ಸೂಡಿ ಕೊಟ್ಟ ಸೊಡರುಬಳ್ಳಿ, ಭಗವಂತನನ್ನೇ ಆಳಿದ ಭಕ್ತೆ ‘ಆಂಡಾಳ್’

“ಕನ್ನಡದ ಓದುಗರಿಗೆ ರಾಧೆ, ಮೀರಾ ತಿಳಿದಿರುವಂತೆ ಕೃಷ್ಣನ ಭಕ್ತೆಯಾದ ಆಂಡಾಳಿನ ಬಗ್ಗೆ ಹೆಚ್ಚು ತಿಳಿದಿರಲಾರದು ಎಂಬುದು ನನ್ನ ಅನಿಸಿಕೆ.  ಅದಕ್ಕಾಗಿಯೇ ಈ ಒಂದು ಕಿರು ಪರಿಚಯ” ಅನ್ನುತ್ತಾ ಆಂಡಾಳ್ ಅನ್ನು ಸುಂದರವಾಗಿ ಪರಿಚಯಿಸಿದ್ದಾರೆ, ‘ಧರ್ನುರ್ ಉತ್ಸವ’ ಸರಣಿಯ ಅನುವಾದಕರೂ ಸ್ವತಃ ಕವಿ ಮತ್ತು ಕಥೆಗಾರರೂ ಆಗಿರುವ ಕೆ. ನಲ್ಲತಂಬಿ

ಆಂಡಾಳ್ ಏಳನೇಯ ಶತಮಾನದ ತಮಿಳುನಾಡಿನ ವೈಷ್ಣವ ಆಳ್ವಾರ್`ಗಳಲ್ಲಿ ಒಬ್ಬಳು.  ಹನ್ನೆರಡು ಆಳ್ವಾರರುಗಳಲ್ಲಿ ಇವಳೊಬ್ಬಳೇ ಸ್ತ್ರೀ. ಇವಳನ್ನು ಭೂದೇವಿಯ ಅವತಾರವೆಂದು ಹೇಳಲಾಗುತ್ತದೆ.

ಮದುರೈ ಸಮೀಪದಲ್ಲಿ ಶ್ರೀವಿಲ್ಲಿಪ್ಪುತ್ತೂರ್ ಎಂಬ ಊರಿನಲ್ಲಿ ವಾಸವಿದ್ದ ವಿಷ್ಣುಚಿತ್ತರ್ (ಪೆರಿಯಾಳ್ವಾರ್) ಎಂಬ ಬ್ರಾಹ್ಮಣರೊಬ್ಬರಿಗೆ ಶಿಶುವಾಗಿ ತುಳಸಿ ಗಿಡದ ಕೆಳಗೆ ಆಂಡಾಳ್ ದೊರಕುತ್ತಾಳೆ. ಇವರು ಶ್ರೀವಿಲ್ಲಿಪ್ಪುತ್ತೂರ್ ವಟಪತ್ರಶಾಯಿಯ ದೇವಸ್ಥಾನಕ್ಕೆ ಹೂಗಳನ್ನು ಕುಯ್ದು, ಮಾಲೆ ಕಟ್ಟಿ ಕೊಡುವುದನ್ನು ತಮ್ಮ ಸೇವೆಯಾಗಿ ಮಾಡುತ್ತಿರುತ್ತಾರೆ.

