ನಿನ್ನರಸಿ ಬಂದಿಹೆವು ಇಷ್ಟಾರ್ಥವ ನೀಡಿದೊಡೆ: ಧನುರ್ ಉತ್ಸವ ~ 25

ಧನುರ್ ಉತ್ಸವ ವಿಶೇಷ ಸರಣಿಯ ಇಪ್ಪತ್ತೈದನೇ ಕಂತು ಇಲ್ಲಿದೆ…

ಮೂಲ: ಡಾ.ಸಚಿತ್ರಾ ದಾಮೋದರ್| ಕನ್ನಡಕ್ಕೆ: ಕೆ.ನಲ್ಲತಂಬಿ

ಧನುರ್ ಉತ್ಸವ ಇಪ್ಪತ್ತೈದನೇಯ ದಿನ

ಒಬ್ಬಳಾ ಮಗನಾಗಿ ಪುಟ್ಟಿ

ಒಂದಿರುಳು ಓರ್ವಳ ಮಗನಾಗಿ ಗುಟ್ಟಾಗಿ ಬೆಳೆಯೆ

ಅದ ಸಹಿಸದೆಯೆ ತಾನು ಕೇಡನು ಬಯಸೆ

ಉದ್ದೇಶವನು ಅಳಿಸಿ ಕಂಸನೊಡಲೊಳು

ಬೆಂಕಿಯೊಲು ನಿಂತ ಮಹಾ ಗುಣ ನಿಧಿಯೇ

ನಿನ್ನರಸಿ ಬಂದಿಹೆವು ಇಷ್ಟಾರ್ಥವನು ನೀಡಿದೊಡೆ

ಸಿರಿಗೊಪ್ಪ ಸಂಪದವ ಕಲಿತನವ ನಾವ್ ಪಾಡಿ

ಮುಖವೆಲ್ಲವೂ ತೀರಿ ಸಂತುಷ್ಟರಾಗೆ ನಮ್ಮೀ ಪವಿತ್ರ ವ್ರತವು ಸಾರ್ಥಕವು

-ಬಿಂಡಿಗನವಿಲೆ ನಾರಾಯಣಸ್ವಾಮಿ   (ಶಂಕರಾಭರಣ ರಾಗ – ಆದಿ ತಾಳ)

“ದೇವಕಿಯ ಮಗನಾಗಿ ಮಧ್ಯರಾತ್ರಿ ಸೆರೆಯಲ್ಲಿ ಹುಟ್ಟಿದವನೇ….

ಅಂದು ರಾತ್ರಿಯೇ, ಯಶೋಧೆಯ ಬಳಿ ಅವಿತಿಟ್ಟುಕೊಂಡು ಬೆಳಯಲು ಹೋದವನೇ…

ಇದನ್ನು ಸಹಿಸಲಾಗದೆ, ನಿನ್ನನ್ನು ಅಳಿಸಬೇಕೆಂದು ಕೆಡಕು ಬಯಸಿದ ಕಂಸನ ಹೊಟ್ಟೆಯಲ್ಲಿ ಬೆಂಕಿಯಾಗಿ ಉರಿದ ಶ್ರೀವಿಷ್ಣುವೇ ….. ನಿನ್ನ ಕೃಪೆಯನ್ನು ಯಾಚಿಸಿ ನಾವು ಬಂದಿದ್ದೇವೆ!

ನೀನು ನಮಗೆ ಕೃಪೆಯನ್ನು ದಯಪಾಲಿಸುವೆಯಾದರೆ, ನಿನ್ನ ಸಂಪತ್ತಿನ ಹಿರಿಮೆಯನ್ನೂ, ಭಕ್ತರಿಗಾಗಿ ನೀನು ಮಾಡಿದ ಸಾಹಸ ಕಾರ್ಯಗಳನ್ನೂ ಹೊಗಳಿ ಹಾಡುತ್ತೇವೆ!

ನಿನ್ನ ಹಿರಿಮೆಯನ್ನು ನಾವು ಹೊಗಳಿ ಹಾಡಲು, ನಮ್ಮ ದುಃಖಗಳೆಲ್ಲವನ್ನೂ ನೀಗಿಸಿ, ನಾವು ಹರ್ಷದಿಂದಿರಲು ಕೃಪೆ ತೋರುವಂತವನಾಗು..”

ಎಂದು ಭಗವಂತನನ್ನು ಬೇಡಿಕೊಳ್ಳುತ್ತಾಳೆ ಗೋದೈ….!

“ಒಬ್ಬಳ ಮಗನಾಗಿ ಹುಟ್ಟಿ…

ಒಂದು ರಾತ್ರಿ ಮತ್ತೊಬ್ಬಳ ಮಗನಾಗಿ ಅವಿತಿಟ್ಟುಕೊಂಡು ಬೆಳಯಲು..”

ಎಂದು ಕೃಷ್ಣನ ಹುಟ್ಟಿನ ಬಗ್ಗೆ ಹಾಡುತ್ತಾಳೆ ಗೋದೈ.

