ರವೀಂದ್ರನಾಥರು ಯಾವತ್ತೂ ಅಹಿಂಸೆಯ ಬಗ್ಗೆ ಮಾತನಾಡಿದವರಲ್ಲ. ಆದರೆ ಬದುಕಿನತ್ತ ಅವರ ನಡಿಗೆ ಹೃದಯದ ಮೂಲಕ. ಹುಲ್ಲಿನ ಗರಿಕೆಯನ್ನ ಠಾಕೂರರೂ ಅನುಭವಿಸಬಲ್ಲವರಾಗಿದ್ದರು. ಹುಲ್ಲಿನ ಖುಶಿ ಮತ್ತು ತಲ್ಲಣಗಳಿಗೆ ಸ್ಪಂದಿಸಬಲ್ಲವರಾಗಿದ್ದರು. ಅವರದು ಹೃದಯದ ಹಾದಿ ~ ಓಶೋ | ಕನ್ನಡಕ್ಕೆ: ಚಿದಂಬರ ನರೇಂದ್ರ
ಒಮ್ಮೆ ಗಾಂಧಿಯವರು ಶಾಂತಿನಿಕೇತನದಲ್ಲಿ ರವೀಂದ್ರನಾಥರ ಜೊತೆಗಿದ್ದರು. ಈ ಇಬ್ಬರು ಧೀಮಂತರ ಆಲೋಚನಾ ಕ್ರಮಗಳನ್ನು ಗಮನಿಸಿ.
ಗಾಂಧಿಯವರ ‘ಅಹಿಂಸೆ’ ಬುದ್ಧಿ-ಮನಸ್ಸುಗಳ (ಮೈಂಡ್) ಪ್ರಾಡಕ್ಟ್. ಅಹಿಂಸೆಯ ಬಗ್ಗೆ ಗಾಂಧಿಯವರಲ್ಲಿ ಕಾರಣಗಳಿದ್ದವು, ತರ್ಕಗಳು, ವಿಚಾರಗಳಿದ್ದವು. ಈ ಬಗ್ಗೆ ಗಾಂಧಿ ಅಮೂಲಾಗ್ರವಾಗಿ ಸಂಶೋಧನೆ ಮಾಡಿದ್ದರು, ಅದರ ಜೊತೆ ಹೆಣಗಿದ್ದರು, ಪ್ರಯೋಗಗಳನ್ನು ಮಾಡಿದ್ದರು ಮತ್ತು ಆಮೇಲಷ್ಚೇ ಅಹಿಂಸೆಯ ಬಗ್ಗೆ ಒಂದು ನಿರ್ಧಾರಕ್ಕೆ ಬಂದಿದ್ದರು. ನೀವು ಅವರ ಆತ್ಮಕಥೆಯನ್ನು ಓದಿರುವಿರಾದರೆ ಗಮನಿಸಿರುತ್ತೀರಿ, ಆ ಆತ್ಮಕಥೆಯ ಹೆಸರೇ My Experiments with Truth. Experiment ಎನ್ನುವ ಶಬ್ದ ಗಮನಿಸಿ, ಇದು ವಿಜ್ಞಾನಕ್ಕೆ ಸಂಬಂಧಿಸಿದ್ದು, ಪ್ರಯೋಗಶಾಲೆಯನ್ನು ನೆನಪಿಗೆ ತರುವಂಥದ್ದು.
ಒಂದು ಮುಂಜಾನೆ ಗಾಂಧಿ ಮತ್ತು ರವೀಂದ್ರರು ಗಾರ್ಡನ್ ನಲ್ಲಿ ವಾಯುವಿಹಾರಕ್ಕೆ ಹೊರಡಲು ಸಿದ್ಧರಾದರು. ಶಾಂತಿನಿಕೇತನದ ಉದ್ಯಾನವನ ಹಚ್ಚ ಹಸಿರಾಗಿತ್ತು, ಜೀವಂತಿಕೆಯಿಂದ ನಳನಳಿಸುತ್ತಿತ್ತು. ಲಾನ್ ಮೇಲೆ ಹೆಜ್ಜೆ ಹಾಕುತ್ತ ಗಾಂಧಿ, ರವೀಂದ್ರರನ್ನು ಕೂಗಿದರು.
“ ಸಾಧ್ಯವಿಲ್ಲ, ಈ ಲಾನ್ ಮೇಲೆ ನಡೆದಾಡುವುದು ನನ್ನಿಂದಾಗದು, ಪ್ರತಿಯೊಂದು ಹುಲ್ಲಿನ ಗರಿಕೆಯೂ ನನ್ನಷ್ಟೇ ಜೀವಂತವಾಗಿದೆ. ಇಂಥ ಜೀವಂತ ಜಗತ್ತನ್ನು ತುಳಿಯುವುದು ನನ್ನಿಂದ ಸಾಧ್ಯವಿಲ್ಲ “ ಲಾನ್ ಮೇಲೆ ಹೆಜ್ಜೆ ಹಾಕಲು ರವೀಂದ್ರರು ನಿರಾಕರಿಸಿದರು.