ಆಂಡಾಳ್ ಚಿಕ್ಕ ವಯಸ್ಸಿನಿಂದಲೇ ಕೃಷ್ಣನ ಮೇಲೆ  ಅಪಾರ ಭಕ್ತಿಯೂ ಪ್ರೀತಿಯೂ ಉಳ್ಳವಳಾಗಿದ್ದಳು. ತಮಿಳು ಭಾಷೆಯ ಪರಿಣಿತಿ ಪಡೆದಿದ್ದಳು. . ಬಾಲಪರ್ವದಿಂದ ಕೃಷ್ಣನ ಮೇಲಿನ ಅಪಾರ ಭಕ್ತಿಯಿಂದ ಅವನನ್ನೇ ವರಿಸಬೇಕೆಂಬ ಭಾವನೆಯನ್ನು ಬೆಳೆಸಿಕೊಂಡವಳು. ತನ್ನನ್ನು ಕೃಷ್ಣನ ಪತ್ನಿಯಾಗಿ ಭಾವಿಸಿಕೊಂಡು, ವಿಷ್ಣುಚಿತ್ತರ್ ಕಟ್ಟುವ ಮಾಲೆಯನ್ನು ಪ್ರತಿ ದಿನವೂ ತಾನು ತೊಟ್ಟು ಕನ್ನಡಿಯ ಮುಂದೆ ನಿಂತು ‘ನಾನು ಕೃಷ್ಣನಿಗೆ ಅರ್ಹಳಾದವಳು’ ಎಂದು ನೋಡಿಕೊಂಡು ಮತ್ತೆ ಅದನ್ನು ಅದರ ಸ್ವಸ್ಥಾನದಲ್ಲಿ ತಂದಿಡುತ್ತಿದ್ದಳು.  ಇದು ತಿಳಿಯದ ವಿಷ್ಣುಚಿತ್ತರ್ ಅದೇ ಮಾಲೆಯನ್ನು ತೆಗೆದು ದೇವರಿಗೆ ತೊಡಿಸುತ್ತಿದ್ದರು. ಒಂದು ದಿನ ಇದನ್ನು ತಿಳಿದುಕೊಂಡವರು ಆಂಡಾಳಿನ ಮೇಲೆ ಬಹಳ ಕೋಪಗೊಳ್ಳುತ್ತಾರೆ.  ಅವಳು ತೊಟ್ಟ ಮಾಲೆಯನ್ನು ಬಿಟ್ಟು, ಹೊಸದಾಗಿ ಪೋಣಿಸಿ ಭಗವಂತನಿಗೆ ಸಮರ್ಪಿಸುತ್ತಾರೆ. ಆದರೆ ಅಂದು ರಾತ್ರಿ ಅವರ ಕನಸಿನಲ್ಲಿ ಬಂದು ಗೋದೈ ತೊಟ್ಟ ಮಾಲೆಗಳೇ ತನಗೆ ಬೇಕೆಂದೂ, ಅದನ್ನೇ ತನಗೆ ತೊಡಿಸಬೇಕೆಂದೂ ಭಗವಂತ ಹೇಳುತ್ತಾನೆ. ಇದರಿಂದ  ‘ಸೂಡಿ ಕೊಟ್ಟ ಸೊಡರುಬಳ್ಳಿ’, (ಮುಡಿದು ಕೊಟ್ಟ ದೇವಿ) ‘ಭಗವಂತನನ್ನೇ ಆಳಿದವಳು’ ಎಂದು ಅವಳಿಗೆ ‘ಆಂಡಾಳ್’ (ಆಳಿದವಳು) ಎಂಬ ಹೆಸರು ಬರುತ್ತದೆ.

ಅವಳಿಗೆ ಮದುವೆಯ ವಯಸ್ಸು ಬಂದಾಗ, ಅವಳಿಗೆ ನಿಶ್ಚಯಿಸಿದ ಮದುವೆಗಳನ್ನೆಲ್ಲಾ ನಿರಾಕರಿಸಿ, ಶ್ರೀರಂಗದಲ್ಲಿರುವ ಶ್ರೀರಂಗನಾಥನನ್ನೇ ವಿವಾಹವಾಗುವುದಾಗಿ ಹಟ ತೊಡುತ್ತಾಳೆ. ವಿಷ್ಣುಚಿತ್ತರ್ ಕನಸಿನಲ್ಲಿ ಬಂದ ಭಗವಂತನು ಅವಳನ್ನು ಮಧುವಣಗಿತ್ತಿಯಾಗಿ ಶ್ರೀರಂಗಂ ದೇವಸ್ಥಾನಕ್ಕೆ ಕರೆದುಕೊಂಡು ಬರುವಂತೆ ಹೇಳುತ್ತಾರೆ. ಅಲ್ಲಿಯ ಗರ್ಭಗೃಹದಲ್ಲಿ ಒಂದು ದಿನ ಭಗವಂತನೊಂದಿಗೆ ಐಕ್ಯವಾಗುತ್ತಾಳೆ  ಎಂಬುದು ಪ್ರತೀತಿ.