ದೇವಕಿ ಎಂಬ ಒಬ್ಬಳ ಮಗನಾಗಿ ಹುಟ್ಟಿ, ಯಶೋಧೆ ಎಂಬ ಒಬ್ಬಳಿಗೆ ಮಗನಾಗಿ ಗುಟ್ಟಾಗಿ ಬೆಳೆಯಬೇಕಾದ ಸ್ಥಿತಿ ಯಾಕೆ ಬಂದಿತು ಕೃಷ್ಣನಿಗೆ? ಕೃಷ್ಣ ಹುಟ್ಟುವುದಕ್ಕೆ ಮೊದಲು ನಡೆದದ್ದಾದರು ಏನು? ಎಂಬುದನ್ನು ಹೇಳುವ ಕೃಷ್ಣ ಮತ್ತು ಬಲರಾಮನ ಅಂದಿನ ಇತಿಹಾಸ, ಇಂದಿನ ಗರ್ಭಕಾಲದ ವಿಜ್ಞಾನದ ಬಗ್ಗೆ ಮಾತನಾಡಲು ಅವಕಾಶ ನೀಡುತ್ತದೆ ಎಂಬುದೇ ದೊಡ್ಡ ವಿಸ್ಮಯ..!

“ನಿನ್ನ ತಂಗಿಗೆ ಹುಟ್ಟಲಿರುವ ಎಂಟನೇಯ ಗಂಡು ಮಗು ನಿನ್ನ ಜೀವಕ್ಕೆ ಆಪತ್ತು…” ಎಂಬ ಅಶರೀರ ಧ್ವನಿಯನ್ನು ಕೇಳಿದ ತಕ್ಷಣ, ತನ್ನ ಮೇಲೆ ಅಪರಿಮಿತವಾದ ಪ್ರೀತಿ ಇಟ್ಟಿರುವ ತಂಗಿ ದೇವಕಿಯನ್ನು ಕೊಲ್ಲುವ ನಿರ್ಧಾರಕ್ಕೆ ಕಂಸ ಬಂದುಬಿಡುತ್ತಾನೆ.

ಆದರೇ, ವಾಸುದೇವನೋ. “ಕಂಸ…. ನಮಗೆ ಹುಟ್ಟುವ ಎಂಟನೇಯ ಮಗನಿಂದಲ್ಲವೇ ನಿನ್ನ ಅಳಿವು? ನಮಗೆ ಹುಟ್ಟುವ ಎಲ್ಲ ಮಗುವನ್ನೂ ನಿನ್ನ ಬಳಿ ಒಪ್ಪಿಸಿಬಿಡುತ್ತೇನೆ..” ಎಂದು ಅಂಗಲಾಚಲು, ತಂಗಿಯ ಮೇಲಿದ್ದ ಮಮತೆಯಿಂದ ದೇವಕಿಯನ್ನು ಕೊಲ್ಲುವ ವಿಚಾರವನ್ನು ಆಗ ಕೈಬಿಟ್ಟ ಕಂಸ, ಅದಕ್ಕೆ ಬದಲಾಗಿ, ಬಲವಾದ ಕಾವಲು ಹಾಕಿ  ವಾಸುದೇವ, ದೇವಕಿಯನ್ನು ತನ್ನ ಕಣ್ಣುಗಾವಲಿನಲ್ಲಿಯೇ ಸೆರೆಯಲ್ಲಿದುತ್ತಾನೆ. ಆದರೂ ಅವನ ಕ್ರೂರ ಭಾವನೆ ಮಾತ್ರ ಕಡಿಮೆಯಾಗುವುದೇ ಇಲ್ಲ.

ತನಗೆ ಹುಟ್ಟಿದ ಆರು ಮಕ್ಕಳನ್ನೂ ಒಂದರನಂತರ ಒಂದಾಗಿ ಹುಟ್ಟಿದ ಜಾಗದಲ್ಲಿಯೇ, ಸೆರೆಮನೆಯ ಗೋಡೆಗೆ, ತನ್ನ ಸಹೋದರ ಕಂಸ ಅಪ್ಪಳಿಸಿ ಕೊಂದದ್ದನ್ನು ನೋಡಿ ಮನಸ್ಸು ನೊಂದುಕೊಂಡ ದೇವಕಿ, ಆಗ ಏಳನೇಯ ಬಾರಿಯಾಗಿ ಗರ್ಭಧರಿಸಿ ನಿಲ್ಲುತ್ತಾಳೆ.

ಆರು ತಿಂಗಳ ಗರ್ಭ, ಅವಳ ಗರ್ಭಕೋಶವನ್ನು ಒಳಗಿರುವ ಮಗು ಒದೆಯಲು, ಹುಟ್ಟಿದ ಕೂಡಲೇ ಈ ಮಗು ತನ್ನ ಅಣ್ಣನನ್ನು ಕೊಂದುಬಿಡುತ್ತಾನೋ ಎಂದು ಭಾವಿಸಿ, ಕಣ್ಣೀರಲ್ಲಿ ಕರಗಿ, ಭಗವಂತನ ಬಳಿ ತನ್ನ ಮಗುವನ್ನು ಕಾಪಾಡಿಕೊಡುವಂತೆ ದೇವಕಿ ಅಂಗಲಾಚುತ್ತಲೇ ರಾತ್ರಿ ನಿದ್ರೆಗೆ ಹೊರಳುತ್ತಾಳೆ.

ಆದರೋ ಆ ನಡುರಾತ್ರಿ ನಡೆದದ್ದು ಬೇರೆ.

