ಇಂದಿನ ಸುಭಾಷಿತ, ರಾಮಾಯಣದಿಂದ

ಇಂದಿನ ಸುಭಾಷಿತ ವಾಲ್ಮೀಕಿ ರಾಮಾಯಣದ ಯುದ್ಧಕಾಂಡದಿಂದ…

ಆಮ್ರಂ ಛಿತ್ವಾ ಕುಠಾರೇಣ ನಿಂಬಂ ಪರಿಚರೇತ್ತು ಯಃ ।
ಯಶ್ಚೈವಂ ಪಯಸಾ ಸಿಂಚೇನ್ನೈವಾಸ್ಯ ಮಧುರೋ ಭವೇತ್ ॥ ರಾಮಾಯಣ, ಅಯೋಧ್ಯಾ ಕಾಂಡ 35.14 ॥
ಅರ್ಥ: ಮಾವಿನ ಗಿಡವನ್ನು ಕೊಡಲಿಯಿಂದ ಕಡಿದು ಬೇವಿನ ಗಿಡಕ್ಕೆ ಹಾಲೆರೆದು ಉಪಚಾರ ಮಾಡಿದರೆ, ಅದರ ಹಣ್ಣು ಎಂದಿಗೂ ಸಿಹಿಯಾಗಲಾರದು. 

ತಾತ್ಪರ್ಯ: ಬಿತ್ತಿದಂತೆ ಬೆಳೆ ಎಂಬ ಪ್ರಸಿದ್ಧ ನಾಣ್ಣುಡಿಯನ್ನು ಕೇಳಿಯೇ ಇರುತ್ತೀರಿ. ಈ ಮೇಲಿನ ಸುಭಾಷಿತ ಹೇಳುವುದೂ ಅದನ್ನೇ. ನಾವು ಏನನ್ನು ಬಿತ್ತುತ್ತೀವೋ ಅದನ್ನೇ ಪಡೆಯುತ್ತೇವೆ. ಮಾವಿನ ಗಿಡ ಕಡಿದು ಬಿಸಾಡಿ ಬೇವಿನ ಮರದಿಂದ ಸಿಹಿಯಾದ ಹಣ್ಣು ಬಯಸಿದರೆ ಅದು ಕೊಡಲು ಸಾಧ್ಯವೇ? ಬೇವು ಕೊಡುವುದು ಕಹಿಯನ್ನೇ ಅಲ್ಲವೆ? ವಾಲ್ಮೀಕಿಗಳು ಹೇಳುತ್ತಿರುವುದೂ ಇದನ್ನೇ. ಸಿಹಿ ಹಣ್ಣು ಕೊಡುವ ಮಾವಿನ ಗಿಡ ಕಡಿದಿದ್ದರ ಫಲ ನಾವು ನೈರಾಶ್ಯದ ರೂಪದಲ್ಲಿ ಉಣ್ಣಲೇಬೇಕು. ಯಾಕೆಂದರೆ ನಾವು ಹಾಲೆರೆದು ಬೆಳೆಸುವ ಬೇವು ಯಾವ ಕಾರಣಕ್ಕೂ ಸಿಹಿ ನೀಡುವುದಿಲ್ಲ. ಆದ್ದರಿಂದ ನಮಗೆ ಏನು ಬೇಕೆಂದು, ಏನು ಬೇಡವೆಂದು ಮೊದಲೇ ಎಚ್ಚರವಹಿಸಬೇಕು, ಅದಕ್ಕೆ ತಕ್ಕಂತೆ ಕರ್ಮ ನಡೆಸಬೇಕು.

ನಮ್ಮ ಬಸವಣ್ಣನವರು ಹೇಳುವುದೂ ಇದನ್ನೆ ಅಲ್ಲವೆ, ಬೆಲ್ಲದ ಕಟ್ಟೆಯ ಕಟ್ಟಿ ಬೇವಿನ ಬೀಜವ ಬಿತ್ತಿ… ಏನು ಫಲ!? ಏನು ಬಿತ್ತುತ್ತೀವೋ ಅದನ್ನೆ ಬೆಳೆಯುತ್ತೇವೆ. ಏನು ಆಯ್ಕೆ ಮಾಡಿಕೊಳ್ಳುತ್ತೀವೋ ಅದರಂತೆಯೇ ಪರಿಣಾಮವನ್ನೂ ಉಣ್ಣುತ್ತೇವೆ!

Leave a Reply