ಆಂಡಾಳ್-ತಿರುಪ್ಪಾವೈ, ನಾಚ್ಚಿಯಾರ್, ತಿರುಮೊಳಿ ಎಂಬ ಎರಡು ಕಾವ್ಯಗಳನ್ನು ತನ್ನ ಐದನೇ ವಯಸ್ಸಿನಲ್ಲಿಯೇ ರಚಿಸುತ್ತಾಳೆ.

ಆಂಡಾಳಿನ ತುರುಬು ಬಹಳ ಪ್ರಸಿದ್ಧವಾದದ್ದು. ಆ ಕೇಶಾಲಂಕಾರ ಕೇರಳದ ನಂಬೂದಿರಿಗಳ ಶಿಕಾಲಂಕಾರಕ್ಕೆ ಹೊಂದಿಕೊಳ್ಳುವಂತಿದೆ. ಇಂದಿಗೂ ಶ್ರೀ ವೈಷ್ಣವ ಸಂಪ್ರದಾಯದ ಮದುವೆಗಳಲ್ಲಿ ಮದುವಣಗಿತ್ತಿಗೆ ಹೀಗೆಯೇ ಕೇಶಾಲಂಕಾರ ಮಾಡುತ್ತಾರೆ.

ಶ್ರೀವಲ್ಲಿಪ್ಪುತ್ತೂರಿನ ಆಂಡಾಳಿನ ಎಡಗೈಯ ಮೇಲೆ ಒಂದು ಗೊಂಬೆಯ ಗಿಣಿ ಇದೆ. ಈ ಗಿಳಿಯನ್ನು ದಿನವೂ ಹೊಸದಾಗಿ ಮಾಡಿ ಇಡುತ್ತಾರೆ. ಈ ಗಿಣಿಯನ್ನು ಮಾಡುವುದಕ್ಕೆ ಸುಮಾರು ನಾಲ್ಕುವರೆ ಗಂಟೆ ಹಿಡಿಯುತ್ತದೆ. ಈ ಗಿಣಿಯ ಕೊಕ್ಕು, ಬಾಯಿಯ ಭಾಗವನ್ನು ಮಾಡಲು ದಾಳಂಬಿ ಹೂವನ್ನು, ಕಾಲುಗಳನ್ನು ಮಾಡಲು ಬಿದಿರಿನ ಕಡ್ಡಿಗಳನ್ನು, ದೇಹವನ್ನು ಮಾಡಲು ಬಾಳೆಮರದ ತೊಗಟೆಯನ್ನು, ನಂದಿಬಟ್ಟಲು  ಎಲೆಗಳನ್ನು ಬಳಸುತ್ತಾರೆ.

ಅವಳ ಮೊದಲ ಕೃತಿಯಾದ ತಿರುಪ್ಪಾವೈ ಮೂವತ್ತು ಹಾಡುಗಳ ಸಂಕಲನ. ಇದನ್ನು ‘ಪಾಶುರ’ ಎನ್ನುತ್ತಾರೆ. ಈ ಹಾಡುಗಳನ್ನೇ ಧನುರ್ ಮಾಸದ 30 ದಿನಗಳು ವ್ರತವಿದ್ದು ಆಚರಿಸುತ್ತಾರೆ. ಅವಳು ಜನಿಸಿದ ಶ್ರೀವಿಲ್ಲಿಪ್ಪುತ್ತೂರ್ ವೈಷ್ಣವರ 108 ದಿವ್ಯದೇಶಗಳಲ್ಲಿ ಒಂದು. ಈ ಪ್ರದೇಶವನ್ನು ವರಾಹ ಪ್ರದೇಶ ಎಂದೂ ಕರೆಯುತ್ತಾರೆ. ಇದು ಒಮ್ಮೆ ಮಲ್ಲಿ ಎಂಬ ರಾಜನ ಆಳ್ವಿಕೆಯಲ್ಲಿತ್ತು. ಅವನು ವಿಲ್ಲಿ ಎಂಬ ಕಾಡನ್ನು ಅಳಿಸಿ ನಗರ ನಿರ್ಮಾಣ ಮಾಡುತ್ತಾನೆ. ಅದರಿಂದ ವಿಲ್ಲಿಪ್ಪುತ್ತೂರ್ ಎಂಬ ಹೆಸರನ್ನು ಪಡೆಯುತ್ತದೆ. ಇದು ಮದುರೈಯಿಂದ 74 ಕಿ.ಮೀ. ದೂರದಲ್ಲಿದೆ. ಸುಮಾರು 1000 ವರ್ಷಗಳ ಹಳೆಯ ದೇವಸ್ಥಾನ.