ಭಗವಾನ್ ಶ್ರೀಮನ್ ನಾರಾಯಣ, ಮಾಯೆಯನ್ನು ಕರೆದು, “ಈಗ ದೇವಕಿಯ ಗರ್ಭದಲ್ಲಿ ಬೆಳೆಯುವ ಆದಿಶೇಷನನ್ನು, ಗೋಕುಲದಲ್ಲಿ ವಾಸಿಸುವ ವಸುದೇವನ ಮೊದಲ ಪತ್ನಿಯಾದ ರೋಹಿಣಿಯ ಗರ್ಭಕ್ಕೆ ಬದಲಾಯಿಸಿಬಿಡುತ್ತೀಯಾ… ನಂತರ ನೀನೂ ಯಶೋಧೆಯ ಹೊಟ್ಟೆಯಲ್ಲಿ ಹೆಣ್ಣಾಗಿ ಹುಟ್ಟಿ, ದುರ್ಗೆ, ವೈಷ್ಣವಿ, ಮಾಯೆ ಎಂದು ಹಲವು ಹೆಸರುಗಳಿಂದ ಕರೆಯಲ್ಪಡುವಂತಳಾಗುತ್ತೀಯೇ..ಅಷ್ಟೇ ಅಲ್ಲದೆ ರೋಹಿಣಿಯ ಮಗನನ್ನು, ಈ ಲೋಕವೇ ಭ್ರಮಿಸುವಂತ ಶಕ್ತಿವಂತನಾಗಿ, ಬಲರಾಮನಾಗಿ ರೂಪಿಸುವಂತವಳಾಗು…” ಎಂದು ಹೇಳಿ ಮರೆಯಾಗುತ್ತಾನೆ.

“ಒಂದು ತಾಯಿಯ ಉದಿರದಲ್ಲಿ ಒಂದಾರು ತಿಂಗಳು ಬೆಳೆದ ಶಿಶು

ಮತ್ತೊಂದು ತಾಯ ಹೊಟ್ಟೆಯಲ್ಲಿ ಬಂದುಳಿದದ್ದು ಎಂಥ ಮಾಯವೋ ತಿಳಿಯೇ…”

ಎನ್ನುವಂತೆ, ದೇವಕಿಯ ಹೊಟ್ಟೆಯಲ್ಲಿ ಆರು ತಿಂಗಳು ವಾಸವಿದ್ದ ನಂತರ, ಮತ್ತೊಂದು ತಾಯಾದ ರೋಹಿಣಿಯ ಹೊಟ್ಟೆಯೊಳಗೆ, ಭ್ರೂಣವಾಗಿ ಬಂದು ಸೇರುತ್ತಾನೆ ಸಂಘರ್ಷಣನಾದ ಬಲರಾಮ. ಸಂಘರ್ಷಣ ಎಂದರೆ ಎಳೆದಿಡಲ್ಪಟ್ಟವನು ಎಂಬುದು ಅರ್ಥವಂತೆ…ಹೀಗೆ ರೋಹಿಣಿಯ ಹೊಟ್ಟೆಯಲ್ಲಿ ಎಳೆದು ಇಡಲ್ಪಟ್ಟು ಹುಟ್ಟಿದ ಬಲರಾಮ, ಒಂದು ಕಡೆ ಯಶೋಧೆಯ ಮನೆಯಲ್ಲಿ ಬೆಳೆದು, ದೊಡ್ಡ ಶಕ್ತಿಶಾಲಿಯಾಗುತ್ತಾನೆ.

ಆದರೇ, ದೇವಕಿಯ ಏಳನೇಯ ಗರ್ಭ, ಆರು ತಿಂಗಳಲ್ಲಿ ಗರ್ಭಪಾತವಾಯಿತೆಂದೇ, ದೇವಕಿಯೂ ಉಳಿದವರೂ ನಂಬುತ್ತಾರೆ. ಅದಕ್ಕೆ ಕಂಸನೇ ಕಾರಣ ಎಂದು ಅವನನ್ನು ದೂರುತ್ತಾರೆ. ಅದೇ ಸಮಯ ಎಂಟನೇಯ ಸಲ ದೇವಕಿ ಗರ್ಭತಾಳುತ್ತಾಳೆ.

ಒಂದರನಂತರ ಒಂದಾಗಿ  ಆರು ಮಕ್ಕಳು, ತನ್ನ ಕಣ್ಣೆದುರೇ ಕಂಸನಿಂದ ಕೊಲ್ಲಲ್ಪಡಲು, ಏಳನೇಯ ಸಲ ಆರೇ ತಿಂಗಳಲ್ಲಿ ಗರ್ಭಪಾತವಾಗಲು, ಈ ಮಗುವಾದರೂ ಉಳಿಯಬೇಕೆಂದು ದೇವಕಿ ಕಣ್ಣೀರಿನೊಂದಿಗೆ ದಿನಗಳನ್ನು ಕಳೆಯುತ್ತಾಳೆ.

ಕೊನೆಗೆ ಆ ಸುದಿನವೂ ಬರುತ್ತದೆ.

ಶ್ರಾವಣ ತಿಂಗಳು ಅಷ್ಟಮಿ ತಿಥಿಯಲ್ಲಿ, ರೋಹಿಣಿ ನಕ್ಷತ್ರದಲ್ಲಿ, ಮಧ್ಯರಾತ್ರಿ ಸಮಯದಲ್ಲಿ, ಈಶ್ವರನೂ, ಬ್ರಹ್ಮನೂ ಆಶೀರ್ವದಿಸಲು, ದೇವತೆಗಳೂ ಋಷಿಗಳೂ ಕಾದಿರಲು, ಕಮಲಪುಷ್ಪ ನಯನ, ಎದೆಯ ಮೇಲೆ ಶ್ರೀವತ್ಸ ಮಚ್ಚೆ, ಕುತ್ತಿಗೆಯಲ್ಲಿ ತುಳಸಿಮಣಿ ಮಾಲೆ ಇವುಗಳೊಂದಿಗೆ ದೇವಕಿಯ ಎಂಟನೇಯ ಮಗುವಾಗಿ ಕೃಷ್ಣ ಹುಟ್ಟುತ್ತಾನೆ.

