ಬುದ್ಧನ ಬುದ್ಧತ್ವ ಇರುವುದು ಅಂಗುಲಿಮಾಲನಂಥವರ ಪ್ರತಿಕ್ರಿಯೆಯಲ್ಲಿ. ಮತ್ತು, ಅಂಗುಲೀಮಾಲನಂಥವರ ಸಂಖ್ಯೆ ಬಹಳ ಇರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಬುದ್ಧನಾಗಲು ಸಾಧ್ಯವಿಲ್ಲ. । ಅಲಾವಿಕಾ
ಬಹಳ ಸಲ ಒಬ್ಬ ವ್ಯಕ್ತಿಯ ಒಳ್ಳೆಯತನ ಅವರ ಮೂರ್ಖತನವಾಗಿ ಕಾಣುತ್ತದೆ ಮತ್ತು ಕಿರಿ ಕಿರಿ ಉಂಟು ಮಾಡುತ್ತದೆ. ಮತ್ತು, ಒಬ್ಬ ಒಳ್ಳೆಯ, ಸಾಧು ಸ್ವಬಾವದ ವ್ಯಕ್ತಿ ಎಲ್ಲವನ್ನೂ ಸಹಿಸುವ ಮೂಲಕ ಮತ್ತೊಬ್ಬ ವ್ಯಕ್ತಿಯ ತಪ್ಪುಗಳು ಹೆಚ್ಚಲು ಕಾರಣವಾಗುತ್ತಾನೆ/ಳೆ. ನಮಗೇ ಅರಿವಿಲ್ಲದಂತೆ ನಾವು ಒಳ್ಳೆಯವರಾಗುವ ಭರದಲ್ಲಿ ಮತ್ತೊಬ್ಬರು ಮತ್ತಷ್ಟು ಕೆಟ್ಟವರಾಗಲು ಅವಕಾಶ ಮಾಡಿಕೊಡುತ್ತೇವೆ. ನಮ್ಮಲ್ಲಿ ಒಳ್ಳೆಯತನ ಇರಬೇಕು, ಆದರೆ ಅದು ನಮ್ಮ ಹಿರಿಮೆ ಹೆಚ್ಚಿಸಿಕೊಳ್ಳುವ ಸ್ವಾರ್ಥವಾಗಬಾರದು.
ಎಷ್ಟೋ ಸಲ ನಾವು ಕೇಡೆನಿಸುವ ಕೆಲಸ ಮಾಡಿ, ಅದರಿಂದ ಮತ್ತೊಬ್ಬ ವ್ಯಕ್ತಿಗೆ, ಸಮಾಜಕ್ಕೆ ಒಳಿತಾಗುವಂತಿದ್ದರೆ ಆ ಕೆಲಸವನ್ನು ಮಾಡುವುದೂ ತಪ್ಪಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿ ಬಂದು ಕೆನ್ನೆಗೆ ಹೊಡೆದಾಗ ಕೊನೆಪಕ್ಷ ಅವನ ಕೈ ಅಡ್ಡ ಹಿದಿದು ಅವನನ್ನು ತಡೆಯುವುದು. ಅದು ಬಿಟ್ಟು ಒಬ್ಬರು ಒಂದು ಕೆನ್ನೆಗೆ ಹೊಡೆದಾಗ ಮತ್ತೊಂದು ಕೆನ್ನೆಗೆ ಹೊಡೆಯಲು ಕೆನ್ನೆ ಕೊಟ್ಟರೆ ಆ ವ್ಯಕ್ತಿಗೆ ಮತ್ತೊಮ್ಮೆ ತಪ್ಪು ಮಾಡಲು ಅವಕಾಶ ಕೊಟ್ಟಂತೆ ಆಗುತ್ತದೆ. ಮತ್ತೊಮ್ಮೆ ಹೊಡಿಸಿಕೊಳ್ಳಲು ಮುಂದಾಗಿ ನಾವೇನೋ ಮಹಾತ್ಮರಾಗುತ್ತೇವೆ ನಿಜ, ಆದರೆ ಆ ವ್ಯಕ್ತಿಯನ್ನು ಮತ್ತಷ್ಟು ನೀಚರಾಗಿಸಿಬಿಡುತ್ತೇವೆ ಅನ್ನುವುದೂ ಅಷ್ಟೇ ನಿಜ!