ಈ ದೇವಸ್ಥಾನದಲ್ಲಿ ಧನುರ್ ಮಾಸದಲ್ಲಿ ಆಂಡಾಳ್ ಅಭ್ಯಂಜನ ಸ್ನಾನಕ್ಕೆ 61 ಬಗೆಯ ಮೂಲಿಕೆಗಳನ್ನು 40 ದಿನ ಕಾಯಿಸಿ ತೈಲವಾಗಿ ಬಳಸುತ್ತಾರೆ. ಸಾಸುವೆ ಎಣ್ಣೆ, ಹಸುವಿನ ಹಾಲು, ನೆಲ್ಲಿಕಾಯಿ, ತಾಳೆಹೂ, ಎಳನೀರು ಮುಂತಾದುವನ್ನು ಬಳಸುತ್ತಾರೆ. ‘ಎಣ್ಣೈಕ್ಕಾಪ್ಪು’ ಎಂಬ ಉತ್ಸವ ಏಳು ದಿನಗಳು ನಡೆಯುವಾಗ ಈ ಎಣ್ಣೆಯನ್ನು ಬಳಸುತ್ತಾರೆ. ಧನುರ್ ಮಾಸ ಮುಗಿದ ಮೇಲೆ ಇದನ್ನೇ ಭಕ್ತರಿಗೆ ಪ್ರಸಾದವಾಗಿ ನೀಡಲಾಗುತ್ತದೆ. ಇದು ಕೆಲವು ರೋಗಗಳನ್ನು ನಿವಾರಿಸುತ್ತದೆ ಎನ್ನುತ್ತಾರೆ.

ಆಂಡಾಳಿಗೆ ತೊಡಿಸಿದ ಹೂವಿನ ಹಾರವನ್ನು ವರ್ಷಕ್ಕೊಮ್ಮೆ ತಿರುಪತಿ ವೆಂಕಟಾಚಲಪತಿಗೆ ಕಳುಹಿಸಿಕೊಡಲಾಗುತ್ತದೆ. ಈ ವೈಭವ ತಮಿಳು ಧನುರ್ ಮಾಸದಲ್ಲಿ ನಡೆಯುವ ಬ್ರಹ್ಮೋತ್ಸವ ಸಮಯದಲ್ಲಿ ವಿಶೇಷವಾಗಿ ಗರುಡ ಸೇವೆ ಅಂದು ನಡೆಯುತ್ತದೆ. ಆಂಡಾಳ್ ತೊಟ್ಟ ಹೂವಿನ ಮಾಲೆಯನ್ನು ಶ್ರೀರಂಗನಾಥ  ತೊಟ್ಟು ಮೆರವಣಿಗೆ ಬರುತ್ತಾನೆ. ಆ ಮಾಲೆಯನ್ನು ತುಳಸಿ, ಸೇವಂತಿ, ಸಂಪಿಗೆ ಹೂಗಳಿಂದ ಕಟ್ಟಿರುತ್ತಾರೆ. ಹಾಗೆಯೇ ಶ್ರೀರಂಗನಾಥನ ಮಾಲೆಯನ್ನು ವರ್ಷಕ್ಕೊಮ್ಮೆ ಶ್ರೀವಿಲ್ಲಿಪ್ಪುತ್ತೂರಿಗೂ ಕಳುಹಿಸಿಕೊಡಲಾಗುತ್ತದೆ.

1956ರಲ್ಲಿ ಭಾಷಾವಾರು ಪ್ರಾಂತಗಳಾಗಿ ಭಾರತವನ್ನು ಪುನರ್ ರಚನೆ ಮಾಡಿದಾಗ, ಮದರಾಸು ಪ್ರಾಂತ ರೂಪಾತಾಳಿತು. ಆಗ ಮುಖ್ಯಮಂತ್ರಿಗಳಾಗಿದ್ದ ಕಾಮರಾಜರ್ ರಾಜ್ಯದ ಲಾಂಛನವಾಗಿ ಶ್ರೀವಿಲ್ಲಿಪ್ಪುತ್ತುರಿನ ದೇವಸ್ಥಾನದ ಗೋಪುರವನ್ನು ಆಯ್ಕೆಮಾಡಿದರು. ಅದನ್ನು ರಚನೆ ಮಾಡಿದ ಚಿತ್ರಕಲಾವಿದರಾದ ಕೃಷ್ಣರಾವ್ ಮದುರೈ ದೇವಸ್ಥಾನದ ಪಶ್ಚಿಮ ಗೋಪುರದಲ್ಲಿ ನಂದಿಯ ಮೇಲೆ ಕುಳಿತಿರುವ ಶಿವ ಪಾರ್ವತಿಯನ್ನು ಸೇರಿಸಿಯೇ ಆ ಲಾಂಛನವನ್ನು ರೂಪಿಸುತ್ತಾರೆ.