ಭಗವಂತನೇ ಶಿಶುವಾಗಿ ಜನಿಸಿದ್ದಾನೆ ಎಂದು ಅರಿತ ವಾಸುದೇವ, ದೇವಕಿ ಅಪರಿಮಿತವಾಗಿ ಹರುಷಗೊಳ್ಳುತ್ತಾರೆ. ಆದರೆ ಅವರ ಸಂತೋಷ ಮರುಕ್ಷಣವೇ ಮರೆಯಾಗುತ್ತದೆ. ಬೆಳಗಾದರೆ ಕಂಸ ಬಂದು, ಈ ಮಗುವನ್ನು ಕೊಂದುಬಿಡುತ್ತಾನೆ; ಅದಕ್ಕೆ ಮೊದಲು ಮಗುವನ್ನು ಕಾಪಾಡಬೇಕು ಎಂಬ ಭಾವನೆ ಮಾತ್ರವೇ ಅವರ ಮನಸ್ಸಿನಲ್ಲಿ ತುಂಬಿರುತ್ತದೆ.

ಆಗ ಅಶರೀರವಾಣಿಯೊಂದು, ವಸುದೇವರನ್ನು ಕರೆದು, “ವಸುದೇವರೇ, ನಿಮ್ಮ ಹಿಂದಿನ ಜನ್ಮದ ಫಲದಿಂದ ನಾರಾಯಣನೇ ನಿಮ್ಮ ಮಗನಾಗಿ ಹುಟ್ಟಿದ್ದಾನೆ. ಈ ಮಗುವನ್ನು ಗೋಕುಲಕ್ಕೆ ಈಗ ಕರೆದುಕೊಂಡು ಹೋಗಿ. ಅಲ್ಲಿ ನಿಮ್ಮ ಗೆಳೆಯನಾದ ನಂದಗೋಪನಿಗೆ ಹುಟ್ಟಿರುವ ಹೆಣ್ಣು ಮಗುವನ್ನು ಇಲ್ಲಿಗೆ ಎತ್ತಿಕೊಂಡು ಬನ್ನಿ. ಯಶೋಧೆ ಈ ಮಗುವನ್ನು ಅಲ್ಲಿ ಸಾಕಲಿ. ತಕ್ಕ ಸಮಯದಲ್ಲಿ ಎಲ್ಲ ಒಳಿತು ನಡೆಯುತ್ತದೆ…” ಎಂದು ಹೇಳಿ ಮರೆಯಾಗುತ್ತದೆ.

ಅಶರೀರವಾಣಿಯ ಮಾತಿನ ನಂತರ, ಆ ನಡುರಾತ್ರಿಯಲ್ಲಿ ಮುಂದಿನ ಕಾರ್ಯಗಳೆಲ್ಲವೂ ಬಿರುಸಾಗಿ ನಡೆಯುತ್ತದೆ. ಮಾಯೆಯ ಶಕ್ತಿಯಿಂದ ಕಾರಗೃಹದ ಬಾಗಿಲುಗಳೆಲ್ಲವೂ  ತೆರೆದುಕೊಳ್ಳಲು, ಬಾಗಿಲು ಕಾಯುವವರು ಮೂರ್ಛೆಹೋಗುತ್ತಾರೆ.  ವಸುದೇವ ಸ್ವಲ್ಪವೂ ತಡಮಾಡದೆ ಸೆರೆಯಿಂದ ಹೊರಗೆ ಬರುತ್ತಾರೆ.

ಹೊರಗೆ ಗುಡುಗು ಸಿಡಿಲಿನ ಮೊಳಗಿಗೆ, ಜಡಿ ಮಳೆ ಸುರಿಯುವ ಆ ಮಧ್ಯರಾತ್ರಿ, ಉಕ್ಕಿಹರಿಯುತ್ತಿದ್ದ ಯಮುನೆಯ ಪ್ರವಾಹದಲ್ಲಿ, ಮಗುವನ್ನು ತಲೆಯ ಮೇಲೆ ಹೊತ್ತುಕೊಂಡು, ಭಗವಂತನನ್ನು ಧ್ಯಾನಿಸುತ್ತಾ, ವಸುದೇವ ಇಳಿದು ನಡೆಯಲು ತೊಡಗುತ್ತಾರೆ.