ರವೀಂದ್ರನಾಥರು ಯಾವತ್ತೂ ಅಹಿಂಸೆಯ ಬಗ್ಗೆ ಮಾತನಾಡಿದವರಲ್ಲ. ಆದರೆ ಬದುಕಿನತ್ತ ಅವರ ನಡಿಗೆ ಹೃದಯದ ಮೂಲಕ. ಹುಲ್ಲಿನ ಗರಿಕೆಯನ್ನ ಠಾಕೂರರೂ ಅನುಭವಿಸಬಲ್ಲವರಾಗಿದ್ದರು. ಹುಲ್ಲಿನ ಖುಶಿ ಮತ್ತು ತಲ್ಲಣಗಳಿಗೆ ಸ್ಪಂದಿಸಬಲ್ಲವರಾಗಿದ್ದರು. ಅವರದು ಹೃದಯದ ಹಾದಿ.
“ ಹೌದು ನೀವು ಹೇಳಿದ್ದು ನಿಜ, ನನ್ನದು ಬುದ್ಧಿ ಮತ್ತು ಮನಸ್ಸಿನ ದಾರಿ” ಗಾಂಧಿ ಒಪ್ಪಿಕೊಂಡರು.
ಎಲ್ಲವನ್ನೂ ಪ್ರೀತಿಸುವವರಾಗಿ. ಪ್ರಾಣವಿಲ್ಲವೆಂದು ನಾವು ಹೇಳುವ ಸಂಗತಿಗಳನ್ನೂ ಪ್ರೀತಿಸಿ. ನೀವು ಖುರ್ಚಿಯ ಮೇಲೆ ಕುಳಿತಿರುವಿರಾದರೆ, ಖುರ್ಚಿಯನ್ನು ಫೀಲ್ ಮಾಡಿ, ಪ್ರೀತಿಸಿ. ನಿಮಗೆ ಹಾಯಾದ ಅನುಭವವನ್ನು ಕಲ್ಪಿಸುತ್ತಿರುವ ಖುರ್ಚಿಯ ಬಗ್ಗೆ ನಿಮ್ಮಲ್ಲಿ ಕೃತಜ್ಞತೆಯ ಭಾವ ಇರಲಿ, ಪ್ರೇಮದ ಭಾವ ಇರಲಿ. ನಿಮಗೆ ಖುರ್ಚಿ ಅಂಥ ಮುಖ್ಯ ವಸ್ತು ಅಲ್ಲದಿರಬಹುದು ಆದರೆ ಖುರ್ಚಿಯ ಜೊತೆಗಿನ ನಿಮ್ಮ ಪ್ರೇಮದ ವ್ಯವಹಾರ ನಿಮ್ಮನ್ನು ಖಂಡಿತವಾಗಿ ರೂಪಿಸುತ್ತದೆ. ಹಾಗೆಯೇ ಊಟ ಮಾಡುವಾಗ, ಪ್ರತಿಯೊಂದನ್ನೂ ಅನುಭವಿಸುತ್ತ ಪ್ರೀತಿಯಿಂದ ಊಟ ಮಾಡಿ. ಝೆನ್ ನಲ್ಲಿ ಚಹಾ ಕುಡಿಯುವುದು ಕೂಡ ಒಂದು ಅಧ್ಯಾತ್ಮಿಕ ತರಬೇತಿ.
ಭಾರತೀಯರ ಪ್ರಕಾರ ಅನ್ನ, ದೇವರು. ದೇವರು ಎಂದರೆ ಅದನ್ನು ನೀವು ಸೇವಿಸುತ್ತಿರುವಾಗ ಅದು ನಿಮಗೆ, ಬದುಕು, ಶಕ್ತಿ, ಚೈತನ್ಯ, ಹುರುಪು ನೀಡುತ್ತಿದೆ. ಹಾಗಾಗಿ ಅನ್ನಕ್ಕೆ ಕೃತಜ್ಞರಾಗಿರಿ, ಅನ್ನವನ್ನು ಪ್ರೀತಿಸಿ.
(ಚಿತ್ರ ಕೃಪೆ: ಜಾಮಿನಿ ರಾಯ್ । ಗೂಗಲ್ ಚಿತ್ರ)
ಅನೇಕ ಅಮೂಲ್ಯ ವಿಚಾರಗಳನ್ನು ತಿಳಿಸುತ್ತದೆ. ಅರಳಿಮರ ನನಗೆ ಪ್ರಿಯವಾದ ಅಂಕಣ.