ಆಂಡಾಳ್ ಕೃಷ್ಣನನ್ನು ತನ್ನ ಪ್ರೇಮಿಯಾಗಿ ನೋಡುತ್ತಾ ಪತಿಯಾಗಿ ವರಿಸುವ ಕನಸು ಕಂಡು ಹಾಡಿದರೆ, ತಮಿಳಿನ ಶ್ರೇಷ್ಠ ಕವಿಯಾದ ಭಾರತಿಯಾರ್ (ಸುಬ್ರಮಣ್ಯ ಭಾರತಿ) ಕೃಷ್ಣನನ್ನು ಪ್ರೇಯಸಿಯಾಗಿ ಭಾವಿಸಿ  ‘ಕಣ್ಣಮ್ಮ’  ಎಂಬ ಅನೇಕ ಕವನಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ಒಂದು:

ಹರಿವ ಬೆಳಕು ನೀ ನನಗೆ, ಕಾಣುವ ಕಣ್ಣು ನಾ ನಿನಗೆ

ಮತ್ತೇರಿಸಿದ ಮಧು ನೀ ನನಗೆ, ದುಂಬಿ ಕಣೇ ನಾ ನಿನಗೆ

ನಿನ್ನ ಸೊಬಗನ್ನು  ಹೊಗಳಿ ಪಾಡಲು ಬರುವುದಿಲ್ಲ

ಪವಿತ್ರ ಸೊಡರೇ ಭಾನಿನ ಬೆಳಕೇ, ಮರುಳಾಗಿಸುವವಳೇ ಕಣ್ಣಮ್ಮ.

ಕೃಷ್ಣನನ್ನು ಪ್ರೀತಿಸದೆ ಇರಲು ಯಾರಿಂದಲಾದರೂ ಸಾಧ್ಯವೇ?  ಮಕ್ಕಳಿಂದ ವೃದ್ಧರವರೆಗೆ, ಗಂಡು-ಹೆಣ್ಣು ಎಂಬ ಬೇಧವಿಲ್ಲದೆ – ಅವನನ್ನು ಗೆಳೆಯನಾಗಿ, ಪ್ರೇಮಿಯಾಗಿ, ಗುರುವಾಗಿ ಪ್ರೀತಿಸುತ್ತಾರೆ.

ಶ್ರೀ ಬಿಂಡಿಗನವಿಲೆ ನಾರಾಯಣ ಸ್ವಾಮಿ – ಇವರು ಕರ್ನಾಟಕದ ಶ್ರೀ ವೈಷ್ಣವ ಮನೆಗಳಲ್ಲಿ ಬಹಳ ಚಿರಪರಿಚಿತವಾದ ಹೆಸರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಬಿಂದಿಗನವಿಲೆ, ಇವರ ಊರು. ಇಲ್ಲಿ ವೈನತೇಯ (ಗರುಡ) ದೇವಸ್ಥಾನದ ವತಿಯಿಂದ ಹಲವಾರು ಪುಸ್ತಕಗಳನ್ನು ಪ್ರಕಟಿಸಿ, ಜನ ಸಾಮಾನ್ಯರಿಗೆ ಸುಲಭವಾಗಿ ಕೈಗೆಟುಕುವಂತೆ ಮಾಡಿದ್ದಾರೆ.