ಏನು ಅತಿಶಯ! ಯಮುನೆಯ ಪ್ರವಾಹ ಎರಡು ಹೋಳಾಗಿ ಸೀಳಿ ವಸುದೇವರಿಗೆ ದಾರಿ ಮಾಡಿಕೊಡುತ್ತದೆ. ವಾಸುಕಿ ಎಂಬ ಸರ್ಪ ಶಿಶುವಿಗೆ ಕೊಡೆ ಹಿಡಿಯಲು, ನದಿಯನ್ನು ದಾಟಿ ವಸುದೇವ ಮಗುವಿನೊಂದಿಗೆ ಗೋಕುಲಕ್ಕೆ ನಂದಗೋಪನ ಮನೆಯನ್ನು ತಲುಪಿ, ಅಲ್ಲಿ ಮೈಮರೆತು ಮಲಗಿದ್ದ ಯಶೋಧೆಯ ಪಕ್ಕದಲ್ಲಿ ಕೃಷ್ಣನನ್ನು ಮಲಗಿಸಿ, ಅವಳ ಪಕ್ಕದಲ್ಲಿದ್ದ ಹೆಣ್ಣು ಮಗುವನ್ನು ತೆಗೆದುಕೊಂಡು, ಬಂದ ದಾರಿಯಲ್ಲೇ ಹಿಂತಿರುಗುತ್ತಾರೆ.

ದೇವಕಿಗೆ ಮಗು ಹುಟ್ಟಿರುವ ಸುದ್ಧಿಯನ್ನು ಕೇಳಿ ಬೆಳಗ್ಗೆ ಅಲ್ಲಿಗೆ ಬಂದ ಕಂಸ, ಅಲ್ಲಿ ಹೆಣ್ಣು ಮಗುವನ್ನು ನೋಡಿದಕೂಡಲೇ ಗೊಂದಲಕ್ಕೆ ಒಳಗಾಗುತ್ತಾನೆ. ಗಂಡು ಮಗುವಲ್ಲವೇ ಹುಟ್ಟಿರಬೇಕು ಎಂದು ಅಂದುಕೊಂಡವನು ಕೊನೆಗೆ ಯಾವ ಮಗುವಾಗಿದ್ದರೇನಂತೆ ಅದನ್ನು ಅಳಿಸಿಬಿಡಬೇಕು ಎಂಬ ನಿರ್ಧಾರದಿಂದ, ಆ ಹೆಣ್ಣು ಮಗುವನ್ನು ಕೊಲ್ಲಲು ಮುಂದಾಗುವಾಗ, ಆ ಮಗು ದುರ್ಗೆಯಾಗಿ ರೂಪಾತಾಳಿ, “ಕಂಸನೇ ನಿನ್ನನ್ನು ಕೊಲ್ಲುವವನು ಬೇರೊಂದು ಸ್ಥಳದಲ್ಲಿ ಜೋಪಾನವಾಗಿದ್ದಾನೆ. ತಕ್ಕ ಸಮಯಕ್ಕೆ ಅವನೇ ಬಂದು ನಿನ್ನನ್ನು ಅಳಿಸುತ್ತಾನೆ…” ಎಂದು ಹೇಳಿ ಮರೆಯಾಗುತ್ತಾಳೆ.

ಒಬ್ಬಳ ಮಗನಾಗಿ ಹುಟ್ಟಿ, ಒಂದೇ ರಾತ್ರಿಯಲ್ಲಿ ಮತ್ತೊಬ್ಬಳ ಮಗನಾಗಿ ಬೆಳೆದ ಕೃಷ್ಣ, ಅದರ ನಂತರ ತನ್ನ ಸೋದರಮಾವನಾದ ಕಂಸನನ್ನು  ಅಳಿಸಿದ ಕಥೆ ನಮಗೆಲ್ಲ ತಿಳಿದದ್ದೇ.

ಆದರೇ, ಅದಕ್ಕೆ ಮೊದಲು ದೇವಕಿಯ ಏಳನೇಯ ಮಗನಾದ ಬಲರಾಮನನ್ನು, ಅವಳ ಗರ್ಭದಿಂದ ರೋಹಿಣಿಯ ಗರ್ಭಕ್ಕೆ ಬದಲಾಯಿಸಿ ಇಟ್ಟದ್ದು ಎಂಬುದು ಕಾರ್ಯರೂಪದಲ್ಲಿ ಸಾಧ್ಯವೇ? ಹೀಗೆ ನಡೆಯಲು ಏನಾದರೂ ಅವಕಾಶವಿದೆಯೇ? ಎಂಬ ನಮ್ಮ ಪ್ರಶ್ನೆಗಳಿಗೆ ಅಂದು ಸಾಧ್ಯವಾಯಿತೋ ಇಲ್ಲವೋ, ಇಂದು ಸಾಧ್ಯ ಎನ್ನುತ್ತದೆ ಪ್ರಸೂತಿ ವಿಜ್ಞಾನ!

ಹೀಗೆ ಗರ್ಭವನ್ನು ತೆಗೆದು ಗರ್ಭಕೋಶದಲ್ಲಿಡುವ ಪದ್ಧತಿಯನ್ನು, Test Tube Baby ಎಂಬ In Vitro Fertilization (IVF)- (ಇನ್ ವಿಟ್ರೊ ಫಲೀಕರಣ)ಎಂದು ಕರೆಯುತ್ತಾರೆ ಸ್ತ್ರೀ ರೋಗತಜ್ಞರು.

