‘ಸೀಜೋ’ಳ ಆತ್ಮ ಯಾವುದು!? : ಒಂದು ಝೆನ್ ಕೊಆನ್

ಝೆನ್ ಗುರು ಗೋಸೋ ತನ್ನ ಶಿಷ್ಯರಿಗೆ ಒಂದು ಕೊಆನ್ (ಒಗಟಿನಂಥದ್ದು) ಬಿಡಿಸಲು ಹೇಳಿದ. ಸೀಜೋಳ ನಿಜವಾದ ಆತ್ಮ ಯಾವುದು ಅನ್ನೋದೇ ಆ ಕೊಆನ್. ಅದರ ಪೂರ್ಣಪಾಠ ಈ ಕಥೆಯಲ್ಲಿ ಓದಿ…

ಚೋಕನ್‌ ಎಂಬುವನಿಗೆ ಸೀಜೋ ಎಂಬ ಸುಂದರ ಮಗಳಿದ್ದಳು. ಚೋಕನ್‌ ತನ್ನ ದೂರದ ಸಂಬಂಧಿಯಾದ ಓಚು ಮತ್ತು ಸಿಜೋ ಒಳ್ಳೆಯ ಜೋಡಿ ಎಂದು ಸಾಮಾನ್ಯವಾಗಿ ತಮಾಷೆ ಮಾಡುತ್ತಿದ್ದ. ಆದರೆ ತನ್ನ ಮಗಳನ್ನು ಓಚುವಿಗೆ ಕೊಟ್ಟು ಮಾಡುವ ಯಾವ ಉದ್ದೇಶವೂ ಅವನಿಗೆ ಇರಲಿಲ್ಲ, ಆದ್ದರಿಂದ ತನ್ನ ಮಗಳನ್ನು ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ಮಾಡಲು ಯೋಜಿಸಿದ.

ಆದರೆ ಚೋಕನ್‌ನ ತಮಾಷೆಯ ಮಾತುಗಳೇ ಸೀಜೋ ಮತ್ತು ಓಚುವಿಗೆ ಪರಸ್ಪರ ಪ್ರೇಮಿಸುವಂತೆ ಪ್ರೇರೇಪಣೆ ನೀಡಿತ್ತು. ಒಂದು ದಿನ ಚೋಕನ್‌ ಸೀಜೋಳ ನಿಶ್ಚಿತಾರ್ಥವನ್ನು ಏರ್ಪಾಟು ಮಾಡಿಯೇಬಿಟ್ಟ. ಇದರಿಂದ ಬೇಸರಗೊಂಡು ದುಃಖಿತನಾದ ಓಚು ಎಲ್ಲಿಯಾದರೂ ದೂರ ಹೋಗಿಬಿಡಲು ನಿರ್ಧರಿಸಿದ. ಒಂದು ದೋಣಿಯಲ್ಲಿ ನದಿ ದಾಟಲು ಹೊರಟ. ಪ್ರಯಾಣ ಮಾಡುತ್ತಿರುವಾಗ ಸೀಜೋ ಕೂಡಾ ತಾನಿರುವ ದೋಣಿಯಲ್ಲಿಯೇ ಇರುವುದನ್ನು ಕಂಡು ಅವನಿಗೆ ತುಂಬಾ ಖುಷಿಯಾಯಿತು. ಅವಳು ಕೂಡ ತಂದೆಯ ನಿರ್ಧಾರದಿಂದ ದುಃಖಿತಳಾಗಿ ಮನೆ ತೊರೆದಿದ್ದಳು.

ಅವರಿಬ್ಬರು ಮದುವೆಯಾಗಿ ಬೇರೊಂದು ನಗರದಲ್ಲಿ ಬಾಳತೊಡಗಿದರು. ಅವರಿಗೆ ಎರಡು ಮಕ್ಕಳೂ ಆದವು. ಒಂದು ದಿನ ಸೀಜೋಗೆ ತನ್ನ ತಂದೆಯನ್ನು ಭೇಟಿ ಮಾಡಬೇಕು ಎಂಬ ಆಸೆಯಾಯಿತು. ಓಚು ಕೂಡಾ ಅವಳ ಆಸೆಗೆ ಸಹಮತ ವ್ಯಕ್ತಪಡಿಸಿದ. ಅವರಿಬ್ಬರೂ ತಂದೆಯಲ್ಲಿ ಕ್ಷಮಾಪಣೆ ಕೇಳುವುದಕ್ಕೆ ಸಿದ್ಧವಾದರು.