‘ತಿರುಪ್ಪಾವೈ’ – ಪಾಶುರಗಳು ಶುದ್ಧವಾದ ಅಂದಿನ ಕಾಲದ (ಅಂದರೆ ಹಳೆಗನ್ನಡ ಎನ್ನುವಂತೆ) ತಮಿಳಿನಲ್ಲಿ ರಚಿತವಾಗಿರುವುದರಿಂದ, ಶ್ರೀ ನಾರಾಯಣ ಸ್ವಾಮಿಯವರು, ಅದನ್ನು ಕನ್ನಡಕ್ಕೆ ಅನುವಾದಿಸಿ ಆ ಪಾಶುರಗಳಿಗೆ ಕರ್ನಾಟಕ ಸಂಗೀತ ರಾಗಗಳ ರಚನೆಯನ್ನೂ ಮಾಡಿದ್ದಾರೆ.

ನಾನು, ಶ್ರೀ ನಾರಾಯಣಸ್ವಾಮಿಯವರ ಅನುವಾದದ ಕನ್ನಡ ಪಾಶುರಗಳನ್ನು ಈ ಪುಸ್ತಕದಲ್ಲಿ ಬಳಸಿಕೊಂಡಿದ್ದೇನೆ. ಈ ಪುಸ್ತಕದ  ಕೊನೆಯಲ್ಲಿ ಮೂಲ ತಮಿಳಿನ ಪಾಶುರಗಳನ್ನೂ ಸಹ ಕೊಟ್ಟಿದ್ದೇನೆ.

ವೈಷ್ನೋದೇವಿ ಕಥೆ ಹೀಗಿದೆ :  ಕಥೆ ತ್ರೈತಾ ಯುಗದ್ದು , ದಕ್ಷಿಣ ಭಾರತದ ರಾಮೇಶ್ವರಂನಲ್ಲಿ ರತ್ನಾಕರ್ ಪಂಡಿತ್ ಎಂಬುವರಿಗೆ ಮಗಳಾಗಿ ದೇವಿ ಹುಟ್ಟುತ್ತಾಳೆ.  ಚಿಕ್ಕಂದಿನಿಂದ ಆಧ್ಯಾತ್ಮದ ಒಲವು ಬೆಳೆಸಿಕೊಂಡ ಆಕೆ ವಿಷ್ಣು ಭಕ್ತೆ. ಆಕೆಗೆ ವಿಷ್ಣುವನ್ನು ಮದುವೆಯಾಗುವ ಆಸೆ.  ರಾಮ ಅವತಾರ ತಾಳಿದ ವಿಷ್ಣು ರಾವಣ ಅಪಹರಿಸಿ ಹೋದ ಸೀತೆಯನ್ನು ಹುಡಿಕಿಕೊಂಡು, ಲಕ್ಷ್ಮಣ, ಹನುಮಂತ ಮತ್ತು ಜಾಂಬವಂತನ ಸೇನೆಯೊಂದಿಗೆ ರಾಮೇಶ್ವರಂ ತಲುಪಿ , ರಾವಣನ ಮೇಲೆ ಯುದ್ಧ ಹೂಡುವ ಮುನ್ನ ಅಲ್ಲಿಯ ಸಂತರ ಆಶೀರ್ವಾದ ಪಡೆಯಲು ಕಾಡಿಗೆ ಹೋದಾಗ ಅಲ್ಲಿ ಧ್ಯಾನದಲ್ಲಿರುವ ವೈಷ್ಣವಿಯ ಬೇಟಿಯಾಗುತ್ತದೆ. ರಾಮ ಅವತಾರ ತಾಳಿದ ವಿಷ್ಣುವನ್ನು ವೈಷ್ಣವಿ ಗುರುತಿಸಿ ತಾನು ಅವನನ್ನು ಮದುವೆಯಾಗುವ ಇಚ್ಛೆಯನ್ನು ವ್ಯಕ್ತಪಡಿಸುತ್ತಾಳೆ. ನಾನು ಏಕಪತ್ನಿ ವ್ರತಸ್ಥ ಎಂದು ನಿರಾಖರಿಸುತ್ತಾನೆ, ವೈಷ್ಣವಿ ಒತ್ತಾಯಕ್ಕೆ ಮಣಿದು ತಾನು ಯುದ್ಧದಿಂದ ಹಿಂತಿರುಗುವಾಗ ತನ್ನನ್ನು ವೈಷ್ಣವಿ ಗುರುತಿಸಿದರೆ ಅವಳ ವಿನಂತಿಯನ್ನು ಮರು ಪರಿಶೀಲನೆ ಮಾಡುವುದಾಗಿ ಹೇಳಿ  ಹೊರಡುತ್ತಾನೆ.