ಗರ್ಭ ಕೊಳವೆಗಳ ಅಡಚಣೆ ಅಥವಾ ವೀರ್ಯಾಣು ಕೊರತೆ ಉಳ್ಳವರು ಅವರ ಭ್ರೂಣವನ್ನೂ ವೀರ್ಯಾಣುವನ್ನೂ ವಿಂಗಡಿಸಿ ತೆಗೆದು, ಸೂಕ್ತ ಪ್ರಯೋಗಶಾಲೆಯಲ್ಲಿ ಭ್ರೂಣವಾಗಿ ಪರಿವರ್ತಿಸಿ, ಅದನ್ನು ತೆಗೆದು ತಾಯಿಯ ಗರ್ಭದೊಳಗೆ ಸೇರಿಸುವುದು ಈ test tube baby ಎಂಬ ಕೃತಕ ಗರ್ಭದಾರಣೆ ಪದ್ಧತಿಯಾಗುತ್ತದೆ. ಅದೇ ತಾಯಿಯ ಗರ್ಭಕೋಶ ಬಲಹೀನವಾಗಿದ್ದರೆ, ಉಳಿದ ಅನೇಕ ಕಾರಣಗಳಿಂದ ಸೃಷ್ಟಿಯಾದ ಭ್ರೂಣವನ್ನು ಮತ್ತೊಂದು ಹೆಣ್ಣಿನ ಗರ್ಭಕೋಶಕ್ಕೆ ಬದಲಾಯಿಸುವುದು ಬಾಡಿಗೆತಾಯಿ ಎಂಬ Sarrogacy (ಸರೊಗಸಿ- ಬಾಡಿಗೆ ತಾಯಿ) ಪದ್ಧತಿ. ಹುಟ್ಟಿನಲ್ಲೇ ಗರ್ಭಕೋಶವಿಲ್ಲದೆಯೋ, ಅಥವಾ ಗರ್ಭಕೋಶ ಸಂಪೂರ್ಣವಾಗಿ ಕಾರ್ಯ ಮಾಡದಿದ್ದರೋ, ಆಗ ಗರ್ಭಕೋಶ ಕಸಿ ಶಸ್ತ್ರಕ್ರಿಯೆ ಅಂದರೆ Uterine Transplantation ಆಗುತ್ತದೆ. ಈ ಮೂರು ರೀತಿಯಲ್ಲೂ, ಗರ್ಭವನ್ನು ತೆಗೆದಿಡಲು ಸಾಧ್ಯ ಎನ್ನುತ್ತದೆ ಈ ವೈದ್ಯಕೀಯ ವಿಜ್ಞಾನ.

Robert Edwards ಮತ್ತು Patrick Steptoe ಎಂಬ ಬ್ರಿಟೀಷ್ ವೈದ್ಯರು ಕಂಡುಹಿಡಿದ test tube baby ಎಂಬ IVF ಪದ್ದತಿ 1978ನೇಯ ಇಸವಿಯಲ್ಲಿ Louise Brown ಎಂಬ ಹೆಣ್ಣು ಮಗುವೇ ಜಗತ್ತಿನ ಮೊಟ್ಟಮೊದಲ ಕೃತಕ ಗರ್ಭದಾರಣೆಯ ಮೂಲಕ ಹುಟ್ಟಿದ ಶಿಶು.

ಇಪ್ಪತ್ತನೇಯ ಶತಮಾನದಲ್ಲಿ ಸಾಧ್ಯವಾದ ಈ ಅಪೂರ್ವ ವಿಜ್ಞಾನ, ಪುರಾಣಗಳಲ್ಲಿ ಅಂದೇ ಹೇಳಲ್ಪಟ್ಟಿದೆ ಎಂಬುದೇ ವಿಸ್ಮಯ!

ಇಂದು ಜಗವೆಲ್ಲ ಸಾವಿರಾರು ಕೃತಕ ಗರ್ಭದಾರಣೆ ಕೇಂದ್ರಗಳ ಮೂಲಕ ಲಕ್ಷಗಟ್ಟಲೇ ಹೆಣ್ಣುಗಳು ಶಿಶು ಭಾಗ್ಯವನ್ನು ಪಡೆದುಕೊಂಡರೂ, ಮೂರರಿಂದ ನಾಲ್ಕು ದಿನದೊಳಗೆ ಗರ್ಭವನ್ನು ಬದಲಾಯಿಸುವ Embryo Transfer ಪದ್ಧತಿಗಳು ಮಾತ್ರವೇ ಈಗ ಚಾಲನೆಯಲ್ಲಿದೆ.

ಅಂದು ಸಂಘರ್ಷಣ ರೂಪವಾದ, ಚೆನ್ನಾಗಿ ಬೆಳೆದ, ಆರು ತಿಂಗಳ ಭ್ರೂಣವನ್ನು ಗರ್ಭ ಬದಲಾವಣೆ ಮಾಡುವ ವೈಜ್ಞಾನಿಕ ಪದ್ಧತಿ ಈವರೆಗೂ ವಾಸ್ತವಿಕದಲ್ಲಿ ಇಲ್ಲ ಎಂದರೂ, ಅದಕ್ಕಾದ ಸಾಧ್ಯತೆಗಳಿವೆ ಎಂದು ನಂಬುತ್ತೇವೆ!

ದೇವಕಿಯ ಏಳನೇಯ ಗರ್ಭವಾದ ಸಂಘರ್ಷಣ, ಎಳೆದು ಇಟ್ಟ ಘಟನೆ, ಕೃತಕ ಗರ್ಭದಾರಣೆಯ ಬಗ್ಗೆಯ ವಿಜ್ಞಾನದಂತಿದೆ ಎಂದರೆ, ಎಂಟನೇಯ ಗರ್ಭವಾದ ಕೃಷ್ಣ ಹುಟ್ಟಿದ ಕಥೆಯೋ, ಮತ್ತೊಂದು ವೈದ್ಯಕೀಯ ವಿಜ್ಞಾನವನ್ನು ಒಳಗೊಂಡಿದೆ.

