ್ನೂ ಅಟ್ಟಿಸಿಕೊಂಡು ಹೋಗುತ್ತದೆ.
ಶ್ರೀಚಕ್ರದಿಂದ ತಪ್ಪಿಸಿಕೊಳ್ಳಲು ಎಲ್ಲೆಲ್ಲೋ ಓಡಾಡಿದ ದೂರ್ವಾಸ ಮುನಿ, ಕೊನೆಗೆ ಮಹಾವಿಷ್ಣುವಿನ ಬಳಿ ಶರಣಾಗಳು ಅವನು, ‘ದೂರ್ವಾಸರೇ, ಯಾರು ಏಕಾದಶಿ ದಿನ ಭಕ್ತಿಯಿಂದ ನನ್ನನ್ನು ಪೂಜಿಸಿ ನನಗಾಗಿ ವ್ರತ ಇರುತ್ತಾರೋ ಅವರನ್ನು ಕಾಯುವುದು ನನ್ನ ಕರ್ತವ್ಯ. ಅದನ್ನೇ ನಾನು ಮಾಡಿದ್ದೇನೆ” ಎಂದು ಹೇಳಲು, ತನ್ನ ಕೋಪಕ್ಕಾಗಿ ತನ್ನನ್ನು ಕ್ಷಮಿಸುವಂತೆ ದೂರ್ವಾಸರು ಅಂಬರೀಷನನ್ನು ಬೇಡಿಕೊಂಡದ್ದಲ್ಲದೆ, ಹಲವಾರು ವರಗಳನ್ನೂ ನೀಡಿ ಹೊರಡುತ್ತಾರೆ. ಇದೇ ಈ ಏಕಾದಶಿಯ ಶ್ರೇಷ್ಟವಾದ ಕಥೆ.
ಸಾಮಾನ್ಯವಾಗಿ, 108- ದಿವ್ಯದೇಶವಾದ ವೈಕುಂಠಕ್ಕೆ ಹೋಗುವ ಹಾದಿಯಲ್ಲಿ, ಭೂಲೋಕದಲ್ಲಿರುವ ಉಳಿದ ದಿವ್ಯದೇಶಗಳಿಗೂ ಹೋಗಿ ಭಗವಂತನನ್ನು ದರ್ಶಿಸಲು ಕರೆಯುತ್ತಾರೆ ನಮ್ಮ ಹನ್ನೆರಡು ಆಳ್ವಾರ್ಗಳು. ಮತ್ತೆ ವೈಕುಂಠಕ್ಕೆ ಹೋಗಿ ಸೇರಲು ವಿವೇಕ, ನಿರ್ವೇದ, ವಿರಕ್ತಿ, ಪ್ರಸಾದಹೇತು, ಅಂತಃಕ್ರಿಯೆ, ಆತ್ಮೊದ್ದಾರ, ಅರ್ಚಿರಾದಿ ಮಾರ್ಗ , ದಿವ್ಯದೇಶ ಪ್ರಾಪ್ತಿ , ಪರಮಾತ್ಮ ಪ್ರಾಪ್ತಿ ಎಂಬ ಒಂಭತ್ತು ಮೆಟ್ಟಿಲುಗಳನ್ನು ಹತ್ತಬೇಕು ಎನ್ನುತ್ತದೆ ವೇದಗಳು.
ಆದರೆ ವೈಕುಂಠ ಏಕಾದಶಿಯಂದು, ಬೆಳಗಿನಜಾವದ ವೇಳೆಯಲ್ಲಿ ತೆರೆಯುವ ಸ್ವರ್ಗದ ಬಾಗಿಲು ಎಂಬ ಪರಮಪದ ಬಾಗಿಲು, ಮೇಲೆ ಹೇಳಿದ ಯಾವುದನ್ನೂ ಮಾಡಲಾಗದವರಿಗೆ ಒಂದೇ ಮೆಟ್ಟಿಲಿನಲ್ಲಿ ವೈಕುಂಠಕ್ಕೆ ಹೋಗುವ ದಾರಿ ಎನ್ನುತ್ತದೆ ಪುರಾಣಗಳು. ಈ ವೈಕುಂಠ ಏಕಾದಶಿ ವ್ರತವಿರುವುದು ಭೂಲೋಕದ ದಿವ್ಯ ದೇಶಗಳ ದರ್ಶನ ಮಾಡುವುದಕ್ಕೂ ವೇದಗಳು ಹೇಳುವ ಒಂಭತ್ತು ಸ್ಥಿತಿಗಳನ್ನು ದಾಟುವುದಕ್ಕೂ ಸಮನಾದ ಫಲವನ್ನು ನೀಡುತ್ತದಂತೆ!