ಮತ್ತೊಂದು ಕೆನ್ನೆ ತೋರಿಸಿದಾಗ ಹೊಡಿಯದೆ ಹೋಗುವುದು, ಅಥವಾ ಹೊಡೆದೂ ಹೊಡೆದೂ ಸಾಕಾಗಿ ಹೊಡೆದವರೇ ನಾಚುವುದು ಪಿಚ್ಚರಿನಲ್ಲಿ ಮಾತ್ರ. ಬಾಕಿಯಂತೆ ಹೊಡೆಯುವವರು, ಹೊಡೆತ ತಿನ್ನುವವರಿದ್ದರೆ ಕೊನೆವರೆಗೂ ಹೊಡಿಯುತ್ತಾರೆ. ಅಥವಾ ಅವರ ಕೈಸೋಲುವವರೆಗೆ. ಆದ್ದರಿಂದ ಮತ್ತೊಂದು ಕೆನ್ನೆ ತೋರುವ ಬದಲು ಒಮ್ಮೆ ಕೈ ಎತ್ತಿದರೆ – ಹೊಡೆಯಲೇಬೇಕೆಂದಿಲ್ಲ, ಅಥವಾ ಹೊಡೆಯುವುದೇನೂ ಬೇಡ. ನಾನು ಹೊಡೆತ ತಿನ್ನಲು ಸಿದ್ಧನಿಲ್ಲ ಮತ್ತು ನಿನಗೆ ಈ ತಪ್ಪು ಮಾಡಲು ನಾನು ಅವಕಾಶ ಕೊಡುವುದಿಲ್ಲ ಅನ್ನುವ ಸ್ಪಷ್ಟ ಸಂದೇಶ ಕೊಟ್ಟರೆ ಸಾಕು. ಇದರಿಂದ ಆತನ/ಆಕೆಯ ಅಹಂಕಾರ ಅಳಿಯುವ ಸಾಧ್ಯತೆ ಹೆಚ್ಚು.
ನನಗೆ ಬಹಳವಾಗಿ ಅನಿಸೋದು, ಬುದ್ಧನ ಬುದ್ಧತ್ವ ಇರುವುದು ಅಂಗುಲಿಮಾಲನಂಥವರ ಪ್ರತಿಕ್ರಿಯೆಯಲ್ಲಿ. ಮತ್ತು, ಅಂಗುಲೀಮಾಲನಂಥವರ ಸಂಖ್ಯೆ ಬಹಳ ಇರುವುದಿಲ್ಲ. ಆದ್ದರಿಂದಲೇ ಪ್ರತಿಯೊಬ್ಬರೂ ಬುದ್ಧನಾಗಲು ಸಾಧ್ಯವಿಲ್ಲ!
ಹಾಗೇ ಹಿಂಸೆ ಅನುಭವಿಸುವುದೂ ಒಂದು ಶ್ರೇಷ್ಠತೆ ಅನ್ನುವ ಕಲ್ಪನೆ ಬಗ್ಗೆ ನನಗೆ ತಕರಾರಿದೆ. ವಡ್ಡಾರಾಧನೆ ಓದಿದಮೇಲಂತೂ ಈ ತಕರಾರು ಮತ್ತಷ್ಟು ಗಟ್ಟಿಯಾಯಿತು. ಈ ಪುಸ್ತಕದಲ್ಲಿ ಶ್ರೇಷ್ಠ ಜೈನ ಸಾಧಕರು ಹೇಗೆ ಸತ್ತರು ಅನ್ನುವ ವಿವರಗಳಿವೆ. ಈ ಸಾಧಕರನ್ನು ಅವರ ವೈರಿಗಳು ಕುದಿ ನೀರು ಚೆಲ್ಲಿ, ತಲೆ ಮೇಲೆ ಮುಳ್ಳು ಸುರಿದು, ಬೆನ್ನ ಮೇಲೆ ಬಿಸಿ ಪಾಯಸ ಹಾಕಿಕೊಂಡು ತಿಂದು … ಹೀಗೆ ಬಗೆ ಬಗೆಯ ಟಾರ್ಚರ್ ಮಾಡಿ ಕೊಂದರು ಎನ್ನಲಾಗಿದೆ. ಮತ್ತು, ಆ ಸಾಧಕರ್ಯಾರೂ ತುಟಿಪಿಟಕ್ಕನ್ನದೆ, ಅವರಿಗೆ ಆ ಹಿಂಸೆಯನ್ನು ಮಾಡಗೊಟ್ಟು, ಆ ಹಿಂಸೆಯನ್ನು ಸಹಿಸಿ ಸತ್ತರು, ಹಾಗೆ ಸತ್ತಿದ್ದಕ್ಕೆ ಅವರಿಗೆ ಮೋಕ್ಷ ಸಿಕ್ಕಿತ್ತು! ಯಾರು ಹೆಚ್ಚು ಹಿಂಸೆ ಅನುಭವಿಸಿ ಸತ್ತರೋ ಅವರಿಗೆ ಉನ್ನತ ಶ್ರೇಣಿಯ ಮುಕ್ತಿ!!
ಈಗ ಹೇಳಿ, ಅವರು ಹಿಂಸೆ ಅನುಭವಿಸಿ ಸತ್ತು ಸ್ವರ್ಗ ಪಡೆದಿದ್ದನ್ನು ಅವರ ದೊಡ್ಡತನ ಅನ್ನಬೇಕೋ, ಅಥವಾ ಮತ್ತೊಬ್ಬರು ಅಷ್ಟು ನೀಚಮಟ್ಟದ ಕೆಲಸ ಮಾಡಗೊಟ್ಟು ನರಕ ಸೇರುವಂತೆ ಮಾಡಿದ್ದನ್ನು ಅವರ ಸಣ್ಣತನ ಅನ್ನಬೇಕೋ!?