ಚೋಕನ್‌ನ ಊರಿಗೆ ಬಂದ ತಕ್ಷಣ ತನ್ನ ಹೆಂಡತಿಯನ್ನು ದೋಣಿಯಲ್ಲೇ ಬಿಟ್ಟು ಮಾವನನ್ನುನೋಡಿ ಬರಲು ಹೋದ. ಚೋಕನ್‌ ಬಳಿ ಓಚು ಕ್ಷಮಾಪಣೆ ಕೇಳಿದ. ಇವನಿಗೆ ಶಾಕ್ ಆಗುವಂತೆ ಚೋಕನ್‌, ತನ್ನ ಮಗಳು ನೀನು ಹೋದ ಮೇಲೆ ತುಂಬಾ ಬೇಸರಪಟ್ಟು ಹಾಸಿಗೆ ಹಿಡಿದಳು. ಈಗಲೂ ಹಾಸಿಗೆಯಲ್ಲಿಯೇ ಇದ್ದಾಳೆ ಎಂದು ಹೇಳಿದ. ಆದರೆ ಓಚು, “ಇಲ್ಲ ಸೀಜೋ ನನ್ನ ಜೊತೆ ಇದ್ದಾಳೆ ಎಂದು ದೋಣಿಯಲ್ಲಿ ಕಾಯುತ್ತಿದ್ದ ಸೀಜೋಳನ್ನು ಕರೆತಂದ. ಆಗ ಹಾಸಿಗೆಯಲ್ಲಿ ಮಲಗಿದ್ದ ಸೀಜೋ ಮತ್ತು ನಿಜವಾದ ಸೀಜೋ ಇಬ್ಬರೂ ಮುಖಾಮುಖಿಯಾದರು.

ಈ ಕಥೆಯನ್ನು ತನ್ನಅನುಯಾಯಿಗಳಿಗೆ ಹೇಳಿದ ಝೆನ್ ಗುರು ಗೋಸೋ ಕೇಳಿದ, “ಸೀಜೋ ಎರಡು ಆತ್ಮ ಹೊಂದಿದ್ದಾಳೆ. ಒಂದು ಆತ್ಮ ಅಪ್ಪನ ಮನೆಯಲ್ಲಿ ಕೃಶವಾಗಿ ಬಿದ್ದಿದೆ. ಇನ್ನೊಂದು ಮದುವೆಯಾಗಿ ಎರಡು ಮಕ್ಕಳನ್ನು ಪಡೆದಿದೆ. ಈ ಎರಡರಲ್ಲಿ ಯಾವ ಆತ್ಮ ನಿಜವಾದದ್ದು!?”

ಈ ಬಗೆಹರಿಯದ ಕೊಆನ್‌ ಅನ್ನು ಇಂದಿಗೂ ಝೆನ್‌ ಶಿಷ್ಯಪರಂಪರೆ ಬಿಡಿಸುತ್ತಲೇ ಇದೆ. ಉತ್ತರ ದೊರಕಿದವರು ಜ್ಞಾನೋದಯ ಹೊಂದಿ, ಆ ಬಗ್ಗೆ ಏನೂ ಹೇಳದೆ ಹೋಗಿಬಿಟ್ಟಿದ್ದಾರೆ!

(ಕೊಆನ್‌: ಝೆನ್ ಪರಂಪರೆಯ ಒಗಟಿನಂಥ ಪ್ರಶ್ನೆಗಳು. ಕೊಆನ್ ಬಿಡಿಸುವಂತೆ ಹೇಳುವುದು ಕೂಡಾ ಒಂದು ಬೋಧನಾಕ್ರಮ.)

Leave a Reply