ಹನ್ನೆರಡು ಆಳ್ವಾರ್ಗಳಲ್ಲಿ ಮೊದಲನೇಯವರಾದವರು ನಮ್ಮಾಳ್ವಾರ್ ವೈಕುಂಠ ಪ್ರಾಪ್ತಿ ಪಡೆದ ದಿನ, ಪರಂದಾಮನಿಂದ ಉಂಟಾದ ಮಧು, ಕೈಟಭರು ಮತ್ತೆ ಗೆದ್ದ ದಿನ ಎಂಬ ಹಲವು ಶ್ರೇಷ್ಠತೆ ಆ ದಿನಕ್ಕೆ ಇದ್ದರೂ, ಅವುಗಳಿಗಿಂತಲೂ ಏಕಾದಶಿಗೆ ಮತ್ತೊಂದು ಅನನ್ಯ ಶ್ರೇಷ್ಟತೆಯೂ ಉಂಟು. ಮಾನವರಾದ ನಾವು ಮಾತ್ರವಲ್ಲ; ನಮ್ಮನ್ನು ಕಾಯುವ ಶ್ರೀವಿಷ್ಣುವೂ ಪಾಲಿಸುವ ವ್ರತವೇ ಏಕಾದಶಿ! ಆದ್ದರಿಂದ, ಈ ಏಕಾದಶಿ ಪುಣ್ಯ ದಿನವನ್ನು ‘ಹರಿದಿನ’ ಅಂದರೆ ನಾರಾಯಣನ ದಿನ ಎಂದೂ ಕರೆಯುತ್ತಾರೆ.
ತ್ರೈತಾ ಯುಗದ ಶ್ರೀರಾಮನಾಗಿಯೂ, ದ್ವಾಪರ ಯುಗದ ಕೃಷ್ಣನಾಗಿಯೂ ಮಾನವ ರೂಪದಲ್ಲಿ ಭಗವಂತ ಅವತರಿಸಿ, ಸಾಮಾನ್ಯ ಮನುಷ್ಯನಂತೆ ಹಲವು ಸಂಕಟಗಳನ್ನು ಅನುಭವಿಸಿ, ಧರ್ಮವನ್ನು ಮೀರದೆ ಬದುಕಿ ತೋರಿಸಿದಂತೆಯೇ, ಪರಂದಾಮನಾದ ನಮ್ಮ ಭಗವಂತನೂ, ಏಕಾದಶಿಯ ಹಿರಿಮೆಯನ್ನು ಅರಿಯುವ ರೀತಿಯಲ್ಲಿ, ನಮ್ಮಂತೆಯೇ ತಾನು ವ್ರತವಿದ್ದು ನಮಗೆ ಕೃಪೆ ನೀಡುತ್ತಾನೆ.
“ಸಮಂ ಪಶ್ಯನ್ ಹಿ ಸರ್ವದರ ಸಮವಸ್ಥಿತ ಮೀಚ್ವರಮ್ ನ ಹೀನಸ್ಥ್ಯಾಮನಾತ್ಮಾನಂ ತದೋ ಯಾದಿ ಪರಾಂ ಗತಿಮ್ “ (ಭಗವತ್ ಗೀತೆ 13:28)
ಪ್ರತಿ ಕಣದಲ್ಲೂ, ಎಲ್ಲ ಕಡೆ ಸಮನಾಗಿ ಇರುವ ಭಗವಂತನನ್ನು ಕಾಣುವವನು ಸಾಯುವುದೇ ಇಲ್ಲ. ಬದಲಿಗೆ, ಉತ್ತಮವಾದ ಮೋಕ್ಷವನ್ನೇ ಪಡೆಯುತ್ತಾನೆ” ಎಂಬ ಸಾಲುಗಳಂತೆ, ನೋಡುವುದೆಲ್ಲ ಕೃಷ್ಣ ಎಂದು ನಿನ್ನನ್ನು ದಿನನಿತ್ಯವೂ ಗುಣಗಾನ ಮಾಡಿ ಹಲವು ವರ್ಷಗಳು ಹಾಡುವುದಲ್ಲದೆ, ಬಹಳ ಉತ್ತಮ ವ್ರತವಾದ ಏಕಾದಶಿ ವ್ರತವನ್ನು ಪಾಲಿಸುವ ನಮಗೆ, ಎಲ್ಲಕ್ಕೂ ಮಿಗಿಲಾದ ಪುಣ್ಯವಾದ ಮೋಕ್ಷವನ್ನು ದಯಪಾಲಿಸುವಂತವನಾಗು..” ಎಂದು ಇಪ್ಪತ್ತನಾಲ್ಕನೇಯ ದಿನದಂದು ಭಗವಂತನನ್ನು ಬೇಡುತ್ತಾಳೆ ಗೋದೈ ಆಂಡಾಳ್!
***
ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.