ಇಷ್ಟಕ್ಕೂ ನಮ್ಮ ದೇಹ ಒಂದು ಸ್ವತಂತ್ರ ಅಸ್ತಿತ್ವ. ಅದಕ್ಕೆ ನೋವು ಕೊಡಲು ನಮಗಾದರೂ ಅಧಿಕಾರವಿದೆಯೆ? ನಮ್ಮ ದೇಹದ ಒಡೆಯರು ನಾವಾದರೂ ಅದಕ್ಕೆ ಹಿಂಸೆ ನೀಡುವುದನ್ನು ವಿರೋಧಿಸದೆ ಸೈರಿಸುವುದು ನಾವು ನಮ್ಮ ದೇಹಕ್ಕೆ ಮಾಡುವ ಅನ್ಯಾಯವಲ್ಲವೆ? ನಮ್ಮ ಸಹಿಷ್ಣುತೆಯನ್ನು ತೋರುವ ಭರದಲ್ಲಿ ನಾವು ಮತ್ತೊಬ್ಬರ ಅಸಹಿಷ್ಣುತೆಗೆ ತುಪ್ಪ ಸುರಿದಂತೆ ಆಗುವುದಿಲ್ಲವೆ? ಆತ್ಮಹತ್ಯೆಯನ್ನು ಮಹಾಪಾಪ ಅನ್ನಲಾಗುತ್ತದೆ. ಹಾಗಾದರೆ ಹಿಂಸೆಯ ಸೈರಣೆಯೂ ಪಾಪವೇ ಅಲ್ಲವೆ!? ನಮ್ಮ ಆತ್ಮಕ್ಕೆ ನೆಲೆಸಲು ಅನುಕೂಲ ಮಾಡಿಕೊಟ್ಟಿರುವ ಈ ದೇಹಕ್ಕೆ, ನಮ್ಮ ಲೌಕಿಕ – ಅಧ್ಯಾತ್ಮಿಕ ಸಾಧನೆಗಳನ್ನು ಮಾಡಲು ಪರಿಕರವಾಗಿರುವ ಈ ದೇಹಕ್ಕೆ ನಾವು ಆಭಾರಿಯಾಗಿರೋದು ಬೇಡವೆ? ಅದನ್ನು ಪ್ರೀತಿಯಿಂದ ನೋಡಿಕೊಳ್ಳೋದು ಬೇಡವೆ?
ಆದ್ದರಿಂದ, ನಾವು ದೊಡ್ಡವರಾಗುವ ಭರದಲ್ಲಿ ನಮಗೆ ನಾವೇ ಅನ್ಯಾಯ ಮಾಡಿಕೊಳ್ಳುವುದೂ ಒಂದು ಸೋಗು.
ಅಷ್ಟೇ ಅಲ್ಲ, ಈ ಪ್ರಕ್ರಿಯೆಯಲ್ಲಿ ಮತ್ತೊಬ್ಬರನ್ನು ಕೇಡಿಗರಾಗಿಸುವುದೂ ಒಂದು ಅಪರಾಧ. – ಹಾಗನ್ನಿಸುತ್ತೆ ನನಗೆ.
ಹಾಗಂತ ಹಿಂಸೆಗೆ ಪ್ರತಿಹಿಂಸೆ ಮದ್ದಲ್ಲ, ಹಿಂಸೆ ನಡೆಯದಂತೆ ತಡೆಯುವ ಜವಾಬ್ದಾರಿಯೇ ಇದಕ್ಕೆ ಮದ್ದು. ಕೊನೆಪಕ್ಷ ಒಂದು ಕೆನ್ನೆಗೆ ಪೆಟ್ಟುತಿಂದು ಮತ್ತೊಂದು ಕೆನ್ನೆ ತೋರದೇ ಇರುವಷ್ಟಾದರೂ ನಮಗೆ ಜವಾಬ್ದಾರಿ ಇರಬೇಕು!!
ನನಗೆ ಅನಿಸೋಹಾಗೆ, “ನಾವು ತಪ್ಪು ಮಾಡದೆ ಇರುವುದು ಮಾತ್ರವೇ ನಮ್ಮ ಜವಾಬ್ದಾರಿಯಲ್ಲ. ಮತ್ತೊಬ್ಬರು ನಮ್ಮಿಂದಾಗಿ ತಪ್ಪು ಮಾಡದಂತೆ ನಾವು ಇರಬೇಕಾದುದೂ ನಮ್ಮದೇ ಜವಾಬ್ದಾರಿ”!
(ಲೇಖನದಲ್ಲಿರುವುದು ಆತ್ಯಂತಿಕ ಅಭಿಪ್ರಾಯವಲ್ಲ. ಚರ್ಚೆಗೆ ಅವಕಾಶವಿದೆ. ಆದ್ದರಿಂದಲೇ ಅನಿಸಿಕೆಯನ್ನು ಸಾರ್ವತ್ರಿಕಗೊಳಿಸದೆ ‘ನನಗೆ ಅನ್ನಿಸುವಂತೆ’ ಎಂದು ನಿರ್ದಿಷ್ಟವಾಗಿ ಬರೆಯಲಾಗಿದೆ)