ನಡುರಾತ್ರಿ ಸುರಿವ ಮಳೆಯಲ್ಲಿ, ಕೃಷ್ಣನನ್ನು ಕುಕ್ಕೆಯಲ್ಲಿಟ್ಟು, ವಸುದೇವ ಗೋಕುಲಕ್ಕೆ ಕೊಂಡುತರಲು, ದಾರಿಯೆಲ್ಲ ಹಿತವಾದ ಕೊಡೆಯಾಗಿ ಬಂದಿತಂತೆ ವಾಸುಕಿ ಎಂಬ ಸರ್ಪ. ಕುಕ್ಕೆ ಅದರಮೇಲೆ ಬಿರಿದ ಕೊಡೆಯ ಆ ದೃಶ್ಯ, ಹುಟ್ಟಿದ ಮಗುವನ್ನು ಪರಾಮರಿಸುವ Incubator (ಇಂಕ್ಯುಬೆಟರ್- ಕಾಪು ಪೆಟ್ಟಿಗೆ ಅಥವಾ ಕೃತಕ ಶಾಖೋಪರಣ)  ಮತ್ತು Warmer (ಕಾವು ಪೆಟ್ಟಿಗೆ) ನೊಂದಿಗೆ ಸುಂದರವಾಗಿ ಹೊಂದಿಕೊಳ್ಳುತ್ತದೆ ಅಲ್ಲವೇ? ಹುಟ್ಟಿದ ತಕ್ಷಣ ಎಂತಹ ಹಿತವಾದ ಪಯಣವನ್ನು ಕೈಗೊಂಡಿದ್ದಾನೆ ನೋಡಿ ನಮ್ಮ ಮಾಯಕೃಷ್ಣ!

ಮತ್ತೆ, ಎಲ್ಲ ಗರ್ಭಕ್ಕೆ ಸಂಬಂಧಿಸಿದ ವಿಷಯಗಳೂ ಯಾಕೆ ಮಧ್ಯರಾತ್ರಿಯೇ ನಡೆದಿದೆ ಎಂದರೆ, ನಡುರಾತ್ರಿಯಲ್ಲೇ ಸಾತ್ವಿಕ ಹಾರ್ಮೋನ್-ಗಳಾದ Melatonin (ಮೆಲಟೊನಿನ್-ನೆತ್ತಿಗ್ರಂಥಿ) ಸ್ರವಿಸಿ, ಗರ್ಭ ರೂಪುಗೊಳ್ಳಲು ಹೆಚ್ಚು ನೆರವಾಗಿರುತ್ತದೆ ಎಂದೂ, ಅದರಿಂದ ದೊರಕುವ Antioxidants (ಆಂಟಿಆಕ್ಸಿಡಂಟ್- ಆಕ್ಸಿಡೀಕಾರಕ- ರಾಸಾಯನಿಕ ಕ್ರಿಯೆಯಲ್ಲಿ ಆಮ್ಲಜನಕವನ್ನು ಕ್ರಿಯೆಯನ್ನು ಪ್ರತಿರೋಧಿಸುವ ವಸ್ತು)  ಗರ್ಭಪಾತ ಮತ್ತು ಗರ್ಭಕಾಲದ ರಕ್ತೋತ್ತಡವನ್ನು ತಡೆಯಲು ನೆರವಾಗುತ್ತದೆ ಎಂದೂ ಹೇಳುತ್ತವೆ ಸಂಶೋಧನೆಗಳು.

ಆಧ್ಯಾತ್ಮವನ್ನೂ, ರಾಜಕೀಯವನ್ನೂ, ಅನುಭವದ ಬದುಕನ್ನೂ ನಮಗೆ ಸುಂದರವಾಗಿ ತಿಳಿಸಿ ಹೇಳುವ ಕೃಷ್ಣಾವತಾರ ಎಂಬ ಅಂದದ ಪುರಾಣ, ಗೋಕುಲದ ಬಗ್ಗೆ ಹೇಳುವಾಗ ಅದರ ಅಂತರಾಳದಲ್ಲಿ ಹರಿಯುವ ಯಮುನೆಯಂತೆಯೇ ಒಂದು ಅದ್ಭುತವಾದ ವೈಜ್ಞಾನಿಕತೆಯನ್ನೂ ಸೇರಿಸಿಯೇ ಹೇಳುತ್ತದೆ ಎಂಬುದೇ ಸತ್ಯ.

ಕೃಷ್ಣನ ಬಗ್ಗೆ ಮಾತನಾಡುವಾಗಲೆಲ್ಲಾ ಯಮುನಾ ನದಿಯ ಬಗ್ಗೆ ಮಾತನಾಡುವುದನ್ನು ನಮ್ಮಿಂದ ತಪ್ಪಿಸಲಾಗದು. ಕೃಷ್ಣನ ಹುಟ್ಟಿನ ಬಗ್ಗೆ ಮಾತನಾಡುವಾಗಲೂ, ಅವನು ಬೆಳೆದ ಗೋಕುಲದ ಬಗ್ಗೆ ಮಾತನಾಡುವಾಗಲೂ ಅವನ ಆ ಇತಿಹಾಸವೆಲ್ಲ ಮೂಕ ಸಾಕ್ಷಿಗಳಾಗಿ, ಅದರೊಳಗೆ ಯಮುನಾ ನದಿ ಹರಿಯುತ್ತಲೇ ಇರುವುದು ಮಾತ್ರವಲ್ಲ, ಆ ನದಿಯೇ ಕೃಷ್ಣ ಎನ್ನುತ್ತವೆ ಕಥೆಗಳು.