ಯುದ್ಧದಿಂದ ಹಿಂತಿರುಗುವಾಗ ಸಂತನ ವೇಷ ಧರಿಸಿ ಬರುವ ರಾಮನನ್ನು ಗುರಿತಿಸಲಾಗದೆ, ವ್ಯಥೆಗೆ ಒಳಗಾದಾಗ ರಾಮ ಅವಳಲ್ಲಿ ಬಂದು ಅವಳ ಭ್ರಮೆ ನೀಗಿಸುತ್ತಾನೆ. “ವೈಷ್ಣವಿ ನಿನ್ನ ಬದುಕಿಗೊಂದು ಮಹತ್ವದ ಗುರಿಯಿದೆ.  ಈ ಜಗತ್ತನ್ನು ಉದ್ಧರಿಸಲು ನಿನ್ನ ಶಕ್ತಿಯನ್ನು ಬಳಸಬೇಕು. ಅದಕ್ಕಾಗಿ ನೀನು ಜಂಬೂ ಪ್ರದೇಶಕ್ಕೆ (ಈಗಿನ ಜಮ್ಮು)  ಹೊರಡು, ಅಲ್ಲಿಯ ಹಿಮಾಲಯ ತಪ್ಪಲಲ್ಲಿ ತ್ರಿಕೂಟ ಬೆಟ್ಟ ಕಾಣುವುದು ಅಲ್ಲಿಯ ಒಂದು ಗುಹೆಯಲ್ಲಿ ಆಧಿಶಕ್ತಿ, ಕಾಳಿ, ಮಹಾಲಕ್ಷ್ಮಿ ಮತ್ತು ಸರಸ್ವತಿಯ ರೂಪದಲ್ಲಿ ನೆಲೆಸಿರುವಳು. ಆಕೆಯೊಂದಿಗೆ ನಿನ್ನ ಐಕ್ಯಗೊಳಿಸಿಕೊಂಡು, ಕಲಿಯುಗದಲ್ಲಿ ನಿನ್ನಲ್ಲಿಗೆ ಬರುವ ಎಲ್ಲ ಮಾನವರಿಗೂ ಒಳ್ಳೆಯ ಮಾರ್ಗ ತೋರಿ ಆಶೀರ್ವದಿಸು. ಬರುವ ಯಾರನ್ನು ನೋಯಿಸಬೇಡ. ಏಕೆಂದರೆ ಬರುವ ಎಲ್ಲ ಮಾನವರಲ್ಲೂ ನಾನಿರುವೆ ಎಂದು ಇಡೀ ಮಾನವ ಜನಾಂಗ ನಿನ್ನ ಆಶೀರ್ವಾದಕ್ಕೆ ಒಳಗಾಗುತ್ತಾರೋ, ಅಂದು ಕಲ್ಕಿಯಾಗಿ ಕಲಿಯುಗದಲ್ಲಿ ಅವತರಿಸಿ ನಿನ್ನ ವರಿಸುತ್ತೇನೆ”  ಎನ್ನುತ್ತಾನೆ.

ಆ ವೈಷ್ಣವಿ ಇನ್ನೂ ಈ ಗುಹೆಯಲ್ಲಿ ಕಲಿಯುಗದಲ್ಲಿ ಕಲ್ಕಿಯಾಗಿ ಬರಲಿರುವ ಆ ರಾಮನಿಗಾಗಿ ಕಾಯುತ್ತಿದ್ದಾಳೆ. ಆಕೆಯ ದರ್ಶನಕ್ಕೆ ಲಕ್ಷಾಂತರ ಮಂದಿ ಬರುತ್ತಲೇ ಇದ್ದಾರೆ. ಆಕೆಯೂ ಎಡೆಬಿಡದೆ ಇಪ್ಪತ್ತುನಾಲ್ಕು ಗಂಟೆಯೂ ಆಶೀರ್ವದಿಸುತ್ತಾಳೆ .

About ಅರಳಿ ಮರ

ಆಧ್ಯಾತ್ಮ, ವ್ಯಕ್ತಿತ್ವ ವಿಕಸನ ಮತ್ತು ಜೀವನ ಶೈಲಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

This site uses Akismet to reduce spam. Learn how your comment data is processed.