ನಡುರಾತ್ರಿ ಕುಕ್ಕೆಯಲ್ಲಿ ಮಗುವನ್ನು ಇಟ್ಟುಕೊಂಡು, ಸುರಿವ ಮಳೆಯಲ್ಲಿ ಯಮುನಾ ನದಿಯ ದಡದಲ್ಲಿ ವಸುದೇವ ಏನು ಮಾಡುವುದೆಂದು ತಿಳಿಯದೆ ನಿಂತು ಭಗವಂತನನ್ನು ಬೇಡಿಕೊಂಡಾಗ ನದಿ ಹೇಗೆ ದಾರಿಬಿಟ್ಟಿತು ಎಂದರೆ, ವಸುದೇವನ ತಲೆಯ ಮೇಲಿದ್ದಂತೆಯೇ ತನ್ನ ಪುಟ್ಟ ಕಾಲುಗಳಿಂದ ಯಮುನೆಯನ್ನು ಮುಟ್ಟಿದನಂತೆ ಆ ಮಾಯಾವಿ ಕೃಷ್ಣ. ತಕ್ಷಣ, ಪ್ರವಾಹವಾಗಿ ಹರಿಯುತ್ತಿದ್ದ ಯಮುನೆ ಎರಡಾಗಿ ಸೀಳಿ ದಾರಿಬಿಟ್ಟಳಂತೆ. ಕೃಷ್ಣನ ಕಾಲು ತಾಕಿದ್ದರಿಂದಲೇ ಅಂದಿನಿಂದ ಇಂದಿನವರೆಗೆ ಕೃಷ್ಣನ ಬಣ್ಣವಾದ ಶ್ಯಾಮಲ ವರ್ಣದಲ್ಲಿ ಹೊಳೆಯುತ್ತಾಳೆ ಯಮುನೆ ಎನ್ನುತ್ತಾರೆ. ಅದಕ್ಕಾಗಿಯೇ, ಅವಳನ್ನು ಗುಣಗಾನ ಮಾಡಿ  ಹಾಡುವಾಗ ‘ಸ್ವಚ್ಛ ಹೆನ್ನೀರು ಯಮುನೆ’ ಎಂದು ಗೋದೈ ಹಾಡುತ್ತಾಳೆ.

‘ನಿನ್ನರಸಿ ಬಂದಿಹೆವು ಇಷ್ಟಾರ್ಥವನು ನೀಡಿದೊಡೆ…’ ಎಂದು, ಆ ಯಮುನೆಯಂತೆಯೇ, ಯಾವ ವಿಧವಾದ ವ್ಯಾಮೋಹವಿಲ್ಲದೆ, ಇಚ್ಛೆ ಆಯಿಚ್ಚೆಗಳಿಲ್ಲದೇ, ಸಾತ್ವೀಕವಾಗಿ, ನಿಜವಾಗಿ, ಮನಸಾರೆ ಪೂಜಿಸಲು ಬಂದಿದ್ದೇವೆ. ನಮ್ಮನ್ನು ಸ್ವೀಕರಿಸುವಂತವನಾಗು…” ಎಂದು ಭಗವಂತನ ಬಳಿ ಇಪ್ಪತ್ತೈದನೇಯ ದಿನ ಬೇಡಿಕೊಳ್ಳುತ್ತಾಳೆ ಗೋದೈ ಆಂಡಾಳ್!

                                                         ***

ಧನುರ್ಮಾಸದಲ್ಲಿ ವೈಷ್ಣವ ದೇವಸ್ಥಾನಗಳಲ್ಲಿ ಆಂಡಾಳ್ ವಿರಚಿತ ‘ತಿರುಪ್ಪಾವೈ’ ವಿಶೇಷ ಪಾರಾಯಣ ನಡೆಯುತ್ತದೆ. ಈ ಸಂದರ್ಭದಲ್ಲಿ ಪಾಶುರಗಳನ್ನ ಹಾಡುತ್ತಾರೆ. ಸಾಹಿತ್ಯ ಮತ್ತು ಆಧ್ಯಾತ್ಮಿಕವಾಗಿ ವಿಶೇಷ ಸ್ಥಾನ ಪಡೆದಿರುವ ತಿರುಪ್ಪಾವೈ ಕೃತಿಯ ಪ್ರೇರಣೆ ಅನ್ನಬಹುದಾದ ‘ಧನುರ್ಮಾಸ’ ಕೃತಿಯನ್ನು ಡಾ.ಸಚಿತ್ರಾ ದಾಮೋದರ್ ರಚಿಸಿದ್ದಾರೆ. ಇದನ್ನು ಕಥೆಗಾರರೂ ಅನುವಾದಕರೂ ಆಗಿರುವ ಕೆ.ನಲ್ಲತಂಬಿ ಅವರು ಕನ್ನಡಕ್ಕೆ ತಂದಿದ್ದಾರೆ. ‘ಧನುರ್ಮಾಸ’ದ 30 ಸುಂದರ ಕುಸುಮಗಳನ್ನು 30 ಕಂತುಗಳಲ್ಲಿ ಅರಳಿಮರ ಪ್ರಕಟಿಸಲಿದೆ.

Leave a Reply